ನಾನು ಬರೆದ ಮೊದಲ ಕಥೆ ..

ನಾನು ಬರೆದ ಮೊದಲ ಕಥೆ ..

‘ಏನ್ರಿ ಮೂರ್ತಿ,ಎಷ್ಟು ಬಾರಿ ಹೇಳಬೇಕು ?ದಿನವೂ ಇದೆ ಕಥೆ ಆಯ್ತಲ್ಲ ನಿಮ್ದು.ಆಫೀಸಿಗೆ ವಾರಪೂರ್ತಿ ತಡವಾಗೆ ಬರ್ತೀರಾ.ಜವಾಬ್ದಾರಿ,ಸಮಯ ಪಾಲನೆ ಅನ್ನೋದು ಇಲ್ಲವೇ ಇಲ್ಲ.ನನಗಂತೂ ಹೇಳಿ ಹೇಳಿ ಸಾಕಾಯ್ತು’ ಎಂದು ಕೆಲ ಕಡತಗಳಿಗೆ ಸಹಿ ಪಡೆಯಲು ಹೋದ ಮೂರ್ತಿಗೆ ಎಂದಿನಂತೆ ಬಾಸ್ ನಿಂದ ಮುಖಕ್ಕೆ ಮಂಗಳಾರತಿ..ಇದೇ ರೀತಿ ಆದರೆ ಕೆಲಸ ಉಳಿಯುವ ಬಗ್ಗೆ ಗ್ಯಾರಂಟಿ ಕೊಡಲಾರೆ ಎಂಬ ಎಚ್ಚರಿಕೆಯ ಸೇರ್ಪಡೆ ಸಹ ಆಯಿತು..ಮೂರ್ತಿಗೆ ದಿನವೂ ಇದನ್ನೇ ಕೇಳಿ ಕೇಳಿ ಬೇಜಾರೇನೋ ಆಗಿತ್ತು ,ಆದರೆ ಕಚೇರಿ ಸೇರಿ ಒಂದು ವರ್ಷ ವಾಗಿದ್ದರೂ ಅವನಲ್ಲಿ ಯಾವುದೇ ಬದಲಾವಣೆ ಸಹ ಬಂದಿರಲಿಲ್ಲ.ದಿನವೂ ಒಂದಿಲ್ಲೊಂದು ಕಾರಣದಿಂದ ತಡವಾಗೇ ಬರುತ್ತಿದ್ದ.


ಅವನ ಹೆಸರು ಮೋಹನ ಮೂರ್ತಿ.ಜನರೊಂದಿಗೆ ಹೆಚ್ಚಿಗೆ ಕೂಡಿಕೊಳ್ಳದ ಸ್ವಭಾವ.ಅಂತೆಯೇ ಮಾತೂ ಸಹ ಕಡಿಮೆಯೇ.ಮಧ್ಯಮ ಎತ್ತರ,ಅದಕ್ಕೇ ಧಪ್ಪಗೆ ಕಾಣುವ ದೇಹ.ಚೆಂದದ ಬಣ್ಣ.ಧಪ್ಪ ಮೀಸೆ.ತಲೆಯ ಮೇಲೆ ಬೆಳೆಯುತ್ತಿರುವ ಬಯಲು.ಹಿರಿಯನಂತೆ ಕಂಡರೂ ಇನ್ನೂ ಮದುವೆಯಾಗಿಲ್ಲ ಅದಕ್ಕೇ ಕಿರಿಯ ಎನಬಹುದು.ಆದರೆ ವಯಸ್ಸು ಮಾತ್ರ ೩೦ ಮುಟ್ಟಿತ್ತು.ಪದವಿ ಮುಗಿದ ನಂತರ ತಂದೆಯ ಗೆಳೆಯರ ಪರಿಚಯದವರ ಕಚೇರಿಯಲ್ಲಿ ವಿನಂತಿಯ ಮೇರೆಗೆ ಕೆಲಸ ಸಿಕ್ಕಿತ್ತು.ಸ್ವಂತ ಊರು ಕುಂದರಗಿ ಇಂದ ಬಸ್ಸಿನಲ್ಲಿ ಪಯಣಿಸಿದರೆ ಕರ್ಮಭೂಮಿಯಾದ  ಬೆಳವಡಿಗೆ ಎರಡು ಘಂಟೆ ಮಾತ್ರ.ಅಲ್ಲಿಯೇ ಒಂದು ರೂಮು ಹಿಡಿದಿದ್ದ.ಸಂಬಳ ಜಾಸ್ತಿ ಇರಲಿಲ್ಲವಾದ್ದರಿಂದ ತನ್ನೂರಿನ ನೀರು ಕುಡಿಯುತಿದ್ದುದು ತಿಂಗಳಿಗೊಮ್ಮೆ ಮಾತ್ರ.


ಕಚೇರಿ ಕೆಲಸ, ಮನೆ ಕೆಲಸ ಮೇಲೆ ಒಂಟಿತನ ಎಲ್ಲವನ್ನೂ ಹೊಂದಾಣಿಕೆ ಮಾಡಲಾಗದೇ ಒದ್ದಾಡುತ್ತಿದ್ದ.ವಯಸ್ಸು ದಾಟಿದ್ದರೂ ಮದುವೆ ಆಗದೇ ಇದ್ದುದ್ದು ಮನೆಯವರಿಗಷ್ಟೇ ಅಲ್ಲ ಇವನಿಗೂ ದೊಡ್ಡ ಚಿಂತೆಯಾಗಿತ್ತು.ಆಗಿದ್ದರೆ ದಿನವೂ ಸರಿಯಾದ ಸಮಯಕ್ಕೆ ಕೆಲಸಕ್ಕೆ ಹೋಗಿ ,ಅಚ್ಚುಕಟ್ಟಾಗಿ ಜೀವನ ಮಾಡುತ್ತಾ ನಲಿವಿನಲ್ಲಿ ಇರಬಹುದೆಂಬ ಕಲ್ಪನೆಯ ಕನಸುಗಳನು ನೋಡುತ್ತಿದ್ದ.ಈಗೀಗ ಆ ಕನಸೂ ಬರ್ತಾ ಇರಲಿಲ್ಲ.ಕೂತಲ್ಲಿ ನಿಂತಲ್ಲಿ ಮಲಗಿದರೂ ಸಹ ಬಾಸ್ ನ ಮಾತುಗಳು ಕಿವಿಯಲ್ಲಿ ಗುನಗುನಿಸುತ್ತಿದ್ದವು.ಅದರಲ್ಲೂ ಇಂದು ಕೆಲಸ ಕಳೆದುಕೊಳ್ಳುವ ಮಾತು ಕೇಳಿ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ.ಹೆದರಿಕೆ ಇಂದ ಮೈ ಎಲ್ಲಾ ಉಡುಗಿಹೋದ ಅನುಭವ.ಎಲ್ಲೆಡೆ ಕತ್ತಲು ಕತ್ತಲು.ದಿನವೂ ಸರಿಯಾದ ಸಮಯಕ್ಕೆ ಹೋಗಲು ಆಗುವುದೇ ?ಆಗದಿದ್ದರೆ ?ಅಂತ ವಿಚಾರದಲ್ಲಿ ಮುಳುಗುತ್ತಿರುವಾಗ ..ಆಗದು ಎಂದು ಕೈಕಟ್ಟಿ ಕುಳಿತರೆ…ಎಂದು ಎಲ್ಲಿಂದಲೋ ತೂರಿಬಂದ ಹಾಡಿನ ಸಾಲುಗಳು,ಮನಸ್ಸಿನಾಳದಿಂದಲೇ ಇರಬಹುದು..ಒಂದು ಮಿಂಚಿನ ಸಂಚಾರ ಮಾಡಿಸಿತ್ತು.ಮನದಲ್ಲಿ ಚೂರು ಆಶಾಭಾವ ಮೂಡಿಸಿತ್ತು.ಇಂದು ರಾತ್ರಿ ಮಲಗದಿದ್ದರೂ ಚಿಂತೆ ಇಲ್ಲ.ನಾಳೆ ಸರಿಯಾದ ಸಮಯಕ್ಕೆ ಕಚೇರಿಗೆ ಹೋಗಬೇಕು ಎಂಬ ಧೃಢ ನಿಶ್ಚಯ ಮಾಡಿದ.ನಿದ್ದೆ ಹತ್ತಿದರೆ ಇರಲಿ ಎಂದು ೬ ಘಂಟೆಗೆ ಅಲಾರ್ಮ್ ಸಹ ಇಟ್ಟ.ಬೇಗ ಹೋದಾಗ ಬಾಸ್ ಹಾಗೂ ಇತರೆ ಸಹೋದ್ಯೋಗಿಗಳ ಮುಖಗಳನ್ನು ಕಲ್ಪಿಸುತ್ತಾ ನಿದ್ದೆ ಹತ್ತಿದ್ದೇ ತಿಳಿಯಲಿಲ್ಲ.


ಮುಂಜಾನೆ ಸರಿಯಾಗಿ ಆರಕ್ಕೆ ಕಿರ್ರ್.. ಅಂತ ಅಲಾರ್ಮ್ ಹೊಡೆಯಿತು.ಎಂದಿನಂತೆ ಬಂದ್ ಮಾಡಿ ಮಲಗಬೇಕೆಂದಾಗ  ಬಾಸ್ ನ ಮುಖ ಕಣ್ಣು ಮುಂದೆ ಬಂದಂತಾಗಿ ಫಕ್ಕನೇ ಕಣ್ಣು ಬಿಟ್ಟ.ಹಿಂದಿನ ರಾತ್ರಿ ಮಾಡಿದ ನಿರ್ಧಾರಗಳು ನೆನಪಾದವು.ಎದ್ದು ಕುಳಿತ.ಕಿಟಕಿ ಇಂದ ಇಣುಕಿ ನೋಡಿದ.ಎಂದೂ ಕಂಡರಿಯದ ಮುಂಜಾವು !ಎಲ್ಲವೂ ಹೊಸದರ ಹಾಗೇ ಕಾಣಿಸುತ್ತ ಇದೆ.ಸರಿ ಎಂದು ಪ್ರಾತಃ ವಿಧಿಗಳನ್ನು ಮುಗಿಸಿ ಬಾಚಣಿಕೆಗೆ ಸಿಗದ ಕೂದಲುಗಳಿಗೆ ನೀಟಾಗಿ ಕ್ರಾಪ್ ತೀಡಿ ತಯಾರಾದಾಗ ಗಂಟೆ ೮-೧೦.ಬೀಗ ಹಾಕಿ ಹೊರಗೆ ಬಂದರೆ ಚುಮು ಚುಮು ಮುಂಜಾವು.ಉತ್ಸಾಹಕರ ವಾತಾವರಣ.ತೆಗೆಯದ ಅಂಗಡಿ ಮುಂಗಟ್ಟುಗಳು, ಅಲ್ಲಿ ಇಲ್ಲಿ ಕಸ ಗುಡಿಸುತ್ತಿರುವ ಹೆಂಗಳೆಯರು,ರಂಗೋಲಿ ಹಾಕಿದ ಕೆಲ ಮನೆಗಳು.ಮೂರ್ತಿಗೋ ಒಂದು ಹೊಸ ಜಗತ್ತಿನಲ್ಲಿ ಹೊರಟಿರುವ ಅನುಭವ.ಓಹೋ ಹೀಗಿರುತ್ತೋ ಮುಂಜಾವು ಎಂಬ ಉದ್ಘಾರ ಮನದಲ್ಲೇ ಬರುತ್ತಿದೆ.


ನಿಲ್ದಾಣದಲ್ಲಿ ನಿಂತ ಸ್ವಲ್ಪ ಸಮಯಕ್ಕೆ ಬಸ್ ಬಂತು.ಪೂರ್ತಿ ಬಸ್ ಖಾಲಿ ಖಾಲಿ.ನಿರ್ವಾಹಕ ಚಾಲಕ ಹಾಗು ಐದಾರು ಪ್ರಯಾಣಿಕರಷ್ಟೇ.ಎಲ್ಲಾ ಸೀಟೂ ಖಾಲಿ.ಎಲ್ಲಿ ಬೇಕ್ಕಾದ್ದಲ್ಲಿ ಕೂಡಬಹುದು.ನಿರ್ವಾಹಕ ಇವನನ್ನು ಒಂಥರಾ ಕಣ್ಣುಗಳಿಂದ ನೋಡಿದ.ದಿನವೂ ಹತ್ತಕ್ಕೆ ಬರುವವ ಎಂಟಕ್ಕೆ ಏಕೆ ಬಂದ ಎಂತಲಿರಬೇಕು.ಕಿಟಕಿಯಿಂದ ಖಾಲಿ ರಸ್ತೆಗಳು,ಅತ್ತಿಂದಿತ್ತ ತಿರುಗುತ್ತಿರುವ ಖಾಲಿ ಆಟೋಗಳು,ಒಂದೆರಡು ಸೈಕಲ್,ಸ್ಕೂಟರ್ಗಳು ಕಾಣುತ್ತಿದ್ದವು.ಸರಿಯಾದ ಸಮಯಕ್ಕೆ ತಲುಪಿ ಬಾಸ್ ನ ಬಾಯಲ್ಲಿ ಬರುವ ಅಚ್ಚರಿಯ ಮಾತು ನೆನೆಯುತ್ತ,ಮುಂಜಾನೆಯ ಸಮಯದಲ್ಲಿ ಗದ್ದಲವಿಲ್ಲದೇ ಆರಾಮವಾಗಿ ಆಸೀನನಾಗಿ ಬರಬಹುದು ಅಂತೆಲ್ಲ ವಿಚಾರಗಳು ಪುಂಖಾನು ಪುಂಖವಾಗಿ ಬರುತ್ತಿದ್ದವು.ಆದರೂ ಮನದಲ್ಲಿ ಏನೋ ಒಂದು ಅನುಮಾನ.ನನ್ನ ಹಾಗೆಯೇ ಇನ್ನೂ ಬಹಳ ಜನರು ತಡವಾಗೇ ಬರುವವರು,ಅದಕ್ಕೆ ಬಸ್ ಖಾಲಿ ಇದೇ ಏನೋ..?


ಅವನು ಇಳಿದುಕೊಳ್ಳುವ ನಿಲ್ದಾಣ ಬಂತು.ಆಗ ಸರಿಯಾಗಿ ೮-೪೦.ಅಲಾ ಇವನ! ದಿನವೂ ೪೫ ನಿಮಿಷ ತೆಗೆದುಕೊಳ್ಳೋದು ಇವತ್ತು ೨೦ ನಿಮಿಷ ಮಾತ್ರ.೨೫ ನಿಮಿಷಗಳ ಉಳಿತಾಯ ಬೇರೆ..ಭಲೇ ಭಲೇ! ಅಲ್ಲಿಂದ ಅವನ ಕಚೇರಿಗೆ ಐದು ನಿಮಿಷದ ಹಾದಿ.ನಡುವೆ ಒಂದು ತಿನ್ಮನೆ ಕಂಡರೂ ತಡವಾದೀತು ಎಂದು ಹೋಗಲಿಲ್ಲ.ವರುಷವೇ ಕಳೆದಿತ್ತು ತಿಂಡಿ ಮಾಡದೇ.ದಿನವೂ ಇದೇ ರೀತಿ ಬೇಗ ಬಂದರೆ ತಿಂಡಿಯೂ ಮಾಡಬಹುದೇನೋ ಎಂಬ ವಿಚಾರ ಸಹ ಮೂಡದಿರಲಿಲ್ಲ.ಹಾಗೆಯೇ ಆರಾಮವಾಗಿ ನಡೆದು ಕಚೇರಿಗೆ ಬಂದಾಗ ೮-೫೦.೧೦ ನಿಮಿಷ ಬೇಗ ಬಂದೆ ಎಂಬ ಖುಷಿ ಇಂದ ಅವನ ಮುಖವರಳಿತ್ತು.


ನೀರು ಕುಡಿದು ತನ್ನ ಸೀಟಿನಲ್ಲಿ ಬಂದು ಕುಳಿತ.ಹಿಂದಿನ ದಿನ ಬಿಟ್ಟಿದ್ದ ಕಡತಗಳನ್ನು ತೆರೆದು ಟೇಬಲ್ ಮೇಲೆ ಇಟ್ಟ.ತಲೆಯನ್ನು ಕಡತಗಳಲ್ಲಿ ನೆಟ್ಟ..ಆದರೆ ಕಣ್ಣುಗಳು ವಾಚಿನ ಎಡೆಗೆ,ಮನಸ್ಸು,ಕಿವಿಗಳು ಬಾಗಿಲಿನ ಕಡೆಗೇ ಇದ್ದವು.ಗಂಟೆ ೯-೧೦ ಆಯಿತು ೯-೨೦ ಆಯಿತು ಯಾರ ಸುಳಿವೂ ಇಲ್ಲ.ಒಳಗೊಳಗೇ ಮನಸ್ಸು ಬಾಸ್ ನ ಶಪಿಸುತ್ತಿದ್ದರೂ ಕಂಗಳು ಮಾತ್ರ ಅವನ ನಿರೀಕ್ಷೆಯಲ್ಲೇ ಇದ್ದವು.ಬಂದು ಅಚ್ಚರಿಗೊಳ್ಳುವುದನ್ನು ಮನವು ನೆನೆಯುತ್ತಿತ್ತು.ವಾಚನ್ನೊಮ್ಮೆ,ಕದದ ಕಡೆಗೊಮ್ಮೆ ನೋಡುತ್ತಾ ನೋಡುತ್ತಾ ಸುಮಾರು ಸಮಯ ಕಳೆಯಿತು.ಅಷ್ಟರಲ್ಲಿ ಒಂದು ಮೂರು ನಾಲ್ಕು ಜನ ಬಂದರು.ಅವರ ಪರಿಚಯ ಈತನಿಗಿರಲಿಲ್ಲ.ಪರಿಚಿತರು ಹಾಗೂ ಬಾಸ್ ಬರಲಿಲ್ಲ ಎಂದು ಮನದಲ್ಲಿ ಆಕ್ರೋಶ ಬರ ತೊಡಗಿತು.ನಾನು ಹನ್ನೊಂದಕ್ಕೆ ಬರುವೆನೆಂದು ದಿನವೂ ಬೈಯ್ಯುತ್ತಿದ ಬಾಸ್ ಹತ್ತಾದರೂ ಬಂದೇ ಇಲ್ಲ.ಅವ ಬೈದದ್ದು ನೋಡಿ ಮೀಸೆಯಡಿಯಲ್ಲಿ ನಗುತ್ತಿದ್ದ ಗಂಡು ಸಹೋದ್ಯೋಗಿಗಳು,ಕರವಸ್ತ್ರದಡಿಯಲ್ಲಿ ನಗುತ್ತಿದ್ದ ಹೆಣ್ಣು ಸಹೋದ್ಯೋಗಿಗಳೂ ಕಾಣುತ್ತಿಲ್ಲ.


ನಿರೀಕ್ಷೆಯ ಕಣ್ಣಲ್ಲಿ ಬೇಜಾರು,ಸಿಟ್ಟು ಕಾಣತೊಡಗಿದವು.ಯಾಕಾದರೂ ಬೇಗ ಬಂದೆ ?ನಾನು ಬೇಗ ಬಂದದ್ದೇ ತಪ್ಪಾಯಿತೋ?ಹಾಯಾಗಿ ಇನ್ನೂ ಎರಡು ಗಂಟೆಗಳ ಕಾಲ ನಿದ್ದೆ ಮಾಡಬಹುದಿತ್ತು.ಬಾಸ್ ನ ಮಾತುಗಳನ್ನು ತಲೆಗೆ ಹಾಕಿಕೊಳ್ಳಲೇಬಾರದು.ಯಾರೂ ಸಮಯ ಪಾಲಿಸುವವರಲ್ಲ.ಆದರೆ ಇತರರನ್ನು ನೋಡಿ ನಗುವುದರಲ್ಲಿ ಪ್ರವೀಣರು ಎಂದೆಲ್ಲ ನೆನೆಯುತ್ತಿರುವಾಗ ನೆತ್ತಿ ಸಿಟ್ಟಿನಿಂದ ಸುಡುತ್ತಿತ್ತು.


೧೧-೧೫ ರ ಸುಮಾರಿಗೆ ಬಾಸ್ ನ ಮಗ ಶಾಶು,ಶಾಶ್ವತ್ ಅಂತ ಅವನ ಹೆಸರು.ಹಾಗೂ ಮಗಳು ಕವನ ಇಬ್ಬರೂ ಜಿಗಿಯುತ್ತ ನಲಿಯುತ್ತ ಕೈಯ್ಯಲ್ಲಿ ಆಟಿಕೆ ಬಂದೂಕನ್ನು ಹಿಡಿದುಕೊಂಡು ಬಂದರು.ಇವರೇಕೆ ಬಂದರು ಎಂದು ಅರೆಕ್ಷಣ ಅಚ್ಚರಿಯಾದರೂ ಬಾಸ್ ಬಂದ ಎಂಬ ಸಮಾಧಾನ ಆಯಿತು.ಇವತ್ತೇನು ಹೇಳುವನು ನೋಡೋಣ ಎಂದು ಕಾಯ್ತಾ ಕುಳಿತ.ಅಷ್ಟೊತ್ತಿಗೆ ಅವ ತನ್ನ ಹೆಂಡತಿ ಹಾಗೂ ಚಿಕ್ಕ ಮಗಳ ಜೊತೆಗೆ ಒಳಗೆ ಬಂದ.ಕಣ್ಣುಗಳು ಮಿಲಾಯಿಸಿದವು.ಬಾಸ್ ನ ಕಣ್ಣಲ್ಲಿ ಅಚ್ಚರಿಯಿರದೇ,ತುಸುಗೋಪ ಅನುಮಾನಗಳು ಕಂಡವು.ಎಷ್ಟಾದರೂ ಅವನ ಸ್ವಭಾವವೇ ಅಂಥದ್ದಲ್ಲವೇ?ಮಗಳನ್ನು ಹೆಂಡತಿಯ ಕೈಗೆ ಕೊಟ್ಟು,ಕ್ಯಾಬಿನ್ಗೆ ಕಳಿಸಿ ಮೂರ್ತಿಯ ಬಳಿಗೆ ಬಂದ.ಮೂರ್ತಿ ತನಗರಿವಿಲ್ಲದಂತೆ ಎದ್ದು ನಿಂತು ವಿಶ್ ಸಹ ಮಾಡಿದ್ದ.


'ಏನ್ರಿ ಮೂರ್ತಿ ನಿಮ್ಮ ತರಲೆ.?ನಿಮ್ಮ ಸಲುವಾಗಿ ಸಾಕು ಸಾಕಾಗಿ ಹೋಗಿದೆ.ಒಂದು ರೀತಿ ಬಿಸಿ ತುಪ್ಪ ನೀವು.ಕೆಲಸ ಮಾಡುವ ಸಮಯದಲ್ಲಿ ಮಾಡೋಲ್ಲ.ಸಮಯಕ್ಕೆ ಸರಿಯಾಗಿ ಬರಲ್ಲ.ಬಂದರೆ ಅಚ್ಚುಕಟ್ಟಾಗಿ ಕೆಲಸ ಆಗುತ್ತೆ.ಈ ರೀತಿಯೆಲ್ಲ ಅಪ್ಪಣೆ ಪಡೆಯದೇ  ಬಂದರೆ ವಾಪಸ್ ಮನೆಗೆ ಕಳುಹಿಸಬೇಕಾಗುತ್ತೆ.ಎಂದು ಖಾರವಾಗಿ ನುಡಿದು ತಿರುಗಿ ಒಮ್ಮೆ ಕೆಂಗಣ್ಣಿನಿಂದ ನೋಡಿ ಹೊರಟೇ ಹೋದ.ಮೂರ್ತಿ ಒಂದು ನಿಮಿಷ ದಂಗು!ಮೈ ಮನವೆಲ್ಲ ಸಿಟ್ಟಿನಿಂದ ಇನ್ನೂ ಕುದಿಯತೊಡಗಿದವು.ಬೇಗ ಬಂದರೂ ಪ್ರಶಂಸಿಸುವುದು ದೂರ,ಪ್ರೀತಿ ಇಂದ ಎರಡು ಮಾತೂ ಸಹ ಆಡಲಿಲ್ಲ.ಆಗಿದ್ದಾಗಲಿ ಇನ್ನೊಮ್ಮೆ ಮಾತನಾಡೇ ಬಿಡೋಣ ಎಂದು ಅವನ ಹಿಂದೆಯೇ ಕ್ಯಾಬಿನ್ ಕಡೆ ಹೊರಟ.


ಕ್ಯಾಬಿನ್ ಕಡೆ ಹೋಗುವಾಗ ಗೋಡೆಯ ಮೇಲೆ ನೇತು ಹಾಕಿದ್ದ ಒಂದು ಹಾಳೆಯ ಮೇಲೆ ಧಪ್ಪನೆಯ ಕಪ್ಪು ಅಂಕಿಗಳಲ್ಲಿ  '೨೭' ಎಂದು ಬರೆದಿತ್ತು.ಕೆಳಗೆ ಕೆಂಪು ಬಣ್ಣದ ಧಪ್ಪ ಹಾಗೂ ಸ್ವಲ್ಪ ಸಣ್ಣ ಅಕ್ಷರಗಳಲ್ಲಿ ಕಂಡದ್ದು 'ರವಿವಾರ,ಜೂನ್ ೨೦೧೦…!!!


 


------


ಸಂಪದದಲ್ಲಿನ ಕಥೆಗಾರರು ಹೆಣೆಯುವ ಕಥೆಗಳನ್ನು ಓದಿ ನಾನೂ ಒಂದಾದರೂ ಕಥೆ ಹೆಣೆಯಬೇಕು ಅಂತ ಮನದಾಳದಲ್ಲಿ ಬಹುದಿನಗಳಿಂದ ಇತ್ತು.ಮೊನ್ನೆ ಅತೀ ಉತ್ಸಾಹದಲ್ಲಿ ಇದನ್ನು ಬರೆದೆ.ಲೋಪದೋಷಗಳ ಜೊತೆಗೆ ಹೇಗಿದೆ ಅಂತಾನೂ ತಿಳಿಸಿ.

Rating
No votes yet

Comments