ಏಕೆ ಇಲ್ಲಿ ಸಿಕ್ಕಿಹಾಕಿಕೊಂಡೆ ನೀನು?

ಏಕೆ ಇಲ್ಲಿ ಸಿಕ್ಕಿಹಾಕಿಕೊಂಡೆ ನೀನು?

(ಇದು ನನ್ನ ಮೊದಲ ಕವನ)

 

ಏಕೆ ಇಲ್ಲಿ ಸಿಕ್ಕಿಹಾಕಿಕೊಂಡೆ ನೀನು?

 

ಛತ್ರಿ ಹಿಡಿದು ಹೋದರೆ ನಡೆಯಲು ಬಿಡದ ಮಳೆ-ಗಾಳಿ
ದಾರಿ ಬಿಟ್ಟು ಇಳಿದರೆ ಮುತ್ತಿಕ್ಕಿ ರಕ್ತ ಹೀರುವ ಇಂಬಳಗಳು
ಮುಳುಗಿದ ಸೇತುವೆಯಾಚೆ ನಿಲ್ಲುವ ಅಸಹಾಯಕ ಬಸ್ಸುಗಳು
ಸೊಂಟದ ಮೂಳೆ ಮುರಿಸುವ ಪಾಚಿಗಟ್ಟಿದ ಅಂಗಳ
ಇಲ್ಲಿಗೇಕೆ ಬಂದು ಸಿಕ್ಕಿಹಾಕಿಕೊಂಡೆ ನೀನು?

 

ಗಾಳಿಗೆ ಬಾಲ ತುಂಡರಿಸಿಕೊಂಡು ಸಾಯುವ ಫೋನು
ಗುಡುಗಿನ ಶಬ್ಧಕ್ಕೆ ಹೆದರಿ ಓಟ ಕೀಳುವ ಕರೆಂಟು
ನೀರು ಬೀಳಿಸಿಕೊಂಡು ಸುಟ್ಟುಹೋಗುವ ಮೂರ್ಖ(ರ) ಪೆಟ್ಟಿಗೆಗಳು
ತೂತು ಮಾಡಿನ ಕೆಳಗಿಟ್ಟ ಪಾತ್ರೆಗಳ ಅಹೋರಾತ್ರಿ ಸಂಗೀತ
ಇದನನುಭವಿಸಲೆಂದೇ ಇಲ್ಲಿಗೆ ಬಂದೆಯಾ ನೀನು?

 

ದುಡ್ಡು ಕೊಟ್ಟರೂ ಗದ್ದೆ ಕೆಲಸಕ್ಕೆ ಬಾರದ ಕೆಲಸಗಾರರು
ಅಡಿಕೆಯ ಚಿಗುರನ್ನೂ ಸುಮ್ಮನೆ ಬಿಡದ ವಾನರ ಸೈನ್ಯ
ಎರಡು ತಿಂಗಳಿಗೋಸ್ಕರ ವರ್ಷವಿಡೀ ಸಾಕಬೇಕಾದ ಎತ್ತುಗಳು
ಮಳೆ ಬಂದರೆ ಮಣ್ಣಿನ ಮುದ್ದೆಯಾಗುವ ಗೋಡೆ-ಅಡಿಪಾಯಗಳು
ಈ ಕಷ್ಟವ ನೋಡಲೆಂದೇ ಇಲ್ಲಿಗೆ ಬಂದೆಯಾ ನೀನು?

 

ಕಾಯಿ ಬೀಳಿಸಿ ಹೆಂಚು ಒಡೆಯುವ ತೆಂಗಿನಮರ
ಹೊಂಡ ತಪ್ಪಿಸುವ ಸೈಕಲ್ಲುಗಳಿಗೆ ಚರಂಡಿ ತೋರಿಸುವ ರಸ್ತೆಗಳು
ಸಂಜೆಗೆ ಬರುವ ಬೆಳಗ್ಗಿನ ಹಳಸಲು ನ್ಯೂಸ್ ಪೇಪರ್ರು
ಬಿಸಿಲಿಗೆ ಬಟ್ಟೆ ಹಾಕುವುದನ್ನೇ ಕಾಯುವ ಮಾಯಕಾರ ಮಳೆ
ಇದನ್ನೆಲ್ಲಾ ತಾಳಿಕೊಳ್ಳಲೆಂದೇ ಇಲ್ಲಿಗೆ ಬಂದೆಯಾ ನೀನು?

 

ಮಳೆ-ಗಾಳಿ, ಕೊಟ್ಟಿಗೆಯ ಥಂಡಿಗೆ ನರಳುವ ಜಾನುವಾರುಗಳು
ಹಜಾರದಲ್ಲಿಟ್ಟ ಮರದ ಅಕ್ಕಿಯ ಪಥಾಸನ್ನೂ ಬಿಡದ ಹೆಗ್ಗಣ
ತನ್ನ ಮುಂದೆ ಹೋದ ಇಲಿಯನ್ನು ನೋಡಿ ಸುಮ್ಮನಾದ ಸೋಮಾರಿ ಬೆಕ್ಕು
ಹಾವು ಇಲಿ ಹಲ್ಲಿ ಕಪ್ಪೆಗಳ ಮಿನಿ ಮೃಗಾಲಯದಲ್ಲಿ,
ವಾಸಿಸಲೆಂದೇ ಇಲ್ಲಿಗೆ ಬಂದೆಯಾ ನೀನು?

 

(ಕೊನೆಯವರೆಗೆ ತಾಳ್ಮೆಯಿಂದ ಓದಿದ್ದಕ್ಕೆ ನಿಮಗೆ ಧನ್ಯವಾದಗಳು. ಪೂರ್ತಿ ಕವನ ಇಷ್ಟವಾಗದಿದ್ದರೂ ಕೆಲವೊಂದು ಸಾಲುಗಳು ನಿಮಗೆ ಮೆಚ್ಚುಗೆಯಾಗುತ್ತವೆ ಎಂದು ನಂಬಿದ್ದೇನೆ. ನಿಮಗೆ ಇಷ್ಟವಾದ ಸಾಲುಗಳನ್ನು ತಿಳಿಸಿ. ಇದು ನನ್ನ ಕವನ ಬರೆಯುವ ಮೊದಲ ಪ್ರಯತ್ನವಾದ್ದರಿಂದ ನಿಮ್ಮೆಲ್ಲರ ಸಲಹೆ ಸೂಚನೆಗಳು ನನಗೆ ಅಮೂಲ್ಯ. ಅದನ್ನು ತಿಳಿಸುವಿರೆಂಬ ನಂಬಿಕೆಯಲ್ಲಿರುವ,
-ಪ್ರಸನ್ನ.ಶಂಕರಪುರ  )

Rating
No votes yet

Comments