ಕಾಲಾಯ ತಸ್ಮೈ ನಮಃ
ಬರಹ
ಕಾಲಾಯ ತಸ್ಮೈ ನಮಃ
ಭಾರ ಹೊತ್ತು ನಡೆದಿರುವೆ ನಾನಿಂದು ಹಾದಿಯಲಿ
ದೇಹದ ಅವಿಭಾಜ್ಯ ಅಂಗವೇ ಭಾರವಾಗಿ ಹೋಯಿತೇ
ಈ ಹೊರೆಯ ಇಳಿಸಲಾರೆ, ಬಿಡಿಸಿಕೊಳ್ಳಲಾರೆ
ನನ್ನ ಚೇತನವೇ ಎದೆಗುಂದಿ ಮುದುಡಿ ಹೋಯಿತೇ
ಹೋರಾಟಕೆ ಫಲವಿಲ್ಲ, ಪರಿಶ್ರಮಕೆ ಸಾರ್ಥಕತೆಯಿಲ್ಲ
ಶ್ರಮದಲ್ಲಿದ್ದ ಭರವಸೆಯು ಇಳಿದು ಬದುಕು ಕತ್ತಲಾಯಿತೆ
ಹಾದಿಯಲಿ ಕಂಡ ಎಳೆಯ ಕಿರಣಗಳ ಅನುಸರಸಿ
ಬದುಕಿನ ಸ್ಥಿರತೆಗಾಗಿ ನಾ ಪಟ್ಟ ಶ್ರಮವು ನೀರಾಯಿತೇ
ನನ್ನ ಜೀವನದ ಮೇಲೆ ತನ್ನ ಹತೋಟಿಯ ಮೆರೆಸುತ
ತನ್ನ ಪ್ರಭುತ್ವವನು ಸಾರಿ ಹೇಳುತಿಹನೆ ಭಗವಂತ?
ನನ್ನೆಲ್ಲಾ ಶಕ್ತಿಗಳು ತೃಣಕೆ ಸಮಾನವೆಂದು ಚುಚ್ಚಿ
ನುಡಿಯುತಿಹನೆ ನನ್ನ ಮೇಲಿನ ಹಿಡಿತವ ತೋರುತ
ಶಕ್ತಿ ಇಟ್ಟವ ನೀನು, ಬಯಕೆ ಕೊಟ್ಟವ ನೀನು, ಮರೆತೆಯಾ
ನೀ ಕೊಟ್ಟ ಬದುಕಿನಲಿ ಹಿಂದಿರುಗಿ ಬರುವ ವಿಶ್ವಾಸವನು
ಕಾಲವೇ ನನ್ನ ಶಕ್ತಿಯಾಗಿ, ಹೊಸ ಭರವಸೆಯಾಗಿ ತಿರುಗಿ
ತರುವುದು ನನ್ನೆಲ್ಲ ಜೀವನದ ಸವಾಲಿಗೆ ಉತ್ತರವನು
- ತೇಜಸ್ವಿ.ಎ.ಸಿ