ಸೇವಾ ಪುರಾಣ -9: ಸರಳುಗಳ ಹಿಂದಿನ ಲೋಕ -2

ಸೇವಾ ಪುರಾಣ -9: ಸರಳುಗಳ ಹಿಂದಿನ ಲೋಕ -2

ಬರಹ

                                           ಸರಳುಗಳ ಹಿಂದಿನ ಲೋಕ -2
ಪೋಲಿಸರ ಕುಯುಕ್ತಿ
     ನಾನು ಪೋಲಿಸ್ ಠಾಣೆಗೆ ಹಾಜರಾತಿ ಹಾಕಲು ಹೋಗಿದ್ದಾಗ ಸಬ್ ಇನ್ಸ್ ಪೆಕ್ಟರರು ನನ್ನನ್ನು ಜೀಪಿನಲ್ಲಿ ಕುಳಿತುಕೊಳ್ಳಲು ಹೇಳಿದರು. ನಾನು ಏಕೆ ಎಂದು ಕೇಳಿದ್ದಕ್ಕೆ ಕೆಕ್ಕರಿಸಿ ನೋಡಿದರು. ನಾನು ಸುಮ್ಮನೆ ಹೋಗಿ ಜೀಪು ಹತ್ತಿ ಕುಳಿತೆ. ಒಬ್ಬ ಆರೆಸ್ಸೆಸ್ ಕಾರ್ಯಕರ್ತನನ್ನು ಬಂಧಿಸಲು ಹೋಗುತ್ತಿದ್ದರೆಂದು ಆತನ ಮನೆಯ ಮುಂದೆ ಜೀಪು ನಿಂತಾಗಲೇ ನನಗೆ ಗೊತ್ತಾಗಿದ್ದು. ನನ್ನನ್ನೂ ಆತನ  ಮನೆಯ ಒಳಗೆ ಕರೆದುಕೊಂಡು ಹೋದರು.ನಾನು ಮನೆಯ ಸ್ಟೇರ್ ಕೇಸಿನ ಮೆಟ್ಟಿಲ ಮೇಲೆ ಹಿಡಿಯಾದ ಮನಸ್ಸಿನಿಂದ ಕುಳಿತಿದ್ದೆ. ಯಾರನ್ನು ಬಂಧಿಸಲು ಹೋಗಿದ್ದರೋ ಆತನೂ ನನ್ನ ಸ್ನೇಹಿತನೇ ಆಗಿದ್ದು ಆತನ ಮನೆಯವರೂ ನನಗೆ ಪರಿಚಿತರಿದ್ದರು. ಆತನ ಮನೆಯವರು ನನ್ನನ್ನು ಒಂದು ತರಹಾ ನೋಡುತ್ತಿದ್ದರು. ಅವರ ದೃಷ್ಟಿಯಲ್ಲಿ ಆತನನ್ನು ನಾನೇ ಹಿಡಿಸುತ್ತಿದ್ದೇನೆ ಎಂಬ ಭಾವನೆ ಬಂದಿತ್ತೆಂದು ನಂತರ ನನಗೆ ಗೊತ್ತಾಗಿ ಬಹಳ ನೊಂದುಕೊಂಡಿದ್ದೆ. ಆತ ಆ ಸಮಯದಲ್ಲಿ ಮನೆಯಲ್ಲಿರಲಿಲ್ಲ. ಪೇದೆಗಳು ಮನೆಯನ್ನೆಲ್ಲಾ ಜಾಲಾಡಿದರು. ಅವನನ್ನು ಕರೆಸಲು ಆತನ ತಂದೆಗೆ ಪೋಲಿಸ್ ಭಾಷೆಯಲ್ಲಿ ಆದೇಶಿಸಿದರು. ಬಂದ ತಕ್ಷಣ ಠಾಣೆಗೆ ಕಳಿಸಿಕೊಡುವುದಾಗಿ ಆತನ ವೃದ್ಧ ತಂದೆ ಹೇಳಿದರೂ, ಸಬ್ ಇನ್ಸ್ ಪೆಕ್ಟರರು ಆ ವೃದ್ಧರಿಗೆ "ನಿನ್ನ ಮಗನ ಬದಲಾಗಿ ನಿನ್ನ ಮಗಳನ್ನು ಕಳಿಸಿರು. ನಿನ್ನ ಮಗ ಬಂದಮೇಲೆ ಬಿಟ್ಟು ಕಳಿಸುತ್ತೇನೆ" ಎಂದು ಹೇಳಿದಾಗ ನನಗೇ ರೋಷ ಉಕ್ಕಿ ಬಂದಿದ್ದಾಗ ಆತನ ಮನೆಯವರಿಗೆ ಹೇಗಾಗಿರಬೇಕು! ಅದುವರೆಗೆ ಅಲ್ಲಿ ನಡೆಯುತ್ತಿದ್ದುದನ್ನೆಲ್ಲಾ ಗಾಬರಿಯಿಂದ ನೋಡುತ್ತಿದ್ದ ಆ ಹೆಣ್ಣುಮಗಳು ಈ ಮಾತು ಕೇಳಿದಾಗ ಅಳುತ್ತಾ ಒಳಗೆ ಓಡಿಹೋದಳು. ಅಸಹಾಯಕತೆ ಎಲ್ಲರನ್ನೂ ಷಂಡರನ್ನಾಗಿಸಿತ್ತು. ತುರ್ತು ಪರಿಸ್ಥಿತಿ ಅಂತಹ ವಾತಾವರಣ ನಿರ್ಮಿಸಿತ್ತು. ರಾಜಕೀಯಸ್ಥರು -ಅದರಲ್ಲೂ ಕಾಂಗ್ರೆಸ್ಸಿಗರು- ತಮಗಾಗದವರನ್ನು ಮಟ್ಟ ಹಾಕಲು ಸಂದರ್ಭವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಿದ್ದರು. ಪೋಲಿಸರ ಕೈಗೆ ಸರ್ವಾಧಿಕಾರ ಸಿಕ್ಕಿಬಿಟ್ಟಿತ್ತು. ಅವರ ವಿಕೃತ ಕ್ರೌರ್ಯಕ್ಕೆ ಮಿತಿಯೇ ಇರಲಿಲ್ಲ.
ರಾಷ್ಟ್ರದ್ರೋಹದ ಕೇಸು!
     ಎರಡು ತಿಂಗಳ ನಂತರ ದಿನಾಂಕ 9-11-1975ರಂದು ವಿಧ್ವಂಸಕ ಕೃತ್ಯಕ್ಕಾಗಿ ಪಿತೂರಿ ಮಾಡುತ್ತಿದ್ದೇನೆಂದು ನಾನೂ ಸೇರಿದಂತೆ 11 ಜನರ ವಿರುದ್ಧ ಭಾರತ ರಕ್ಷಣಾ ಕಾಯದೆಯನ್ವಯ ಮೊಕದ್ದಮೆ ಹೂಡಿದಾಗ ಪುನಃ ಜೈಲಿನ ದರ್ಶನವಾಯಿತು. ಹಾಸನದ ಇಂಜನಿಯರಿಂಗ್ ಕಾಲೇಜಿನ ಇನ್ಸ್ ಟ್ರಕ್ಟರ್ ಚಂದ್ರಶೇಖರ್, ಕರ್ನಾಟಕ ಬ್ಯಾಂಕ್ ಉದ್ಯೋಗಿ ಜಯಪ್ರಕಾಶ್, ಟೈಲರ್ ಜನಾರ್ಧನ ಐಯಂಗಾರ್, ಪೆಟ್ಟಿಗೆ ಅಂಗಡಿ ರಾಮಚಂದ್ರ (ಇವರನ್ನು ಕಛ್ ರಾಮಚಂದ್ರ ಎಂದು ಕರೆಯುತ್ತಿದ್ದರು, ಗೋವಾ ವಿಮೋಚನಾ ಚಳುವಳಿಯಲ್ಲಿ ಪಾಲ್ಗೊಂಡಿದ್ದವರು),ಆರೆಸ್ಸೆಸ್ ಪ್ರಚಾರಕರಾಗಿದ್ದ ಪ್ರಭಾಕರ ಕೆರೆಕೈ (ಇವರು ತುರ್ತು ಪರಿಸ್ಥಿತಿ ನಂತರದಲ್ಲಿ ಮಾನಸಿಕ ಅಸ್ವಸ್ಥತೆಗೆ ಒಳಗಾಗಿ ಯಾರನ್ನು ಕಂಡರೂ -ಪರಿಚಯದವರಾದರೂ- ಭಯಪಡುತ್ತಿದ್ದರು, ಮತ್ತು ಇದೇ ಕಾರಣದಲ್ಲಿ 30-32ರ ಚಿಕ್ಕ ವಯಸ್ಸಿನಲ್ಲೇ ತೀರಿಕೊಂಡರು.ಬಹುಷಃ ತುರ್ತು ಪರಿಸ್ಥಿತಿಯಲ್ಲಿ ಅವರು ಅನುಭವಿಸಿದ್ದ ಹಿಂಸೆ ಅದಕ್ಕೆ ಕಾರಣವಾಗಿದ್ದಿರಬಹುದು),ವಿದ್ಯಾರ್ಥಿಗಳಾದ ನಾಗಭೂಷಣ, ಪಾರಸಮಲ್, ಶ್ರೀನಿವಾಸ,ಪಟ್ಟಾಭಿರಾಮ, ಸದಾಶಿವ ಇವರುಗಳೇ ನನ್ನೊಂದಿಗೆ ಬಂದಿಗಳಾದವರು. ಈ ಪ್ರಕರಣದಲ್ಲಿ ನಮಗೆ ಜಾಮೀನು ಸಿಗಲಿಲ್ಲ. ಜೊತೆಯಲ್ಲಿದ್ದ ಕೆಲವರು ಹತಾಶರಾಗಿದ್ದರು. ಈ ಪ್ರಕರಣ ಮುಗಿಯುವವರೆಗೆ ಅಂದರೆ 3-4 ತಿಂಗಳುಗಳವರೆಗೆ ನಾವು ಕಾರಾಗೃಹದಲ್ಲೇ ಇರಬೇಕಾಯಿತು. ನನ್ನ ಜೊತೆಗೆ ನನ್ನಂತಹವರೇ ಇದ್ದುದರಿಂದ ಈಸಲ ಅಷ್ಟೊಂದು ಹಿಂಸೆಯೆನಿಸಲಿಲ್ಲ.ಇದೇ ತಿಂಗಳಿನಲ್ಲಿ ತುರ್ತು ಪರಿಸ್ಥಿತಿ ವಿರೋಧಿಸಿ ದೇಶವ್ಯಾಪಿ ಆಂದೋಲನ ಪ್ರಾರಂಭವಾಗಿ ಆರೆಸ್ಸೆಸ್, ಜನಸಂಘದವರು ಹೆಚ್ಚಿನ ಸಂಖ್ಯೆಯಲ್ಲಿ ಹಾಸನದ ಜೈಲಿಗೆ ಬರತೊಡಗಿದರು. ಇಂತಹ ಹೊಸ ಹೊಸ ಬಂದಿಗಳು ಬಂದಾಗಲೆಲ್ಲಾ ಅವರಿಗೆ ಜೈಲಿನಲ್ಲಿ ವೀರೋಚಿತ ಸ್ವಾಗತ ಸಿಗುತ್ತಿತ್ತು. ಸತ್ಯಾಗ್ರಹಿಗಳ ಸಂಖ್ಯೆ ಜಾಸ್ತಿಯಾದಾಗ ಕಳ್ಳಕಾಕರೊಂದಿಗೆ ಇರಿಸದೆ ಪ್ರತ್ಯೇಕವಾಗಿ ಇರಿಸಬೇಕೆಂಬ ಒತ್ತಾಯಕ್ಕೆ ಜೈಲು ಸಿಬ್ಬಂದಿ ಮಣಿಯಲೇ ಬೇಕಾಯಿತು. ನಮ್ಮನ್ನೆಲ್ಲಾ ಒಂದು ಬ್ಯಾರಕ್ಕಿನಲ್ಲಿ, ಇತರ ಕೈದಿಗಳನ್ನು ಇನ್ನೊಂದು ಬ್ಯಾರಕ್ಕಿನಲ್ಲಿ ತುಂಬಿದರು. 35 ಬಂದಿಗಳನ್ನು ಇರಿಸಬಹುದಾದ ಕಾರಾಗೃಹದಲ್ಲಿ 200ಕ್ಕೂ ಹೆಚ್ಚು ಕೈದಿಗಳನ್ನು ಅಕ್ಷರಶಃ ತುಂಬಲಾಗಿತ್ತು.ನಂತರ ಬಂದವರನ್ನು ಬಳ್ಳಾರಿ, ಮೈಸೂರು ಜೈಲುಗಳಿಗೆ ಕಳಿಸುತ್ತಿದ್ದರು. ಜೈಲಿನ ಒಳಗಿದ್ದಾಗ ಹೊಸ ಕೇಸುಗಳ ಭಯವಿರಲಿಲ್ಲ.ಹೊರಗಿಗಿಂತ ಜೈಲಿನ ಒಳಗೇ ಒಂದು ರೀತಿಯ ನಿರ್ಭಯ ವಾತಾವರಣವಿತ್ತೆಂದರೆ ತಪ್ಪಿರಲಿಲ್ಲ.
ಸುಧಾರಣೆ
     ನಮ್ಮ ಪ್ರತಿಭಟನೆಯಿಂದಾಗಿ ಜೈಲು ಸಿಬ್ಬಂದಿ ಕಟ್ಟಿದಾರಭ್ಯ ಶುಚಿಗೊಳ್ಳದಿದ್ದ ನೀರಿನ ತೊಟ್ಟಿ, ಅಡುಗೆ ಮನೆ, ಶೌಚಾಲಯ ಸ್ವಚ್ಛಗೊಳಿಸಲು ಕ್ರಮ ಕೈಗೊಂಡದ್ದು ಅದ್ಭುತ ಸಾಧನೆಯೆಂದೇ ಹೇಳಬಹುದು.ಮೊದಲು ನಮಗೆ ಕೊಡುತ್ತಿದ್ದ ಆಹಾರವನ್ನು ತಯಾರಿಸುವ ಕೆಲಸ ಅಡುಗೆ ಬಲ್ಲ ಕೈದಿಗಳೇ ಮಾಡುತ್ತಿದ್ದು ಅವರು ಇರುತ್ತಿದ್ದ ಸ್ಥಿತಿ ನೋಡಿದರೆ ಮಾಡಿದ ಊಟವೆಲ್ಲಾ ಹೊರಬರುತ್ತಿತ್ತು.ನಮ್ಮ ಅಡುಗೆಯನ್ನು ನಾವೇ ಸಿದ್ಧಪಡಿಸಿಕೊಳ್ಳಲು ಅವಕಾಶ ಪಡೆದೆವು.ನಾನು ಫುಡ್ ಇನ್ಸ್ ಪೆಕ್ಟರ್ ಆಗಿದ್ದರಿಂದ ಎಲ್ಲರೂ ನನ್ನನ್ನು ಫುಡ್ ನಾಗರಾಜ ಎಂತಲೇ ಕರೆಯುತ್ತಿದ್ದರು. ಜೈಲಿನಲ್ಲಿಯೂ ಆಹಾರ ವಿಭಾಗದ ಮೇಲ್ವಿಚಾರಣೆ ಕೆಲಸ ನನ್ನ ಹೆಗಲಿಗೇ ಬಿತ್ತು. ನಮಗೆ ಬರಬೇಕಾದ ಆಹಾರ ಧಾನ್ಯಗಳ ಪ್ರಮಾಣವನ್ನು (ಒಬ್ಬ ಕೈದಿಗೆ ಇಷ್ಟು ಹಿಟ್ಟು, ತರಕಾರಿ, ಬೇಳೆ, ಸೌದೆ, ಎಂದು ಪ್ರಮಾಣ ನಿಗದಿತವಾಗಿರುತ್ತದೆ) ಲೆಕ್ಕ ಹಾಕಿ ಪಡೆಯುವ ಕೆಲಸ ಮಾಡುತ್ತಿದ್ದೆ. ಜೈಲು ಸಿಬ್ಬಂದಿ ಈ ಮೊದಲು ಕೈದಿಗಳಿಗೆ ಕೊಡುತ್ತಿದ್ದ ಪ್ರಮಾಣ ಕಡಿಮೆ ಮಾಡಿ ತಮ್ಮ ಮನೆಗಳಿಗೆ ಸಾಗಿಸುತ್ತಿದ್ದುದು ನಾವು ಸರಿಯಾಗಿ ತೂಕ ಹಾಕಿಸಿ ಪಡೆಯುತ್ತಿದ್ದರಿಂದ ಇಂತಹ ಅಕ್ರಮಕ್ಕೆ ಅವಕಾಶವಾಗುತ್ತಿರಲಿಲ್ಲ. ಕಾಯಿಲೆಯಾದವರಿಗೆ ಹಾಲು, ಬ್ರೆಡ್ ಕೊಡಲು ಅವಕಾಶವಿದ್ದುದರಿಂದ ಮತ್ತು ನಮಗೆ ಮಜ್ಜಿಗೆ ಕೊಡುತ್ತಿರಲಿಲ್ಲವಾದ್ದರಿಂದ 6-7 ಜನರಿಗೆ ಕಾಯಿಲೆಯಾದವರೆಂದು ಲೆಕ್ಕ ಕೊಟ್ಟು ಅವರ ಪಾಲಿನ ಹಾಲು, ಬ್ರೆಡ್ ಪಡೆದು ಎಲ್ಲರೂ ಹಂಚಿಕೊಂಡು ತಿನ್ನುತ್ತಿದ್ದೆವು.ಜೈಲು ಸಿಬ್ಬಂದಿಗೆ ಸೌದೆ, ತರಕಾರಿ, ಇತ್ಯಾದಿಗಳನ್ನು ಮನೆಗೆ ಸಾಗಿಸಲು ಅವಕಾಶವಿಲ್ಲದ್ದರಿಂದ ಅವರಿಗೆ ನಮ್ಮಗಳ ಮೇಲೆ ಅಸಮಾಧಾನವಿತ್ತು.ಇದಕ್ಕಾಗಿ ಅವರು ಇತರ ಕೈದಿಗಳನ್ನು ನಮ್ಮ ಮೇಲೆ ಎತ್ತಿಕಟ್ಟಿದ್ದರಿಂದ ಅವರಿಗೂ, ನಮಗೂ ಎರಡು-ಮೂರು ಸಲ ಹೊಡೆದಾಟವಾಗಿತ್ತು. ಒಳ್ಳೆಯ ಕಂಬಳಿ, ತಟ್ಟೆ, ಲೋಟಗಳಿಗಾಗಿ ಸಹ ಸತ್ಯಾಗ್ರಹ ನಡೆಸಬೇಕಾಯಿತು. ಜೈಲು ಸೂಪರಿಂಟೆಂಡೆಂಟರು ತಟ್ಟೆ, ಲೋಟಗಳನ್ನು ತರಿಸಿಕೊಟ್ಟರು. ಕಂಬಳಿ ತರಿಸಲು ಅವರು ಸಮಯಾವಕಾಶ ಕೇಳಿದರೂ ತರಿಸಿಕೊಡಲಿಲ್ಲ. ಅವುಗಳನ್ನು ಯಾರೂ ಉಪಯೋಗಿಸುತ್ತಲೂ ಇರಲಿಲ್ಲ.ಮನೆಯಿಂದ ಹೊದಿಕೆ ತರಿಸಿಕೊಳ್ಳಲು ಅವಕಾಶ ನೀಡಿ ಉಪಕಾರ ಮಾಡಿದರು.ಹಾಡು, ಭಜನೆ, ಚರ್ಚೆಗಳನ್ನು ಮಾಡುತ್ತಾ ಸಮಯ ಕಳೆಯುತ್ತಿದ್ದೆವು. 'ಆರದಿಹ ಆದರ್ಶ ಜ್ವಾಲೆಯ ಅರ್ಚಿಸುವೆ ನಾ ದಿನದಿನ' ಎಂಬುದು ನನ್ನ ಮೆಚ್ಚಿನ ಹಾಡಾಗಿದ್ದು ಅದನ್ನೇ ಇತರರಿಗೆ ಹೇಳಿಕೊಡುತ್ತಿದ್ದೆ. ಹೊರಗಿಗಿಂತ ಜೈಲಿನ ಒಳಗೇ ಒಂದು ರೀತಿಯ ನಿರ್ಭಯ ವಾತಾವರಣವಿತ್ತು. ತುರ್ತು ಪರಿಸ್ಥಿತಿಯಲ್ಲಿ ನಾವು ಜೈಲಿನ ಒಳಗಡೆ ಮಾಡುತ್ತಿದ್ದಂತಹ ಚರ್ಚೆಗಳನ್ನು ಮುಕ್ತವಾಗಿ ಹೊರಗೆ ಮಾಡಲು ಸಾಧ್ಯವೇ ಇರಲಿಲ್ಲ!