ಅಂತರ್ಜಾಲದಲ್ಲಿ ನಿಮ್ಮ ಇಮೇಜ್ ಕಾಪಾಡಿಕೊಳ್ಳಿ!

ಅಂತರ್ಜಾಲದಲ್ಲಿ ನಿಮ್ಮ ಇಮೇಜ್ ಕಾಪಾಡಿಕೊಳ್ಳಿ!

ಬರಹ

ಅಂತರ್ಜಾಲದಲ್ಲಿ ನಿಮ್ಮ ಇಮೇಜ್ ಕಾಪಾಡಿಕೊಳ್ಳಿ!
ಅಂತರ್ಜಾಲದಲ್ಲಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುವಂತಹ ಮಾಹಿತಿಗಳಿವೆಯೆಂಬ ಖಾತರಿ ನಿಮಗಿದೆಯೇ?ನೀವು ಯಾವತ್ತಾದರೂ ಅಂತರ್ಜಾಲದಲ್ಲಿ ವಿವಾದಗಳಿಗೆ ಸಿಕ್ಕಿರಬಹುದು.ಚರ್ಚೆಗೆ ಗ್ರಾಸವಾಗಿರಬಹುದು.ಕುಡಿಯುವಾಗ ಅಥವಾ ಯಾವುದೋ ವಿವಾದಾಸ್ಪದ ವ್ಯಕ್ತಿಯ ಜತೆಗೆ ನಿಮ್ಮ ಚಿತ್ರ ಇರಬಹುದು.ಮುಂದೆಂದಾದರೂ ಇವು ನಿಮಗೆ ತೊಂದರೆ ಉಂಟು ಮಾಡಬಹುದು.ಹೊಸ ನೌಕರಿಗೆ ಅರ್ಜಿ ಹಾಕುವಾಗ,ನಿಮ್ಮ ಬಗ್ಗೆ ಹೊಸ ಕಂಪೆನಿ ಅಂತರ್ಜಾಲದ ಗೂಗಲ್ ಅಂತಹ ಶೋಧ ಸೇವೆ ಬಳಸಿ ಪರೀಶೀಲಿಸುವಾಗ,ಇಂತಹ ನೆಗೆಟಿವ್ ವಿವರಗಳಿರುವ ಚಿತ್ರಗಳನ್ನು ನೋಡಿ,ನಿಮ್ಮ ಬಗ್ಗೆ ಕಂಪೆನಿ ಕೆಟ್ಟ ಅಭಿಪ್ರಾಯ ಹೊಂದಬಹುದು.ಇದು ಬರೇ ಕಲ್ಪನೆಯಲ್ಲ.ಹಲವರಿಗೆ ,ಅಂತರ್ಜಾಲದಲ್ಲಿ ಅವರ ಬಗ್ಗೆ  ಇರುವ ಮಾಹಿತಿಗಳು  ಅವಕಾಶಗಳಿಗೆ ಕಲ್ಲು ಬೀಳಲು ಕಾರಣವಾದದ್ದಿದೆ.ಈಗ ಇಂತಹ ಪುಟಗಳನ್ನು ಅಡಗಿಸಲು,ಸಾಧ್ಯವಾದರೆ ಅವನ್ನು ತೆಗೆದು ಹಾಕಿ,ವ್ಯಕ್ತಿಯ ಬಗ್ಗೆ ಉತ್ತಮ ಅಭಿಪ್ರಾಯ ನೀಡುವ ಪುಟಗಳೇ ಹುಡುಕುವವರ ಕಣ್ಣಿಗೆ ಬೀಳಿಸುವ ಸೇವೆ ಒದಗಿಸುವ ಅಂತರ್ಜಾಲ ತಾಣಗಳೂ ಇವೆ.ReputationDefender ಇಂತಹ ಒಂದು ತಾಣವಾಗಿದೆ.ಇದು ವ್ಯಕ್ತಿಯ ಬಗೆಗಿನ ಗೂಗಲ್ ಶೋಧವು ಉತ್ತಮ ಅಭಿಪ್ರಾಯ ಮೂಡಿಸುವಂತೆ,ಆತನ ಬಗ್ಗೆ ಇರುವ ಕೆಟ್ಟ ಪುಟಗಳನ್ನು ಕಿತ್ತು ಹಾಕುವ ಸೇವೆಗಳನ್ನು ಒದಗಿಸುತ್ತದೆ.ಈ ಸೇವೆ ಉಚಿತವೇನೂ ಅಲ್ಲ.ಅದಕ್ಕೆ ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಅಂತರ್ಜಾಲದಲ್ಲಿ ಇರುವ ಚಿತ್ರಗಳಲ್ಲಿ ನಮ್ಮ ಪರಿಚಿತರು ಇದ್ದರೆ,ಅವರನ್ನು ಟ್ಯಾಗ್ ಮಾಡಿ,ಅವರ ಇತರ ಮಾಹಿತಿಗಳಿಗೆ ಥಳಕು ಹಾಕುವುದು ಸಾಧ್ಯ.ಇತ್ತೀಚೆಗಿನವರೆಗೂ ಇಂತಹ ಥಳಕು ಹಾಕುವುದು ಬಳಕೆದಾರರ ಕೈಯಲ್ಲಿತ್ತು.ಆದರೆ ಮುಖವನ್ನು ನೋಡಿ ವ್ಯಕ್ತಿಯನ್ನು ಗುರುತಿಸುವ ತಂತ್ರಾಂಶಗಳ ಅಭಿವೃದ್ಧಿಯಾಗುತ್ತಿರುವ ಈಗಿನ ದಿನಗಳಲ್ಲಿ,ಚಿತ್ರಗಳಲ್ಲಿ ವ್ಯಕ್ತಿಯನ್ನು ಗುರುತಿಸಿ,ಆತನ ಇತರ ಚಿತ್ರಗಳ ಜತೆ ಥಳಕು ಹಾಕುವ ಪ್ರಕ್ರಿಯೆಯು ಕಂಪ್ಯೂಟರೇ ಮಾಡುತ್ತಿದೆ.ಹೀಗಾಗಿ,ಯಾರಾದರೂ ಮೊಬೈಲ್ ಸಾಧನದಲ್ಲಿ ತೆಗೆದ ಚಿತ್ರಗಳಲ್ಲಿ ಕಂಡು ಬಂದ ವ್ಯಕ್ತಿಯ ಮುಖವನ್ನೂ ಆತನ ಇತರ ಚಿತ್ರಗಳ ಜತೆ ಥಳಕು ಹಾಕುವ ಸಾಧ್ಯತೆ ಹೆಚ್ಚಿದೆ.ಆಕಸ್ಮಿಕ ಘಟನೆಗಳ ಚಿತ್ರಗಳಲ್ಲಿ ಈ ರೀತಿ ವ್ಯಕ್ತಿ ಕೆಟ್ಟ ರೀತಿಯಲ್ಲಿ ಚಿತ್ರಿತವಾಗಿರುವ ಚಿತ್ರಗಳೂ ಇರಬಹುದು.ಅಂತಹ ಕೆಟ್ಟ ಇಮೇಜ್ ನೀಡುವ ಚಿತ್ರಗಳಲ್ಲಿ ವ್ಯಕ್ತಿಯು ಗುರುತಿಸಲ್ಪಟ್ಟರೆ,ಆತನ ಇಮೇಜ್ ಕೆಡದೇ ಇರದು.ಮಾಹಿತಿಗಳಿಗೂ ಅಂತಿಮ ದಿನಾಂಕ-ಎಕ್ಸ್‌ಪೈರಿ ದಿನಾಂಕ ಗೊತ್ತು ಪಡಿಸಿ,ನಿಗದಿತ ಸಮಯದ ನಂತರ ಮಾಹಿತಿಗಳು ಮಾಯವಾಗುವ ಹಾಗೆ ಮಾಡಿ,ಅಂತರ್ಜಾಲದಲ್ಲಿ ಸೇರಿದ ಮಾಹಿತಿಗಳು ಸದಾ ಉಳಿದುಕೊಳ್ಳದೇ ಇರುವ ಹಾಗೆ ಮಾಡುವ "ವ್ಯಾನಿಶ್" ಸೇವೆಯನ್ನು ಲಭ್ಯವಾಗಿಸಲು ವಾಷಿಂಗ್ಟನ್ ವಿವಿಯ ಸಂಶೋಧಕರು ಪ್ರಯತ್ನಿಸುತ್ತಿದ್ದಾರೆ.ನಿಗದಿತ ಸಮಯದ ನಂತರ ಮಾಹಿತಿಯು ಗೂಢ ಲಿಪೀಕರಣಗೊಂಡು,ಒಂದು ಕೀಲಿ ಸಂಖ್ಯೆ ನೀಡಿದರೆ ಮಾತ್ರ ಗುಟ್ಟು ಬಿಟ್ಟು ಕೊಡುವ ರೀತಿ ಬದಲಾಗಿ ಬಿಡುವಂತೆ ಮಾಡಲು ಸಂಶೋಧಕರು ಸಫಲರಾಗಿದ್ದಾರೆ.
----------------------------------
ಕಿವಿಯನ್ನು ಕೆಪ್ಪಾಗಿಸುವ ಮೊಬೈಲ್ ಬಳಕೆ


ಕಿವಿಯ ಬಳಿ ಮೊರೆತ ಕೇಳುವ ಸಮಸ್ಯೆಯು ಮೊಬೈಲ್ ಬಳಕೆಯ ಕಾರಣವೂ ಬರುತ್ತದೆಯೇ? ಸಣ್ಣ ಮಟ್ಟದ ಸಮೀಕ್ಷೆಯೊಂದು ಇಂತಹ ಫಲಿತಾಂಶ ನೀಡಿದೆ.ಸಣ್ಣ ಸಮೀಕ್ಷೆಗಳ ಫಲಿತಾಂಶ ನಂಬಿಕೆಗೆ ಅರ್ಹವೇನೂ ಅಲ್ಲ.ಹಾಗೆಂದು ಅವುಗಳನ್ನು ತಳ್ಳಿಹಾಕಲೂ ಸಾಧ್ಯವಿಲ್ಲ.ಕೆಲವು ಬಗೆಯ ರೋಗಗಳು,ಕೆಲವು ಔಷಧ ಸೇವನೆಯ ಕಾರಣ ಕಿವಿ ಮೊರೆತ ಸಮಸ್ಯೆ ಬರುವುದಿದೆ.ಕಿವಿಯೊಳಗೆ ಯಾವಾಗಲೂ ಕೇಳಿಸುವ ಸದ್ದಿನ ಈ ಮೊರೆತ ಸಮಸ್ಯೆಗೆ ಮೊಬೈಲ್‌ನ ಅತಿ ಬಳಕೆ ಕಾರಣವಾಗಿದೆಯೆಂದು ಜನರಲ್ಲಿ ನಡೆಸಿದ ಸಮೀಕ್ಷೆಗಳು ಫಲಿತಾಂಶ ನೀಡಿವೆ.ಹತ್ತರಲ್ಲಿ ಓರ್ವ ವ್ಯಕ್ತಿ, ಅತಿಬಳಕೆಯ ನಂತರ ಇಂತಹ ಸಮಸ್ಯೆಗಳಿಗೆ ತುತ್ತಾಗಿರುವುದು ಕಂಡು ಬಂದಿದೆ.ಆಸ್ಟ್ರಿಯಾದಲ್ಲಿ ನಡೆಸಿದ ಸಮೀಕ್ಷೆಗಳು ಈ ಅಭಿಪ್ರಾಯ ಹೊಮ್ಮಿಸಿವೆ.
-----------------------------------------------
ಡಿ ಟಿ ಎಚ್ ಸೇವೆ ಆಗಲಿದೆ ಅಗ್ಗ
ಟ್ರಾಯ್ ದೃಷ್ಟಿಯಿದೀಗ ಡಿಟಿಎಚ್,ಐಪಿಟಿವಿ ಅಂತಹ ಟಿವಿ ಕಾರ್ಯಕ್ರಮಗಳ ಡಿಜಿಟಲ್ ಪ್ರಸಾರದಲ್ಲಿ ತೊಡಗಿದವರ ಮೇಲೆ ಬಿದ್ದಿದೆ.ಈ ಕ್ಷೇತ್ರದಲ್ಲಿ ಸದ್ಯ ಬಹಳ ಸ್ಪರ್ಧೆ ಇದ್ದರೂ,ಗ್ರಾಹಕರಿಗೆ ಅಗ್ಗದ ಸೇವೆ ಲಭ್ಯವಾಗುತ್ತಿಲ್ಲ.ಗ್ರಾಹಕರ ಹಕ್ಕಿನ ರಕ್ಷಣೆಗೋಸ್ಕರ ಮಧ್ಯಪ್ರವೇಶಿಸಿರುವ ಟ್ರಾಯ್,ಮಾಸಿಕ ಕನಿಷ್ಠ ಶುಲ್ಕವನ್ನು ನೂರೈವತ್ತು ರೂಪಾಯಿಗಳಿಗೆ ಸೀಮಿತಗೊಳಿಸುವ ಆದೇಶವನ್ನು ನೀಡಿದೆ.ಈ ಆದೇಶ ಸೆಪ್ಟೆಂಬರ್‌ನಿಂದ ಜಾರಿಗೆ ಬರಲಿದೆ.ಪ್ರತಿ ಪೇ ಚಾನೆಲಿನ ದರವನ್ನು ಪ್ರತ್ಯೇಕವಾಗಿ ನಿಗದಿ ಪಡಿಸುವಂತೆ,ಟ್ರಾಯ್ ಸೂಚಿಸಿದೆ.ಗ್ರಾಹಕ ಆಯ್ದ ಪ್ಯಾಕೇಜಿನ ದರವನ್ನು ಆರು ತಿಂಗಳ ಕಾಲ ಹೆಚ್ಚಿಸದಿರುವಂತೆ ಮತ್ತು ಅದನ್ನು ಮೊದಲ ಆರು ತಿಂಗಳಲ್ಲಿ ಉಚಿತವಾಗಿ ಬದಲಿಸಲು ಅವಕಾಶ ಸಿಗಲಿದೆ.ಈ ಅವಧಿಯಲ್ಲಿ ಪ್ಯಾಕೇಜಿನ ದರವನ್ನು ಇಳಿಸುವ ಅವಕಾಶವಷ್ಟೇ ಸೇವಾದಾತೃಗಳಿಗಿರುತ್ತದೆ.ಡಿಟಿಎಚ್ ಆಂಟೆನಾ,ಸೆಟ್ ಟಾಪ್ ಬಾಕ್ಸ್ ಇತ್ಯಾದಿ ಕೆಟ್ಟರೆ,ಅವನ್ನು ಉಚಿತವಾಗಿ ಸರಿ ಪಡಿಸಿಕೊಡುವ ಜವಾಬ್ದಾರಿ ಸೇವೆ ನೀಡುವಾತನದ್ದಾಗಲಿದೆ.ಸೆಟ್ ಟಾಪ್ ಬಾಕ್ಸ್ ಅಳವಡಿಸಿದಲ್ಲಿ ಕೇಬಲ್ ಟಿವಿ ಸೇವೆ ನೀಡುವವರಿಗೂ ಈ ನಿಯಮಗಳು ಅನ್ವಯವಾಗಲಿದೆ.ದೂರದರ್ಶನದ ಚಾನೆಲುಗಳನ್ನು ಒದಗಿಸುವುದು ಕಡ್ಡಾಯವಾಗಲಿದೆ.
-----------------------------------------------

ಪತ್ರಿಕೆಗಳ ಹಕ್ಕುಸ್ವಾಮ್ಯ:ಆದಾಯ ಮೂಲ?


ಪತ್ರಿಕೆಗಳ ಪ್ರಸಾರ ಇಳಿದು,ಅವುಗಳ ಆದಾಯ ಇಳಿಮುಖವಾಗುವ ಪ್ರವೃತ್ತಿ ವಿದೇಶಗಳಲ್ಲಿ ಕಂಡು ಬರುತ್ತಿದೆ.ಅಂತರ್ಜಾಲ ಆವೃತ್ತಿಗಳ ಜನಪ್ರಿಯತೆ ಏರಿದರೂ,ಜಾಹೀರಾತುಗಳು ಸೀಮಿತವಾಗಿ ಸಿಗುವ ಕಾರಣ,ಅವುಗಳಿಂದ ಬರುವ ಆದಾಯ ತೃಪ್ತಿದಾಯಕವಾಗಿಲ್ಲ.ಇದಕ್ಕೊಬ್ಬ ವಕೀಲ ಒಂದುಪಾಯ ಹೂಡಿದ್ದಾನೆ.ಆತನು ಪತ್ರಿಕೆಗಳ ಕಾಪಿರೈಟ್ ಉಲ್ಲಂಘಿಸುವ ಅಪರಾಧ ಮಾಡುವವರ ಮೇಲೆ ಕಣ್ಣಿರಿಸುತ್ತಾನೆ.ಅಂತಹ ಅಪರಾಧ ಮಾಡಿದ ದೊಡ್ಡಕುಳಗಳ ಮೇಲೆ ನ್ಯಾಯಾಲಯದಲ್ಲಿ ಖಟ್ಲೆ ಜಡಿದು,ಪರಿಹಾರ ಕೇಳಿ,ತನ್ಮೂಲಕ ಪತ್ರಿಕೆಗಳಿಗೆ ನೆರವಾಗುವ ಯತ್ನ ನಡೆಸಿದ್ದಾನೆ.ಸ್ಟೀವ್ಸ್ ಗಿಬ್ಸನ್ ಎನ್ನುವಾತನ ಯೋಚನೆಯಿದು.ರೈಟ್‌ಹೆವನ್ ಎನ್ನುವ ಲಾಸ್‌ವೇಗಸ್‌ನ ಕಂಪೆನಿಯ ಸಿಇಓ ಆಗಿರುವ ಗಿಬ್ಸನ್,ಮಾಧ್ಯಮಗಳು ತಮ್ಮ ಸಂಪನ್ಮೂಲಗಳ ಪ್ರಯೋಜನ ಪಡೆಯಲು ಹೀಗೆ ಮಾಡುವುದು ಅನಿವಾರ್ಯ ಎಂದು ಅಭಿಪ್ರಾಯ ಪಡುತ್ತಾನೆ.ಎಂಬತ್ತಕ್ಕೂ ಹೆಚ್ಚು ಕೇಸುಗಳನ್ನೀಗಲೇ ಕಂಪೆನಿಯು ವಿವಿಧ ಕೋರ್ಟುಗಳಲ್ಲಿ ದಾಖಲಿಸಿದೆ.ಆದರೆ ಬ್ಲಾಗ್‌ಗಳಲ್ಲಿ ಇಂತಹ ಕಾಪಿರೈಟ್ ಕಾಯಿದೆಯ ಉಲ್ಲಂಘನೆ ನಡೆದಾಗ,ಅವರುಗಳ ಮೇಲೆ ಕ್ರಮಕೈಗೊಳ್ಳುವುದು ಸುಲಭದ ಕೆಲಸವಲ್ಲ ಎನ್ನುವುದನ್ನು ಯಾರಾದರೂ ಊಹಿಸಬಹುದು.
------------------------------------------
ಅಗ್ಗದ ಟ್ಯಾಬ್ಲೆಟ್

ಒಂದೂವರೆಸಾವಿರ ರುಪಾಯಿಯಲ್ಲಿ ಗಣಕವೇ?ಭಾರತದ ಸಂಶೋಧಕರು ಅತ್ಯಂತ ಮಿತದರದಲ್ಲಿ ಅಂತರ್ಜಾಲ ಜಾಲಾಟ,ಪದಸಂಸ್ಕರಣದಂತಹ ಅಗತ್ಯ ತಂತ್ರಾಂಶಗಳ ಬಳಕೆಗೆ ಅನುವು ಮಾಡುವ,ವಿಡಿಯೋ ಕಾನ್ಫರೆನ್ಸ್ ಮಾಡಲಾಗುವ ಸಾಧನವನ್ನು ತಯಾರಿಸಿದೆ.ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಾಲ್ ಇದನ್ನು ಬಿಡುಗಡೆ ಮಾಡಿ,ಮುಂದಿನ ದಿನಗಳಲ್ಲಿ ಬೆಲೆ ಇನ್ನೂ ಇಳಿಯುವ ಬಗ್ಗೆ ಆಶಾವಾದ ವ್ಯಕ್ತಪಡಿಸಿದರು.ಇದರಲ್ಲಿ ಲಿನಕ್ಸ್ ಕಾರ್ಯನಿರ್ವಹಣಾ ತಂತ್ರಾಂಶ ಬಳಸಲಾಗುವುದು.
-------------------------------------------
ಬ್ರಾಡ್‌ಬ್ಯಾಂ‍ಡ್ ವ್ಯಾಪಿಸಲು ಹೊಸ ಯೋಜನೆ
ಬ್ರಾಡ್‌ಬ್ಯಾಂಡನ್ನು ದೇಶದ ಪ್ರತಿ ಪಂಚಾಯಿತಿ ಮಟ್ಟಕ್ಕೂ ಒಯ್ಯಲು ಸರಕಾರ ಹೊಸ ಕಾರ್ಯಯೋಜನೆ ಸಿದ್ಧಗೊಳಿಸಿದೆ.ಇದಕ್ಕೆ ಮೂಲಸೌಕರ್ಯವೆಂದರೆ ಫೈಬರ್ ಅಪ್ಟಿಕ್ ಕೇಬಲ್.ಹೊಸತಾಗಿ ಕೇಬಲ್ ಹಾಕುವುದು ಬಹು ದುಬಾರಿ,ಜತೆಗೆ ಸಮಯ ಬೇರೆ ಹೆಚ್ಚು ಬೇಕಾಗುತ್ತದೆ.ಇದನ್ನು ತಪ್ಪಿಸಲು ಸದ್ಯ ಲಭ್ಯವಿರುವ ಕೇಬಲ್‌ಗಳನ್ನೇ ಬಳಸಿ ಬ್ರಾಡ್‌ಬ್ಯಾಂಡ್ ಸೇವೆ ಒದಗಿಸುವುದು ಹೊಸ ಯೋಜನೆಯ ಪ್ರಮುಖ ಅಂಶ.ಬಿಎಸೆನ್ನೆಲ್,ಪವರ್‌ಗ್ರಿಡ್ ಮತ್ತು ರೈಲ್‌ಟೆಲ್ ಮುಂತಾದ ಸಾರ್ವಜನಿಕ ರಂಗದ ಸಂಸ್ಥೆಗಳು ಅಳವಡಿಸಿರುವ ಕೇಬಲ್‌ಗಳನ್ನು ಈ ಉದ್ದೇಶಕ್ಕೆ ಬಳಸುವ ಮೂಲಕ,ಮಿತವ್ಯಯ ಮತ್ತು ಹೆಚ್ಚು ಬಳಕೆ ಮಾಡುವುದು ಸರಕಾರದ ಯೋಜನೆ.ಮೊದಲಾಗಿ ನಾಲ್ಕು ರಾಜ್ಯಗಳ ನೂರು ಗ್ರಾಮ ಪಂಚಾಯತುಗಳನ್ನು ಈಗ ಲಭ್ಯವಿರುವ ಸಾರ್ವಜನಿಕ ರಂಗದ ಸಂಸ್ಥೆಗಳ ಕೇಬಲ್ ಜಾಲದ ಮೂಲಕ ಸಂಪರ್ಕಿಸಿ,ಪರೀಕ್ಷಿಸಲಾಗುವುದು.ನ್ಯಾಶನಲ್ ಇನ್ಫೊರ್ಮೇಶನ್ ಸೆಂಟರ್( ಎನ್ ಐ ಸಿ )ಇದಕ್ಕೆ ಅಗತ್ಯವಾದ ತಂತ್ರಾಂಶವನ್ನು ಒದಗಿಸಲಿದೆ.ಪೂರ್ತಿ ಯೋಜನೆ ಅನುಷ್ಠಾನಕ್ಕೆ ಮೂರು ವರ್ಷಗಳೇ ಹಿಡಿಯಬಹುದು.ಖರ್ಚು ಹದಿನೆಂಟು ಸಾವಿರ ಕೋಟಿಗಳಾಗಬಹುದು.ಪ್ರತಿ ಪಂಚಾಯತಿಗೂ ಮೂರು ಬ್ರಾಡ್‌ಬ್ಯಾಂಡ್ ಸಂಪರ್ಕ,ಕೇಬಲ್ ಟಿವಿ ಸಂಪರ್ಕ ,ಮೂರು ದೂರವಾಣಿ ಸಂಪರ್ಕಗಳನ್ನು ಉಚಿತವಾಗಿ ಒದಗಿಸುವುದು ಜತೆಗೆ ಕಂಪ್ಯೂಟರ್ ಮತ್ತು ಪ್ರಿಂಟರುಗಳನ್ನೂ ಉಚಿತವಾಗಿ ಒದಗಿಸಿ,ಗ್ರಾಮೀಣ ಜನರನ್ನು ಆಕರ್ಷಿಸುವ ಯೋಜನೆಯಿದೆ.
udayavani bangalore 
---------------------------------
Udayavani
*ಅಶೋಕ್‌ಕುಮಾರ್ ಎ