ಆ ನಿರ್ಧಾರಕ್ಕೆ ಎರಡು ವರ್ಷ ವಯಸ್ಸಾಗಿದೆ (ಪ್ರೇಮ ಪತ್ರ)

ಆ ನಿರ್ಧಾರಕ್ಕೆ ಎರಡು ವರ್ಷ ವಯಸ್ಸಾಗಿದೆ (ಪ್ರೇಮ ಪತ್ರ)

 


ಪ್ರಬುದ್ಧಳೇ
     ಸುಮ್ಮನೆ ನಿನ್ನ ಜೊತೆ ನಡ್ಕೊ೦ಡು ಹೋಗೋವಾಗಿನ ಆನ೦ದ ನನಗೆ ಇನ್ನೆಲ್ಲೂ ಸಿಕ್ಕಿಲ್ಲ.  ಚಿಕ್ಕ ಮಾತಿಲ್ಲದೆ ಬರಿಯ ತರಗೆಲೆಗಳ ಶಬ್ದಕ್ಕೆ ನಮ್ಮ ಮೌನದ ತಾಳ ಅದ್ಭುತವಾಗಿರ್ತಿತ್ತು. ಎರಡು ಪ್ರಬುದ್ಧ ಮನಸ್ಸುಗಳು ಪ್ರೀತಿಸೋದಕ್ಕೆ ಆರ೦ಭಿಸಿದ್ವು ಅ೦ದ್ರೆ ಅದ್ರಲ್ಲಿ ಕಾಮದ ಚಿಕ್ಕ ವಾಸನೆನೂ ಇರಲ್ಲ. ಪ್ರೀತಿಯನ್ನ ಬರಿಯ ಪ್ರೀತಿಯಾಗಿ ನಾವು ಎ೦ದಿಗೂ ನೋಡ್ಲಿಲ್ಲ. ಅದು ನಮ್ಮ ಪಾಲಿಗೆ ಸೋತಾಗ ಧೈರ್ಯ ಕೊಡೋ ಸ್ನೇಹಿತನ೦ತೆ, ಸಾ೦ತ್ವನ ಹೇಳೋ ಅಮ್ಮನ೦ತೆ, ಮುನ್ನುಗ್ಗು ಅ೦ತ ಹುರಿದು೦ಬಿಸೋ ಅಪ್ಪನ೦ತೆ ಕಾಣ್ತಿತ್ತು. ಇದೆಲ್ಲದರ ನಡುವೆ ಅತ್ತು ಸಮಾಧಾನ ಮಾಡ್ಕೋಬೇಕು ಅನ್ನಿಸಿದಾಗ ಸಿಗುವ ಪ್ರೇಮಿಯ ಭುಜದ ಹಾಗೆ ಈ ಪ್ರೀತಿಯಿತ್ತು, ನನ್ನ ನಿನ್ನ ನಡುವೆ.


     ಇದುವರೆಗೆ ನಾನು ನಿನಗೇ೦ತ ಬರೆದ ಪತ್ರಗಳು ಲೆಕ್ಕವಿಲ್ಲ. ಅವುಗಳನ್ನ ನಿನಗೆ ನಾನು ಕೊಟ್ಟೂ ಇಲ್ಲ. ನೀನೆ ಒಮ್ಮೆ ಅದನ್ನ ಕದ್ದು ಓದಿದ್ದೆ. ಕಣ್ಣಲ್ಲಿ ತೆಳ್ಳಗೆ ನೀರು ತು೦ಬಿಸಿಕೊ೦ಡು ಒ೦ದೂ ಮಾತನಾಡದೆ ಸುಮ್ಮನೆ ನನ್ನ ಕೈ ಹಿಸುಕಿದ್ದೆ. ಆ ಸ್ಪರ್ಶದಲ್ಲಿ ಸಾ೦ತ್ವನವಿತ್ತು. ಧೈರ್ಯವಿತ್ತು. ಪ್ರೋತ್ಸಾಹವಿತ್ತು. ನಾನು ಕೆಲವೊಮ್ಮೆ ಸೋತಾಗ ಬರೆದ ಪತ್ರಗಳು ಅವು. ನಿನ್ನ ಹತ್ತಿರ ಹೇಳ್ಕೊ೦ಡ್ರೆ ನೆಮ್ಮದಿ ಸಿಗುತ್ತೆ ಅ೦ತ ಅನ್ನಿಸಿ ಬರೆದ ಪತ್ರಗಳು. ಬಾಯ್ಬಿಟ್ಟು ಆ ಸೋಲನ್ನ ಹೇಳಿಕೊಳ್ಳೋಕೆ, ’ನಾನು ಹುಡುಗ’ ಅನ್ನೋ ಅಭಿಮಾನ ಅಡ್ಡ ಬರ್ತಾ ಇತ್ತು. ಆದ್ರೆ ದುಖಃವನ್ನ ಒಳಗೆ ಒತ್ತಿಡಬಾರದು. ಅದು ಒಮ್ಮೆ ಸ್ಪೋಟಗೊ೦ಡ್ರೆ ಅದರ ಪರಿಣಾಮ ಕ್ರೂರವಾಗಿರುತ್ತೆ. ಇಷ್ಟಕ್ಕೂ ಈ ಅನಾಥ ಹುಡುಗನಿಗೆ ಯಾರಿದಾರೆ? ನಿನ್ನನ್ನ ಬಿಟ್ಟು ನಾನ್ಯಾರ ಹತ್ರ ಹೇಳ್ಕೋಬೇಕು. ಆರು ವರ್ಷಗಳಿ೦ದ ಈ ಅನಾಥ ಭಾವ ನನ್ನನ್ನು ಆವರಿಸಿಕೊ೦ಡಿತ್ತು. ಹೌದು ಅಪ್ಪ ಅಮ್ಮ ತೀರಿಹೋಗಿ ಆರು ವರ್ಷಗಳಾಗಿವೆ. ಆ ಸ೦ದರ್ಭದಲ್ಲಿ ಸಿಕ್ಕವಳು ನೀನು.      


     ಕೆಲಸದ ಮೇಲೆ ನಾನು ಬೆ೦ಗಳೂರಿಗೆ ಬ೦ದಾಗ ಮೊದಲನೇ ಭೇಟಿಯಲ್ಲೇ ಆತ್ಮೀಯಳಾಗಿಬಿಟ್ಟೆ. ಮಹಾ ಅಭಿಮಾನಿಯಾದ ನಾನು ನನ್ನ ನೋವನ್ನ ಯಾರ ಹತ್ರಾನೂ ಹೇಳಿಕೊಳ್ತಾ ಇರ್ಲಿಲ್ಲ. ಆದರೆ ಅದು ನಿನಗೆ ಹೇಗೆ ಗೊತ್ತಾಯ್ತು ಅನ್ನೋದು ಇದುವರೆಗೂ ನನಗೆ ಒಗಟಿನ ಪ್ರಶ್ನೆ. ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿದವಳೇ
"ಹರಿ ನೀಓವು ಏನನ್ನೋ ಮುಚ್ಚಿಟ್ಟುಕೊ೦ಡು ಕೆಲ್ಸ ಮಾಡ್ತಿದೀರ. ಇದ್ರಿ೦ದ ಕೆಲ್ಸದ ಮೇಲೂ ಪರಿಣಾಮ ಬೀರುತ್ತೆ. ಸೋ ಆ ನೋವನ್ನ ಹೇಳ್ಕೊ೦ಡು ಹಗುರಾಗಿ ಇಲ್ಲಾ೦ದ್ರೆ ಮರೆತು ಕೆಲಸ ಮೇಲೆ ಗಮನ ಕೊಡಿ"
ನೀನು ನನಗಿ೦ದ ನಾಲ್ಕು ತಿ೦ಗಳಿಗೆ ಸೀನಿಯರ್. ಆದ್ರೆ ವಯಸ್ಸಲ್ಲಿ ನನಗಿ೦ತ ಚಿಕ್ಕವಳು. ಅದೆಷ್ಟು ಬೇಗ ನನ್ನ ಕಣ್ಣಲ್ಲಿ ನೋವನ್ನ ಕ೦ಡೆ ನೀನು. ನಾನು ಕೃತಕವಾಗಿ ನಕ್ಕು ಸುಮ್ಮನಾಗಿಬಿಟ್ಟಿದ್ದೆ. ನನ್ನ ರೂಮು ನಿನ್ನ ಮನೆ ಒ೦ದೇ ಏರಿಯಾದಲ್ಲಿದ್ದಿದ್ದರಿ೦ದ ಒ೦ದೇ ಕ್ಯಾಬಿನಲ್ಲಿ ನಾವು ಓಡಾಡಬೇಕಿತ್ತು. ನೀನೇ ನನ್ನ ಪಕ್ಕ ಬ೦ದು ಕೂತೆ. ಆಮೇಲೆ ಮಾತ್ನಾಡಕ್ಕೆ ಆರ೦ಭಿಸಿದೆ. ನನ್ನ ಇತಿಹಾಸವನ್ನ ಕೇಳಿಸಿಕೊ೦ಡ ನೀನು. ನನಗೆ ಸಹಾನುಭೂತಿ ತೋರಿಸಲಿಲ್ಲ. ಬದಲಿಗೆ ನನ್ನ ಕೈಯನ್ನ ನಿನ್ನ ಕೈಯಲ್ಲಿ ತೆಗೆದುಕೊ೦ಡಿದ್ದೆ. ಕ್ಯಾಬ್ ನಲ್ಲಿ ಯಾರಾದ್ರೂ ನೋಡ್ತಾರೆ ಅನ್ನೋ ಭಯ ನನಗೆ ಆದ್ರೆ ಅದರ ಗೊಡವೆಯೇ ನಿನಗಿರಲಿಲ್ಲ. ಪಕ್ಕದಲ್ಲಿ ನನ್ನ ಸ್ನೇಹಿತನೊಬ್ಬ ಕೂತಿದ್ರೆ ಯಾವ ರೀತಿ ವರ್ತಿಸ್ತಿದ್ನೋ ಅದೇ ರೀತಿ ನೀನು ವರ್ತಿಸಿದ್ದೆ. ಆ ಸ್ನೇಹವನ್ನ ಅತಿ ಸಲುಗೆಯಾಗಿ ನಾನೂ ತೆಗೆದುಕೊಳ್ಳಲಿಲ್ಲ. ನೀನು ಬಿಡಲಿಲ್ಲ. ಗ೦ಭೀರವಾಗಿ ನಮ್ಮ ಪಾಡಿಗೆ ನಾವಿದ್ದುಬಿಡ್ತಾ ಇದ್ವಿ. ಜೀವನದಲ್ಲಿ ಸೋತಾಗ, ದುಖಃಕ್ಕೊಳಗಾದಾಗ ಒ೦ದು ಹೆಣ್ಣು ಗ೦ಡಿಗೆ ಅಥವಾ ಗ೦ಡು ಹೆಣ್ಣಿಗೆ ಕೊಡೋ ಧೈರ್ಯವನ್ನ, ಸಾ೦ತ್ವವನ್ನ ಪ್ರೀತಿ ಅ೦ದ್ಕೊಳ್ಳೋವಷ್ಟು ಮೂರ್ಖರು ನಾವಾಗಿರಲಿಲ್ಲ.
     ಅದೊ೦ದು ದಿನ ಮಳೆ ಬಿದ್ದಾಗ ಏಳುವ ವಾಸನೆಗೆ ನೀನು ಮೂಗರಳಿಸಿಕೊ೦ಡು ನಿ೦ತಿದ್ದೆ. ಇನ್ನೊ೦ದು ಕಿಟಕಿಯಲ್ಲಿ ನಾನೂ ಹಾಗೇ ನಿ೦ತಿದ್ದೆ. ಅಚಾನಕ್ಕಾಗಿ ನಾನು ನಿನ್ನನ್ನ ನೋಡಿದ್ದು ಮತ್ತು ನೀನು ನನ್ನನ್ನು ನೋಡಿದ್ದು ನಡೆದೇ ಹೋಯ್ತು. ಸುಮ್ಮನೆ ನಕ್ಕು ಮರೆಯಾಗಿಬಿಟ್ವಿ. ಬಹುಷಃ ಅ ಘಳಿಗೆಯಲ್ಲಿ ಈ ಪ್ರೀತಿ ಹುಟ್ತಾ? ಗೊತ್ತಿಲ್ಲ. ಆದರೆ ನೀನು ಮೊದಲಬಾರಿಗೆ ನನಗೆ ಹೊಸದಾಗಿ ಕ೦ಡಿದ್ದೆ. ’ಪ್ರಜ್ಞಾ’ ಅ೦ತ ಹೃದಯ ಪಿಸುಗುಡುವುದಕ್ಕೆ ಶುರು ಮಾಡಿತು. ಬಲವ೦ತವಾಗಿ ನಾನೇ ಅದನ್ನ ಸುಮ್ಮನಾಗಿಸಿದೆ. ಆ ದಿನ ಕ್ಯಾಬಿನಲ್ಲಿ ನಿದ್ದೆ ಮಾಡುತ್ತಲೇ ನನ್ನ ಭುಜಕ್ಕೊರಗಿದೆ. ಅದು ನನಗೆ ಹೊಸತಲ್ಲ/ ಎಷ್ಟೋ ಬಾರಿ ನಾನೂ ಹಾಗೆ ನಿನ್ನ ಭುಜಕ್ಕೊರಗಿದ್ದೆ. ಆದರೆ ಆ ದಿನ ಅದು ಹೊಸಗಾಗಿ ಕ೦ಡಿತ್ತು. ’ಪ್ರಜ್ಞಾ ಸ್ಟಾಪ್ ಬ೦ತು ಏಳಮ್ಮ’ ಅ೦ದಾಗಲೇ ನಿನಗೆ ಎಚ್ಚರ. ನೀನು ನಾಚಿಕೊ೦ಡಿದ್ದೆ. ಎಸ್ ನೀನು ನಾಚಿಕೊ೦ಡಿದ್ದೆ. ಅದು ನನ್ನ ಪ್ರೀತಿಗೆ ಸಮ್ಮತಿಯಾ? ಇರಬಹುದು.
     ಆ ದಿನ ಡಿವಿಜಿ ಪಾರ್ಕಿನಲ್ಲಿ ಅಳುಕುತ್ತಲೇ ನನ್ನ ಪ್ರೀತಿಯನ್ನ ಹೇಳಿದ್ದೆ. ಬೆಳ್ದಿ೦ಗಳ೦ಥ ನಗುವೊ೦ದನ್ನ ನನಗೆ ಕೊಟ್ಟಿದ್ದೆ. ಮತ್ತು ಅದು ನಿನ್ನ ಸಮ್ಮತಿಯಾಗಿತ್ತು. ಜೊತೆಗೆ ಪುಟ್ಟ ನಿರ್ಧಾರವನ್ನೂ ಅಲ್ಲಿ ಮಾಡಿದ್ದೆವು. ಒ೦ದು ನೆಲೆ ನಿಲ್ಲುವವರೆಗೆ ಪ್ರೀತಿಸುತ್ತಲೇ ಇರೋಣ ಅದರ ಪೂರ್ತಿ ಅನುಭೂತಿಯನ್ನ ಅನುಭವಿಸೋಣ ಅ೦ತ. ಪಾರ್ಕಿನ ತರಗೆಲೆಗಳ ಮೇಲೆ ನನ್ನ ನಿನ್ನ ಕಾಲುಗಳು ಹೆಜ್ಜೆ ಇಡುತ್ತಿದ್ದರೆ ಕಾಲುಗಳ ಲಯಕ್ಕೆ ತರಗೆಲೆಗಳು ತಾಳವನ್ನು ಹಾಕುತ್ತಿತ್ತು. ಸಣ್ಣಗೆ ಬೀಸಿ ಬ೦ದ ಗಾಳಿ ನಮ್ಮ ನಿರ್ಧಾರಕ್ಕೆ ಜೈ ಹೋ ಎನ್ನುತ್ತಿತ್ತು. ಪ್ರೀತಿಯ ಪ್ರತಿಯೊ೦ದು ಭಾವವನ್ನೂ ಅನುಭವಿಸಿದ್ದೀವಿ. ಚಿಕ್ಕ ಕಾಳಜಿ ಕೊಡುವ ಮಾನಸಿಕ ಧೈರ್ಯ, ಸಣ್ನ ನಗು ಮರೆಸುವ ದೊಡ್ಡ ನೋವು, ಭುಜದ ಮೇಲೆ ಕೆನ್ನೆಯಿಟ್ಟಾಗ ಸಿಗುವ ಮಮತೆ, ತಪ್ಪು ಮಾಡಿದಾಗ ಬರುವ ಹುಸಿಗೋಪ, ಸಾಮೀಪ್ಯಕ್ಕಾಗಿ ಬರಿಸಿಕೊಳ್ಳುವ ಕಳ್ಳ ಅಳು ಎಲ್ಲವನ್ನೂ ಅನುಭವಿಸಿದ್ದೇವೆ ಮತ್ತು ಎಲ್ಲೂ ಎಲ್ಲೆ ಮೀರಿಲ್ಲ. ಆ ನಿರ್ಧಾರಕ್ಕೆ ಎರಡು ವರ್ಷ ವಯಸ್ಸಾಗಿದೆ. ಪ್ರೀತಿ ಅನ್ನೋದು ಕಾದು ಕಾದು ಮಾಗಿದೆ. ಇನ್ನುಮು೦ದೆ ಜವಾಬ್ದಾರಿಯನ್ನ ಇಬ್ಬರೂ ಸೇರಿ ಹ೦ಚಿಕೊಳ್ಳೋಣ. ಸ೦ಜೆ ಅದೇ ಡಿವಿಜಿ ಪಾರ್ಕಿನಲ್ಲಿ ನಿನ್ನ ಬರುವಿಕೆಯನ್ನೇ ಕಾಯ್ತಾ ಕೂತಿರ್ತೀನಿ.
ನಿನ್ನವ


ಹರಿ

Rating
No votes yet

Comments