ನಿರ್ಧಾರ

ನಿರ್ಧಾರ

 ರಾತ್ರಿ ೧೦ ಗಂಟೆಯಾಗಿತ್ತು. ಸರಿತಾ ಆಗ ತಾನೆ ಮನೆಗೆ ತಲುಪಿದ್ದಳು. ಕೈಯಲ್ಲಿ ಬಿಸಿ ಕಾಫೀ ಹಿಡಿದು ಅಂದು ನಡೆದ ಮೀಟಿಂಗ್ ಬಗ್ಗೆ ಯೋಚಿಸುತ್ತಿದ್ದಳು. ಈ ಪ್ರಾಜೆಕ್ಟ್ ಪ್ರಾರಂಭವಾದರೆ ಇನ್ನು ಮೇಲೆ ದಿನ ರಾತ್ರಿ ೧೦ ಗಂಟೆ ಆಗೋದು ನಿಶ್ಚಿತ. ಅರೆ ಇವತ್ತು ಮನೋಜ್ ಯಾಕೆ ಇನ್ನು ಫೋನ್ ಮಾಡಿಲ್ಲ. ಇಷ್ಟು ಹೊತ್ತಿಗೆಲ್ಲ ಅವರ ಫೋನ್ ಬರಬೇಕಿತ್ತು.


ಊಟಕ್ಕೆ ಬಡಿಸಲೆ ? ಎಂಬ ರಾಧಮ್ಮನ ಪ್ರಶ್ನೆ ಸರಿತಾಳನ್ನು ವಾಸ್ತವಕ್ಕೆ ತಂದಿತು. ಅರೆ ರಾಧಮ್ಮ ನೀವಿನ್ನು ಮಲಗಿಲ್ಲವೆ ? ನನಗೆ ಈಗ ಊಟ ಬೇಡ. ನಿಶಾ ಮಲಗಿದಳಾ ?


ಹೂಂ, ನಿಶಾ ಮಲಗಿದ್ದಾಳೆ. ಈಗಷ್ಟೆ ಮನೋಜಪ್ಪನವರ ಫೋನ್ ಬಂದಿತ್ತು. ನಿಮ್ಮ ಜೊತೆ ನಾಳೆ ಮಾತಾಡ್ತಾರಂತೆ. ಇವತ್ತು ಶನಿವಾರ ಅಲ್ವಾ, ನಾನಿನ್ನು ಹೊರಡ್ತಿನಿ ಅಮ್ಮಾವರೆ. ಅಂದಹಾಗೆ ನಿಮಗೊಂದು ಮಾತು ಹೇಳಬೇಕಿತ್ತು. ನಿಶಾ ಕಳೆದೆರಡುದಿನದಿಂದ ಸಪ್ಪಗಿದ್ದಾಳೆ.


ಹೂಂ, ನಿಶಾ ಜೊತೆ ನಾನು ಮಾತಾಡ್ತಿನಿ. ಹದಿನೈದು ದಿನದಿಂದ ಅವಳ ಜೊತೆ ಸರಿಯಾಗಿ ಮಾತೆ ಆಡಿಲ್ಲ. ಮೊದಲು ಮುಂಬೈ ಪ್ರವಾಸ ಆಯ್ತು, ಈಗ ಒಂದುವಾರದಿಂದ ದಿನ ಮನೆಗೆ ಬರೋದು ಲೇಟ್ ಆಗ್ತಿದೆ. ರಾಧಮ್ಮ ಇಷ್ಟು ಹೊತ್ತಲ್ಲಿ ಯಾಕೆ ಹೋಗ್ತಿರ ? ನಾಳೆ ಬೆಳಗ್ಗೆ ಹೊರಡಿ.


ರೂಮಿಗೆ ಬಂದ ಸರಿತಾ ಮಲಗಿದ್ದ ಮಗಳ ಹಣೆಯ ಮೇಲೆ ಹೂ ಮುತ್ತಿಟ್ಟಳು. ಸರಿತಾ ಹಾಸಿಗೆಯಲ್ಲಿ ಅಡ್ಡಾದಳು. ನಿದ್ದೆ ಹತ್ತಿರ ಸುಳಿಯದಿದ್ದಾಗ ಮನಸ್ಸು ಗತಕಾಲದತ್ತ ವಾಲಿತ್ತು.


ಸರಿತಾ ಮಧ್ಯಮವರ್ಗದಲ್ಲಿ ಬೆಳೆದ ಹುಡುಗಿ. ತಂದೆ ಸರ್ಕಾರಿ ಕಚೇರಿಯಲ್ಲಿ ಕಾರಕೂನರಾಗಿದ್ದರು. ತಾಯಿ ಗೃಹಿಣಿ. ಕುಶಾಗ್ರಮತಿಯಾಗಿದ್ದ ಸರಿತಾ ಉತ್ತಮ ಅಂಕಗಳೊಂದಿಗೆ ಇಂಜಿನಿಯರಿಂಗ್ ಮುಗಿಸಿದ್ದಳು. ಕೂಡಲೆ ಐಟಿ ಕಂಪನಿಯೊಂದರಲ್ಲಿ ಕೆಲಸವೂ ಸಿಕ್ಕಿತ್ತು. ನಂತರ ವರ್ಷದಲ್ಲೆ ಮನೋಜನೊಡನೆ ಮದುವೆಯಾಗಿತ್ತು. ಪುಟ್ಟ ಸಂಸಾರದಲ್ಲಿ ನಿಶಾಳ ಆಗಮನ ಹರ್ಷದ ಹೊನಲು ಹರಿಸಿತ್ತು. ಆಫೀಸಿನಲ್ಲೆ ಬೇಬಿಕೇರ್ ಸೆಂಟರ್ ಇದ್ದಿದ್ದರಿಂದ, ಸರಿತಾ ಮಗುವನ್ನು ತನ್ನೊಡನೆ ಆಫೀಸಿಗೆ ಕರೆದುಕೊಂಡು ಹೋಗುತ್ತಿದ್ದಳು. ವರ್ಷ ಕಳೆದಂತೆ ಆಫೀಸಿನಲ್ಲಿ ಕೂಡಾ ನಿಶಾಳ ಜವಾಬ್ದಾರಿ ಹೆಚ್ಚಾಗುತ್ತಿತ್ತು. ನಿಶಾ ಶಾಲೆಗೆ ಹೋಗಲಾರಂಭಿಸಿದಾಗ, ಅವಳು ರಾಧಮ್ಮನನ್ನು ಮನೆಗೆ ಕರೆತಂದಿದ್ದಳು. ರಾಧಮ್ಮ ಸೋಮವಾರದಿಂದ ಶುಕ್ರವಾರದ ವರೆಗೆ ಇವರ ಮನೆಯಲ್ಲೆ ಇರುವುದೆಂದು, ಭಾನುವಾರ ತಮ್ಮ ಊರಿಗೆ ಹೋಗಬಹುದೆಂದು ನಿರ್ಧಾರವಾಗಿತ್ತು.


ಶಾರದಮ್ಮ ಮಗಳ ಈ ನಿರ್ಧಾರದಿಂದ ಬೇಸರಗೊಂಡಿದ್ದರು. ಅವರು ಮಗಳಿಗೆ ತಿಳಿಹೇಳುವ ಪ್ರಯತ್ನ ಮಾಡಿದ್ದರು. ಅಲ್ಲವೆ ಸರಿತಾ, ಅಳಿಯಂದಿರು ಇಷ್ಟು ಒಳ್ಳೆ ಕೆಲಸದಲ್ಲಿದ್ದಾರೆ. ನೀನು ಕೂಡ ಇಷ್ಟು ವರ್ಷ ನಿನ್ನ ಮನದಂತೆ ಕೆಲಸ ಮಾಡಿದೆ. ಈಗ ನೀನು ಕೆಲಸಕ್ಕೆ ಹೋಗದೆ ಇದ್ದರು ಏನು ತೊಂದರೆ ಆಗೋದಿಲ್ಲ. ಸ್ವಲ್ಪ ದಿನ ಮಗಳ ಕಡೆ ಗಮನ ಕೊಡು. ಮಗು ಚಿಕ್ಕದು, ಅವಳಿಗೆ ನಿನ್ನ ಅಗತ್ಯ ಇದೆ. ಎಂದಿದ್ದರು. ಆಗ ಸರಿತಾ ತಾಯಿಗೆ ಅಮ್ಮಾ, ನಾನು ನನ್ನ ಮಗಳಿಗೆ ಜಗತ್ತಿನ ಎಲ್ಲ ಸುಖ ಸಾಮಗ್ರಿಗಳನ್ನು ಕೊಡಬೇಕು. ಅವಳು ಯಾವುದೆ ವಸ್ತುವಿಗೆ ಆಸೆ ಪಟ್ಟರು ಅದನ್ನು ನಾನು ಪೂರೈಸಬೇಕು. ನನ್ನ ಹಾಗೆ ನನ್ನ ಮಗಳು ತನ್ನ ಚಿಕ್ಕ ಚಿಕ್ಕ ಆಸೆಗಳನ್ನು ಕೊಲ್ಲೊಹಾಗೆ ಆಗಬಾರದು. ಅಮ್ಮಾ ನೀನು ಮನೆಯಲ್ಲೆ ಇದ್ದು ಏನು ಸಾಧಿಸಿದೆ ? ಅಪ್ಪ ಒಬ್ಬರ ಸಂಬಳದಲ್ಲಿ ಮನೆ ನಿಭಾಯಿಸಬೇಕಾಗಿತ್ತು. ನಾನು ಏನಾದರು ಹೊಸ ಪುಸ್ತಕ, ಆಟಿಗೆ ಕೇಳಿದಾಗ ನಿನ್ನ ಕಣ್ಣೀನಲ್ಲಿ ನೀರು ತುಂಬುತ್ತಿತ್ತು. ಸ್ವಲ್ಪ ದೊಡ್ಡವಳಾದ ಮೇಲೆ ನನಗೆ ನಮ್ಮ ಮನೆಯ ಪರಿಸ್ಥಿತಿ ತಿಳಿದಾಗ ನಾನೇ ಇದ್ದುದರಲ್ಲಿ ಅಡ್ಜಸ್ಟ ಮಾಡೋಕೆ ಕಲಿತೆ. ನನ್ನ ಮಗಳಿಗೆ ಹಾಗೆ ಆಗಬಾರದು ಎಂದಿದ್ದಳು. ಏನನ್ನೋ ಹೇಳಲು ಬಾಯ್ತೆರದ ಶಾರದಮ್ಮ, ಅಮ್ಮ ನೀನು ಕೂಡ ಯಾವುದಾದರು ಕೆಲಸ ಮಾಡುತ್ತಿದ್ದಿದ್ದರೆ, ನಮ್ಮ ಪರಿಸ್ಥಿತಿ ಇನ್ನೂ ಚೆನ್ನಾಗಿರುತ್ತಿತ್ತು. ಎಂಬ ಮಗಳ ಆರೋಪದಿಂದ ಸುಮ್ಮನಾಗಿದ್ದರು. ಎಲ್ಲ ಸರಿತಾಳ ಮನಸ್ಸಿನಂತೆ ನಡೆದಿತ್ತು. ಬೆಂಗಳೂರಿನ ಉತ್ತಮ ಶಾಲೆಯೊಂದಕ್ಕೆ ನಿಶಾಳನ್ನು ಸೇರಿಸಿದ್ದಳು. ಎರಡು ವರ್ಷಗಳು ಎರಡು ಕ್ಷಣದಂತೆ ಕಳೆದಿತ್ತು. ಮಗಳಿಗೆ ಉತ್ತಮವಾದ ಶಿಕ್ಷಣ ದೊರೆಯುತ್ತಿದೆ. ಅಮ್ಮ ಹೇಳಿದಂತೆ ತಾನು ಕೆಲಸ ಬಿಟ್ಟು ಮನೆಯಲ್ಲಿ ಕುಳಿತಿದ್ದರೆ, ನಿಶಾಳನ್ನು ಖಂಡಿತ ಈ ಶಾಲೆಗೆ ಸೇರಿಸಲು ಆಗುತ್ತಿರಲಿಲ್ಲ.ಈ ಎಲ್ಲ ಸುಖ ಸೌಕರ್ಯಗಳನ್ನು ಅವಳಿಗೆ ಕೊಡಲು ಆಗುತ್ತಿರಲಿಲ್ಲ. ತನ್ನ ನಿರ್ಣಯವೆ ಸರಿಯಾದದ್ದು ಎಂದೆನಿಸಿತ್ತು.


ಗಂಟೆ ಹನ್ನೆರಡಾಗಿತ್ತು, ನಿದ್ದೆ ಬರದೆ ಸರಿತಾ ಬಾಲ್ಕನಿಗೆ ಹೋಗಿ ಕುಳಿತಳು. ಮನಸ್ಸು ಹದಿನೈದು ದಿನಗಳ ಹಿಂದಿನ ಘಟನೆಯತ್ತ ಹರಿದಿತ್ತು. ರಾಧಮ್ಮ ಊರಿಗೆ ಹೋಗಿದ್ದರು. ಅವಳಿಗೆ ಒಂದು ಬಿಸನೆಸ್ ಮೀಟಿಂಗ್ ಗಾಗಿ ಮುಂಬೈಗೆ ಹೋಗಬೇಕಾಗಿತ್ತು. ೪ ದಿನಗಳ ಕೆಲಸ ಇತ್ತು. ನಿಶಾಳನ್ನು ಗೆಳತಿ ಸ್ಮಿತಾಳ ಮನೆಯಲ್ಲಿ ನಾಕುದಿನ ಬಿಡುವುದು ಎಂದು ತಿರ್ಮಾನಿಸಿದ್ದಳು. ಸ್ಮಿತಾಳ ಮಗಳು ಪ್ರಿಯಾ ಕೂಡಾ ನಿಶಾಳ ಶಾಲೆಯಲ್ಲಿಯೆ ಓದುತ್ತಿದ್ದಳು. ಮನೋಜನಿಗೆ ಈ ನಿರ್ಧಾರ ಹಿಡಿಸಿರಲಿಲ್ಲ. ನೀನು ಹೋಗಲೆ ಬೇಕಾ ಎಂದು ಕೇಳಿದ್ದ. ಆದರೆ ಅವಳು ಈ ಪ್ರಾಜೇಕ್ಟ್ ಗಾಗಿ ಹಗಲು ರಾತ್ರಿ ಕೆಲಸ ಮಾಡಿದ್ದಳು. ಈಗ ಮುಖ್ಯವಾದ ಘಟ್ಟದಲ್ಲಿ ಅದನು ಬೇರೆಯವರಿಗೆ ಕೊಡುವುದಕ್ಕೆ ಅವಳಿಗೆ ಮನಸ್ಸಿರಲಿಲ್ಲ. ಅವಳು ತನ್ನ ನಿರ್ಧಾರದಂತೆ ಮುಂಬೈಗೆ ಹೋಗಿ ಬಂದಿದ್ದಳು. ಬಂದಾಗಿನಿಂದ ಮಗಳು ಸ್ವಲ್ಪ ಬೇಸರದಿಂದ ಇದ್ದುದು ಅವಳ ಗಮನಕ್ಕೂ ಬಂದಿತ್ತು. ಈಗ ರಾಧಮ್ಮ ಕೂಡ ಅದನ್ನೆ ಹೇಳುತ್ತಿದ್ದಾರೆ ನಾಳೆ ಭಾನುವಾರ, ದಿನಪೂರ್ತಿ ನಿಶಾಳ ಜೊತೆ ಕಳೆಯಬೇಕು ಎಂದು ನಿರ್ಧರಿಸಿದಳು. ಹಾಗೆ ಕುಳಿತಲ್ಲೆ ನಿದ್ರಾದೇವಿಯ ವಶವಾದಳು.


ಬೆಳಗಿನ ತಿಂಡಿ ಮುಗಿಸಿ ಮಗಳ ಜೊತೆ ಆಡುತ್ತ ಕುಳಿತಿದ್ದ ಸರಿತಾಳ ಮೊಬೈಲ್ ಅವಳನ್ನು ಕರೆದಿತ್ತು. ಯಾವುದೊ ಅರ್ಜೆಂಟ್ ಇಶ್ಯೂ ಇದ್ದುದರಿಂದ ಸ್ವಲ್ಪಹೊತ್ತು ಅವಳಿಗೆ ಆಫೀಸಿಗೆ ಹೋಗಬೇಕಿತ್ತು.


ನಿಶಾ ನಿನ್ನನ್ನ ಸ್ವಲ್ಪ ಹೊತ್ತು ಪ್ರಿಯಾ ಮನೆಲ್ಲಿ ಬಿಡ್ತಿನಿ, ನಾನು ಬೇಗ ಆಫೀಸಿಗೆ ಹೋಗಿ ಬರ್ತೀನೆ, ಜಾಣೆಯ ಹಾಗೆ ಅಲ್ಲಿ ಇರ್ತೀಯಾ ಅಲ್ವಾ ಎಂದಾಗ ನಿಶಾ ಆಳುತ್ತಾ ಮಮ್ಮಿ ನೀನು ನನ್ನ ನಿಜವಾದ ಮಮ್ಮಿ ಅಲ್ವಾ ? ಎಂದಿದ್ದಳು. ಅದನ್ನು ಕೇಳಿದ ಸರಿತಾಳಿಗೆ ಚಾಟಿಯೇಟು ತಿಂದ ಹಾಗಾಗಿತ್ತು.


ಮಗಳನ್ನು ತಬ್ಬಿ ಯಾಕೆ ಹೀಗೆ ಕೇಳ್ತಿದ್ದಿಯ ಪುಟ್ಟಾ ಎಂದು ಪ್ರಶ್ನಿಸಿದ್ದಳು.


ಮತ್ತೆ ನಾನು ಹೋದವಾರ ಪ್ರಿಯಾ ಮನೆಯಲ್ಲಿ ಇದ್ದೆ ಅಲ್ವಾ. ಅವಳ ಮಮ್ಮಿ ಅವಳನ್ನು ಎಷ್ಟು ಮುದ್ದು ಮಾಡ್ತಾರೆ ಗೊತ್ತ, ದಿನ ಸ್ಕೂಲಿನಿಂದ ಬಂದ ಮೇಲೆ ಅವಳಿಗೆ ಅವರೆ ಡ್ರೆಸ್ ಚೇಂಜ್ ಮಾಡಿಸ್ತಾರೆ, ತಿಂಡಿ ಕೊಡ್ತಾರೆ, ಹೊಂವರ್ಕ್ ಮಾಡಿಸ್ತಾರೆ. ನೀನು ಯಾಕೆ ಮಮ್ಮಿ ಇದನ್ನೆಲ್ಲಾ ಮಾಡೊಲ್ಲ. ಮತ್ತೆ ಪಕ್ಕದ ಮನೆ ಅಜ್ಜಿ, ರಾಧಮ್ಮನ ಜೊತೆ ಮಾತಾಡುವಾಗ ಹೇಳ್ತಿದ್ದರು ನಿಜವಾದ ಮಮ್ಮಿಯಂದಿರು ತಮ್ಮ ಮಕ್ಕಳನ್ನ ತುಂಬಾ ಪ್ರೀತಿ ಮಾಡ್ತಾರಂತೆ. ಅವರ ಮನೆಯಲ್ಲಿ ಆದಿತ್ಯ ಇದಾನಲ್ಲ ಅವನ ಮಮ್ಮಿ ನಿಜವಾದ ಮಮ್ಮಿ ಅಲ್ಲವಂತೆ, ಅದಕ್ಕೆ ಅವರು ಯಾವಾಗಲು ಅವನನ್ನ ಅಜ್ಜಿ ಜೊತೆ ಬಿಟ್ಟು ಹೊರಗೆ ಹೋಗ್ತಾರಂತೆ. ಮಮ್ಮಿ ನೀನೂ ನನ್ನ ರಾಧಮ್ಮನ ಜೊತೆ ಬಿಟ್ಟು ಹೊರಗೆ ಹೋಗ್ತಿಯ. ಹೇಳು ಮಮ್ಮಿ ನೀನು ನನ್ನ ನಿಜವಾದ ಮಮ್ಮಿ ಅಲ್ಲವ ?


ಮಗಳ ಮಾತುಗಳು ಸರಿತೆಯ ಮೇಲೆ ಬರಸಿಡಿಲಿನಂತೆ ಎರಗಿದ್ದವು. ಜೀವನದಲ್ಲಿ ತಾನು ಸೋತೆನೆ ಅಥವ ಗೆದ್ದೆನೆ ಎಂದು ತಿಳಿಯದೆ ಅವಳು ಸೋಫಾದ ಮೇಲೆ ಕುಸಿದಳು

Rating
No votes yet

Comments