"ಧರ್ಮ"ರಹಿತ ಸಮಾಜ?

"ಧರ್ಮ"ರಹಿತ ಸಮಾಜ?

ಬರಹ

ಮನುಷ್ಯ ಸ್ವಭಾವತಃ ಸಂಘಜೀವಿ. ಪೃಕೃತಿಯೊಡನೆ ಒಂದಾಗಿ, ಅದರ ವಿಕೋಪಗಳ ಕಾರಣವರಿಯದೆ ಹೆದರುತ್ತಾ ಆ ಕಾರಣ ಪಂಚಭೂತಗಳನ್ನು ತನ್ನ ಊಹೆಗೆ ನಿಲುಕದ "ಶಕ್ತಿ"ಯನ್ನಾಗಿ ಗಣಿಸುತ್ತಾ ಬದುಕಿದ್ದವನು. ಇಂತಹ ಸಂಸ್ಕೃತಿಗೆ ಮೊದಲ ಉದಾಹರಣೆ - ಆಫ್ರಿಕಾ ಖಂಡದ ದಕ್ಷಿಣ ಭಾಗದಲ್ಲಿ ಹುಟ್ಟು ಪಡೆದ "ಸ್ಯಾನ್" ಜನಾಂಗ. ತಮ್ಮ ಸುತ್ತಲೂ ಇರುವುದಾವುದೂ ತಮ್ಮದಲ್ಲವೆಂಬ ಸರಳ ಜೀವಿಗಳು. ಬೇಟೆಯಾಗಲೀ, ಗೆಡ್ಡೆಗೆಣಸುಗಳಾಗಲೀ, ಸಿಕ್ಕಿದವರು ಸಿಗದಿದ್ದವರೊಂದಿಗೆ ಹಂಚಿಕೊಂಡು ತಿನ್ನುವ, ನಾಳೆಯ ಚಿಂತೆಯನ್ನು ನಾಳೆಗೇ ಬಿಡುವ ಸಮಾಜ ಅವರದಾಗಿತ್ತು. ತಮ್ಮದೆಂದು ಯಾವುದಕ್ಕೂ ಬೇಲಿಹಾಕದೆ ಬದುಕುತ್ತಿದ್ದ ಈ "ಸ್ಯಾನ್" ಗಳ ಜೀವನ ತತ್ವವನ್ನು ಅರ್ಥಮಾಡಿಕೊಳ್ಳಲು ಅವರದೇ ಭಾಷೆಯಲ್ಲಿ ಮೌಖಿಕ ಪರಂಪರೆಯಾಗಿ ಪೀಳಿಗೆಗಳಲ್ಲಿ ಉಳಿದು ಬಂದ ಹಾಡೊಂದರ ಈ ಸಾಲುಗಳನ್ನು ಗಮನಿಸಿ -


"ನಾವು ಸತ್ತ ದಿನ ಬೀಸುವ ಮಂದ ಮಾರುತವೊಂದು ಈ ನೆಲದಲ್ಲಿ ನಾವಿಟ್ಟ ಹೆಜ್ಜೆಗಳ ಗುರುತನ್ನು ಅಳಿಸಿ ಹಾಕಿಬಿಡುತ್ತದೆ.


ಆ ಮಂದ ಮಾರುತವು ಬೀಸುವುದು ನಿಂತಮೇಲೆ, ಮುಂದೆ ಬರುವ ಅನಂತ ಕಾಲಕ್ಕೆ ಇಂದು ನಾವಿಲ್ಲಿ ನಡೆದಾದಿದ್ದೆವೆಂದು ಹೇಳುವವರಾರು?"


 


ಇಂತಹ ತತ್ವಗಳೊಂದಿಗೆ "ನಮ್ಮದು" ಎಂಬುದೇ ಇಲ್ಲದೆ ಬಾಳಿ ಬದುಕಿ ಇಂದು ವಿನಾಶದ ಅಂಚಿನಲ್ಲಿರುವ ಈ "ಸ್ಯಾನ್" ಗಳು ಯಾರು ಗೊತ್ತೆ? ನಾವು ನೀವೆಲ್ಲ ಬಹುಷಃ ನೋಡಿರಬಹುದಾದ "ಗಾಡ್ಸ್ ಮಸ್ಟ್ ಬಿ ಕ್ರೇಝಿ" ಚಿತ್ರದಲ್ಲಿ (ಅಪ)ಹಾಸ್ಯಕ್ಕೊಳಗಾಗಿ ಚಿತ್ರಿಸಲ್ಪಟ್ಟ ಆ ಕಪ್ಪು ಜನಾಂಗ! ಯಾವ ಧರ್ಮಕ್ಕೂ ಸೇರದ ಮತಾಂತರದ ಪಿಡುಗಿಲ್ಲದೇ ಬದುಕಿದ ಸಮುದಾಯ. ಹೊರಪ್ರಪಂಚದ ಸೋಂಕು ಇಲ್ಲದೆ ಕ್ರಿಸ್ತಪೂರ್ವ ಶತಮಾನಗಳಿಂದ ತೀರಾ ಇತ್ತೀಚಿನವರೆಗೆ ಎಂದರೆ ಕ್ರಿಸ್ತಶಕ ೧೫ನೆಯ ಶತಮಾನದವರೆಗೂ ಬದುಕಿದ್ದ ಈ "ಸ್ಯಾನ್" ಗಳು ೧೬ನೆಯ ಶತಮಾನದಲ್ಲಿ ಅಫ್ರಿಕದ ದಕ್ಷಿಣ ಭಾಗವಾದ ಕೇಪ್ ಪ್ರಾಂತ್ಯಕ್ಕೆ ಕಾಲಿಟ್ಟ ಡಚ್ ವಸಾಹತುಶಾಹಿಗಳಿಂದಾಗಿ ಇಂದು ವಿನಾಶದ ಅಂಚಿನಲ್ಲಿರುವ ಜನಾಂಗ.


ಇಂದು ಬಹುತೇಕ "ಸ್ಯಾನ್"ಗಳು ಹೆಸರಿಗೆ ಕ್ರೈಸ್ತ ಧರ್ಮಕ್ಕೆ ಪರಿವರ್ತಿತರಾಗಿದ್ದರೂ ಅವರ ಆಚರಣೆಗಳಲ್ಲಿ ಅವರ ಮೂಲಸಂಸ್ಕೃತಿಯ ವಿಧಿವಿಧಾನಗಳೇ ಪ್ರಧಾನ. ಈ ಜನಗಳು ಆಫ್ರಿಕದ ದಕ್ಷಿಣ ಭಾಗವಾದ ಕಲಹರಿ ಪ್ರಾಂತ್ಯಗಳಲ್ಲಿ ಕಾಣಸಿಗುತ್ತಾರೆ.