ಮರೆಯಲಾಗದ ಮೂರು ಒಳ್ಳೆಯ ಕಥೆಗಳು.

ಮರೆಯಲಾಗದ ಮೂರು ಒಳ್ಳೆಯ ಕಥೆಗಳು.

ನಿನ್ನೆ ಎ.ಎನ್.ಮೂರ್ತಿರಾಯರು ಬರೆದ ಪಾಶ್ಚಾತ್ಯ ಸಣ್ಣ ಕಥೆಗಳು ಎಂಬ ಪುಸ್ತಕ ಓದಿದೆ. ಅದರಲ್ಲಿರುವ ಏಳು ಕಥೆಗಳಲ್ಲಿ ಮೂರು ಬಹಳೇ ಚೆನ್ನಾಗಿವೆ. ಅವುಗಳಲ್ಲೆರಡನ್ನು ಬೇರೆಡೆ ಈಗಾಗಲೇ ಓದಿದ್ದೆ. ಅವು ಬಹಳ ಚೆನ್ನಾಗಿದ್ದವು . ಅವು ಈ ಪುಸ್ತಕದಲ್ಲಿ ಸಿಕ್ಕವು.

ಕೊನೆಯ ಪಾಠ- ಇದು ಒಂದು ಫ್ರೆಂಚ್ ಕಥೆ. ೧೯ನೇ ಶತಮಾನದಲ್ಲಿ ಫ್ರಾನ್ಸಿನ ಭಾಗವೊಂದು ಜರ್ಮನಿಯ ಕೈಗೆ ಹೋಗುತ್ತದೆ. ಜರ್ಮನರು ಫ್ರೆಂಚ್ ಭಾಷೆಯ ಕಲಿಕೆಯನ್ನು ನಿಲ್ಲಿಸಿ ಅದರ ಸ್ಥಳದಲ್ಲಿ ಜರ್ಮನನ್ನು ಕಲಿಸಲು ಆಜ್ಞೆ ಮಾಡುತ್ತಾರೆ. ಶಾಲೆಯೊಂದರಲ್ಲಿನ ಕೊನೆಯ ಫ್ರೆಂಚ್ ಪಾಠದ ಚಿತ್ರಣ ಇಲ್ಲಿದೆ. 'ಇಂಗ್ಲೀಶ್ ಪ್ರಾಬಲ್ಯವನ್ನು ತಗ್ಗಿಸಿ ನಮ್ಮ ಭಾಷೆಗೆ ಸಲ್ಲಬೇಕಾದ ಸ್ಥಾನಮಾನ ದೊರಕಿಸಿಕೊಡಬೇಕೆಂದು ಹೋರಾಟ ನಡೆಸುತ್ತಿರುವ ಈ ಕಾಲದಲ್ಲಿ ಈ ಕಥೆ ಕನ್ನಡಿಗರಿಗೆ ರುಚಿಸೀತು ' ಎಂದು ಮೂರ್ತಿರಾಯರು ೧೯೪೮ರಲ್ಲಿ ಟಿಪ್ಪಣಿ ಬರೆದಿದ್ದಾರೆ.

ಆ ಭವನದ ರಹಸ್ಯ- ಗಂಡ ಹೆಂಡತಿಯ ಕೋಣೆಗೆ ಅನಿರೀಕ್ಷಿತವಾಗಿ ಬಂದಾಗ ಏನೋ ಸದ್ದು ಕೇಳುತ್ತದೆ. ಆ ಕೋಣೆಗೆ ಹೊಂದಿಕೊಂಡಂತಿದ್ದ ಕಿರುಕೋಣೆಯಲ್ಲಿ ಯಾರೋ ಇದ್ದಾರೆ ಎಂದು ಸಂಶಯಿಸುವ ಗಂಡನಿಗೆ ಆ ಕೋಣೆಯ ಬಾಗಿಲನ್ನು ಹೆಂಡತಿ ತೆರೆಯಗೊಡುವದಿಲ್ಲ. 'ಆ ಬಾಗಿಲನ್ನು ತೆರೆದು ಅಲ್ಲಿ ಯಾರೂ ಇಲ್ಲದಿದ್ದರೆ ತಮ್ಮ ಸಂಬಂಧ ಕೊನೆಗೊಂಡಂತೆ ' ಎಂದು ಹಠ ಹಿಡಿವ ಅವಳು ಅಲ್ಲಿ ಯಾರೂ ಇಲ್ಲವೆಂದು ಶಿಲುಬೆಯ ಮೇಲಾಣೆ ಹಾಕುತ್ತಾಳೆ. ಆಗ ಗಂಡನು ಆ ಕೋಣೆಯನ್ನು ಪರೀಕ್ಶೆಯನ್ನು ಬಿಟ್ಟು ಕೊಡುತ್ತಾನೆ. ಆದರೆ ಆ ಕೋಣೆಯನ್ನು ಬಿಟ್ಟು ಕದಲದೆ , ಆ ಕಿರುಕೋಣೆಯ ಬಾಗಿಲನ್ನು ಶಾಶ್ವತವಾಗಿ ಮುಚ್ಚಿಸಿಯೇ ಬಿಡುತ್ತಾನೆ.ಅಲ್ಲಿ ಅವಳ ಪ್ರಿಯತಮ ಇದ್ದನೇ? ಮುಂದೆ ? ಓದಿ ನೋಡಿ. ಇದು ಬಾಲ್ಝಾಕನ ಕಥೆ.

ಜೆರೂಸಲೇಂ ಯಾತ್ರೆ. - ಇದು ಟಾಲ್‍ಸ್ಟಾಯ್ ಕಥೆ. ಟಾಲ್‍ಸ್ಟಾಯ್ ಅನ್ನು ನಮ್ಮ ಮಾಸ್ತಿ 'ಮಹರ್ಷಿ' ಎಂದು ಕರೆದಿದ್ದಾರೆ. 'ಆತ ಸಾಹಿತಿ ಮಾತ್ರವಲ್ಲ , ಮಾನವಜನ್ಮ ಸಾರ್ಥಕವಾಗಲು ನಾವು ಹೇಗೆ ಬದುಕಬೇಕು ಎಂಬ ಪ್ರಶ್ನೆಗೆ ಅವನು ಉತ್ತರ ಕಂಡು ಹಿಡಿಯಲು ಹೊರಟ.' ಈ ಕಥೆಯು ಮಾಸ್ತಿ ಅವರ ಕಥೆಗಳ ವಸ್ತು ಮತ್ತು ಶೈಲಿ ಹೋಲುತ್ತಿದ್ದು ಸುಖಕರವಾಗಿದೆ. ನಾವು ಬದುಕಬೇಕಾದ ರೀತಿಯನ್ನು ಈ ಕಥೆ ತೋರುತ್ತದೆ.( ನಾನು ಟಾಲ್‍ಸ್ಟಾಯ್ ನ ಇತರ ಕತೆಗಳನ್ನು ಓದಲು ಈ ಕತೆ ಪ್ರೇರಣೆ ನೀಡಿತು.)

ಪುಸ್ತಕದ ಮಾರುಕಟ್ಟೆ ಬೆಲೆ ಬಹಳ ಕಡಿಮೆ. ಕೊಂಡು ಓದಿ.

ಪ್ರಕಾಶಕರು: ಡಿ.ವಿ.ಕೆ.ಮೂರ್ತಿ. ಮೈಸೂರು.
ಬೆಲೆ : ರೂ. ೪೦
ಪುಟಗಳು : ೧೫೨.

Rating
No votes yet

Comments