ಮಾತು, ಮಾತು, ಬರೀ ಮಾತು..

ಮಾತು, ಮಾತು, ಬರೀ ಮಾತು..

ಮಾತು..ಮಾತು...ಬರೀ ಮಾತು....


ಬಾಗಿಲ ಮರೆಯಲ್ಲಿ ನಿಂತು ಕೇಳಿದೆ. ಅರ್ಥವಾಗಲಿಲ್ಲ. ಕೊನೆಗೆ ಎದುರೇ ನಿಂತು ಆಲಿಸಿದೆ. ನನ್ನನ್ನು ಕ್ಯಾರೇ ಮಾಡದೇ ಮಾತು ಮುಂದುವರೆಯಿತು. ವಾರೆಗಣ್ಣಲ್ಲೂ ನನ್ನನ್ನು ನೋಡಲಿಲ್ಲ.ಹಾಗಿದ್ದರೆ ನನ್ನ ವಿಷಯ ಅಲ್ಲ...


ಮತ್ತೇ..ನಾಲ್ಕು ಗೋಡೆಯ ಮಧ್ಯೆ, ಪುಟ್ಟಗೂಡಲ್ಲಿ, ಈ ಲವ್‌ಬರ್ಡ್ಸ್‌ಗಳಿಗೆ, ಬೆಳಗ್ಗಿಂದ ಸಂಜೆವರೆಗೆ ಮಾತನಾಡಲು ಅದೇನು ವಿಷಯ ಸಿಕ್ಕಿರಬಹುದು- ಪ್ರೀತಿ? ಪಾರ್ಟಿ?ಧರ್ಮ?..?? ಇವೆಲ್ಲ ಮಾತಿನ ವಿಷಯವಲ್ಲ, ಹೊಡೆದಾಟದ ವಿಷಯಗಳು ಅಲ್ವಾ? ಹಾಗಿದ್ರೆ ಅದೂ ಅಲ್ಲ.


ಏನೋ ಒಂದು ಮಾತನಾಡಿಕೊಂಡು ಅವುಗಳ ಪಾಡಿಗೆ ಇದ್ದಾವಲ್ಲ ಇರಲಿ ಬಿಡಿ.


ಸಂಜೆಯಾದರೂ ಮಾತನಾಡುತ್ತಾ, ಹಾಡುತ್ತಾ, ಹಾರಾಡುತ್ತಾ ಇರುವಾಗ ಇವಕ್ಕೆ ಸುಸ್ತಾಗುವುದಿಲ್ಲವಲ್ಲಾ! ಬೂಸ್ಟ್, ಹಾರ್ಲಿಕ್ಸ್ ಏನಾದರೂ ಕುಡಿಯುತ್ತಿದ್ದಾವೆಯೋ ಎಂದು ಗೂಡಲ್ಲಿ ನೋಡಿದರೆ- ನೀರು, ಕೊತ್ತಂಬರಿ ದಂಟು, ಸಣ್ಣ ತಟ್ಟೆಯಲ್ಲಿರುವ ಸಣ್ಣ ಸಣ್ಣ ಕಾಳುಗಳು..ಇವಿಷ್ಟೇ ಇರುವುದು. ಈ ಸಣ್ಣ ಕಾಳುಗಳೇ ಅವುಗಳ ಶಕ್ತಿಯ ರಹಸ್ಯ-ಸಾಮೆಕಾಳು(little millet).


(ಬಳ್ಳಾರಿಯವರೆಗೆ ಹೋಗುತ್ತೇವೆ ಎಂದು ಹೊರಟು, ಈಗಲೇ ಕಾಲು ಕುತ್ತ ಮಾಡಿರುವ ಕಾಂಗೈಗಳಿಗೆ, ಈ ಸಾಮೆಕಾಳಿನ ಉಪ್ಪಿಟ್ಟು ದಿನಾ ತಿನ್ನಿಸಿದರೆ, ನೋಡಿ ಬೇಕಾದರೆ ಅಲ್ಲಿಂದ ನೇರ ದೆಹಲಿಗೆ ಹೋದಾರು.ಮತ್ತೆ ಬಳ್ಳಾರಿಗೆ ಎಳಕೊಂಡು ಬರಬೇಕಾದೀತು! )


ಇಷ್ಟು ಸಣ್ಣ ಸಾಮೆಕಾಳಿಗೂ ಸಿಪ್ಪೆ ಇರುವುದು. ಈ ಹಕ್ಕಿಗಳು ಸಿಪ್ಪೆಯನ್ನು ಕೊಕ್ಕಲ್ಲೇ ಬಿಡಿಸಿ ಕಾಳನ್ನು ಮಾತ್ರ ತಿನ್ನುವುದು. ಸಿಪ್ಪೆ ಪಾತ್ರೆಯಲ್ಲೇ ಇರುವುದು.


ಬೆಂಗಳೂರಲ್ಲಿ ಇದು ಕೆಲವೇ ಕೆಲವು ಅಂಗಡಿಗಳಲ್ಲಿ ಸಿಗುವುದು. ಸಾಮೆಕಾಳು, ಸಾವಿ, ಸಾಮ್ಯ, little millet ಎಂದರೆ ಕಣ್ಣು ಬಾಯಿ ಬಿಟ್ಟು ನೋಡುತ್ತಾರೆ. ಲವ್‌ಬರ್ಡ್ಸ್ ಕಾಳು ಎಂದರೆ "ಓ ಅದಾ.. ನಮ್ಮಲಿಲ್ಲ..." ಅನ್ನುವರು.


ಪದೋನ್ನತಿ :) -


ಈ ಲವ್ ಬರ್ಡ್ಸ್ಗಳನ್ನು budgerigars ಎನ್ನುವರು. ಕನ್ನಡದ "ಬಡ್ಡಿ(ಮಗ) ಜತೆಗಾರ"ನೇ aboriginal ಬಾಷೆಗೆ ಹೋಗಿ ಬಡ್ಜೆರಿಗಾರ್ ಆಯಿತು. ನೋಡಿ-ಕಗಪದಕೋಶ*


(*ಇನ್ನೂ ಬಿಡುಗಡೆಯಾಗಿಲ್ಲ)


ಇನ್ನೊಂದು ಕೋರಿಕೆ-


ಕಿಚಪಿಚ ಎಂದು ಮಾತನಾಡುತ್ತಾ ನಿಮಗೆ ಓದಲು ತೊಂದರೆ ಕೊಡದಿರಲಿ ಎಂದು ಲವ್‌ಬರ್ಡ್ಸ್‌ಗಳನ್ನು ದೂರದೂರ ಇಟ್ಟಿದ್ದೇನೆ. ಓದಿಯಾದರೆ ಅವುಗಳನ್ನು ಒಟ್ಟಿಗೆ ಮಾಡಿ ಬಿಡಿ.


-ಗಣೇಶ.

Rating
No votes yet

Comments