ಆಶು ಕವಿ ಗೌಡಪ್ಪ

ಆಶು ಕವಿ ಗೌಡಪ್ಪ

ಮನೆ ಮುಂದೆ ಆಶು ಕವಿ ಕೋಮಲ್  ಅಂತಾ ಬೋಲ್ಡು ಮಡಗಿದ್ದೆ. ಬೆಳಗ್ಗೆನೇ ಮನೆತಾವ ಗೌಡಪ್ಪ ಬಂದು ಏನಲಾ ಆಶು ಕವಿ ಅಂದ್ರೆ ಅಂದಾ. ಕೂತಂಗೆ, ಎಲ್ಲಿ ಇರುತಿವೋ ಅಂಗೆ ಕವನ ಬರೆಯೋದು ಅಂದೆ. ನಂಗೂ ಹೇಳ್ಕೊಡಲಾ. ಅಂಗೆಲ್ಲಾ ಹೇಳ್ಕೊಡಕ್ಕೆ ಆಗಕ್ಕಿಲ್ಲಾ. ಕಾಳಿದಾಸ ಪಿಚ್ಚರ್ನಾಗೆ ರಾಜಣ್ಣ ನಾಲಿಗೆ ಮೇಲೆ ಕಾಳಿ ಬರದಂಗೆ ಬರಸ್ಕಂಡ್ರೆ ಆಯ್ತದೆ ಅಂದೆ. ಅಂಗಾದ್ರೆ ನಾನು ಇವತ್ತು ಕುಲುಮೆಗೆ ಹೋಗಿ ಬರಸಕಳವಾ ಅಂದ ಗೌಡಪ್ಪ. ಅವಾಗ ನೀವು ಆಶು ಕವಿಯಾಗಕ್ಕಿಲ್ಲಾ. ಭಿ ಭೀ ಬಿಕ್ಕಲ ಆಯ್ತೀರಿ. ಅವಗಾ "ರ"ಕ್ಕೆ "ಲ" ಬತ್ತದೆ ಅಂತಾ ತಮಾಷೆಗೆ ಅಂದೆ. ಸರೀ ನನ್ನ ಮೇಲೆ ಈಗಲೇ ಒಂದು ಕವನ ಹೇಳಲಾ ನೋಡೇ ಬಿಡವಾ. ಲೇ ಗೌಡರು ಬಂದ್ಯಾರೆ ಸುಗರ್ ಲೆಸ್ ಚಾ ತಗೊಂಡು ಬಾರೆ. ಸದ್ಯ ಸಕ್ಕರೆ ಇರ್ಲಿಲ್ಲ ಸುಗರ್ ಲೆಸ್ ಅಂದಿದ್ದು ಒಳ್ಳೇದು ಆತು ಅಂದ್ಲು ಹೆಂಡರು. ನಿನ್ನೆ ಡಿಕಾಕ್ಸನ್ಗೆ ಹಾಲು ಹುಯ್ದು ಕೊಟ್ವಿ. ಮಗಾ ಕಲಗಚ್ಚು ಕುಡದಂಗೆ ಸೊರ್ ಅಂತಾ ಕುಡಿದ. ಲೇ ಲೋಟನ್ನ ವಿಮ್ ಹಾಕೇ ತೊಳಿ. ಏನಾದ್ರೂ ಸಾಂಕ್ರಾಮಿಕ ರೋಗ ಬಂದಾತು ಅಂದೆ. ಏನಲಾ.

ಸರಿ ಈಗ ಕವನ ಕೇಳ್ರಿ

ಗೌಡ ನಮ್ಮ ಮನೆಗೆ ಬಂದ

ಗಬ್ಬು ನಾರುತ್ತಿರುವ ಸಲ್ಟಿನಲ್ಲಿ

ಬಂದದ್ದು ಬೇರೆ ಕ್ಯಾಮೆಗೆ

ಕುಡಿದದ್ದು ಹಳೇ ಡಿಕಾಕ್ಸನ್ ಚಾವ

ಸೊರ್ ಅಂತಾ ಸಬ್ದದೊಂದಿಗೆ

ಅದು ಕಲಗಚ್ಚೋ ಚಾನೋ

ಮೂಡುತ್ತಿದೆ ಪ್ರಸ್ನೆ? ಹೆಂಗೆ ಗೌಡರೆ, ನೋಡಲಾ  ನಾಳೆಯಿಂದ ನಾನು ಆಶುಕವಿ ಗೌಡ ಆಯ್ತೀನಿ ಅಂತ ಎದ್ದು ತೊಲಗಿದ. ಮಗಾ ಸೀದಾ. ಕುಲುಮೆಗೆ ಹೋಗಿ, ಬಿಸಿ ರಾಡ್ನಾಗೆ "ಓಂ" ಅಂತಾ ಬರಸ್ಕಂಡು ಬಂದಿದ್ದ. ನಿಂಗನ ಅಂಗಡಿಗೆ ಬಂದ್ರೆ ತಣ್ಣನೆ ಚಾ ಕೊಡು ಅನ್ನೋನು. ಸುರಿಯೋ ಮಳ್ಯಾಗೆ ಐಸ್ ಕ್ಯಾಂಡಿ ತಿನ್ನೋನು. ಕುಲುಮೆ ಕೆಂಪ ಹೇಳಿದ್ ಮ್ಯಾಕೆ ಗೊತ್ತಾಗಿದ್ದು. ಮಗಂದು "ರ" ಅಕ್ಸರ ಎಲ್ಲಾ "ಲ" ಆಗಿತ್ತು. ಲೇ ಕೋಮಲ್ ಇವತ್ತು ನಮ್ಮ ಹೆಂಡಲು ಊಲಿಗೆ ಹೋಗಿದಾಳೆ. ಅದಕ್ಕೆ ಕುಲಿ ಮಾಡೀಸ್ತೀನಿ ಬಾಲಲಾ ಅಂದ. ನಿಮ್ಮ ಹೆಂಡರು ಮನ್ಯಾಗೆ ಇಲ್ಲಾ ಅಂದ್ರೆ ಕೂಲಿ ಮಾಡೋಕ್ಕೆ ನಾವು ಬರಬೇಕಾ ಆಗಕ್ಕಿಲ್ಲ ಅಂದೆ. ಕೂಲಿ ಅಲ್ಲೋ ತಿನ್ನೋ ಕುಲಿ. ಲೇ ಅದು ಕುರಿ ಕನ್ಲಾ ಅಂದ ಸುಬ್ಬ. ರಂಗಂಗೆ ಲಂಗ ಅನ್ನೋನು. ಯಾಕ್ರೀ ಗೌಡ್ರೆ ಹೆಂಗೆ ಐತೆ ಅನ್ನೋನು. ಅಂತೂ ಗೌಡಪ್ಪ ಕವನ ಬರೆಯೋದು ಕಲಿತ.

ಲೇ ಲಂಗಿ

ನೀನು ಸಾನೇ ಸುಂದಲವಾಗಿದ್ದೀಯಾ

ನಿನ್ನ ನೋಡಿದಲೆ ಸಾನೆ ಪಿಲುತಿ ಆಗ್ತದೆ

ನೀನು ಯಾವಾಗ ಮನೆತಾವ ಬತ್ತೀಯಾ ಅಂದ. ರಂಗಿ ಮೆಟ್ಟು ತೋರಿಸಿ ಹೆಂಗೈತೆ ಮೈಗೆ ಅಂದ್ಲು. ಲೇ ಇದು ಕವನಾ ಕಣಮ್ಮೀ ಅಂದಾ ಗೌಡಪ್ಪ. ಈಗ ತಂತಿ ಪಕಡು ಸೀತಾಲಾಮನ ಮೇಲೆ ಒಂದು ಕವನ ಬಲೆದಿದ್ದೀನಿ ಕೇಳಲಾ ಅಂದ

ತಂತಿ ಪಕಡು ಸೀತು

ಯಾಲಿಗೆ ಮಾಡುತ್ತೀಯಾ ಉಪಕಾಲ

ತಿನ್ನುತ್ತೀಯಾ ಡಬಲಿ ಅನ್ನ

ಬೆಳಗ್ಗೆ ಹೋಯ್ತೀಯಾ ಕೆಲೆತಾವ ಅಂದ. ಏನ್ಲಾ ಇವನು. ಕನ್ನಡ ಅಕ್ಷರದಾಗೆ ಇರೋ 52ನ್ನು 51 ಮಾಡ್ಯಾನೆ ಅಂದ ಸುಬ್ಬ.

ಲೇ ಸನ್ಯಾಸಿ ಸುಬ್ಬ

ನಿನಗೈತೆ ಹಬ್ಬ.

ಲೇ ನಿಂಗ

ಕೊಡಬೇಡ ಕೆಟ್ಟ ಚಾ

ಬತ್ತದೆ ಸಾನೆ ಲೋಗ

ಕೋಮಲಾ ನೀ ಇನ್ನು ಮನೆತಾವ ಬಲಬೇಡ

ಬಂದಲೆ ಕೊಡೋದಿಲ್ಲಾ ಸುಗಲ್ ಲೆಸ್ ಚಾ

ಬೀಳ್ತದೆ ಒದೆ ಅಂದಾ ಗೌಡಪ್ಪ. ಎಲ್ಲಾದಕ್ಕೂ ಕವನ ಹೇಳೋದು ಕಲ್ತಿದ್ದ. ಸರಿ ಒಂದು ದಿನ ರಂಗಂಗೆ ಆಶ್ರಯ ಮನೆ ಬೇಕಾಗಿತ್ತು. ಸರೀ ಗೌಡಪ್ಪ ಅರ್ಜಿ ಬರೆದಿದ್ದ. ಮಾತಾಡಿ ಮಾತಾಡಿ ಬರೆಯೋದರಲ್ಲೂ ಲನೇ ಸೇರಿಸ್ತಿದ್ದ.

ಗೆ,

ಮಾನ್ಯ ಕಾಲ್ಯದಸ್ಲಿಗಳು

ಗ್ಲಾಮ ಪಂಚಾಯ್ತಿ

 

ಇಂದ

ಲಂಗ

ಸಂತೆ ಕೇಲಿ

 

ಮಾನ್ಯಲೆ,

 ನಮ್ಮ ಲಂಗನಿಗೆ ಮನೆಯಿಲ್ಲ. ಹಾಗಾಗಿ ತಮ್ಮ ಪಂಚಾಯ್ತಿ ವತಿಯಿಂದ ಆಸ್ಲಯ ಮನೆ ಕೊಡಬೇಕಾಗಿ ವಿನಂತಿ

ಇಂತಿ

ಲಂಗ

ಟೈಪ್ ಮಾಡೋ ಯಮ್ಮ ಹೆಸರು ಅಂಗೇ ಇರಬೇಕು ಅಂತಾ ರಂಗನ ಬದಲಿಗೆ ಲಂಗ ಅಂತಾನೇ ಹಾಕಿದ್ಲು. ನೋಡಿದ ಕಾರ್ಯದರ್ಶಿ. ಇದೇನಮ್ಮಾ ರಂಗನ ಲಂಗ ಮಾಡಿದೀಯಾ ಅಂದ. ರೀ ಗೌಡ್ರೆ ಲಂಗ ಒಣಗ್ಸೋದಿಕ್ಕೆ ತಂತಿ ಸಾಕು. ಮನೆ ಯಾಕ್ರೀ ಅಂದ. ಅಷ್ಟೊತ್ತಿಗೆ ಜೊತೆಗೆ ಇದ್ದ ತಂತಿ ಪಕಡು ಸೀತು, ಯಾಕೆ ನನ್ನ ಮೈಯೇನೂ ಬಟ್ಟೆ ಹರವಾಕೋ ತಂತಿ ಅಂದ್ಕಂಡಿದಿರಾ ಅಂದ. ಗಡಪ್ಪ ಆ ಲಂಗ ಅಲ್ಲಾ ಅಂತಾ ಆ ಯಮ್ಮನ ಲಂಗ ತೋರಿಸಿ. ಈ ಲಂಗ ಅಂತಾ ರಂಗನ ತೋರಿಸಿದ. ಸರೀ ಅಂತೂ ಲಂಗನಿಗೆ ಅಲ್ಲ ರಂಗನಿಗೆ ಮನೆ ಸಿಕ್ತು. ಈ ಖುಸಿಗೆ ಸಿದ್ದೇಸನ ಗುಡ್ಯಾಗೆ ಕಾರ್ಯಕ್ರಮ. ನಮ್ಮ ಗೌಡರು ಬಡವ ರಂಗನಿಗೆ ಮನೆ ಕೊಡ್ಸಿದಾರೆ. ಇದರ ಬಗ್ಗೆ ಒಂದೆರೆಡು ಮಾತಾಡಬೇಕು.

ಎಲ್ಲಲಿಗೂ ನಮಸ್ಕಾಲ. ಲಂಗ ನನಗೆ ಸಾನೇ ದಿನದಿಂದ ಗೊತ್ತು. ಲಂಗನ ಹೆಂಡತಿ ಮತ್ತು ಲಂಗ ಸಾನೇ ಅನ್ಯೋನ್ಯವಾಗಿದ್ದಾಲೆ. ಇವಲ ಜೊತೆಗೆ ನನ್ನ ಹೆಂಡಲು ಸರಿಯಿಲೋದ್ಲಿಂದ ಲಂಗನಿಗೆ ಮನೆ ಕೊಡಿಸಿದ್ದೇನೆ ಅಟೆಯಾ. ಇವನ ಬಗ್ಗೆ ಕವನ ಹೇಳ್ತೀನಿ ಕೇಳಿ ಅಂದಾ ಗೌಡಪ್ಪ.

ಲಂಗ ನೀನು ಸಾನೇ ಒಳ್ಳೋನು

ಲುಂಗಿಯನ್ನು ಲಂಗದ ತರಾ ಆಕ್ಬೇಡ

ಆಮ್ಯಾಕೆ ಜನಕ್ಕೆ ಲಂಗ ಲುಂಗಿ ಬಗ್ಗೆ ಡೌಟ್ ಬತ್ತದೆ

ಹಾಕಿಲುವುದು ಲಂಗವಾ ಇಲ್ಲಾ ಲುಂಗಿಯಾ ಅಂತಾ ಅಂದ

ಅಟ್ಟೊತನಕ ಕವನ ಕೇಳ್ತಿದ್ದ ಜನಾ , ನಿನ್ನ ಕವನಕ್ಕೆ ದೋಸೆ ಹುಯ್ಯಾ ಅಂದು ಬಂದು ದಬಾ ದಬಾ ಅಂತಾ ಬಾರಿಸಿದ್ವು. ಯಾಕಲಾ ಕೋಮಲ್ ಹೊಡೆದಿದ್ದು. ರಂಗ ನೀವು ಲಂಗ ಅಂದ್ರಲಾ, ಹೆಣ್ಣು ಐಕ್ಳು ಗೌಡಪ್ಪ ಯಾವುದೋ "ಎ" ಪಿಚ್ಚರ್ ಕತೆ ಹೇಳ್ತಿದ್ದಾನೆ ಅಂತಾ ಹೊಡೆದಿದ್ದು ಅಂದೆ. ಗುಲುವೇ ಸಿದ್ದೇಸ. ಇನ್ಮೇಲೆ ಆಶು ಕವಿ ಆಗಕ್ಕಿಲ್ಲಾ. ಗೌಡ್ಲು ಇದ್ದಂಗೆ ಇಲ್ತೀನಿ ಅಂತಾ ಹೋದ. ಹೊಡೆದಿದ್ದ ಜಾಗಕ್ಕೆ ಸುಬ್ಬ ಸಿದ್ದೇಸನ ಗುಡಿ ಅರಿಸಿನ ಬಳೆದಿದ್ದ. ಪೂಜಾರಿ ಹಳೇ ಸಿಟ್ಟನ್ನೂ ತೀರಿಸ್ಕಂಡಿದ್ದ. ಕುಂಕುಮ ಅಂತಾ ಮೆಣಸಿನ ಪುಡಿ ಹಚ್ಚಿ.

Rating
No votes yet

Comments