ರಂಗಪ್ಪ ಹೋಗ್ಬಿಟ್ನಾ....?

ರಂಗಪ್ಪ ಹೋಗ್ಬಿಟ್ನಾ....?

ಬರಹ

 ರಂಗಪ್ಪ ಇನ್ನಿಲ್ಲ. ರಂಗಪ್ಪ ಅಂತಹ ಮಹಾನ್ ವ್ಯಕ್ತಿಯಲ್ಲ. ಎಲ್ಲರಂತೇ ಈತ. ನಗುವುದು...ನಗಿಸುವುದು ಈತನಿಗೂ ಗೊತ್ತು. ಸಂಬಂಧಿಗಳೂ ಅಪಾರ. ಅದು-ಇದು ಕೂಡ ರಂಗಪ್ಪನ ಫಸ್ಟು..ಸೆಕೆಂಡು ಸೆಟಪ್ಪು. ಹೆಂಡ್ತಿಗೂ ಒಬ್ಬ ಬಾಯ್ ಫ್ರೆಂಡ್. ಆದ್ರೂ, ರಂಗಪ್ಪ ಗ್ರೇಟ್. ಕಾರಣ, ಈತನೇ ಚಿತ್ರದ "ಪ್ರಮುಖ" ಈತನ ಸುತ್ತವೇ ಎಲ್ಲ ಸಾಗುತ್ತದೆ. ಎಲ್ಲವೂ ಅಂತ್ಯಗೊಳ್ಳುತ್ತದೆ. ಆದಿ ಮತ್ತು ಅಂತ್ಯದ ನಡುವೆ ನಡೆಯುವ ಘಟನೆಗಳೇ "ರಮೇಶ್ ಅರವಿಂದ್" ಅಭಿನಯದ ಹೊಸ ಚಿತ್ರ "ರಂಗಪ್ಪ ಹೋಗ್ಬಿಟ್ನಾ...?" ಹಾಸ್ಯ....


ನಟ ರಮೇಶ್ ಅರವಿಂದ್ ಈಗ ಮತ್ತೊಂದು ಹಾಸ್ಯ ಚಿತ್ರ ಪೂರ್ಣಗೊಳಿಸಿದ್ದಾರೆ. ಸಾಲು...ಸಾಲು ಚಿತ್ರಗಳ ರಿಲೀಜ್ ಮಧ್ಯೆ "ರಂಗಪ್ಪ ಹೋಗ್ಬಿಟ್ನಾ...?" ಈಗಷ್ಟೇ ಚಿತ್ರೀಕರಣ ಮುಗಿಸಿದೆ. ಸೆಪ್ಟಂಬರ್ ತಿಂಗಳಲ್ಲಿ ಯಾವುದೇ ದಿನ ರಂಗಪ್ಪ ತೆರೆಗೆ ಬರುವ ಸಾಧ್ಯತೆ ಇದೆ...



ಈಗ ವಿಷಯ ಇದಲ್ಲ. ಚಿತ್ರದ ಕಥೆ ಬಗ್ಗೆ ಹೇಳೋದು ಜಾಸ್ತಿಯಿದೆ. ಸಾವಿನ ಸುತ್ತವೇ ಇಡೀ ಕಥೆ ಹೆಣೆಯಲಾಗಿದೆ. ಒಂದೇ ದಿನ ಒಂದೇ ಮನೆಯಲ್ಲಿ ರಂಗಪ್ಪನ ಕಥೆ ಬೆಳೆಯುತ್ತದೆ. ಬೇಕಾದ ವ್ಯಕ್ತಿ ಸತ್ತು ಹೋದಾಗ ನೆಂಟರು ಬಹಳ ದಿನ ಅಳುತ್ತಾರೆ. ಬೇಡವಾದ ವ್ಯಕ್ತಿ ಸತ್ತನೋ ಆಗ ಹತ್ತಿರದವರೂ ದೂರವಾಗ್ತಾರೆ. ಆದ್ರೆ, ಇಲ್ಲಿ ಹಾಗಲ್ಲ. "ಸಾವಿನ ಮುಂದೆ ಬದುಕಿನ ನರ್ತನ" ನಡೆಯುತ್ತದೆ. ಚಿತ್ರದ ಸಬ್ ಕ್ಯಾಪ್ಷನ್ ಸಹ ಇದನ್ನೇ ಇಡಲಾಗಿದೆ....



ನಿರ್ದೇಶಕ ಪ್ರಸನ್ನ ಸಾವಿನ ಸುದ್ದಿಯ ಸುತ್ತವೇ ಕಥೆ ಸೃಷ್ಟಿಸಿದ್ದಾರೆ. ಕಥೆಯ ಜೊತೆ..ಜೊತೆಗೆ ಹಾಸ್ಯವೇ ಪ್ರಧಾನವಾಗಿ ಹೊರಹೊಮ್ಮಲಿ ಅನ್ನೋದನ್ನ ಗಮನದಲ್ಲಿ ಇಟ್ಟುಕೊಂಡೇ "ರಂಪ್ಪನ ಸಾವಿನ" ಸುದ್ದಿ ಸಿದ್ಧ ಮಾಡಿದ್ದಾರೆ...ಆದ್ರೆ, ಇಲ್ಲಿ ಕೇವಲ ಸಾವಿನ ಸುದ್ದಿಯ ಹಾಸ್ಯದ ನರ್ತನ ಇದ್ದಂತೆ ಕಾಣುವುದಿಲ್ಲ. ಮನೆಯಲ್ಲಿ ಅದ್ಯಾರೋ ಬೇಕಾದವರು ಸತ್ತು ಹೋದ್ರೆ, ಏನೆಲ್ಲ ಸಾಧ್ಯತೆಗಳು ಇವೆ ಅನ್ನೋದನ್ನ ಹೇಳುವ ಸಾಹಸವನ್ನ ಮಾಡ್ತಿದ್ದಾರೆ ಅಂತಲೇ ಹೇಳಬಹುದು.



ಇನ್ನೊಂದು ಸಾಹಸವೂ ಚಿತ್ರೀಕರಣದಲ್ಲಿದೆ. ಲೆಕ್ಕದಂತೆ ಚಿತ್ರೀಕರಣವನ್ನ ೨೦ ದಿನದಲ್ಲಿ ಮುಗಿಸಬೇಕು. ಆದರೆ, ನಿರ್ದೇಶಕರು ಸಿಕ್ಕಾಪಟ್ಟೆ ಫಾಸ್ಟ್. ೧೬ ದಿನದಲ್ಲಿಯೇ "ರಂಗಪ್ಪನ ಕಥೆ" ಮುಗಿಸಿ ಹಾಕಿದ್ದಾರೆ. ಅಂದ್ರೆ, ಚಿತ್ರೀಕರಣದ ಕೆಲಸವಷ್ಟೇ ಈಗ ಮುಗಿದಿದೆ.



ಇಷ್ಟೆಲ್ಲ ಇರೋ ಚಿತ್ರದಲ್ಲಿ ರಂಗಪ್ಪನ ಪುತ್ರನ ಪಾತ್ರ ರಮೇಶ್ ಅರವಿಂದ್ ಅವರದ್ದು. ಹಿಂದಿನ ಚಿತ್ರಕ್ಕೆ ಹೋಲಿಸಿದ್ರೆ, ರಮೇಶ್ ಇಲ್ಲಿ ಹಾಸ್ಯ ಮಾಡೋದೇಯಿಲ್ಲ. ರಮೇಶ್ ಚಿತ್ರದಲ್ಲಿಯ ಸಂದಿಗ್ಧತೆಗಳಿಗೆ ಪ್ರೇಕ್ಷಕ ನಗ್ತಾನೆ. ತಂದೆಯ ಹಲವು ಗೋಜುಗಳಿಗೆ ಪ್ರೇಕ್ಷಕ ಬಿದ್ದು....ಬಿದ್ದು ನಗ್ತಾನೆ. ಅಂತಹ ಹೊಸತನ "ರಂಗಪ್ಪ ಹೋಗ್ಬಿಟ್ನಾ" ದಲ್ಲಿ ಹಾಸ್ಯ ಚಿತ್ರ ಪ್ರಿಯರಿಗೆ ದೊರೆಯಲಿದೆ ಎಂಬ ನಂಬಿಕೆ ಈಗಲೇ ಚಿತ್ರ ತಂಡದಲ್ಲಿ ಮೂಡಿದೆ...



ಇಲ್ಲಿ ಇನ್ನೊಬ್ಬ ತಾರೆಯೂ ಬದಲಾಗಿದ್ದಾರೆ. "ಗಂಡ ಹೆಂಡತಿ"ಯಂತಹ ಚಿತ್ರದಲ್ಲಿ ಸ್ವಲ್ಪ ಜಾಸ್ತಿನೇ ಬೋಲ್ಡ್ ಸೀನ್ ನಲ್ಲಿ ಕಾಣಿಸಿಕೊಂಡ ನಟಿ ಸಂಜನಾ ರಂಗಪ್ಪನ ಮನೆಯಲ್ಲಿ ತುಂಬಾ ಸಭ್ಯೆಳು. ಮೈತುಂಬಾ ಸಾರಿ ಉಟ್ಟುಕೊಂಡು ಓಡಾಡುವ ಸ್ನೇಹ ಎಂಬ ಸೊಸೆ. "ಮಾವ ಹೋಗ್ಬಿಟ್ನಾ"..? ಅನ್ನೊ ಸುದ್ದಿಯ ಗದ್ದಲದಲ್ಲಿ ಈಕೆಯದ್ದು ಒಂದಷ್ಟು ಪಾತ್ರವಿದೆ..ಸಾಕಷ್ಟು ಅಭಿನಯವೂ ಇದೆಯಂತೆ.



ಇನ್ನುಳಿದಂತೆ ಸಿಹಿಕಹಿ ಚಂದ್ರು. ಮನ್ ದೀಪ್ ರಾಯ್, ಸಾಧು ಕೋಕಿಲ ಸೋದರ್ ಲಯನ್ ರಾಜ್. ಹೀಗೆ ಹಾಸ್ಯ ಕಲಾವಿದರ ದಂಡು "ರಂಗಪ್ಪನ" ಕಥೆಯಲ್ಲಿದೆ. ಕಿರುತೆರೆಯ ನಟ ನಂಜುಂಡ. ಹಿರಿ ತೆರೆಯಲ್ಲಿ ಕಾಣಿಸಿಕೊಂಡು ಕಿರುತೆರೆಯಲ್ಲಿ ಮಿಂಚುತ್ತಿರುವ ರವಿಕಿರಣ್ ಹತ್ತು ವರ್ಷದ ಸುದೀರ್ಘ ಗ್ಯಾಪ್ ನಂತರ "ರಂಗಪ್ಪ ಹೋಗ್ಬಿಟ್ನಾ...? ದಲ್ಲಿ ಕಾಣಿಸಿಕೊಳ್ತಾಯಿದ್ದಾರೆ. ಹೊಸತನ..ಹೊಸ ನಿರ್ದೇಶಕರ ರಂಗಪ್ಪ ಹೋಗ್ಬಿಟ್ನಾ ಟೈಟಲ್ ನಿಂದಲೇ ಸದ್ಯ ಗಮನ ಸೆಳೆಯುತ್ತಿದೆ. ತೆರೆ ಮೇಲೆ ಬಂದ ನಂತರ ಇನ್ನು ಏನೇಲ್ಲ ಮಾಡ್ತದೋ.... ರಂಗಪ್ಪನೇ ಬಲ್ಲ...



-ರೇವನ್ ಪಿ.ಜೇವೂರ್