ಕೋಗಿಲೆ ಹಾಡು ನಿಂತು ಹೋಯಿತು

Submitted by roopablrao on Mon, 08/02/2010 - 19:16
ಬರಹ

ಅಂದ ಹಾಗೆ ಆ ಕೋಗಿಲೆ ಒಂದು ಥರ ಮೂಡಿ ತಾನಾಯ್ತು ತನ್ನ ಹಾಡಾಯ್ತು ಎಂದುಕೊಂಡು  ತನ್ನ ಪಾಡಿಗೆ ತಾನಿತ್ತು.

ಬೇಸರವಾದರೂ ಹಾಡು. ನಲಿವಾದರೂ ಹಾಡು ನೋವಾದರೂ ಹಾಡು ಹಸಿವಾದರೂ ಹಾಡು. ಹೀಗೆ ಹಾಡೊಳಗೆ  ಉಸಿರಾಗಿ ಹೋಗಿತ್ತು. ಒಂದು ಸೊಂಪಾದ ಮರದ ಕೊಂಬೆಯ ಮೇಲೆ ಅದ್ಯಾವುದೋ ಕಾಲದಿಂದ ಕೂತಿತ್ತು.

ಒಂದೊಮ್ಮೆ ಇಂತಹ ಕೋಗಿಲೆಗೆ ಒಬ್ಬ ಮನುಷ್ಯನೊಂದಿಗೆ ಅರಿವಿಲ್ಲದೆ ಸಂಬಂಧ ಹುಟ್ಟಿತು. ಅರೆ ಕೋಗಿಲೆಗೆ ಮನುಷ್ಯನೊಂದಿಗೆ ಎಂಥಾ ಸಂಬಂಧ ಅನ್ನುತ್ತೀರಾ? ಅದೇ ನೋಡಿ ಇಲ್ಲಿನ ಕಥೆ

ಆತನೂ ದಿನಾ ಅದೇ ಮರದ ಕೆಳಗೆ ಬಂದು ಕೂರುತ್ತಿದ ಅತ್ತಿತ್ತ ನೋಡುತ್ತಿದ್ದ. ನಂತರ ನಿಧಾನವಾಗಿ ತನ್ನ ಪಾಕೆಟ್ನಿಂದ ಹಣ ತೆಗೆದು ಮರದಲ್ಲಿದ್ದ  ಪೊಟರೆಯೊಳಗೆ ಹಾಕುತ್ತಿದ್ದ.  ನಂತರ ಮರದ ಎಲೆಗಳಿಂದ ಸುತ್ತಿ  ಯಾರಿಗೂ ಕಾಣದಂತೆ ಗೊತ್ತಾಗದಂತೆ ಹೋಗಿಬಿಡುತ್ತಿದ್ದ. ಇದು ಎಷ್ಟೋ ಕಾಲದಿಂದ ನಡೆಯುತ್ತಲೆ  ಇತ್ತು. ಅದೆಷ್ಟು ಹಣವನ್ನು ಇಟ್ಟ್ಟಿದ್ದನೋ ಹೀಗೆ ಆ ಮಹಾನುಭಾವ. 

ಕೋಗಿಲೆ ನೋಡುತ್ತಿತ್ತು . ನೋಡಿದರೂ ಏನೂ ತಿಳಿಯುತ್ತಿರಲಿಲ್ಲ. ಅದು ಸುಮ್ಮನಿರುತ್ತಿತ್ತು. ಅಷ್ಟಕ್ಕೂ ಹಣದ ಸಹವಾಸವೇ ಅದಕ್ಕೆ ಬೇಕಿರಲಿಲ್ಲ. ಹಣವನ್ನು ಕಣ್ಣಿಂದಲೂ ನೋಡಿರಲಿಲ್ಲ

ಇದ್ದಕಿದ್ದಂತೆ ಆ ಮನುಷ್ಯ ಬರುವುದನ್ನು ನಿಲ್ಲಿಸಿದ . ಏನಾದನೋ . ಸತ್ತನೋ ಬದುಕಿದನೋ ತಿಳಿಯಲ್ಲಿಲ್ಲ . ಕೋಗಿಲೆಗೆ  ಮನುಷ್ಯ ಬರದಿರುವುದು  ಗೊತ್ತಾಯಿತು. ಒಮ್ಮೆ ಕುತೂಹಲಕ್ಕೆಂದು  ಪೊಟರೆಯನ್ನು ಕೆದಕಿ ನೋಡಿತು ಸಂದಿಯಿಂದ ಹಣದ ರಾಶಿಯೇ ಕಂಡಿತು .ಕುತೂಹಲ ಆಕರ್ಷಣೆಯಾಗಿ  ಬದಲಾಯ್ತು. ಕೊಕ್ಕಿನಿಂದ ಒಂದೊಂದೇ ಸೊಪ್ಪನ್ನು ಕೆಳಗೆ ಬೀಳಿಸತೊಡಗಿತು 

ಒಂದೊಂದೇ ಎಲೆ ಉದುರತೊಡಗಿತು. ನಂತರ ಕೊಕ್ಕಿನಿಂದ ಒಂದೊಂದೇ ನೋಟನ್ನು ಎತ್ತಲಾರಂಭಿಸಿತು. ಎತ್ತಿದಷ್ಟೂ ಮುಗಿಯಲಾರದಷ್ಟು ಹಣದ  ರಾಶಿ.

ಕೋಗಿಲೆ ಹಾಡನ್ನು ಮರೆಯಿತು.  ಏನಾದರೂ ತಿನ್ನುವುದು ನೋಟನ್ನು ಎತ್ತುವುದು . ಸುಸ್ತಾಯಿತೆಂದು ಮಲಗುವುದು. ಒಮ್ಮೊಮ್ಮೆ ಯಾಕಪ್ಪಾ ಈ ಕಷ್ಟ ಅಂತನಿಸಿದರೂ ಹಣ  ಕಣ್ಣಮುಂದೆ ಕುಣಿದಾಗಲೆಲ್ಲಾ ಮತ್ತೆ ನೋಟುಗಳನ್ನು ಎಳೆಯಲು ಹೊರಡುತಿತ್ತು.

ಈಗ ಕೋಗಿಲೆಗೆ ಹಾಡಬೇಕೆನಿಸಿದರೂ ಹಾಡಲು ಸಮಯವಿಲ್ಲ.  ಸಮಯವಿದ್ದರೂ  ಕಂಠದಲ್ಲಿ ಆ ಮೊದಲಿನ ತ್ರಾಣವಿಲ್ಲ. ತ್ರಾಣವಿದ್ದರೂ ಹಾಡಿಗೆ  ಭಾವನೆಗಳೇ ಕೂಡಿ ಬರುತ್ತಿಲ್ಲ.

ಒಮ್ಮೊಮ್ಮೆ ಕೋಗಿಲೆ ಕೂಗುತ್ತದೆ ಆದರೆ ಹಾಡಲಾರದು.

ಕೊನೆಗೂ ಕೋಗಿಲೆ ಹಣ ಸಂಪಾದಿಸಿತೇ ಅಥವ ಹಣವೇ ಕೋಗಿಲೆಯನ್ನು ಸಂಪಾದಿಸಿತೋ  ಎಂದು ಮರಕ್ಕೆ ಗೊತ್ತೇ ಆಗಲಿಲ್ಲ