ಪತ್ರ ಬಂದಿಹುದು ... ನನ್ನೂರಿನ ನೆನಪ ತಂದಿಹುದು!

ಪತ್ರ ಬಂದಿಹುದು ... ನನ್ನೂರಿನ ನೆನಪ ತಂದಿಹುದು!

ಹಿಂದೀ ಚಲನಚಿತ್ರ "ನಾಮ್" ನ "ಛಿಟ್ಟೀ ಆಯೀ ಹೈ.." ಗೀತೆಯನ್ನು ನೆನಪಿಸಿಕೊಂಡು ಕನ್ನಡದಲ್ಲಿ ಬರೆಯಲೆತ್ನಿಸಿದಾಗ:

 

ಪತ್ರ ಬಂದಿಹುದು ಬಂದಿಹುದು
ಪತ್ರ ಬಂದಿಹುದು ಬಂದಿಹುದು
ವರುಷಗಳ ನಂತರ, ಬಂದಿರುವ ಪತ್ರ,
ನನ್ನೂರಿನ ನೆನಪ ತಂದಿಹುದು
 
ನನ್ನ ಹೆಸರಿದೆ ಪತ್ರದ ಮೇಲೆ
ಒಳಗಿದೆ ಈ ಸಂದೇಶಗಳ ಸರಮಾಲೆ

ಓ ಪರದೇಶಕ್ಕೆ ಹೋದವನೇ
ಮರಳಿ ಈ ನಾಡಿಗೆ ಬಾರದವನೇ

ಏಳು ಸಮುದ್ರಗಳಾಚೆಗೆ ತೆರಳಿದೆ ನೀನು
ನಮ್ಮನ್ನು ಜೀವಂತ ಶವವನ್ನಾಗಿಸಿಹೆ ನೀನು

ರಕ್ತ ಸಂಬಂಧಗಳನೇ ಮರೆತಿಹೆ ನೀನು
ಈ ಕಂಗಳಲ್ಲಿ ಕಣ್ಣೀರು ತುಂಬಿಸಿಹೆ ನೀನು

ಊಟ ಉಪಾಹಾರವೊಂದೂ ಸರಿಯಾಗಿ ಇಲ್ಲ
ನಿದ್ದೆಯ ಮಾತಂತೂ ಇಲ್ಲವೇ ಇಲ್ಲ
ಆದರೆ ನಮ್ಮೀ  ಮೂಕ ರೋದನ ನಿಲ್ಲುವುದೇ ಇಲ್ಲ
 
ನೀರವ ಮೌನ ತುಂಬಿದೆ ಇಲ್ಲಿನ ಬೀದಿಗಳಲ್ಲಿ
ಹೂದೋಟದ ಹೂಗಳಾಗಿವೆ ಮುಳ್ಳುಗಳಂತಿಲ್ಲಿ

ಮಾಮರದ ಉಯ್ಯಾಲೆ ನಿನ್ನನ್ನಿನ್ನೂ ಮರೆತಿಲ್ಲ
ಆದರೆ ನೀನದನು ಅದೆಂತು ಮರೆತೆಯಲ್ಲಾ

ನೀನಿಲ್ಲದ ದಿನ ಬಂದಿದ್ದರೇನಂತೆ ದೀಪಾವಳಿ
ದೀಪಗಳ ಬದಲು ಉರಿದವು ಈ ಹೃದಯಗಳು ಖಾಲಿ

ಹೋಳಿ ಹಬ್ಬದಲ್ಲೂ ಕಾಡಿತ್ತು ನಿನ್ನ ಗೈರುಹಾಜರಿ
ಬಂದೂಕಿನಂತೆ ಭಾಸವಾಗಿತ್ತು ನಮಗೆ ಆ ಪಿಚಕಾರಿ

ತೋಪಿನಲ್ಲೂ ನದೀತೀರದಲ್ಲೂ ಕಾಡುತಿದೆ ಮೌನ
ಈ ಮನೆಯೂ ಆಗಿದೆ ಈಗ ಮೌನವಾದ ಸ್ಮಶಾನ

ಬಂದಿದೆ ಯುಗಾದಿ ಹಬ್ಬದ ಆಗಮನದ ಸುದ್ದಿ
ನಮಗೆ ಬೇಕಿದೆ ನಿನ್ನ ಸ್ವದೇಶಾಗಮನದ ಸುದ್ದಿ
 
ಹಿಂದೆ ನೀ ಬರೆಯುತ್ತಲಿದ್ದೆ ತಿಂಗಳಿಗೆ ಐದಾರು ಪತ್ರ
ಆ ಪತ್ರಗಳಲ್ಲೇ ಕಾಣುತ್ತಿತ್ತೆಮಗೆ ನಿನ್ನ ಮುಖದ ಚಿತ್ರ

ಪತ್ರ ವ್ಯವಹಾರಗಳೇ ನಿಂತು ಹೋದವಲ್ಲಾ ಮಗನೇ
ಆ ಎಲ್ಲಾ ಆಟಗಳೇ ಮುಗಿದು ಹೋದವಲ್ಲಾ ಮಗನೇ

ನಿನ್ನ ತಂಗಿ ಗಂಡನೊಂದಿಗೆ ಹೊರಟು ನಿಂತಾಗ
ನಿನ್ನ ದಾರಿಯನೇ ಕಾಯುತ್ತಿದ್ದವು ಆಕೆಯ ಕಂಗಳಾಗ

ನನ್ನ ಮಾತೇನು ಬಿಟ್ಟು ಬಿಡು ನಾನು ನಿನ್ನ ಅಪ್ಪ
ನಿನ್ನ ತಾಯಿಯ ಪರಿಸ್ಥಿತಿಯ ನೋಡಲಾಗದು ಪಾಪ

ನಿನ್ನ ಹೆಂಡತಿಯೇ ಮಾಡುತ್ತಿಹಳು ಆಕೆಯ ಸೇವೆ
ಅತ್ತೆ ಸೊಸೆಯಂದಿರ ಮನಗಳೆರಡರಲ್ಲೂ ನೋವೆ

ನೀ ಗಳಿಸಿದ ಹಣ ಸಾಕಷ್ಟು ಸುಖ ನೀಡಿದೆ ಗೊತ್ತು
ಆದರೆ ನಿನ್ನನ್ನೇ ನಮ್ಮಿಂದ ಬಲು ದೂರ ಮಾಡಿಬಿಡ್ತು

ಪಕ್ಷಿಯಂತೆ ನೀನು ಒಮ್ಮೆ ಹಾರಿ ಬಂದು ಬಿಡು
ಎಲ್ಲಾ ಬಂಧನಗಳಿಂದ ಮುಕ್ತನಾಗಿ ಬಂದು ಬಿಡು
ನಮ್ಮ ಕೊನೆಯಾಸೆಯ ತೀರಿಸಲು ಬಂದು ಬಿಡು
ಪಕ್ಷಿಯಂತೆ ನೀನು ಒಮ್ಮೆ ಹಾರಿ ಬಂದು ಬಿಡು
*****************
ಆತ್ರಾಡಿ ಸುರೇಶ ಹೆಗ್ಡೆ
 

Rating
No votes yet

Comments