ಸಾವಿನಿಂದಲೂ ಸಂತೋಷಪಡುತ್ತಿದ್ದೆ!

ಸಾವಿನಿಂದಲೂ ಸಂತೋಷಪಡುತ್ತಿದ್ದೆ!

ಅದು ಪ್ರೈಮರಿ ಸ್ಕೂಲ್‌‌ನಲ್ಲಿ ಓದುತ್ತಿದ್ದ ಕಾಲ. ಟಿವಿಯಲ್ಲಿ ಯಾರಾದರೂ ರಾಜಕಾರಣಿಗಳು, ಅಥವಾ ಗಣ್ಯ ವ್ಯಕ್ತಿಗಳು ನಿಧನರಾಗಿದ್ದಾರೆ ಎಂಬ ಸುದ್ಧಿ ಕೇಳಿದರೆ ಸಾಕು ಕುಣಿದು ಬಿಡುವಷ್ಟು ಸಂತೋಷವಾಗುತ್ತಿತ್ತು. ಕಾರಣ, ಒಂದು ದಿನ ಶಾಲೆಗೆ ರಜೆ ಸಿಗುತ್ತದೆಯಲ್ಲ ಎಂದು! ಮಾರನೆಯ ದಿನ ಮೊದಲು ನ್ಯೂಸ್‌‌ ಪೇಪರ್‌‌ನಲ್ಲಿ ಹುಡುಕುತ್ತಿದ್ದುದೇ ಶಾಲಾಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆಯೇ ಇಲ್ಲವೇ ಎಂದು. ರಜೆ ಘೋಷಿಸಿರದಿದ್ದರೆ ಬಹಳ ನಿರಾಸೆಯಾಗುತ್ತಿತ್ತು. ಅವತ್ತೆಲ್ಲಾ ಕ್ಲಾಸಲ್ಲಿ ಕೂರೋಕೇ ಮನಸ್ಸಿಗೆ ಏನೋ ಒಂದು ತರಹ ಬೇಸರ, ಸುಮ್ಮನೆ ಒಂದು ರಜೆ ಹಾಳಾಯ್ತಲ್ಲಾ ಅಂತ. ಅಷ್ಟೇ ಅಲ್ಲ ಯಾರಾದರೂ ಗಣ್ಯ ವ್ಯಕ್ತಿಗಳು ಆಸ್ಪತ್ರೆ ಸೇರಿದ್ದಾರೆ ಎಂದರೆ, ಸಧ್ಯದಲ್ಲೇ ಒಂದು ರಜೆ ಸಿಗುತ್ತದೆ ಎಂದು ಮನಸ್ಸಲ್ಲೇ ಮಂಡಿಗೆ ತಿನ್ನುತ್ತಿದ್ದೆವು!

ಅದರ ಕಥೆ ಹಾಗಿರಲಿ, ನಮ್ಮ ಬಂಧು ವರ್ಗದಲ್ಲಿ ಯಾರಾದರು ನಿಧನರಾದಾಗ ಮನೆಯಲ್ಲಿ ಎಲ್ಲರೂ ದುಃಖಿತರಾಗಿದ್ದರೆ ನನಗೆ ಮಾತ್ರಾ ಒಳಗೊಳಗೆ ಸಂತೋಷವಾಗುತ್ತಿತ್ತು. ಅದಕ್ಕೆ ಕಾರಣ ಸೂತಕ. ಯಾರಾದರೂ ಸಂಬಂಧಿಕರು ಸತ್ತಾಗ ಹತ್ತು ದಿನ ಸೂತಕ ಆಚರಿಸಬೇಕಲ್ಲ, ಆಗ ಸಂಧ್ಯಾವಂದನೆ, ದೇವರ ಪೂಜೆ ಮಾಡಬೇಕಿಲ್ಲ. ಮಂತ್ರ ಕಲಿಯಬೇಕಿಲ್ಲ, ದೇವಸ್ಥಾನಕ್ಕೆ ಹೋಗಬೇಕಿಲ್ಲ! ನನಗೆ ಸಂಧ್ಯಾವಂದನೆ, ದೇವರ ಪೂಜೆ ಮಾಡುವುದಕ್ಕೆ ಯಾವುದೇ ತಕರಾರು ಇರಲಿಲ್ಲ. ಆದರೆ ನನ್ನ ಸಮಸ್ಯೆ ಇದ್ದದ್ದು ಅದನ್ನು ಮಾಡುವ ಸಮಯದಲ್ಲಿ, ಬೆಳಿಗ್ಗೆ ಬೇಗ ಎದ್ದು ಸ್ನಾನ ಸಂಧ್ಯಾವಂದನೆ ಮಾಡಬೇಕಿತ್ತು. ಅದೆಲ್ಲ ಮಾಡಿದ ನಂತರವೇ ತಿಂಡಿ. ಸಂಜೆ ಸೂರ್ಯ ಮುಳುಗುತ್ತಿದ್ದಂತೆ ಮತ್ತೆ ಸಂಧ್ಯಾವಂದನೆಗೆ ಕೂರಬೇಕಿತ್ತು. ಅದು ಮುಗಿದ ನಂತರ ಮತ್ತೆ ಮಂತ್ರ ಕಲಿಯುವುದು ಪ್ರಾರಂಭವಾಗುತ್ತಿತ್ತು. ಸಂಜೆಯೆಲ್ಲಾ ಇದರಲ್ಲೇ ಮುಗಿದು ಹೋಗುತ್ತಿತ್ತು. ಹೊರಗೆ ಬೇರೆ ಹುಡುಗರೆಲ್ಲಾ ಆಟವಾಡುತ್ತಿದ್ದರೆ, ನಾನು ಮಾತ್ರಾ ಒಳಗೆ ದೇವರನ್ನು ನೆನೆಯುತ್ತಾ ಕೂರಬೇಕಿತ್ತು. ಇದೇ ಕಾರಣಕ್ಕೆ ಸೂತಕ ಬಂದರೆ ಖುಶಿಯಾಗುತ್ತಿತ್ತು. ಹತ್ತು ದಿನ ಸಂಧ್ಯಾವಂದನೆ, ಪೂಜೆ, ದೇವಸ್ಥಾನಕ್ಕೆ ಹೋಗುವುದು, ಯಾವುದೂ ಇರುತ್ತಿರಲಿಲ್ಲ. ಸಂಜೆಯೆಲ್ಲಾ ಆರಾಮಾಗಿ ಆಟವಾಡಿಕೊಂಡು ಇರಬಹುದಿತ್ತು. ಇನ್ನು ವೃಧ್ಧಿ ಬಂದರಂತೂ ಡಬಲ್ ಖುಶಿಯಾಗುತ್ತಿತ್ತು!

-ಪ್ರಸನ್ನ.ಎಸ್.ಪಿ

Rating
No votes yet

Comments