ಜುಗಲಬಂಧಿ

ಜುಗಲಬಂಧಿ

ಬರಹ

ತನುವ ತಾಕಿ ಮನಕೆ ಇಳಿದ ಮುಂಗಾರಿನ ಮಳೆಹನಿ
ಮಿಂಚ ಬೆಳಕ ಮೇಳದಲ್ಲಿ  ಮತ್ತೆ ಗುಡುಗ ಮಾರ್ಧನಿ
ಅರಿವಾಗದೆ ನಡೆಯಲಿ ಬಿಡು
ನನ್ನ ಕಣ್ಣ ನಿನ್ನ ಕಣ್ಣ ನಡುವೆ ಜುಗಲಬಂಧಿ

ನಡೆವ ಬಾ ಹಿಡಿದು ಕೈಯ್ಯ ಮಳೆಯಲಿ ನಾವ್ ನೆನೆಯುತ
ಮರೆವ ಬಾ ಜಗವ ಜೊತೆಗೆ ಮುತ್ತ ಮಳೆಯ ಸುರಿಸುತ
ಉರಿದು ನಮ್ಮ ಹಳಿದರೇನು
ನನ್ನ ಒಲವ ನಿನ್ನ ಚೆಲುವ ನೋಡಿ ಜಗದ ಮಂದಿ
ನಶೆಗಡಲನು ಕಡೆಯಲಿ ಬಿಡು
ನನ್ನ ಅಧರ ನಿನ್ನ ಅಧರ ನಡೆಸಿ ಜುಗಲಬಂಧಿ

ಬರೆವ ಬಾ ಹೊಸದು ಗೀತೆ ಒಲವ ಉಯ್ಯಾಲೆಯ ಜೀಕುತ
ಕಲಿವ ಬಾ ಹೊಸದು ರಾಗ ನೂರು ವ್ಯಥೆಯ ದೂರ ನೂಕುತ
ಎದೆಯ ವೀಣೆ ತಂತಿ ಮಿಡಿದು
ನನ್ನ ನಿನ್ನ ಹೊಸ ಬಾಳ್ವೆಗೆ ಹಾಡುವ ನಾವ್ ನಾಂದಿ
ಎಡೆಬಿಡದೆ ನಡೆಯಲಿ ಬಿಡು
ನನ್ನುಸಿರಿಗು ನಿನ್ನುಸಿರಿಗು ನಡುವೆ ಜುಗಲಬಂಧಿ