ಚಿಕ್ಕ ಪುಟ್ಟ ಸೌಜನ್ಯಗಳು
ಚಿಕ್ಕ ಚಿಕ್ಕ ವಿಷಯಗಳಿಗೆ ತಲೆ ಕೆಡಿಸಿಕೊಳ್ಳಬಾರದಂತೆ.ಆಂಗ್ಲ ಭಾಷೆಯಲ್ಲಿ ಇದನ್ನು ಹೊಂದುವ ಮಾತು dont sweat the small stuff ಅಂತ. ಆದರೆ ಈ ಚಿಕ್ಕ ಪುಟ್ಟ ಕೆಲಸಗಳು ಆಹ್ಲಾದಕರ ಸೌಜನ್ಯಗಳಾಗಿ ಮಾರ್ಪಟ್ಟಾಗ? ತರುವುದು ನಾಕ, ಅಲ್ಲವೇ? ನಮ್ಮ ಬದುಕಿನ ನಿರಂತರ ಜಂಜಾಟಗಳ ನಡುವೆಯೂ ಕೆಲವೊಂದು ಮುಗುಳ್ನಗು ಮತ್ತು ಉಲ್ಲಾಸ ತರುವ ಘಟನೆಗಳು ಬಂದೇ ಇರುತ್ತವೆ. ಅಂಥ ಪುಟ್ಟ ಪುಟ್ಟ ಉಲ್ಲಾಸಮಯ ಕ್ಷಣ ಗಳಿಗಾಗಿಯೇ ಒಂದು ವೆಬ್ ತಾಣವೂ ಇದೆ. ಅದರಲ್ಲಿ ಜನ ತಮ್ಮ ದೈನಂದಿನ ಬದುಕಿನಲ್ಲಿ ಎದುರಾದ, ಎಡವಿದ ಸುಂದರ ಕ್ಷಣಗಳ ಬಗ್ಗೆ ಬರೆದು ಕೃತಜ್ಞತೆ ತೋರಿಸುತ್ತಾರೆ ಮತ್ತು ವಿಶ್ವ ನಾವೆಣಿಸಿದಂತೆ ತೀರಾ ಸ್ವಾರ್ಥಿಗಳ ಸಂತೆ ಅಲ್ಲ ಎಂದು ತೋರಿಸುತ್ತಾರೆ. ನನಗೂ ಈ ರೀತಿಯ ಮುಖದಲ್ಲಿ ಮಂದಹಾಸ, ಮನಸ್ಸಿಗೆ ಮುದ ನೀಡುವ ಚಿಕ್ಕ ಪುಟ್ಟ ಸಂಗತಿಗಳು ಸಿಗುತ್ತವೆ.
ಒಮ್ಮೆ ಪವಿತ್ರ ಮಕ್ಕಾ ನಗರ ತಲುಪಿ ಕಾರನ್ನು ಪಾರ್ಕಿಂಗ್ ನಲ್ಲಿ ನಿಲ್ಲಿಸಿ ಮಗಳನ್ನ ಎತ್ತಿಕೊಂಡು ಮಸೀದಿಯ ಕಡೆ ನಡೆದು ಬರುತ್ತಿದ್ದೆ. ಸ್ವಲ್ಪ ದೂರ ಬಂದಾಗ ರಸ್ತೆ ಬದಿ ನಿಲ್ಲಿಸಿದ್ದ ಕಾರೊಂದರಿಂದ ಮಹಿಳೆಯ ಸ್ವರ ಕೇಳಿಸಿತು excuse me, please accept this from me ಎಂದು. ತೆಗೆದುಕೊಂಡಾಗ ಪುಟ್ಟ ಚೀಲದಲ್ಲಿ ಒಂದು ಚಿಕ್ಕ ಖರ್ಜೂರದ ಪೊಟ್ಟಣ ಮತ್ತು ಲಬನ್ (ಮೊಸರನ್ನು ಹೋಲುವ ಪಾನೀಯ, ಅರೇಬಿಯಾದಲ್ಲಿ ಜನಪ್ರಿಯ) ಪ್ಯಾಕೆಟ್ ಇತ್ತು. ಆಕೆಯನ್ನು ವಂದಿಸಿ ಸ್ವಲ್ಪ ಮುಂದೆ ಹೋದ ಕೂಡಲೇ ಮತ್ತೊಬ್ಬ ರೊಟ್ಟಿ ಹಂಚುತ್ತಿದ್ದ. ಆತ ಕೊಟ್ಟ ರೊಟ್ಟಿಯನ್ನೂ ಪಡೆದು ಅಲ್ಲೇ ಒಂದು ಗೋಪುರದ ೩೭ ಡಿಗ್ರೀ ಎಂದು ತಾಪಮಾನ ಸೂಚಿಸುವ ಫಲಕ ನೋಡುತ್ತಾ ಮಸ್ಜಿದ್ ನ ಮಹಾದ್ವಾರದ ಹತ್ತಿರ ಬಂದಾಗ ನನ್ನ ಮಗನ ಅದೃಷ್ಟ ಖುಲಾಯಿಸಿತು. ಒಂದಡಿ ಉದ್ದದ ಎರಡು ಪೆನ್ಸಿಲ್ ಮತ್ತು eraser ಇದ್ದ ಪುಟ್ಟ ಕಾಣಿಕೆ ನನ್ನ ಮಗನಿಗೆ ಓರ್ವ ವ್ಯಕ್ತಿಯಿಂದ. ದಣಿದಿದ್ದ ಮಗನ ಮುಖ ಅರಳಿ ಅಲ್ಲೇ ಒಂದು ಚಿಕ್ಕ jig ಮಾಡಿ ಆ ವ್ಯಕ್ತಿಗೆ ಥ್ಯಾಂಕ್ ಯೂ ಹೇಳಿದ. ಪವಿತ್ರ ಕ್ಷೇತ್ರಗಳಾದ ಮಕ್ಕಾ ಮತ್ತು ಮದೀನಾ ಗಳಲ್ಲಿ ಇಂಥ ದೃಶ್ಯಗಳು ಸಾಮಾನ್ಯ ಎನ್ನಬಹುದು. ವಿಶ್ವದ ಹಲವೆಡೆಗಳಿಂದ ಬರುವ ಯಾತ್ರಾರ್ಥಿಗಳನ್ನು ಆದರಿಸುವುದು, ಉಡುಗೊರೆ ಕೊಡುವುದು, ಅವರಿಗೆ ಸಹಾಯ ಮಾಡುವುದು ಇಲ್ಲಿನ ಜನರಿಗೆ ಖುಷಿ ಕೊಡುತ್ತದೆ. ಈ ಕ್ಷೇತ್ರಗಳಿಗೆ ಬರುವವರ ಸೇವೆ ಮಾಡಿದರೆ ಪುಣ್ಯ ಹೆಚ್ಚು ಎನ್ನುವ ನಂಬಿಕೆ ಇರಬೇಕು ಜನರನ್ನು ಈ ರೀತಿ ಸೌಜನ್ಯಯುತವಾಗಿ ವರ್ತಿಸುವಂತೆ ಮಾಡುವುದು. ಕೆಲವೊಮ್ಮೆ ನಾನಂದು ಕೊಳ್ಳುತ್ತೇನೆ ಇದೇ ಸೌಜನ್ಯವನ್ನ ಜನ ಬರೀ ಪವಿತ್ರ ಕ್ಷೇತ್ರಗಳಿಗೆ ಮೀಸಲಿಡದೆ ತಾವು ಹೋದೆಡೆ ಮತ್ತು ಅವಶ್ಯಕತೆ ಇರುವೆಡೆ ಎಲ್ಲಾ ಮಾಡಬಾರದೇ ಎಂದು. ಏಕೆಂದರೆ ದೇವರು ಹೇಳುತ್ತಾನೆ, ಇಡೀ ಭೂಮಂಡಲವನ್ನೇ ನಾನು ನನ್ನ ಆರಾಧನೆಗೆಂದು ಹರಡಿಟ್ಟಿದ್ದೇನೆ ಎಂದು. ಮೇಲೆ ಹೇಳಿದ ಚಿಕ್ಕ ಪುಟ್ಟ gestures ಸಹ ಆರಾಧನೆಯ ಒಂದು ಅಂಗವೇ ತಾನೇ? ಹೀಗೆ ಯೋಚಿಸುತ್ತಾ ಪಾದರಕ್ಷೆಗಳನ್ನು ಕಳಚಿ ಬ್ಯಾಗಿನಲ್ಲಿರಿಸಿ ಮಸ್ಜಿದ್ ಪ್ರವೇಶಿ ಸಿ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಸುಮಾರು ಅರವತ್ತು ವರುಷ ಪ್ರಾಯದ, ಬಿಳಿ ಗಡ್ಡ ಬಿಟ್ಟ, ಶುಭ್ರ ಬಿಳಿ ಬಣ್ಣದ ನೀಳ ವಸ್ತ್ರ ಧರಿಸಿದ ವ್ಯಕ್ತಿಯೊಬ್ಬರು ಕೈಯ್ಯಲ್ಲಿ ಒಂದು ಚಿಕ್ಕ ಸುಗಂಧ ದ್ರವ್ಯದ ಬಾಟಲಿ ಹಿಡಿದು ತನ್ನನ್ನು ದಾಟಿ ಹೋಗುವವರ ಕೈಗಳಿಗೆ ಹಚ್ಚುತ್ತಾ ನಿಂತಿದ್ದರು. ಆ ವ್ಯಕ್ತಿಯ ಮುಖದಲ್ಲಿ ಅದೇನೋ ಧನ್ಯತಾ ಭಾವ. ನನ್ನ "ಸರ್ವಾಂತರ್ಯಾಮಿ" ಮಗ ಒಡ್ಡಿದ ತನ್ನ ಕೈಯ್ಯನ್ನೂ ತಾತನ ಸುಗಂಧ ದ್ರವ್ಯಕ್ಕಾಗಿ.
ಮೊನ್ನೆ ಬೆಳಿಗ್ಗೆ ಘಂಟೆ ಹತ್ತಾಗುತ್ತಿದ್ದಂತೆ ಹಸಿವು ಶುರುವಾಯಿತು. ಹತ್ತಿರವೇ ಇದ್ದ "ಬಕಾಲ" ಎಂದು ಕರೆಯಲ್ಪಡುವ ಚಿಕ್ಕ ಮಾರ್ಕೆಟ್ ಒಂದರೊಳಗೆ ಹೋಗಿ ಒಂದು ಖರ್ಜೂರದ ಕೇಕ್ ಮತ್ತು ನಿಂಬೆ ರಸ ತೆಗೆದು ಕ್ಯಾಶ್ ಕೌಂಟರ್ ಗೆ ಬಂದು ವಾಲೆಟ್ ತೆರೆದಾಗ ಒಂದು ಚಿಕ್ಕಾಸೂ ಇಲ್ಲ. ಕ್ರೆಡಿಟ್ ಕಾರ್ಡ್ ಮತ್ತು ಒಂದಿಷ್ಟು ಕಾಗದಗಳು ಮಾತ್ರ ಇದ್ದವು. ಛೆ, ಹಣ ತರಲು ಮರೆತೆನಲ್ಲಾ ಎನ್ನುತ್ತಾ ಕೈಯ್ಯಲ್ಲಿದ್ದ ಕೇಕ್, ಮತ್ತು ನಿಂಬೆ ರಸದ ಪ್ಯಾಕೆಟ್ ಅವುಗಳಿದ್ದ ಸ್ಥಳದಲ್ಲಿಡಲು ಹೋದಾಗ ಅಂಗಡಿಯವ ಕಾರಣ ಕೇಳಿದ. ಹಣ ತರಲು ಮರೆತೆ ಎಂದು ಹೇಳಿದಾಗ ನನಗೆ ಪರಿಚಯವಿಲ್ಲದ ಆ ಅಂಗಡಿಯ ಎಷ್ಟು ಹೇಳಿದರೂ ಕೇಳದೆ ಮತ್ತೆಂದಾದರೂ ಹಣ ತಂದು ಕೊಡುವಂತೆ ಹೇಳಿ ನನ್ನ ಬೆಳಗಿನ ತಿಂಡಿಯನ್ನು ನನಗೆ ನೀಡಿ ಕಳಿಸಿದ. ನೋಡಲು ಯಮನ್ ದೇಶದವನ ಥರ ಕಾಣುತ್ತಿದ್ದ ಅಂಗಡಿಯವ ನನಗೆ ಅಪರಿಚಿತ, ಆದರೂ ಹಣವಿಲ್ಲದಿದ್ದರೂ ನನಗೆ ಬೇಕಾದ್ದನ್ನು ಕೊಟ್ಟು ಕಳಿಸಿದ. ಈ ತೆರನಾದ ಘಟನೆಗಳು ಎದುರಾದಾಗ ಒಂದು ರೀತಿಯ ಸಂತಸ ಮನಸ್ಸಿಗೆ. ಕೆಲವೊಮ್ಮೆ ನಾನು ಹೋಗುವ ಪೆಟ್ರೋಲ್ ಬಂಕ್ ನ ಬಾಂಗ್ಲಾ ದೇಶದ ಹುಡುಗರಿಗೆ ತಂಪಾದ ಪಾನೀಯ ಕೊಡಿಸುತ್ತೇನೆ. ಬಿಸಿಲಿನ ಬೇಗೆ ಯಲ್ಲಿ ಬೇಯುತ್ತಾ ಕೆಲಸ ಮಾಡುವ ಹುಡುಗರ ಮೊಗದಲ್ಲಿ ತಂಪು ಪಾನೀಯ ಸಿಕ್ಕಾಗ ನೋಡ ಸಿಗುವ ಮುಗುಳ್ನಗು ಮನಸ್ಸಿಗೆ ಖುಷಿ ಕೊಡುತ್ತದೆ. ಯಾಂತ್ರಿಕ ಬದುಕಿನಲ್ಲಿ ಇಂಥ ಮಾಂತ್ರಿಕ ಕ್ಷಣಗಳು ನಮ್ಮೆದುರು ಬಂದಾಗ ಯಾರಿಗೆ ತಾನೇ ಸಂತಸವಾಗದಿರಲು ಸಾಧ್ಯ?
ಅಮೆರಿಕೆಯ ಯುವತಿಯೊಬ್ಬಳು ತನ್ನ ಬ್ಲಾಗ್ ನಲ್ಲಿ ಹೀಗೆ ಬರೆದಿದ್ದಳು.
"ಪ್ರತೀ ತಿಂಗಳೂ ಅಥವಾ ಎರಡು ತಿಂಗಳಿಗೊಮ್ಮೆಯಾದರೂ ನಾನು ಕಾಫಿಗೆಂದು drive in ಕಾಫೀ ಶಾಪ್ ಗೆ ಹೋದರೆ ನನ್ನ ಹಿಂದಿರುವ ಕಾರಿನವರ ಕಾಫಿಯ ಹಣವನ್ನೂ ಕೊಟ್ಟು ಹೋಗುತ್ತೇನೆ. ಅದೇ ರೀತಿ ಪಟ್ಟಣ ಬಿತ್ತು ಹೊರಕ್ಕೆ ಹೋದಾಗಲೂ toll gate ಹಣವನ್ನು ನನ್ನ ಹಿಂದೆ ಇರುವ ಕಾರಿಗೂ ಸೇರಿಸಿ ಕೊಟ್ಟು ಮುಂದೆ ಹೋಗುತ್ತೇನೆ. ಇದು ನನಗೆ ಆನಂದವನ್ನು ಕೊಡುವ ಕೃತ್ಯಗಳು. ಒಮ್ಮೆ ಹೀಗೆಯೇ drive in ಕಾಫೀ ಶಾಪ್ ನಲ್ಲಿ ನನ್ನ ಹಿಂದಿನ ಕಾರಿನಲ್ಲಿದ್ದ ಮಹಿಳೆಯ ಕಾಫಿಗೂ ಹಣ ಕೊಟ್ಟು ಹೋದೆ. ಸ್ವಲ್ಪ ದೂರ ಹೋದ ನಂತರ ಆ ಮಹಿಳೆ ನನ್ನನ್ನು ಹಿಂಬಾಲಿಸುತ್ತಿದ್ದಳು. ಒಂದು ಕಡೆ ಸಿಗ್ನಲ್ ಹತ್ತಿರ ಕಾರನ್ನು ನಿಲ್ಲಿಸಿದಾಗ ಆಕೆ ತನ್ನ ಕಾರನ್ನು ಪಕ್ಕಕ್ಕೆ ನಿಲ್ಲಿಸಿ, ಕಿಟಕಿಯ ಗಾಜನ್ನು ಕೆಳಗಿಳಿಸಿ, ಕಾಫಿ ಕಪ್ಪನ್ನು ಎತ್ತಿ ಹಿಡಿದು ಹೇಳಿದಳು, " ವಂದನೆಗಳು, ನಾನು ನಿರುದ್ಯೋಗಿ, ಈ ಕಾಫಿ ನನಗೆ ದುಬಾರಿಯಾದರೂ ಇಂದು ಕುಡಿಯುವ ಮನಸ್ಸಾಯಿತು. ಆದರೆ ಅದರ ಹಣವನ್ನು ನೀನು ಪಾವತಿಸಿದೆ" ಎಂದು ಆಕೆ ಹೇಳುವಾಗ ಆಕೆಯ ಕಣ್ಣುಗಳು ತುಂಬಿತ್ತು. ಈಕೆಯ ಮಾತು, ಮತ್ತು ಆಕೆಯ ಭಾವನೆಗಳನ್ನು ನೋಡಿ ನಾನು ತಬ್ಬಿಬ್ಬಾದೆ, ಇಷ್ಟೊಂದು ಚಿಕ್ಕ ಒಂದು ವಿಷಯ ಆಕೆಗೆ ಎಷ್ಟೊಂದು ಸಂತೋಷವನ್ನು ಕೊಟ್ಟಿತು, ಕೆಲಸ ಹುಡುಕಿ ನಡೆಯುತ್ತಿರುವ ಈಕೆಗೆ ಕೆಲಸ ಸಿಗಲಿ ಎಂದು ಹಾರೈಸುತ್ತಾ ನನ್ನ ಕಾರನ್ನು ಮುನ್ನಡೆಸಿದೆ".
Comments
ಉ: ಚಿಕ್ಕ ಪುಟ್ಟ ಸೌಜನ್ಯಗಳು
ಉ: ಚಿಕ್ಕ ಪುಟ್ಟ ಸೌಜನ್ಯಗಳು
ಉ: ಚಿಕ್ಕ ಪುಟ್ಟ ಸೌಜನ್ಯಗಳು
In reply to ಉ: ಚಿಕ್ಕ ಪುಟ್ಟ ಸೌಜನ್ಯಗಳು by manju787
ಉ: ಚಿಕ್ಕ ಪುಟ್ಟ ಸೌಜನ್ಯಗಳು
In reply to ಉ: ಚಿಕ್ಕ ಪುಟ್ಟ ಸೌಜನ್ಯಗಳು by abdul
ಉ: ಚಿಕ್ಕ ಪುಟ್ಟ ಸೌಜನ್ಯಗಳು
ಉ: ಚಿಕ್ಕ ಪುಟ್ಟ ಸೌಜನ್ಯಗಳು
ಉ: ಚಿಕ್ಕ ಪುಟ್ಟ ಸೌಜನ್ಯಗಳು