ಪರಿಸರಪ್ರಿಯ ಕಾಂಕ್ರೀಟು

ಪರಿಸರಪ್ರಿಯ ಕಾಂಕ್ರೀಟು

ಬರಹ

ಪರಿಸರಪ್ರಿಯ ಕಾಂಕ್ರೀಟು
ಮಾಮೂಲಿ ಕಾಂಕ್ರೀಟು ಪರಿಸರಸ್ನೇಹಿಯಂತೂ ಅಲ್ಲ.ಆದರೀಗ ಹೊಸ ನಮೂನೆಯ ಕಾಂಕ್ರೀಟು ತಯಾರಿಸಲು ಸಂಶೋಧಕರಿಗೆ ಸಾಧ್ಯವಾಗಿದೆ.ನೆದರ್ಲ್ಯಾಂಡಿನ ಐಂಡ್‌ಹೋವನ್ ತಾಂತ್ರಿಕ ವಿವಿಯ ಸಂಶೋಧಕರು ಕಾಂಕ್ರೀಟಿಗೆ ಹೊಸ ವಸ್ತುವೊಂದನ್ನು ಸೇರಿಸಿ,ಅದು ವಾತಾವರಣದಲ್ಲಿರುವ ನೈಟ್ರಸ್ ಆಕ್ಸೈಡುಗಳನ್ನು ಹೀರಿಕೊಂಡು,ಅದನ್ನು ನೈಟ್ರೇಟುಗಳಾಗಿ ಪರಿವರ್ತಿಸುತ್ತವೆ.ಈ ಕಾಂಕ್ರೀಟನ್ನು ರಸ್ತೆ ಮಾಡಲೂ ಬಳಸಬಹುದು.ಡಾಮರಿನ ಜತೆ ಮಿಶ್ರ ಮಾಡಿ,ರಸ್ತೆಗಳನ್ನು ಮಾಡಲು ಸಾಧ್ಯವಾಗುವುದರ ಜತೆಗೆ,ಇವನ್ನು ಗೋಡೆಗಳನ್ನು ಕಟ್ಟಲೂ ಬಳಸಬಹುದು.ಕಾಂಕ್ರೀಟನ್ನು ಪರಿಸರಸ್ನೇಹಿಯಾಗಿಸುವ ರಾಸಾಯಿನಿಕ ಯಾವುದು ಎಂದು ನಿಮಗೆ ಕುತೂಹಲವೇ? ಟೈಟಾನಿಯಮ್ ಆಕ್ಸೈಡ್ ಎನ್ನುವ ಕ್ರಿಯಾವರ್ಧಕ ರಾಸಾಯಿನಿಕವೇ,ಸೂರ್ಯನ ಬೆಳಕಿನಲ್ಲಿ,ನೈಟ್ರೋಜನ್ ಆಕ್ಸೈಡುಗಳನ್ನು ನೈಟ್ರೇಟುಗಳಾಗಿ ಪರಿವರ್ತಿಸುತ್ತವೆ.ಟೈಟಾನಿಯಮ್ ಆಕ್ಸೈಡು ಪೈಂಟ್ ತಯಾರಿಕೆಯಲ್ಲೂ ಬಳಕೆಯಾಗುವುದಿದೆ.ಹೆಂಜೆಲೋ ಎನ್ನುವ ನೆದರ್ಲ್ಯಾಂಡಿನ ನಗರದ ರಸ್ತೆಯಲ್ಲಿ ಈ ಹೊಸ ಕಾಂಕ್ರೀಟಿನ ರಸ್ತೆ ನಿರ್ಮಿಸಿ,ಅದರಿಂದ ಒಂದೂವರೆ ಮೀಟರ್ ಎತ್ತರದಲ್ಲಿ ಗಾಳಿಯ ಪರಿಶುದ್ಧತೆ ಅಳೆಯಲಾಯಿತು.ಇದೇ ರೀತಿ ಮಾಮೂಲಿ ಕಾಂಕ್ರೀಟು ಹಾಕಿದ ರಸ್ತೆಯಲ್ಲೂ ಮಾಡಿದಾಗ,ಪರಿಸರಸ್ನೇಹಿ ಕಾಂಕ್ರೀಟು ಪ್ರಯೋಜನಕಾರಿ ಎನ್ನುವುದು ಸಿದ್ಧವಾಯಿತು.ಹೊಸ ಕಾಂಕ್ರೀಟು ದುಬಾರಿಯಾಗುತ್ತದೆ ಎನ್ನುವುದನ್ನು ನೀವಿದೀಗಲೇ ಊಹಿಸಿದ್ದರೆ,ಅದು ಖಂಡಿತಾ ಸರಿ.ನಗರಗಳಲ್ಲಿ,ವಾಹನಗಳ ಓಡಾಟದಿಂದ ವಾತಾವರಣದಲ್ಲಿ ನೈಟ್ರೋಜನ್ ಆಕ್ಸೈಡುಗಳ ಮಟ್ಟ ಏರಿ,ಅದರಿಂದ ಆಮ್ಲಮಳೆ ಉಂಟಾಗುವಂತಹ ಸಮಸ್ಯೆಗಳಿಗೆ ಇದು ತಕ್ಕ ಮಟ್ಟಿನ ಪರಿಹಾರ ಒದಗಿಸುವಂತಾಗಬೇಕಾದರೆ,ನಮ್ಮ ಕಾಂಕ್ರೀಟು ಕಾಡುಗಳು ಹೊಸ ಕಾಂಕ್ರೀಟಿನಿಂದ ನಿರ್ಮಿತವಾಗಿರಬೇಕಾಗುತ್ತದೆ.
------------------------------
ಟ್ವಿಟರ್ ಚಿಲಿಪಿಲಿ
*ಬಿಲ್ ಗೇಟ್ಸ್‌ರ ಮೈಕ್ರೋಸಾಫ್ಟ್ ಕಂಪೆನಿಯು ಸದಾ ಭಾರೀ ಲಾಭದಲ್ಲಿರೋದು ಹೇಗೆ? ಕಂಪೆನಿ ವಿಂಡೋಸ್ ಪೂರೈಸಿ,ಗೇಟ್ಸ್‌ಗಳಿಗೆ ಬಿಲ್ಲು ಮಾಡ್ತದೆ ನೋಡಿ,ಅದಕ್ಕೆ...

----------------------------------------------
ಗೂಗಲ್ ವೇವ್:ಅಲೆಯಾಗದ ಕಲರವ
ಗೂಗಲ್ ವೇವ್ ಎನ್ನುವ ಅಂತರ್ಜಾಲ ಸೇವೆ ಸದ್ದಿಲ್ಲದೆ ಮರೆಯಾಗಲಿದೆ.ಇದರ ಅಭಿವೃದ್ಧಿ ಕಾರ್ಯಕ್ಕೆ ವಿದಾಯ ಹೇಳಲು ಗೂಗಲ್ ನಿರ್ಧರಿಸಿದೆಯಂತೆ.ಇದರ ಪ್ರಯೋಗಾರ್ಥ ಪರೀಕ್ಷೆಯ ವೇಳೆ ಇದನ್ನು ಆಯ್ದ ಕೆಲವರಿಗಷ್ಟೇ ಒದಗಿಸಲಾಗಿತ್ತು.ಅದನ್ನು ಬಳಸಲು ಅವರುಗಳು ಕೆಲವರನ್ನು ಆಹ್ವಾನಿಸುವ ಸೌಲಭ್ಯವೂ ಇತ್ತು.ಹೀಗಾಗಿ, ವೇವ್ ಆಹ್ವಾನ ಪಡೆಯಲು ಬಹಳ ಮೇಲಾಟ ನಡೆಯಿತು.ಜನರು ವೇವ್ ಮುಂದಿನ ಭಾರೀ ಹಿಟ್ ಸೇವೆಯಾಗಲಿದೆ-ಇದು ಬಹು ಜನಪ್ರಿಯವಾಗಲಿದೆ ಎಂದು ಭಾವಿಸಿದರು.ಆದರಿದನ್ನು ಬಳಸುವುದು ತುಸು ತ್ರಾಸದಾಯಕವೇ ಆಗಿತ್ತು.ಆರಂಭದ ಉತ್ಸಾಹ ದಿನೇ ದಿನೇ ಇಳಿಯಹತ್ತಿತು.ವೇವ್ ಚೆನ್ನಾಗಿದೆ,ಆದರಿದು ತುಸು ಬೇಗನೆ ಲಭ್ಯವಾಯಿತು.ಅದಕ್ಕೆ ಕಾಲವಿನ್ನೂ ಪಕ್ವವಾಗಿಲ್ಲ ಎಂದವರೂ ಇದ್ದರು.ಕೊನೆಗೆ ಕೊನೆಗೆ ವೇವ್‌ನ ಆಹ್ವಾನ ಪಡೆಯುವ ಉತ್ಸಾಹಿಗಳೇ ಇರಲಿಲ್ಲ.ಇದು ಒಂದು ತಮಾಷೆಯ ವಿಷಯವೇ ಆಯಿತು.ಗೂಗಲ್ ವೇವ್‌ನ ವಿಶೇಷತೆಯೆಂದರೆ, ಜನರು ಯಾವುದೇ ವಿಷಯದಲ್ಲಿ ಸಹಭಾಗಿಗಳಾಗಿ ವಿಚಾರ ವಿನಿಮಯ ನಡೆಸುವಂತಹ ಅನುಕೂಲ.
------------------------------------------------------
ಜೆಡ್-ಐ ಎನ್ನುವ ವಿನೂತನ ಕಾರ್ಯಕ್ರಮ
ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸುಮ್ಮನೆ ವಿಷಯಗಳನ್ನು ಕಲಿತರೆ ಪ್ರಯೋಜನವಿಲ್ಲ.ಅದನ್ನು ಬಳಸಿಕೊಂಡು,ಜನರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡಬೇಕಿದೆ.ಸಾಧನಗಳನ್ನು ವಿನ್ಯಾಸ ಮಾಡುವುದು,ಅವನ್ನು ರಚಿಸುವುದು ಅಥವಾ ತಯಾರಿಸುವುದು,ತೊಂದರೆಗಳನ್ನು ಹೋಗಲಾಡಿಸುವುದು,ಅಗತ್ಯವೆನಿಸಿದರೆ ಬದಲಾವಣೆಗಳನ್ನು ಮಾಡುವುದು,ಅವುಗಳ ಹರವನ್ನು ವಿಸ್ತರಿಸುವುದು ಅಗತ್ಯವಾಗಿದೆ.ಜೆಡ್-ಐ ಎನ್ನುವ ಅಪ್ರೆಂಟಿಸ್ ಕಾರ್ಯಕ್ರಮವು ಇಂತಹದ್ದನ್ನು ಮಾಡಲು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮ.ಲಿಂಬರ್‌ಲಿಂಕ್ ಸಂಸ್ಥೆಯ ಸ್ವಾಮಿ ಮನೋಹರ್ ಇದರ ಉಸ್ತುವಾರಿ ವಹಿಸಿದ್ದಾರೆ.ಇವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಯನ್ಸ್‌ನ ನಿವೃತ್ತ ಪ್ರೊಫೆಸರ್,ಕಿರು ಗಣಕ ಸಿಂಪ್ಯೂಟರ್‌ನ ವಿನ್ಯಾಸಕಾರರಲ್ಲಿ ಒಬ್ಬರು.ವಿವರಗಳಿಗೆ http://www.jed-i.in ನೋಡಬಹುದು.
----------------------------------------------------
ರೈಲು ಟಿಕೆಟ್:ಸುಧಾರಿತ ತಾಣ


ರೈಲು ಟಿಕೆಟ್ ಕಾದಿರಿಸಲು ರೈಲ್ವೇ ಕ್ಯಾಟರಿಂಗ್ ಸೇವೆ ನೀಡುವ ಐಆರ್‌ಸಿಟಿಸಿ ಅಂತರ್ಜಾಲತಾಣವನ್ನು ಬಳಸಬಹುದು.ಈ ತಾಣದ ಬೀಟಾ ಆವೃತ್ತಿಯೀಗ ಲಭ್ಯ.ಇಲ್ಲಿ ಅಜಾಕ್ಸ್ ಎನ್ನುವ ತಂತ್ರಜ್ಞಾನ ಬಳಸುವ ಮೂಲಕ,ಬಳಕೆದಾರರಿಗೆ ಉತ್ತಮ ಪ್ರತಿಸ್ಪಂದನ ಸಿಗುತ್ತದೆ.ಮೌಸ್ ಆಡಿಸುವಾಗಲೇ ವಿವಿಧ ವಿಷಯಗಳು ಸಿಗುವಂತೆ,ಕ್ಲಿಕ್ಕಿಸಿ ಬಹಳ ಹೊತ್ತಿನ ನಂತರ ಪ್ರತಿಕ್ರಿಯೆ ಬರುವಂತಹದರ ಬದಲು ತಕ್ಷಣ ಬೇಕಾದ ವಿವರ ಕಾಣಿಸುವಂತೆ ತಾಣವನ್ನು ರೂಪಿಸಲಾಗಿದೆ.ಮೊದಲಿಗೆ ಈ ತಾಣ ಭಾರೀ ನಿಧಾನದ ಪ್ರತಿಕ್ರಿಯೆ ನೀಡುತ್ತಿತ್ತು.ಈಗ ಹಿಂದಿನದಕ್ಕಿಂತ ಹತ್ತು ಪಟ್ಟು ಶೀಘ್ರ ಪ್ರತಿಸ್ಪಂದನ ಬರುತ್ತದೆ ಎಂದು ಕೆಲವು ಬಳಕೆದಾರರು ಅಭಿಪ್ರಾಯ ಪಡುವಷ್ಟು,ತಾಣ ಸುಧಾರಿಸಿದೆ.
----------------------------------------------------------
ಉಪಗ್ರಹ ಮಾಹಿತಿ ಬಳಸಿ ಸುನಾಮಿ ಮುನ್ಸೂಚನೆ


ಸಮುದ್ರದಲ್ಲಿ ಭೂಕಂಪ ಸಂಭವಿಸಿದ ನಂತರ,ಸುನಾಮಿ ಅಪ್ಪಳಿಸಿ ಸಮುದ್ರ ತಟಕ್ಕೆ ಅಪ್ಪಳಿಸುವ ಸಮಸ್ಯೆ ಬಗ್ಗೆ ಎಲ್ಲರಿಗೂ ಗೊತ್ತು.ಇದರ ಮುನ್ಸೂಚನೆ ನೀಡಲು,ಸಮುದ್ರ ಅಲೆಗಳ ಶಕ್ತಿ ಅಳೆಯುವುದು,ಸಾಗರ ತಟದಲ್ಲಿನ ಒತ್ತಡವನ್ನು ಅಳೆಯುವುದು ಮುಂತಾದ ವಿಧಾನಗಳನ್ನು ಅನುಸರಿಸುವುದಿದೆ.ಆದರೆ ಇದರ ಮೂಲಕ ಸುನಾಮಿ ಮುನ್ಸೂಚನೆ ಅಷ್ಟೇನೂ ನಿಖರವಲ್ಲ. ಈಗ ಉಪಗ್ರಹ ಆಧಾರಿತ ಸುನಾಮಿ ಮುನ್ಸೂಚನೆ ನೀಡುವ ಬಗ್ಗೆ ಸಂಶೋಧನೆ ನಡೆದಿದೆ.ಇದರಲ್ಲಿ ಈಗಾಗಲೇ ಲಭ್ಯವಿರುವ ಜಿಪಿಆರೆಸ್ ಉಪಗ್ರಹಗಳ ಮೂಲಕ, ಭೂಮಿಯ ವಾತಾವರಣದ ಅಯಾನೋಸ್ಪಿಯರ್ ಎನ್ನುವ ಪದರದಲ್ಲಿ ಆಗುವ ಬದಲಾವಣೆಗಳನ್ನು ಅಳೆದು ಸುನಾಮಿ ಮುನ್ಸೂಚನೆ ನೀಡಲಾಗುತ್ತದೆ.ಇದು ಹೆಚ್ಚು ಶೀಘ್ರ ಮತ್ತು ನಿಖರವಾಗಿರುವುದಂತೆ.ಫ್ರಾನ್ಸಿನ ಇನ್‌ಸ್ಟಿಟ್ಯೂಟ್ ಆಫ್ ಜಿಯೋಫಿಸಿಕ್ಸ್‍ನ ಸಂಶೋಧಕರು ಈ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ.ಹಿಂದಿನ ಸುನಾಮಿ ವೇಳೆಯಲ್ಲಿ ಜಿಪಿಆರೆಸ್ ಉಪಗ್ರಹಗಳು ದಾಖಲಿಸಿರುವ ಮಾಹಿತಿಗಳು ಸುನಾಮಿ ಸೂಚನೆಯಲ್ಲಿ,ಈ ವಿಧಾನ ಯಶಸ್ವಿಯಾಗಬಹುದು ಎನ್ನುವುದನ್ನು ಪುಷ್ಟೀಕರಿಸುತ್ತವಂತೆ.
udayavani----------------------------------------------------udayavani bangalore
*ಅಶೋಕ್‌ಕುಮಾರ್ ಎ
udayavani