ಶ್ರಾವಣ ಮಾಸದ ಸಂಭ್ರಮ
"ಶ್ರಾವಣ ಬಂತು ಕಾಡಿಗೆ,
ಬಂತು ನಾಡಿಗೆ,
ಬಂತು ಬೀಡಿಗೆ,
ಓ, ಬಂತು ಶ್ರಾವಣ" ಕವಿ ಬೇಂದ್ರೆಯವರ ಈ ಕವನದಲ್ಲಿ ಶ್ರಾವಣದ ಸಂಭ್ರಮ ಗರಿಬಿಚ್ಚಿ ಹಾರಾಡಿದೆ. ಈ ದಿನಗಳಲ್ಲಿ ಈ ಹಾಡನ್ನು ಗುನುಗುನಿಸದಿರಲು ನನ್ನಿಂದಂತೂ ಸಾಧ್ಯವೇ ಇಲ್ಲ. ವರ್ಷಋತುವಿನೊಡನೆ ಶ್ರಾವಣಮಾಸ ಧರೆಗೆ ಕಾಲಿಟ್ಟಿತೆಂದರೆ ಆಷಾಢದ ಜಡತೆ ಪಲಾಯನಗೈಯ್ಯುತ್ತದೆ.ಭೋರೆಂದು ಸುರಿವ ಮಳೆ, ಹಸಿರು ಸೀರೆಯನುಟ್ಟು ಬಣ್ಣಬಣ್ಣದ ಹೂಗಳ ತೊಟ್ಟ ಪ್ರಕೃತಿದೇವಿಯ ವೈಭವ ಈ ಮಾಸಕ್ಕೆ ವಿಶೇಷವಾದ ಕಳೆ ನೀಡುತ್ತದೆ. ಪೇಟೆಯಲ್ಲಿ ಹಲವು ಬಗೆಯ ಫಲಪುಷ್ಪಗಳ ಆಗಮನ.ಮನೆಮನೆಗಳಲ್ಲಿ ದಿನಕ್ಕೊಂದು ಹಬ್ಬ-ವ್ರತಗಳೆಂದು ಸಂತಸ.ಜರಿತಾರಿ ಸೀರೆಯನ್ನುಟ್ಟು ಸಂಭ್ರಮಿಸುವ ಹೆಂಗೆಳೆಯರು ಕಣ್ಮನ ತುಂಬುತ್ತಾರೆ.ಇದೆಲ್ಲವೂ ಶ್ರಾವಣಮಾಸದ ವೈಶಿಷ್ಟ್ಯಗಳು.ಈ ಮಾಸದಲ್ಲಿ ಬರುವ ಹಬ್ಬಗಳ ಅವಲೋಕನ ಮಾಡಿದಾಗ ಒಡಹುಟ್ಟಿದವರ ಸಂಬಂಧವನ್ನು ಗಟ್ಟಿಗೊಳಿಸುವ ಹಬ್ಬಗಳ ಆಚರಣೆ ಹೆಚ್ಚಾಗಿ ಕಂಡುಬರುತ್ತದೆ. ಅಣ್ಣ-ತಮ್ಮ,ಅಕ್ಕ-ತಂಗಿಯರು ಎಲ್ಲಿದ್ದರೂ ಮರೆಯದೆ ಪರಸ್ಪರ ಶುಭಕೋರುವ ತಿಂಗಳಿದು. ತವರಿನ ಸಂಬಂಧವನ್ನು ಉಳಿಸಿ ಬೆಳೆಸಲು ಸಹಕಾರಿಯಾದ ಹಬ್ಬಗಳು ಶ್ರಾವಣಸಂಭ್ರಮಕ್ಕೆ ಗರಿ ಮೂಡಿಸಿದೆ.ಭ್ರಾತೃಪ್ರೇಮವನ್ನು ಬಿಂಬಿಸುವ ಒಂದೆರಡು ಹಬ್ಬಗಳತ್ತ ಗಮನಹರಿಸೋಣ.
ಭೀಮನ ಅಮಾವಾಸ್ಯೆ ಶ್ರಾವಣಕ್ಕೆ ಮುನ್ನುಡಿ ಬರೆವ ಹಬ್ಬ. ಈ ದಿನ ಕುಮಾರಿಯರು ಒಳ್ಳೆಯ ಗಂಡನಿಗಾಗಿ ಬೇಡಿಕೊಳ್ಳುವ ದಿನ. ಹಾಗೆಯೇ ಮದುವೆಯಾದ ಹೆಣ್ಣುಮಕ್ಕಳು ತಮ್ಮ ಪತಿಯ ಏಳಿಗೆ ಮತ್ತು ಧೀರ್ಘಾಯಸ್ಸನ್ನು ಕೋರುವುದು ವಿಶೇಷವಾದರೂ ತಮ್ಮ ಸೋದರನನ್ನು ಕರೆಸಿ, ಹೊಸಿಲ ಮೇಲೆ ಹೂರಣದಿಂದ ತಯಾರಿಸಿದ ಭಂಡಾರವನ್ನು ಒಡೆಸಿ,ಅವರಿಗೆ ಉಡುಗೊರೆ ನೀಡಿ ತಮ್ಮ ನಡುವಿನ ಆತ್ಮೀಯತೆಯ ಬೆಸುಗೆಯನ್ನು ಬಲಗೊಳಿಸುವ ಪರಂಪರೆ ಸಹ ನಮ್ಮಲ್ಲಿದೆ.
"ನಾಗರಪಂಚಮಿ ನಾಡಿಗೆ ದೊಡ್ಡದು
ನಾರಿಯರೆಲ್ಲರೂ ನಲಿದಾಡಿ" ಎಂಬುದು ಜನಪ್ರಿಯ ಗೀತೆ. ಶ್ರಾವಣದ ಶುಕ್ಲಪಕ್ಷದ ಚೌತಿ,ಪಂಚಮಿ,ಷಷ್ಠಿ ದಿನದಂದು ನಾಗಪ್ಪನಿಗೆ ತನಿ ಎರೆಯುವ ಸಂಪ್ರದಾಯವಿದೆ.ಇದರಲ್ಲಿ ನಾಗರಪಂಚಮಿಗೆ ಭಾವನಾತ್ಮಕವಾದ ಸಂಬಂಧವಿದೆ. ಗ್ರಾಮಾಂತರ ಪ್ರದೇಶದಲ್ಲಿ ಪಂಚ್ಮಿಹಬ್ಬವೆಂದು ಹೆಸರುಪಡೆದಿದೆ. ಪಂಚ್ಮಿಹಬ್ಬ ಬಂದಿದೆ, ಅಣ್ಣ ಬರಲಿಲ್ಲ ಕರೆಯಾಕ ಇನ್ನೂ, ಎಂದು ತೌರಿನ ಕರೆಯನ್ನು ಹೆಂಗಳೆಯರು ಕಾತರದಿಂದ ಕಾಯುವ ಹಬ್ಬವಿದು.ನಾಗರಪಂಚಮಿಯಂದು ನಾಗರಕಲ್ಲಿಗಾಗಲೀ ಅಥವಾ ಹುತ್ತಕ್ಕಾಗಲೀ ಭಕ್ತಿಯಿಂದ ಪೂಜಿಸಿ,ಹಾಲುತುಪ್ಪದ ತನಿ ಎರೆದು,ಅರಿಶಿನದ ದಾರವನ್ನು ಬಲಗೈಗೆ ಕಟ್ಟಿಕೊಳ್ಳುವುದು ಪದ್ಧತಿ. ಈ ಪುಣ್ಯದಿನದಂದು ನಾಗರಿಗೆ ತನಿ ಎರೆದು ತಾಯಿಯ ಎದೆಹಾಲಿನ ಋಣವನ್ನು ತೀರಿಸುವ ಆಶಯವಿದೆ. ಈದಿನ ಹೆಣ್ಣುಮಕ್ಕಳು ತನ್ನ ಸೋದರನ ಬೆನ್ನು ತೊಳೆದು. ಬೆನ್ನು ಮತ್ತು ನಾಭಿಗೆ, ನಾಗನಿಗೆ ನೈವೇದ್ಯ ಮಾಡಿದ ಹಾಲುತುಪ್ಪವನ್ನು ಹಚ್ಚಿ, ಅವರಿಗೆ ಶುಭಹಾರೈಸಿ,ಸಮೃದ್ಧಿ,ಶ್ರೇಯಸ್ಸನ್ನು ಕೋರುತ್ತಾಳೆ. ತನ್ನ ತೌರಿನ ಬಳ್ಳಿ ಅಭಿವೃದ್ಧಿ ಹೊಂದಲಿ ಎಂದು ಆಶಿಸುತ್ತಾಳೆ. ತನ್ನ ಶ್ರೇಯಸ್ಸನ್ನು ಬಯಸುವ ಸೋದರಿಗೆ ಉಡುಗೊರೆ ನೀಡಿ ಸೌಭಾಗ್ಯವತಿಯಾಗುವಂತೆ ಅಣ್ಣ ಹಾರೈಸುತ್ತಾನೆ. ಇದು ನಮ್ಮ ಹಿರಿಯರಿಂದ ಹರಿದು ಬಂದ ಅರ್ಥಪೂರ್ಣವಾದ ಪದ್ಧತಿ.ಪಂಚಮಿಯ ಎಲ್ಲರ ಬಾಯಲ್ಲೂ ನೀರೂರಿಸುವ ಉಂಡೆ,ಚಕ್ಕುಲಿಗಳೂ ಈ ಹಬ್ಬದ ವಿಶೇಷ.
ಶ್ರಾವಣ ಶುಕ್ಲ ಪೂರ್ಣಿಮೆಯಲ್ಲಿ ರಕ್ಷಾಬಂಧನ್ ಅಥವಾ ರಾಖಿಹಬ್ಬ ಬರುತ್ತದೆ. ಈದಿನ ’ರಕ್ಷೋಪವೀತಂ ಬಲಮಸ್ತು ತೇಜಃ’ ಎಂದು ಸಹೋದರಿ ತನ್ನ ಸಹೋದರನಿಗೆ ರಾಖಿ ಕಟ್ಟಿ, ಆರತಿ ಬೆಳಗಿ ಆತನಿಗೆ ಸಿಹಿ ತಿನ್ನಿಸಿ ರಕ್ಷಣೆಯನ್ನು ಕೋರುತ್ತಾಳೆ.ಆಕೆ ತನ್ನ ಮೇಲಿಟ್ಟ ನಂಬಿಕೆಗೆ ಬದ್ಧನಾದ ಸೋದರ,ಆಕೆಗೆ ಉಡುಗೊರೆ ನೀಡಿ ಒತ್ತಾಸೆಯಾಗಿ ನಿಲ್ಲುವ ಭರವಸೆಯನ್ನು ನೀಡುತ್ತಾನೆ.ಆದರೆ ಇಂದಿನ ದಿನಗಳಲ್ಲಿ ಹೆಣ್ಣು ಗಂಡೆಂಬ ಭೇದವಿಲ್ಲದೆ ತಮ್ಮ ಸ್ನೇಹಿತರಿಗೆ,ಆಪ್ತಬಂಧುಮಿತ್ರರಿಗೆ ರಾಖಿ ಕಟ್ಟಿ ಅಥವಾ ಅಂಚೆ ಮೂಲಕ ರಾಖಿಯನ್ನು ರವಾನಿಸಿ ಪರಸ್ಪರ ವಿಶ್ವಾಸ ತೋರ್ಪಡಿಸುವುದನ್ನು ಕಾಣುತ್ತಿದ್ದೇವೆ. ಇದರಿಂದಾಗಿ ಇಂದಿನ ದಿನಗಳಲ್ಲಿ ರಕ್ಷಾಬಂಧನ ವಿಶ್ವ ಭ್ರಾತೃತ್ವದ ಪ್ರತೀಕವಾಗುತ್ತಿದೆ ಎಂದರೆ ತಪ್ಪಿಲ್ಲ.
ಶ್ರಾವಣಮಾಸದ ಈ ಎಲ್ಲಾ ಹಬ್ಬಗಳ ಆಚರಣೆಯ ಮೂಲಕ ಒಡಹುಟ್ಟಿದವರಲ್ಲಿ ಮಧುರ ಭಾಂಧವ್ಯವನ್ನು ಬೆಸೆಯುವ ಮುಖ್ಯ ಆಶಯವನ್ನು ಕಾಣಬಹುದು. ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಪಾಲು ಕೊಡಬೇಕೆಂಬ ಕಾನೂನು, ನಮ್ಮ ಹಿಂದಿನವರ ಈ ಎಲ್ಲಾ ಆಶಯಗಳನ್ನು ಬದಿಗೆ ಸರಿಸುತ್ತಿದೆಯೇನೋ ಎನ್ನಿಸದಿರದು. ಪ್ರೀತಿ,ಮಮತೆ ,ವಾತ್ಸಲ್ಯಗಳನ್ನು ಕೇವಲ ಕಾನೂನಿನಿಂದ ಪಡೆಯಲು ಖಂಡಿತ ಸಾಧ್ಯವಿಲ್ಲ. ಆದರೆ ಈ ರೀತಿಯ ಹಬ್ಬಗಳ ಆಚರಣೆ ಪರಸ್ಪರ ಪ್ರೀತಿ,ವಿಶ್ವಾಸವನ್ನು ಬೆಸೆಯುವುದರಲ್ಲಿ ಸಂಶಯವಿಲ್ಲ.
Comments
ಉ: ಶ್ರಾವಣ ಮಾಸದ ಸಂಭ್ರಮ
ಉ: ಶ್ರಾವಣ ಮಾಸದ ಸಂಭ್ರಮ
ಉ: ಶ್ರಾವಣ ಮಾಸದ ಸಂಭ್ರಮ
In reply to ಉ: ಶ್ರಾವಣ ಮಾಸದ ಸಂಭ್ರಮ by kavinagaraj
ಉ: ಶ್ರಾವಣ ಮಾಸದ ಸಂಭ್ರಮ
ಉ: ಶ್ರಾವಣ ಮಾಸದ ಸಂಭ್ರಮ
In reply to ಉ: ಶ್ರಾವಣ ಮಾಸದ ಸಂಭ್ರಮ by sreeedhar
ಉ: ಶ್ರಾವಣ ಮಾಸದ ಸಂಭ್ರಮ
In reply to ಉ: ಶ್ರಾವಣ ಮಾಸದ ಸಂಭ್ರಮ by vinyasa
ಉ: ಶ್ರಾವಣ ಮಾಸದ ಸಂಭ್ರಮ