ಕಾಲಯಾನದಲ್ಲಿ ಪಯಣ ಸನ್ಮಾನ್ಯ ಎಚ್ ಎಸ ವಿ ಯವರ " ಅಭ್ಯಾಸ 5" 15.08.2010

ಕಾಲಯಾನದಲ್ಲಿ ಪಯಣ ಸನ್ಮಾನ್ಯ ಎಚ್ ಎಸ ವಿ ಯವರ " ಅಭ್ಯಾಸ 5" 15.08.2010

ಬರಹ


ಈ ಸಾರಿ ಗುರುಗಳು ಆರಿಸಿದ್ದು ಜೈನ ಕವಿ ಜನ್ನನ ಯಶೋಧರ ಚರಿತೆ

ಪ್ರಸಿದ್ಧ ಜೈನ ಕವಿಯಾದ ಜನ್ನನು ಹೊಯ್ಸಳ ಅರಸ ವೀರ ಬಲ್ಲಾಳನ ಅಸ್ಥಾನ ಕವಿಯಾಗಿದ್ದ. ಅವನಿಂದ ಕವಿಚಕ್ರವರ್ತಿ ಎಂಬ ಬಿರುದು ಪಡೆದಿದ್ದ. ಬಲ್ಲಾಳನ ಮಗ ನರಸಿಂಹನ ಕಾಲದಲ್ಲಿ ಕವಿಯೂ ದಂಡಾಧಿಕಾರಿಯೂ ಆಗಿದ್ದ. ಕಾಣೂರ್ಗಣದ ರಾಮಚಂದ್ರ ಯತಿ ಇವನ ಗುರು. ಶಬ್ದಮಣಿದರ್ಪಣ ಬರೆದ ಕೇಶೀರಾಜ ಇವನ ಸೋದರಳಿಯ. ಇವನು ಹಲವಾರು ಶಾಸನಗಳನ್ನೂ "ಯಶೋಧರ ಚರಿತೆ" ಮತ್ತು "ಅನಂತನಾಥ ಪುರಾಣ" ಎಂಬ ಎರಡು ಕಾವ್ಯಗಳನ್ನೂ ಬರೆದಿದ್ದಾನೆ. ಇವನ ಕಾಲ ೧೩ ನೇ ಶತಮಾನ. ಇವನ ಗೃಂಥಗಳಲ್ಲಿ ತಿಳಿದುಬಂದ ಪ್ರಕಾರ ಯಶೋಧರ ಚರಿತೆಯನ್ನು ೧೨೦೯ ರಲ್ಲೂ, ಅನಂತನಾಥ ಪುರಾಣವನ್ನು ೧೨೩೦ರಲ್ಲೂ ಆತ ಬರೆದು ಮುಗಿಸಿದ.
ವಾಧಿರಾಜಸೂರಿಯು ಸಂಸ್ಕೃತದಲ್ಲಿ ರಚಿಸಿದ ಯಶೋಧರ ಚರಿತವು ಜನ್ನನಿಗೆ ಆಧಾರ ಗ್ರಂಥವಾಗಿದೆ. ಈ ಕೃತಿಯು ಮೂಲತಃ ಜೈನ ಅನುಯಾಯಿಗಳು ಜೀವದಯಾಷ್ಠಮಿ ಎಂಬ ವೃತದಲ್ಲಿ ಪಠಣ ಮಾಡುವ ಒಂದು ಪಠ್ಯವಾಗಿ ಕಲ್ಪಿತವಾದದ್ದು.
"ಕವಿಕಲ್ಪಲತಾ ಮಂದಾರ"," ಸುಕವಿ ಭಾಳಲೋಚನ" ಮುಂತಾದವು ಈತನ ಇತರ ಬಿರುದುಗಳು.

 



ಅಭ್ಯಾಸ ೫ ಈ ಸಾರಿ ಆಯೋಜಿತವಾದದ್ದು, ಪದ್ಮನಾಭನಗರದ ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿರುವ ಶ್ರೀಯುತ ಶ್ರೀನಿವಾಸ ಉಡುಪರ ಮನೆ "ಲಾಸ್ಯ"ದಲ್ಲಿ. ನಾನು ಅಲ್ಲಿಗೆ ಎಲ್ಲರಿಗಿಂತ ಮೊದಲು ತಲುಪಿದ್ದಕ್ಕೂ ಸಾರ್ಥಕವಾಯ್ತು. ಏಕೆಂದರೆ ಭವ್ಯವಾದ ಅವರ ಮನೆಯೇ ಅಭ್ಯಾಸಕ್ಕಾದ ಲವಲವಿಕೆಯಿಂದಿತ್ತು ಅನ್ನಿಸಿತು, ಮಗ ಶ್ರೀಕಾಂತ್ ಕೂಡಾ ಅವರಷ್ಟೇ ಮೃದು,ಅವರೆಲ್ಲರೊಡನೆ ಕೆಲಕಾಲ ಕುಳಿತು ಮಾತನಾಡುವ ಸುಯೋಗ ದೊರಕಿತು.ಅವರ ಪುಟಾಣಿ ಮೊಮ್ಮಗಳಿಗಂತೂ ಯಾಕೆ ಮನೆಯವರೆಲ್ಲಾ ಸಂಭ್ರಮದಿಂದಿದ್ದಾರೆ? ಅಂತ ಆಶ್ಚರ್ಯವೋ ಅಶ್ಚರ್ಯ, ನಾನೇ, ಇಲ್ಲಿ ಒಂದು ಕ್ಲಾಸ್ ನಡೆಯುತ್ತಿದೆ ,೨೦-೨೫ ಮಂದಿ ವಿಧ್ಯಾರ್ಥಿಗಳು ಬರ್ತಾರೆ ಕಲಿಯಲು ಎಂದೆ.
೭೫ ವರ್ಷದ ಉಡುಪರ ಜನ್ಮ ದಿನವೂ ಇವತ್ತೇ ಆಗಿದ್ದು ಅವರನ್ನು ಗ್ರೀಟ್ ಮಾಡುವ ಸದವಕಾಶವೂ ನಮಗೆಲ್ಲರಿಗೂ ಸಿಕ್ಕಿತು.ಜತೆಯಲ್ಲಿ ಅವರೇ ತಮ್ಮ ಮಕ್ಕಳ ಕವಿತೆಯಾದ " ಕುಂಭಕರ್ಣನ ನಿದ್ದೆ " ಯನ್ನು ಸುಶ್ರಾವ್ಯವಾಗಿ ಹಾಡಿ ನಮ್ಮೆಲ್ಲರ ಮನ ತಣಿಸಿದರು.


ಜನ್ನ ಶಬ್ದವು "ಯಜ್ಞ"ದ ತದ್ಭವ ರೂಪ.

ಜೈನ ಕವಿಗಳಲ್ಲಿ ಅದಿಕವಿ-ಆಧ್ಯ ಕವಿ ಪಂಪ ಜೈನ ಧರ್ಮದ ಕೊಡುಗೆ
ಕಾದಂಬರಿ ಎನ್ನುವ ಶಬ್ದ ಮೊದಲಾದದ್ದು ನಾಗವರ್ಮನ "ಕಾದಂಬರಿ" ಯಿಂದ. ಈ ಕಾದಂಬರಿ ಎನ್ನುವ ಶಬ್ದ ಕನ್ನಡದಲ್ಲಿ ಮಾತ್ರ ಚಾಲ್ತಿಯಲ್ಲಿದೆ. ಗುರುಗಳು ಚಿತ್ರಕ ಕವಿಯಾಗಿ ನಾಗವರ್ಮನನ್ನು ಹೊಗಳಿದರೆ ನವ್ಯದಲ್ಲಿ ಶ್ರಿ ನರಸಿಂಹ ಸ್ವಾಮಿಗಳನ್ನು ಅವನ ರೀತಿಯ ಚಿತ್ರಕ ಕವಿ ಎಂದರು.
ಯಶೋಧರ ಚರಿತೆ ವಿಷಮ ದಾಂಪತ್ಯ ದ ಕಥೆಯನ್ನು ಹೊಂದಿದೆ, ಆಗಿನ ಕಾಲದಲ್ಲಿ ಯಾವ ಕವಿಯೂ ಹೇಳಲು ಧೈರ್ಯ ಮಾಡದಂತ ವಿಷಯವನ್ನು ಆರಿಸಿ ಕೊಂಡು ಅದನ್ನು ಈ ಕಾವ್ಯದಲ್ಲಿ ವಿಶ್ಲೇಶಿಸುತ್ತಾ ಜೈನ ಪರಂಪರೆಯಮೂಲಕ ಇಂತಹ ಮನಕಲುಕುವ ವಿಷಯವನ್ನು ಸುಂದರವಾಗಿ ತೆರೆದಿರಿಸಿ ಜನ್ನ ಕನ್ನಡದ ಶ್ರೇಷ್ಠ ಕಾವ್ಯ ಬರೆದು ಮೆರೆದಿದ್ದಾನೆ.


ಈ ಸಂದರ್ಭದಲ್ಲಿ ಗುರುಗಳು ತಮ್ಮ ಮನದಾಳದ ಆಸೆಯನ್ನೂ ನಮ್ಮ ಮುಂದಿರಿಸಿದರು, ಅದೆಂದರೆ ಬರೆದರೆ ತಾನೂ ಇಂತಹದ್ದೇ ಒಂದು ಕಾವ್ಯವನ್ನು ಬರೆಯ ಬೇಕು ಎಂದು.
ಇಂತಹ ಮಹಾ ಕಾವ್ಯಗಳನ್ನು ಬರೆದ ರನ್ನ, ಪಂಪ, ಜನ್ನ ರೆಲ್ಲರೂ ಕಾವ್ಯದಲ್ಲಿ ಕವಿಯ ಮಾತು ಹೇಳುವಾಗ ತಾನು ಬರೆದೆ ಎಂದು ಹೇಳದೇ, ತಮ್ಮ ತಮ್ಮ ಹೆಸರನ್ನೇ ( ಕಾವ್ಯ ನಾಮ) ಅಲ್ಲಿ ಸೂಚಿಸಿ, ಕವಿ ಮತ್ತು ತಾನು ಬೇರೆ ಬೇರೆ ಎಂದು ಬಿಂಬಿಸುತ್ತಾರೆ. ಇದು ಅವರು ತಮ್ಮ ಕೃತಿಗೆ ಕೊಡುವ ಮರ್ಯಾದೆ.


ಈ ಸಂಧರ್ಭದಲ್ಲಿ ಗುರುಗಳು ಜ್ಞಾನಪೀಠ ಪ್ರಶಸ್ಥಿ ಯ ಸರಸ್ವತಿ ವಿಗೃಹವನ್ನು ಹಿಂದುಗಳಲ್ಲದವರಿಗೂ ಕೊಟ್ಟ ಹಾಗೆ ಎನ್ನುತ್ತ ಜೈನ ಕವಿಗಳು ಶಿವನ ಹೆಸರನ್ನು ಜೈನರು ಇಟ್ಟುಕೊಂಡ ಹಾಗೆ ಎಂದು ಹೇಳುತ್ತ ನಮ್ಮನ್ನೆಲ್ಲರನ್ನೂ ಮಧ್ಯೆ ಮಧ್ಯೆ ನಗಿಸುತ್ತಿದ್ದರು.
ವಸಂತ ಮಾಸದ ಅತ್ಯಂತ ಭೀಬತ್ಸ ಮಾರಿ ಜಾತ್ರೆಯ ( ಬಲಿಯೇ ಪ್ರಧಾನ, ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ಆಡು ಕುರಿಕೋಣಗಳ ಬಲಿಯಾಗುವಂತ ಸಂಧರ್ಭವದು) ಮತ್ತು ಅಹಿಂಸೆಯ ಪರಾಕಾಷ್ಟೆಯ ಜೈನ ಮುನಿಗಳ ಕಥೆಯನ್ನು ರಸವತ್ತಾಗಿ ಒಟ್ಟೊಟ್ಟಿಗೇ ತೆರೆದಿಡುತ್ತ ಆರಂಭವಾಗುವ ಈ ಕಾವ್ಯ ವಾಸ್ತವದಿಂದ ಗತಕ್ಕೆ ತಿರುಗಿ ಪುನಃ ವಾಸ್ತವ್ಯಕ್ಕೆ ವಾಪಸ್ಸಾಗುವ ತಂತ್ರದಿಂದ
ನಮ್ಮನ್ನು ಪರವಶರನ್ನಾಗಿಸಿ, ತನ್ನ ಸುರಮ್ಯ ಉಪಮೆಯಿಂದ ಕೂಡಿ ಕುತೂಹಲ ಭರಿತವೂ ಆಗಿ ಮಧ್ಯೆ ಮಧ್ಯೆ ಬೆಚ್ಚಿ ಬೀಳಿಸುತ್ತದೆ.ಕಾವ್ಯದಲ್ಲಿ ಜನ್ನ ಕೊಡುವ ಹೆಸರುಗಳೂ ಕೂಡಾ ( ರಾಜ ಮಾರಿದತ್ತ, ತಳವಾರ ಚಂಡ ಕರ್ಮ, ದೇವತೆ ಚಂಡ ಮಾರಿ, ಜಿನಮುನಿ ಸುದತ್ತಾಚಾರ್ಯರು, ಅಭಯರುಚಿ, ಅಭಯಮತಿ) ಅವರವರ ಗುಣಗಳನ್ನೇ ಹೇಳುತ್ತ ಕವಿಯ ಹಿರಿಮೆಯನ್ನು ಎತ್ತಿ ತೋರಿಸುತ್ತವೆ.
ಇಂತಹ ಮಾರಿಪೂಜೆಯಲ್ಲಿ ತನಗೆ ಬಲಿಕೊಡುವುದಕ್ಕಾಗಿ ವಿಶೇಷವಾದ ಬಲಿಯನ್ನೇ ತರಲು ರಾಜ ತನ್ನ ತಳವಾರನನ್ನು ಕಳುಹಿಸುತ್ತಾನೆ ಅದು ಎಂತಹ ಬಲಿ? ಸುಂದರ ಸುಶೀಲ ಅವಳಿಮಕ್ಕಳನ್ನೇ ಬಲಿಗಾಗಿ ಆರಿಸುತ್ತ ಕ್ರೌರ್ಯದ ಪರಾಕಾಷ್ಟೆಯನ್ನೇ ಮೆರೆಯುತ್ತಾನೆ, ಅವನ ತಳವಾರನೋ ಹಿಂದೆ ಮುಂದೆ ಯೋಚಿಸದೇ ಪ್ರಭು ಚಿತ್ತದಂತೆ ಮಕ್ಕಳನ್ನು ಬಲಿಗಾಗಿ ತರಲು ಹೊರಡುತ್ತಾನೆ.
ಇನ್ನೊಂದು ಕಡೆ ಪಕ್ಕದ ಉಪವನದಲ್ಲಿ ಜೈನ ಮುನಿ ಸುದತ್ತಾಚಾರ್ಯರು ತಮ್ಮ ೫೦೦ ಜೈನ ಅನುಯಾಯಿಗಳೊಡನೆ "ಗಮನ ಪ್ರಾಯಶ್ಚಿತ್ತ ನಿಮಿತ್ತ" ( ನಡೆಯುವಾಗ ತಮ್ಮ ಅರಿವಿಗೆ ಬಾರದೇ ಕಿರು ಪ್ರಾಣಿಗಳು ಸತ್ತು ಉಂಟಾಗಿರಬಹುದಾದ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಮಾಡುವ ಕ್ರಿಯೆ) ತಂಗಿದ್ದರು.ಉಪವಾಸವನ್ನು ಆಚರಿಸಿದ ನಂತರ ಅವರ ಶಿಷ್ಯರಲ್ಲಿಬ್ಬರನ್ನು ಭಿಕ್ಷಾಟನೆಗೆ ಕಳುಹಿಸುತ್ತಾರೆ, ಹೊರಟ ಅವರನ್ನು (ಸುಂದರ ಅವಳೀ ಹಸುಳೆಗಳು ಅಭಯ ರುಚಿ ಅಭಯಮತಿ) ತಳವಾರ ಚಂಡ ಕರ್ಮನು ಎಳೆಯ ಪ್ರಾಯದ ಜಿಂಕೆ ಮರಿಗಳನ್ನು ಕಾಡಿನಲ್ಲಿ ಹುಲಿಯು ಹಿಡಿಯುವಂತೆ ಹಿಡಿದು ರಾಜನಲ್ಲಿಗೆ ಕರೆತರುತ್ತಾನೆ. ಹೀಗೆ ಅಹಿಂಸೆ ಮತ್ತು ಭೀಭತ್ಸತೆಯನ್ನೇ ಕಣ್ಣಿಗೆ ಕಟ್ಟುವಂತೆ ಎಳೆ ಎಳೆಯಾಗಿ ಜತೆಜತೆಯಾಗಿಯೇ ನಮ್ಮ ಮುಂದಿಡುವ ಜನ್ನನ ಶೈಲಿ ಎಂತಹರನ್ನೂ ಮನಸೂರೆಗೈಯ್ಯದೇ ಬಿಡದು.


ಅಂತಹ ಲಕ್ಷ ಲಕ್ಷ ಬಲಿಗಳು ನಡೆಯುವ ಸ್ಥಳದಲ್ಲಿ ತಮ್ಮನ್ನೂ ಬಲಿಗಾಗಿಯೇ ಕರೆದೊಯ್ಯುತ್ತಾರೆ ಎಂಬುದನ್ನೂ ತಿಳಿದೂ ಒಂದಿಷ್ಟೂ ಅಳುಕದೇ ಹೆದರದೇ ನಿಂತಿರುವ ಹಸುಳೆಗಳನ್ನು ನೋಡಿ ರಾಜನಿಗೆ ಆಶ್ಚರ್ಯವಾಗುತ್ತದೆ, ಅವರೇ ರಾಜನ್ ಶ್ರೇಷ್ಠನಾದ ಅರಸನಂತೆ ನಿರ್ಮಲವಾದ ಮನಸ್ಸಿನಿಂದ ಈ ಭೂಮಿಯನ್ನು ಪರಿಪಾಲಿಸು ಎಂದು ಹರಸಿದಾಗ ಲಂತು ಇವರು ಸಾಮಾನ್ಯರಲ್ಲಎಂದು ರಾಜನಿಗೆ ಅರಿವಾಗುತ್ತದೆ. ಆಗ ಆತನೇ ನೀವು ಯಾರು ಎಂದು ಕೇಳಲು ಅಭಯರುಚಿ ತಮ್ಮ ಕಥೆಯನ್ನು ರಾಜನೆದುರಿಗೆ ಬಿಚ್ಚಿಡುತ್ತಾನೆ
ನಗರ ಕೇಂದ್ರಿಯ ಕಥೆ ಯಶೋಧರ ರಾಜ ಮತ್ತು ರಾಣಿ ಅಮ್ರತಮತಿಯರ (ಚೆಲುವ ಮನಪ್ರಿಯರು) ದೇಹದಲ್ಲಿ ಮಾತ್ರವಲ್ಲ ಮನದಲ್ಲಿ ಸಹಾ ಪ್ರಿಯರು. ಬಿಳಿಯ ಹಂಸಗಳ ಹಾಗೆ ಆನಂದವಾಗಿ ವಿಹರಿಸುತ್ತಾ ಇರುವಾಗ, ಒಂದು ನಾದ ಲಹರಿಯಿಂದಾಗಿ ರಾಣಿ ಅಮ್ರತಮತಿಯ ಮನಸ್ಸು ಚೆಲುವ ರಾಜನನ್ನು ಬಿಟ್ಟು ಒಬ್ಬ ಕುರೂಪಿ ಅಷ್ಟಾವಕ್ರ ಮಾವುತನಿಗೆ ಸೋಲುತ್ತದೆ.
ಅವಳ ಈ ಪರಪುರುಷನ ವ್ಯಾಮೋಹವೇ ರಾಜನಲ್ಲಿ ವೈರಾಗ್ಯವನ್ನು ಮೂಡಿಸುತ್ತದೆ.
ಅಲ್ಲಿಗೂ ಮುಗಿಯದೇ ವೈರಾಗ್ಯ ತಾಳಿದ ರಾಜ ಮತ್ತು ಆತನ ತಾಯಿಯನ್ನು ವಿಷ ವಿಡಿಸಿ ರಾಣಿ ಕೊಲ್ಲಿಸುತ್ತಾಳೆ.
ಇದೇ ಜನ್ಮ ಜನ್ಮಾಂತರದ ವೈರಾಗ್ಯದ ಕಥೆ. ಈ ತಾಯಿಮಗನೇ ಹಲವಾರು ಜನ್ಮಗಳನ್ನು ಮುಗಿಸಿ ಈಗ ಅಭಯ ಮತಿ ಅಭಯರುಚಿಗಳಾಗಿ ಬಂದಿರುತ್ತಾರೆ.

ಇಲ್ಲಿ ಕವಿ ಇಂತಹ ರಾಜನನ್ನು ಬಿಟ್ಟು ಕುರೂಪಿ ಅಷ್ಟಾವಕ್ರ ನ ಹಿಂದೆ ಓಡಿದ್ದಕ್ಕಾಗಿ ಅಮೃತಮತಿಯನ್ನು ಜರಿಯದೇ ಜೈನಧರ್ಮದ ಮುಖ್ಯ "ವಿಧಿ" ಯನ್ನೇ ದೂಷಿಸುತ್ತಾನೆ.

 

ಶೃಂಗಾರ ಕರುಣಾ ಭೀಭತ್ಸ ಭಕ್ತಿ ಮುಂತಾದ ಎಲ್ಲಾ ರಸಗಳನ್ನೂ ನಮ್ಮ ಮನ ಸೂರೆಗೊಳ್ಳುವ ಹಾಗೆ ಚಿತ್ರಿಸಿದ್ದಾನೆ ಜನ್ನ, ತನ್ನ ಈ ಶ್ರೇಷ್ಠ ಕಾವ್ಯ ಯಶೋಧರ ಚರಿತೆಯಲ್ಲಿ. ಇದನ್ನೆಲ್ಲಾ ಗುರುಗಳ ಬಾಯಿಂದಲೇ ಕೇಳುವಾಗ ಉಂಟಾಗುವ ಆನಂದವೇ ಬೇರೆ, ನೀವು ಆ ರಸಾಪಾನ ಮಾಡಲಿ ಎಂತಲೇ ಈ ಕೆಳಗೆ ಅದರ ಚಿತ್ರಣದ ಕೊಂಡಿ ಕೊಟ್ಟಿದ್ದೇನೆ, ನೋಡಿ ,  ನೀವೂ ಆಸ್ವಾದಿಸಿ

 

 

 

ಮಾನ್ಯ ಡಾ ಎಚ್ ಎಸ್ ವಿ ಯವರ ಅಭ್ಯಾಸ ೫ ರ ವಿಡಿಯೋ ನೋಡಲು ಇಲ್ಲಿ ಕುಟುಕಿಸಿ:

ಭಾಗ ೧: http://www.youtube.com/watch?v=65HyGXLTJKM

ಭಾಗ ೨: http://www.youtube.com/watch?v=LSM1x6s-g_I

 ಭಾಗ ೩:  http://www.youtube.com/watch?v=XKHrXHS0Ytk

 

 

 

ಭಾಗ ೪:

 

ಭಾಗ ೫:    http://www.youtube.com/watch?v=ZtJkk8ACYsY

 

ಭಾಗ ೬: http://www.youtube.com/watch?v=1McD0H-NdzA

ಭಾಗ ೭: http://www.youtube.com/watch?v=tWBfmQBeNHQ

 

ಭಾಗ ೮:  http://www.youtube.com/watch?v=GZSogF4H3Dw

 

ಭಾಗ ೯: http://www.youtube.com/watch?v=Egz_jI19two

ಭಾಗ ೧೦: http://www.youtube.com/watch?v=yBXPGF43HH8

ಭಾಗ ೧೧: http://www.youtube.com/watch?v=7PSlqJq9fDE

ಶ್ರೀಯುತ ಶ್ರೀನಿವಾಸ ಉಡುಪರ ಮಕ್ಕಳ ಕವಿತೆ "ಕುಂಭಕರ್ಣನ ನಿದ್ದೆ" ಇತರ ಕವಿತೆಗಳು ಅವರದೇ ಧ್ವನಿಯಲ್ಲಿ

ಭಾಗ ೧. http://www.youtube.com/watch?v=Ll2uzGjYtew

ಭಾಗ ೨. http://www.youtube.com/watch?v=Q2C1onnHh4s

ಭಾಗ ೩. http://www.youtube.com/watch?v=7xvQAPRX6GQ