ಸ್ವಾತಂತ್ರ ಇತಿಹಾಸದಲ್ಲಿ ಮರೆತ ಪುಟ- ನೀಲಿ ದಂಗೆ

ಸ್ವಾತಂತ್ರ ಇತಿಹಾಸದಲ್ಲಿ ಮರೆತ ಪುಟ- ನೀಲಿ ದಂಗೆ

 

ನಮಗೆ ಭಾರತದ ಸ್ವಾತಂರ್ತ್ಯ ಹೋರಾಟ ಅಂದಾಗ ಗಾಂಧಿ, ನೆಹರೂ, ಪಟೇಲ್ ನೆನಪಾಗುತ್ತಾರೆ. ಅಹಿಂಸೆ, ಸತ್ಯಾಗ್ರಹ ,ಕಾಂಗ್ರೆಸ್ ಪಕ್ಷ ನೆನಪಾಗುತ್ತವೆ. ಭಗತ್ ಸಿಂಗ್, ಚಂದ್ರಶೇಖರ ಆಜಾದ್, ಸಾವರ್ಕರ‍್ ಮೊದಲಾದ ಕ್ರಾಂತಿಕಾರೀ ಹೋರಾಟಗಾರರೂ ನೆನಪಾಗುತ್ತಾರೆ. ೧೮೫೭ರ ಮೊದಲನೆಯ ಸ್ವಾತಂರ್ತ್ಯ ಸಂಗ್ರಾಮವೂ ನಮ್ಮ ನೆನಪಿಗೆ ನುಗ್ಗುತ್ತದೆ.

          ೧೮೫೭ರ ಸ್ವಾತಂರ್ತ್ಯ ಸಂಗ್ರಾಮ ಬಹಳ ಪ್ರಸಿದ್ಧಿಯಾದ ಘಟನೆ. ಆದರೆ ಇದಕ್ಕೂ ಮೊದಲು ಸುಮಾರು ಒಂದು ನೂರುವರ್ಷಗಳ ಕಾಲ ಬ್ರಿಟಿಷ್ ಆಡಳಿತದ ವಿರುದ್ಧ ಅಲ್ಲಲ್ಲಿ ಸ್ಥಳೀಯ ಪ್ರತಿಭಟನೆಗಳು ನಡೆಯುತ್ತಲೇ ಇದ್ದವು. ಅವೆಲ್ಲಾ ಇತಿಹಾಸದ ಪುಟಗಳಲ್ಲಿ ಹುಗಿದುಹೋಗಿವೆ. ೧೮೫೭ರ ಸರಿ ಸುಮಾರಿನಲ್ಲಿ  ನಡೆದ ಅಂತಹ ಅನೇಕ ಹೋರಾಟಗಳಲ್ಲಿ ಒಂದನ್ನು ಮೇಲೆತ್ತಿ ನೆನಪಿಸಿಕೊಳ್ಳುವ ಸಣ್ಣ ಪ್ರಯತ್ನ ಈ ಲೇಖನ.ಹಾಗೆ ನೋಡಿದರೆ ೧೮೫೭ರ ಸಂಗ್ರಾಮ ಈ ಎಲ್ಲ ಹೋರಾಟಗಳ ಪರಂಪರೆಯ ನಿರ್ಣಾಯಕ ಹಂತ ಎಂದು ಹೇಳಬಹುದು.

ವ್ಯಾಪಾರಕ್ಕೆಂದು ಭಾರತಕ್ಕೆ ಬಂದಿಳಿದ ಬ್ರಿಟಿಷರು ತಮ್ಮ ತಂತ್ರಗಾರಿಕೆಯಿಂದ ಕ್ರಮೇಣ ಒಂದೊಂದೇ ಪ್ರದೇಶವನ್ನು ತಮ್ಮ ವಸಾಹತು ಮಾಡಿಕೊಳ್ಳುತ್ತಾ ಸಾಮ್ರಾಜ್ಯ ವಿಸ್ತರಿಸಿ, ಮುಂದೆ ಸಂಪೂರ್ಣ ಭಾರತವನ್ನೇ ಅಕ್ರಮಿಸಿಕೊಂಡದ್ದು ನಮಗೆಲ್ಲಾ ಗೊತ್ತಿರುವ ಇತಿಹಾಸ.  ಹೀಗೆ ಅವರ ಸಾಮ್ರಾಜ್ಯ ವಿಸ್ತಾರವಾಗುತ್ತಾ ಹೋದಂತೆ , ಹೆಜ್ಜೆಹೆಜ್ಜೆಗೂ ಅವರು ಸ್ಥಳೀಯರ ಅತೃಪ್ತಿ, ಅಸಮಾಧಾನ , ಪ್ರತಿಭಟನೆಗಳನ್ನು ಎದುರಿಸಬೇಕಾಯಿತು.

ಇವುಗಳನ್ನು ಮುಖ್ಯವಾಗಿ ಮೂರು ವಿಧವಾಗಿ ವಿಂಗಡಿಸಬಹುದು. ನಾಗರಿಕ ಪ್ರತಿಭಟನೆ, ಆದಿವಾಸಿ ದಂಗೆ ಮತ್ತುರ ರೈತರ ಹೋರಾಟಗಳು. ಈ ಕೊನೆಯ ಹೋರಾಟದ ಒಂದು ಉದಾಹರಣೆ ಮಾತ್ರ ಈ ಲೇಖನದ ಉದ್ದೇಶ.

ಬ್ರಿಟಿಷರು ಇಲ್ಲಿಗೆ ಬಂದದ್ದು , ಇಲ್ಲಿಯ ಸಂಪತ್ತನ್ನು ಸೂರೆ ಹೊಡೆದು ತಮ್ಮ ದೇಶಕ್ಕೆ ಸಾಗಿಸಲಿಕ್ಕೆಂದೇ ಹೊರತು , ಭಾರತದ ಅಭಿವೃದ್ಧಿಗಾಗಿ ಅಲ್ಲ. ಭೂಕಂದಾಯ ಮತ್ತು ಇತರೆ ಸುಂಕಗಳ ಮೂಲಕ ಬರುತ್ತಿದ್ದ ಆದಾಯವನ್ನು ಎಷ್ಟು ಸಾಧ್ಯವೋ ಅಷ್ಟು ಹೆಚ್ಚಿಸುವ ಬ್ರಿಟಿಷರ ಪ್ರಯತ್ನ ಹಳ್ಳಿಗಳಲ್ಲಿ ತೀವ್ರ ಅಸಮಾಧಾನಕ್ಕೆಡೆ ಮಾಡಿತು.  ಅಷ್ಟೇ ಅಲ್ಲ ಹೀಗೆ ವಸೂಲಿ ಮಾಡಿದ ಮೊತ್ತದ ಸಣ್ಣ ಭಾಗವನ್ನು ಕೂಡಾ ರೈತರ ಜೀವನವನ್ನು ಸುಧಾರಿಸುವತ್ತ ಖರ್ಚು ಮಾಡದ ಕಾರಣ , ರೈತರ ಪರಿಸ್ಥಿತಿ ಬಿಗಡಾಯಿಸುತ್ತಲೇ ಹೋಯಿತು.  ಸರಕಾರದ ಶೋಷಕ ನೀತಿಯ ಪರಿಣಾಮವಾಗಿ ಅಸಂಖ್ಯ ಭೂಮಾಲಿಕರು ತಮ್ಮ ಜಮೀನಿನ ಮೇಲಿನ ಸ್ವಾಮ್ಯವನ್ನು ಕಳೆದುಕೊಂಡರು. ಸಣ್ಣರೈತರುಗಳಂತೂ ಕಂದಾಯದ ಹೊರೆ ಭರಿಸಲಾಗದೆ ಸಾಲದ ಮೊರೆ ಹೋದರು ಅಥವಾ, ಜಮೀನನ್ನೇ ಮಾರಿದು. ಸಾಲ ತೆಗೆದುಕೊಂಡವರೂ ಕೂಡಾ ಕಾಲಕ್ರಮೇಣ ಸಾಲ ತೀರಿಸಲಾಗದೇ ಅನಿವಾರ್ಯವಾಗಿ ಭೂಮಿಯನ್ನು ಮಾರುವ ಪರಿಸ್ಥಿತಿಗೆ ಸಿಕ್ಕಿದರು. ಒಟ್ಟಿನಲ್ಲಿ ತಮ್ಮ ಪಾಡಿಗೆ ತಾವು ಬದುಕಿಕೊಂಡಿದ್ದವರು , ತಮ್ಮದೇ ಜಮೀನಿನಲ್ಲಿ ಹೊಟ್ಟೆಪಾಡಿಗಾಗಿ ಕೂಲಿ ಮಾಡಬೇಕಾದ ಶೋಚನೀಯ ಅವಸ್ಥೆಗೆ ಸಿಲುಕಿದರು.

ಹೀಗೆ ಬದುಕೇ ದುರ್ಭರವಾದ ಪರಿಸ್ಥಿತಿ ಬಂದಾಗ ಬೇರೆ ದಾರಿ ಕಾಣದ ರೈತರುಗಳು ದಬ್ಬಾಳಿಕೆ , ಮತ್ತು ಶೋಷಣೆಯ ವಿರುದ್ಧ ಪ್ರತಿಭಟನೆ ಪ್ರಾರಂಭಿಸಿದರು. ಈ ರೈತರ ಹೋರಾಟಗಳಲ್ಲಿ ಅತಿ ಹೆಚ್ಚು ಪರಿಣಾಮಕಾರಿಯಾದದ್ದೂ, ಹೆಚ್ಚು ಪ್ರದೇಶಗಳಲ್ಲಿ ವ್ಯಾಪಿಸಿದ್ದೂ ೧೮೫೯-೬೦ರಲ್ಲಿ ನಡೆದ ನೀಲಿ ದಂಗೆ (Indigo Revolt).

Indigo ನೀಲಿ ಬಣ್ಣದ ಒಂದು ಪ್ರಭೇದ (Blue Jeansನ ನೀಲಿ ಬಣ್ಣ ನೆನಪಿಸಿಕೊಳ್ಳಿ- ಅದು Indigo).  ಸಸ್ಯಜನ್ಯವಾದ ಇದನ್ನು ಭಾರತದಲ್ಲಿ ಹತ್ತಿ ಬಟ್ಟೆಗಳಿಗೆ ರಂಗು ಹಾಕಲು ಉಪಯೋಗಿಸಲಾಗುತ್ತಿತ್ತು  ಹಾಗೂ ಈ ಬಣ್ಣಕ್ಕೆ ಯೂರೋಪಿನಲ್ಲಿಯೂ ಸಾಕಷ್ಟು ಮಾರುಕಟ್ಟೆಯಿತ್ತು. ಇದರ ಬೆಳೆ ಬಂಗಾಳದಲ್ಲಿ ವ್ಯಾಪಕವಾಗಿತ್ತು. ನೀಲಿ ಗಿಡಗಳಿಂದ ಬಣ್ಣ ತಯಾರಿಸುವ ಕಾರ್ಖಾನೆಗಳನ್ನು ಈ ಪ್ರದೇಶದ ಹಳ್ಳಿಗಳಲ್ಲಿ ಅಲ್ಲಲ್ಲಿ ಸ್ಥಾಪಿಸಿದ ಪ್ಲಾಂಟರುಗಳು, ಇವರಲ್ಲಿ ಬಹುತೇಕರು ಯೂರೋಪಿಯನ್ನರಾಗಿದ್ದರು, ಸುತ್ತಮುತ್ತಲಿನ ಜಮೀನುಗಳಲ್ಲಿ ನೀಲಿ ಬೆಳೆ ಬೆಳೆಯುವಂತೆ ರೈತರನ್ನು ಒತ್ತಾಯಿಸತೊಡಗಿದರು.  ಒತ್ತಾಯದಿಂದ ಮುಂಗಡ ಹಣ ಕೊಟ್ಟು, ಏಕಪಕ್ಷೀಯ ಕರಾರುಗಳನ್ನು ಬರೆಸಿಕೊಳ್ಳಲಾಗುತ್ತಿತ್ತು. ಬೆಳೆಗೆ ಹೊರಗಿನ ಬೆಲೆಗಿಂತಲೂ ಅತಿ ಕಡಿಮೆ ಬೆಲೆಕಟ್ಟಲಾಗುತ್ತಿತ್ತು. ವಂಚನೆ , ಲಂಚಕೋರತನ ವ್ಯಾಪಕವಾಗಿದ್ದವು.  ತನ್ನದೇ ಜಮೀನಿನಲ್ಲಿ ಯಾವ ಬೆಳೆ ಬೆಳೆಯಬೇಕು ಎಂದು ನಿರ್ಧರಿಸುವ ಸ್ವಾತಂರ್ತ್ಯವೂ ರೈತನಿಗೆ ಇರಲಿಲ್ಲ.

ಪ್ಲಾಂಟರುಗಳ ದಬ್ಬಾಳಿಕೆ ಇಷ್ಟಕ್ಕೇ ಸೀಮಿತವಾಗಿರಲಿಲ್ಲ. ರೈತರನ್ನು ಕದ್ದೊಯ್ದು  ಗೋಡೌನುಗಳಲ್ಲಿ ಬಂಧಿಸಿಡುವುದು, ಥಳಿಸುವುದು, ಹೆಂಡಿರು-ಮಕ್ಕಳ ಮೇಲೆ ದೌರ್ಜನ್ಯ, ಪಶುಮಂದೆಯನ್ನು ಅಪಹರಿಸುವುದು, ಮನೆಗೆ ಬೆಂಕಿಹಾಕುವುದು, ಕೆಡವುವುದು, ಲೂಟಿಮಾಡುವುದು, ಬೆಳೆದುನಿಂತ ಪೈರನ್ನು ನಾಶಮಾಡುವುದು ಒಂದೇ ಎರಡೇ - ರೈತರನ್ನು ವಿಧವಿಧವಾಗಿ ಹಿಂಸಿಸಲಾಗುತ್ತಿತ್ತು. ಈ ಕೆಲಸಕ್ಕೆಂದೇ ಪ್ಲಾಂಟರುಗಳು “ಲಾಠಿಯಾಲ್” ಎಂಬ ಗೂಂಡಾ ಗುಂಪನ್ನು ಸಾಕಿಟ್ಟುಕೊಂಡಿರುತ್ತಿದ್ದರು.

ಕಾನೂನು ಪಾಲಿಸಬೇಕಾದ ಮ್ಯಾಜಿಸ್ಟ್ರೇಟರುಗಳು ಕೂಡಾ ಪ್ಲಾಂಟರುಗಳೊಂದಿಗೆ ಬೇಟೆ, ಊಟೋಪಚಾರಗಳ ಹಂಗಿನಲ್ಲಿ ಇರುತ್ತಿದ್ದರಿಂದ , ರೈತರಿಗೇ ಕಾನೂನಿನ ಬೆಂಬಲವೂ ಇರಲಿಲ್ಲ. ಗೌರವ ಮ್ಯಾಜಿಸ್ಟರೇಟರಾಗಿ ಪ್ಲಾಂಟರುಗಳೇ ನೇಮಕರಾಗಿ, “ನಮ್ಮ ರಕ್ಷಕನೇ ನಮ್ಮ ಭಕ್ಷಕ” ಎಂಬ ನಾಣ್ನುಡಿ ಹುಟ್ಟಿಕೊಂಡಿತು.

ಸುಮಾರು ಐವತ್ತು ವರ್ಷಗಳಿಂದ ಈ ಶೋಷಣೆಯನ್ನು ಅನುಭವಿಸುತ್ತಿದ್ದ ರೈತರುಗಳು ಕೊನೆಗೂ ೧೮೫೯ರಲ್ಲಿ ಬಂಡೆದ್ದರು. ಅದಕ್ಕೆ ಅಕಸ್ಮಿಕವಾಗಿ ಸರಕಾರದ ಬೆಂಬಲವೂ ಸಿಕ್ಕಿತು. ತನಗೆ ಬಂದ ಸರಕಾರೀ ಕಾಗದವೊಂದನ್ನು ತಪ್ಪಾಗಿ ಅರ್ಥಮಾಡಿಕೊಂಡ ಹೇಮಚಂದ್ರ ಕರ‍್ ಎಂಬ ದೆಪ್ಯುಟಿ ಮ್ಯಾಜಿಸ್ಟ್ರೇಟನೊಬ್ಬ  ಪೋಲಿಸರಿಗೆ ನೀಡಿದ ಆದೇಶದಲ್ಲಿ  “ರೈತರು ತಮ್ಮ ಜಮೀನಿನಲ್ಲಿ ಏನು ಬೇಕಾದ್ದನ್ನು ಬೆಳೆಯಲು ಸ್ವತಂತ್ರರೆಂದೂ, ಯಾವುದೇ ತಗಾದೆಯಾದಲ್ಲಿ ಸರಕಾರ ರೈತರ ಜಮೀನನ್ನು ಜಫ್ತು ಮಾಡುವಂತಿಲ್ಲವೆಂದೂ, ಈ ವಿಷಯದಲ್ಲಿ ಪೋಲಿಸರು ಪ್ಲಾಂಟರುಗಳಿಂದ ರೈತರುಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆಯಲ್ಲಿರಬೇಕು”  ಎಂಬ ಆಜ್ಞೆ ಹೊರಡಿಸಿಬಿಟ್ಟ! ವಾಸ್ತವವಾಗಿ ಆತನಿಗೆ ಈ ಆದೇಶ ಹೊರಡಿಸುವ ಅಧಿಕಾರವೂ ಇರಲಿಲ್ಲ.

ಹೇಮಚಂದ್ರನ ಈ ಆದೇಶದ ಸುದ್ದಿ ಬಂಗಾಳದಲ್ಲಿ ವಾಯುವೇಗದಲ್ಲಿ ಹಬ್ಬಿತು. ಇದೇ ಸಮಯಕ್ಕಾಗಿ ಕಾಯುತ್ತಿದ್ದ ರೈತರು ತಮ್ಮ ಶೋಷಣೆಯ ವ್ಯವಸ್ಥೆಯನ್ನು ಕಿತ್ತೊಗೆಯಲು ತೀರ್ಮಾನಿಸಿದರು. ಮೊದಮೊದಲಲ್ಲಿ ಸರಕಾರಕ್ಕೆ ಅರ್ಜಿ, ಶಾಂತಿಯುತ ಮೆರವಣಿಗೆಗಳು ಇವುಗಳ ಮುಖಾಂತರವೇ ರೈತರುಗಳು ತಮ್ಮ ಹಕ್ಕನ್ನು ಸ್ಥಾಪಿಸಲು ಪ್ರಯತ್ನಿಸಿದರೂ, ಬಹುಬೇಗ ಅದು ಹಿಂಸಾಚಾರಕ್ಕೆ ತಿರುಗಿತು.  ನಾಡಿಯಾ ಜಿಲ್ಲೆಯ ಗೋವಿಂದಪುರ ಎಂಬಲ್ಲಿ ನೀಲಿ ಬೆಳೆಯಲು ನಿರಾಕರಿಸಿದ ರೈತರ ಮೇಲೆ ಲಾಠಿಯಾಲುಗಳನ್ನು ಕಳುಹಿಸಲಾಯಿತು. ರೈತರುಗಳು ಅಂಜದೆ ಅದಕ್ಕೆ ಪ್ರತಿರೋಧವಾಗಿ ಲಾಠಿ, ಭರ್ಜಿಗಳಂತಹ ಆಯುಧಗಳೊಂದಿಗೆ ತಮ್ಮದೇ ಪಡೆಯನ್ನು ಕೂಡಿಸಿಕೊಂಡು ಲಾಠಿಯಾಲುಗಳಿಗೆ ತಕ್ಕ ಪ್ರತ್ಯುತ್ತರ ಕೊಟ್ಟರು.

ಈ ಹೋರಾಟ ತ್ವರಿತವಾಗಿ ಇತರೆ ಪ್ರದೇಶಗಳಿಗೂ ಹಬ್ಬಿತು. ಮುಂಗಡ ಹಣ ಸ್ವೀಕರಿಸಲು,  ಕರಾರಿಗೆ ಒಪ್ಪಲು ರೈತರು ನಿರಾಕರಿಸಿದರು. ಪ್ಲಾಂಟರುಗಳು ದಾಳಿಯನ್ನು ಪ್ರತಿರೋಧಿಸಲು ಕೈಗೆ ಸಿಕ್ಕ ಆಯುಧಹಿಡಿದು ಹೋರಾಡಿದರು- ಭರ್ಜಿ, ಚಾಟರಬಿಲ್ಲು, ಲಾಠಿ, ಬಿಲ್ಲುಬಾಣ, ಇಟ್ಟಿಗೆಗಳು, ಬೇಲದ ಹಣ್ಣು  ಹೀಗೆ. ಹೆಂಗಸರು ಕೂಡಾ ಮಡಿಕೆ ಕುಡಿಕೆ ಎಸೆದು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಪ್ಲಾಂಟರುಗಳು ಹೊಸ ಉಪಾಯ ಮಾಡಿ , ರೈತರನ್ನು ಒಕ್ಕಲೆಬ್ಬಿಸುವ, ಗೇಣಿ ಹೆಚ್ಚು ಮಾಡುವ  ಹುನ್ನಾರ ನಡೆಸಿದರು.  ಇದಕ್ಕುತ್ತರವಾಗಿ ರೈತರುಗಳು ಹೆಚ್ಚುವರಿ ಗೇಣಿ ಕೊಡಲು ನಿರಾಕರಿಸಿ ಮುಷ್ಕರ ಹೂಡಿದರು.   ತಮ್ಮನ್ನು ಒಕ್ಕಲೆಬ್ಬಿಸುವ ಪ್ರಯತ್ನವನ್ನು ತೀವ್ರವಾಗಿ ವಿರೋಧಿಸಿದರು.  ಇದರೊಂದಿಗೇ ಗುಂಪುಗುಂಪಾಗಿ ಹಣ ಒಟ್ಟು ಮಾಡಿ , ತಮ್ಮ ವಿರುದ್ಧ ಹಾಕಲಾಗಿದ್ದ ಕಾನೂನು ಪ್ರಕರಣಗಳನ್ನು ಕೋರ್ಟುಗಳಲ್ಲಿ ಹೋರಾಡಲು ಪ್ರಾರಂಭಿಸಿದರು. ಪ್ಲಾಂಟರುಗಳ ಮೇಲೆ ಕಾನೂನಿನ ಕ್ರಮಕ್ಕೆ ಒತ್ತಾಯ ಹಾಕಿ ಕೋರ್ಟಿಗೆ ಹೋದರು. ಪ್ಲಾಂಟರುಗಳ ಆಳುಗಳನ್ನು ಸಮಾಜದಿಂದ ಬಹಿಷ್ಕರಿಸಿ ಅವರು ಪ್ಲಾಂಟರುಗಳ ಸಂಗವನ್ನು ತೊರೆಯುವಂತೆ ಮಾಡಿದರು.

ಕೊನೆಗೂ ಪ್ಲಾಂಟರುಗಳು ರೈತರ ಹೋರಾಟದ ಎದರು ಸೋಲೊಪ್ಪಿಕೊಂಡು , ತಮ್ಮ ನೀಲಿ ಕಾರ್ಖಾನೆಗಳನ್ನು ಒಂದೊಂದಾಗಿ ಮುಚ್ಚತೊಡಗಿದರು. ೧೮೬೦ರ ಕೊನೆಯ ಹೊತ್ತಿಗೆ ನೀಲಿ ಬೆಳೆ ಬಂಗಾಳದಲ್ಲಿ ಸಂಪೂರ್ಣ ಕಣ್ಮರೆಯಾಗುವ ಮಟ್ಟಕ್ಕೆ ಬಂತು. ೧೮೬೦ರಲ್ಲಿ ಸರಕಾರವೂ ಕಾನೂನಿನ ತಿದ್ದುಪಡಿ ಮಾಡಿ, ರೈತರಿಗೆ ನೀಲಿ ಬೆಳೆಯುವಂತೆ ಆಗ್ರಹಿಸುವುದನ್ನು ನಿಷೇಧಿಸಿತು.

ರೈತರ ಈ ಯಶಸ್ಸಿಗೆ ಮುಖ್ಯ ಕಾರಣಗಳು ಅವರ ಅಗಾಧ ಕರ್ತೃತ್ವಶಕ್ತಿ, ಸಹಕಾರ, ಸಂಘಟನೆ ಮತ್ತು ಶಿಸ್ತು. ಹಿಂದೂ, ಮುಸಲ್ಮಾನ ರೈತರುಗಳು ಒಗ್ಗಟ್ಟಿನಿಂದ ಹೋರಾಡಿದ್ದೂ ಇನ್ನೊಂದು ಕಾರಣ. ಬಂಗಾಳದ ಬುದ್ಧಿಜೀವಿ ವರ್ಗ ರೈತರನ್ನು ಬೆಂಬಲಿಸಿದ್ದೂ ಒಂದು ಗಮನಾರ್ಹ ಅಂಶವಾಗಿತ್ತು. ಇದು ಅಲ್ಲಿಂದ ಮುಂದೆ ಸರಕಾರದ ವಿರುದ್ಧದ ಹೋರಾಟದಲ್ಲಿ ಬುದ್ಧಿಜೀವಿ ವರ್ಗದ ಬೆಂಬಲದ ಪರಂಪರೆಯನ್ನೇ ಹುಟ್ಟುಹಾಕಿ, ರಾಷ್ಟ್ರೀಯ ಮಟ್ಟದಲ್ಲಿ ಮಹತ್ತರ ಪರಿಣಾಮವನ್ನುಂಟುಮಾಡಿತು.  

ನಮ್ಮ ಸ್ವಾತಂರ್ತ್ಯ ದಿನಾಚರಣೆಯ ಈ ಸಂದರ್ಭದಲ್ಲಿ ಶೋಷಣೆ, ದಬ್ಬಾಳಿಕೆಯ ವಿರುದ್ಧ ಹೋರಾಡಿ ಮುಂದಿನ ಪೀಳಿಗೆಯವರಿಗೆ ಸ್ಪೂರ್ತಿಯಾದ ಈ ಹೆಸರಿಲ್ಲದ ಹೋರಾಟಗಾರರನ್ನೂ ಒಂದು ಕ್ಷಣ ನೆನೆಯೋಣ.

 

ಆಧಾರ:  India’s Struggle for Independence : By Bipan Chandra, Mridula Mukherjee, Aditya Mukherjee, K.N.Panikkar, Sucheta Mahajan, PENGUIN Books

 

 

Rating
Average: 5 (1 vote)

Comments