ಪೆಟ್ರೋಲ್ ಬಂಕಿನ ಕಪ್ಪು ಸುಂದರಿಗೆಂದು ಸ್ವಾತಂತ್ರ್ಯ..........?

ಪೆಟ್ರೋಲ್ ಬಂಕಿನ ಕಪ್ಪು ಸುಂದರಿಗೆಂದು ಸ್ವಾತಂತ್ರ್ಯ..........?

ನಿನ್ನೆ ಆಗಸ್ಟ್ 15 ಭಾರತೀಯರ ಪಾಲಿಗೆ ನಿಜವಾಗಲು ಹೆಮ್ಮೆಯ ದಿನ ಎಲ್ಲರಿಗೂ ತಿಳಿದಿರುವಂತೆ ಅಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂಭ್ರಮದ ದಿನ. ಆ ದಿನದ ಸಂಭ್ರಮಕ್ಕೆ ನನ್ನನ್ನು ನಾನು ಸಿಂಗರಿಸಿಕೊಂಡು ಕುವೆಂಪು ವಿವಿಯಿಂದ ಶಿವಮೊಗ್ಗಕ್ಕೆ ಹೊರಟಾಗ ಬೆಳಿಗ್ಗೆ 6-30 ಬರುವ ದಾರಿ ಯುದ್ಧಕ್ಕೂ ಪುಟ್ಟ ಪುಟ್ಟ ಮಕ್ಕಳು ಸಮವಸ್ತ್ರ ಧರಿಸಿ ನಲಿಯುತ್ತಾ ಹಾಡುತ್ತಾ ಸಾಗುತ್ತಿರುವ ದೃಶ್ಯ ಕಂಡು ಮನಸ್ಸು ಯಾಕೋ ಸಂತೋಷದಿಂದ ಮಗ್ಗಲು ಬದಲಿಸಿತು. ಹಾಗೆ ಪ್ರಪುಲ್ಲಗೊಂಡ ಮನಸ್ಸಿನೊಂದಿಗೆ ನೆಹರು ಕ್ರಿಡಾಂಗಣಕ್ಕೆ ಬಂದಾಗ ಸಮಯ 8-30 ಅಷ್ಟರಲ್ಲಾಗಲೇ ಇಡೀ ಕ್ರಿಡಾಂಗಣವೇ ಸ್ವಾತಂತ್ರೋತ್ಸವದ ಸಂಭ್ರಮಕ್ಕೆ ಸಿಂಗರಿಸಿಕೊಂಡು ನಲಿಯುತ್ತಿತ್ತು. ಇಡೀ ಕ್ರಿಡಾಂಗಣದ ಆವರಣವೇ ಸಂತಸದಿಂದ ತುಂಬಿ ತುಳುಕುತ್ತಿತ್ತು. ಪುಟ್ಟ ಪುಟ್ಟ ಮಕ್ಕಳು ಅವರನ್ನು ಕರೆತರುತ್ತಿದ್ದ ಪಾಲಕರು ಆ ಮಕ್ಕಳ ವೇಷ ಭೂಷಣ, ಅವರ ಕಣ್ಣಿನಲ್ಲಿದ್ದ ಉತ್ಸಾಹ, ಜೊತೆಗೆ ಪೋಲಿಸ್ ಕವಾಯತು, ಅವರ ನೀಟಾದ ಸಮವಸ್ತ್ರ ಎಲ್ಲವು ಮನಸೂರೆಗೊಳ್ಳುವಂತಿದ್ದವು. ಆಗ ಪ್ರಾರಂಭವಾಯಿತು ರಾಜಕಾರಣಿಗಳ ಭಾಷಣ ಅವರುಗಳ ಇಡೀ ಭಾಷಣದ ಸಾರಾಂಶ 'ದೇಶ ಬದಲಾಗುತ್ತಿದೆ, ಬಡತನದ ನಿರ್ಮೂಲನಾ ಹಂತ ತಲುಪಿದ್ದೇವೆ, ಸಾವಿರಾರು ಉದ್ಯೋಗ ಸೃಷ್ಟಿಸಿದ್ದೇವೆ, ಎಲ್ಲಕ್ಕಿಂತ ಮಿಗಿಲಾಗಿ ಗ್ರಾಮೀಣ ಜನರ ಮತ್ತು ರೈತರ ಕಷ್ಟಕೋಟಲೆಗಳು ಕಳೆದು ಅವರ ಬದುಕಿನಲ್ಲಿ ಬೆಳಕು ಮೂಡುತ್ತಿದೆ, ಮಹಿಳೆ ಮಕ್ಕಳ ಅಭಿವೃದ್ದಿಗೆ ಸರಕಾರ  ಬದ್ಧವಾಗಿದೆ ಒಟ್ಟಾರೆ ಭಾರತದ ಸ್ವಾತಂತ್ರ್ಯಕ್ಕೆ ಈಗ ನಿಜವಾದ ಅರ್ಥದಕ್ಕುತ್ತಿದೆ' ಎಂಬರ್ಥದ ಮಾತುಗಳನ್ನು ಕೇಳುತ್ತಾ ಕ್ರಿಡಾಂಗಣದಿಂದ ಹೊರ ಬಂದು ಬೈಕ್ ಹತ್ತಿ ಗೋಪಿ ವೃತ್ತದಿಂದ ಬಲಕ್ಕೆ ತಿರುಗಿ ಸ್ನೇಹಿತನಿಗೆ ಪೋನ್ ಮಾಡುವ ಎಂದು ಕಾಯಿನ್ ಬಾಕ್ಸ್ ಹುಡುಕುತ್ತಿರುವಾಗ ಹಿಂದಿನಿಂದ 'ಸ್ವಾಮಿ ಸಣ್ಣ ಮಗು ಹಾಲು ತಗೋಬೇಕು ಹಣವಿಲ್ಲ ದಯವಿಟ್ಟು ಸಹಾಯ ಮಾಡಿ' ಎಂಬ ಧ್ವನಿ ಕೇಳಿ ತಿರುಗಿದರೆ ಸುಮಾರು 9-10 ವರ್ಷದ ಹುಡುಗಿ 8-9 ತಿಂಗಳ ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡು ಹಣಕ್ಕಾಗಿ ಅಂಗಲಾಚುತ್ತಿರುವುದನ್ನು ನೋಡುತ್ತಿದ್ದರೆ ಮನಕಲುಕುವಂತಿತ್ತು. ಹಾಗೆ ಅಲ್ಲಿಂದ ಮುಂದೆ ಹೋದರೆ ಆಗ ತಾನೆ ನೆಹರು ರಸ್ತೆಯಲ್ಲಿ ಅಂಗಡಿ ಬಾಗಿಲುಗಳನ್ನು ತೆರೆದು ಕಸ ಗುಡಿಸುತ್ತಿರುವ 18-20 ವರ್ಷದ ಒಳಗಿರುವ ಹುಡುಗಿಯರು, ಹಾಗೆ ನಡೆಯುತ್ತಾ ಹೋದಂತೆ ಎಸ್.ಎನ್  ಮಾರ್ಕೆಟ್ನ  ಪುಟ್ಪಾತಿನಲ್ಲಿ ಆಗತಾನೆ ಬೆಳಿಗ್ಗೆ 4 ರಿಂದ ಸೊಪ್ಪಿನ ವ್ಯಾಪಾರ ಮುಗಿಸಿ ಕಾಲಿ ಚೀಲ, ಧೂಳು ತುಂಬಿರುವ ಬಟ್ಟೆ ಧರಿಸಿ ಬಸ್ಸಿಗಾಗಿ ಸಾಲುಗಟ್ಟಿರುವ ಜನಸಮೂಹವನ್ನೆ ನೊಡುತ್ತಾ ಬೈಕ್ನ ಇಂಗ್ನೆಷನ್ ಕಣ್ಣಿಗೆ ಬೀಗ ತುರುಕಿ ಪೆಟ್ರೋಲ್ ಬಂಕ್ನಲ್ಲಿ ನನ್ನ ಇನಿ (ಬೈಕ್ ಹೆಸರು) ಯನ್ನು ನಿಲ್ಲಿಸಿದಾಗ ಮತ್ತೆ ಒಂದು ಹೆಣ್ಣು ಧ್ವನಿ 'ಎಷ್ಟು ಹಾಕಲಿ ಸಾರ್' ತಲೆ ಎತ್ತಿ ನೋಡಿದರೆ ಸುಮಾರು 16-17 ವರ್ಷದ ಕಪ್ಪು ಬಣ್ಣದ ಮುಗ್ಧ ಕಣ್ಣುಗಳ ಹುಡುಗಿ ಪೆಟ್ರೋಲ್ ಪಂಪ್ ಕೈಯಲ್ಲಿ ಹಿಡಿದು ನನ್ನ ಉತ್ತರಕ್ಕಾಗಿ ಕಾಯುತ್ತಿದ್ದಳು. ನಾನು ಸುಮ್ಮನೆ ಒಂದು ಲೀಟರ್ ಪೆಟ್ರೋಲ್ ಹಾಕಿಸಿ ಹಣ ಕೊಡುವಾಗHappy Independence Day ಅಂದೆ ತಕ್ಷಣ ಆ ಹುಡುಗಿ ಉತ್ಸಾಹದಿಂದsame to you sir ಅಂದಳು ನಾನು ಕೇಳಿದ ಎಲ್ಲಿಯವರೆಗೆ ಓದಿದ್ದಿರ ಅಂದೆ, ಅದಕ್ಕೆ ಅ ಹುಡುಗಿ 10-ನೆ ತರಗತಿ ಅಂದಳು ನಾನು ಮತ್ತೆ ಕೇಳಿದೆ ಯಾಕೆ ಮುಂದೆ ಒದಲಿಲ್ಲ ಅಂತ . ಮನೆಯಲ್ಲಿ ಒಬ್ಬಳೆ ಸರ್ ಏನ್ ಮಾಡಲಿ ಕಷ್ಟ, ದುಡಿಮೆ ಆಗಬೇಕಲ್ಲ, ಅಂತ ಒಂದು ಅಸಹಾಯಕ ನಗೆ ನನ್ನತ್ತ ಬೀರಿ, ತನ್ನ ಕೆಲಸದಲ್ಲಿ ತಲೀನರಾದರು.

ಯಾಕೋ ಮನಸ್ಸು ಸ್ವಾತಂತ್ರ್ಯದ ಬಗ್ಗೆ ಯೋಚಿಸಲು ಪ್ರಾರಂಭಿಸಿತು. ಯಾಕೆ ವ್ಯವಸ್ಥೆ ಹೀಗೆ ನಿಜವಾಗಲು ಭಾರತ ಅಭಿವೃದ್ಧಿಯಾಗುತ್ತಿದೆಯೇ? ನಿಜವಾಗಲು ಇಂದು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿರುವವರು ಯಾರು? ಯಾಕೆ ಇವರುಗಳ ಪಾಲಿಗೆ ಸ್ವಾತಂತ್ರ್ಯದ ದಿನವು ಮಾಮೂಲಿ ದಿನಗಳಂತೆಯೇ ಕಳೆಯುತ್ತಿದೆ? ರಾಜಕಾರಣಿಗಳು ಹೇಳುವ ಅಭಿವೃದ್ಧಿ ಯಾವ ವರ್ಗದ್ದು ಎಂಬ ಪ್ರಶ್ನೆಗಳೇ ಮನಸ್ಸನ್ನು ಕೊರೆಯಲಾರಂಭಿಸಿದವು. ನೋಡು ನೋಡುತ್ತಲೇ ಬೆಳಿಗ್ಗೆ ಕಂಡ ಶಾಲೆಯ ಮಕ್ಕಳು ಮುಖದಲ್ಲಿನ ಸಂತಸ, ಕ್ರಿಡಾಂಗಣದಲ್ಲಿ ನೆರೆದಿದ್ದ ಜನರ ಕಣ್ಣಿನಲ್ಲಿದ್ದ ನಿರೀಕ್ಷೆ, ಎಲ್ಲ ಮಾಯವಾಗಿ ಆ 6-7 ತಿಂಗಳ ಮಗುವನ್ನು ಹೊತ್ತ ಹುಡುಗಿ, ಪೆಟ್ರೋಲ್ ಬಂಕ್ನಲ್ಲಿ ಇಂಗ್ಲೀಷಿನಲ್ಲಿ ಉತ್ತರಿಸಿದ ಕಪ್ಪು ಸುಂದರಿ, ನಿಜವಾಗಿ ನಲಿಯಬೇಕಾದ ವಯಸ್ಸಿನಲ್ಲಿ ಯಾರದೋ ಅಂಗಡಿ, ಬೀದಿ ಗುಡಿಸುತ್ತಿದ್ದ ಆ ಹುಡುಗಿಯರು, ಬೆಳಗಿನ ವ್ಯಾಪಾರ ಮುಗಿಸಿ ಹೊರಡುತ್ತಲಿರುವ ಆ ದುಡಿಯುವ ಜೀವಿದ ಮುಖಗಳು, ಮನದ ನೆನಪಿನಲ್ಲಿ ತೇಲಲಾರಂಭಿಸಿದವು. ವ್ಯವಸ್ಥೆ ಯಾಕೆ ಹೀಗಿದೆ, ಸ್ವಾತಂತ್ರ್ಯ ನಿಜವಾಗಲು ಯಾವ ವರ್ಗಕ್ಕೆ ಸಿಕ್ಕಿದೆ. ಇವರುಗಳು ಪಾಲಿಗೆ ಸ್ವಾತಂತ್ರ್ಯ ಎಂದು? ಎಂಬೆಲ್ಲಾ ಪ್ರಶ್ನೆಗಳೊಂದಿಗೆ ನಿದ್ದೆಗೆ ಜಾರಿ ಬೆಳಿಗ್ಗೆ ಎದ್ದು ದಿನಪತ್ರಿಕೆಗಳನ್ನು ನೋಡಿದರೆ ಎಲ್ಲಾ ಪತ್ರಿಕೆಯ ಮುಖ ಪುಟದಲ್ಲು 'ಭಾರತ ಪ್ರಕಾಶಿಸುತ್ತಿದೆ' ಎಂಬರ್ಥದ ರಾಜಕೀಯ ನಾಯಕರ ಹೇಳಿಕೆಗಳೇ ಕಣ್ಣಿಗೆ ರಾಚುವಂತೆ ಕಾಣುತ್ತಿದ್ದವು. ಇದೇನಾ ನಮ್ಮ ವ್ಯವಸ್ಥೆ ಯುವ ಜನತೆಯನ್ನು ಬಳಸಿಕೊಳ್ಳುತ್ತಿರುವ ಪರಿ. ನಿಜವಾಗಲು ಭಾರತ ಪ್ರಕಾಶಿಸುತ್ತಿದೆಯೇ? ಯಾರ ಅಭಿವೃದ್ಧಿಯನ್ನು ದೇಶದ ಅಭಿವೃದ್ಧಿ ಎಂದು ಇವರೆಲ್ಲ ಕರೆಯುತ್ತಿದ್ದಾರೆ. ಯಾಕೊ ಮತ್ತೆ ಮತ್ತೆ ಅವೇ ಮುಖಗಳೇ ನೆನಪಾಗುತ್ತಿವೆ. ಈ ಪ್ರಶ್ನೆಗಳಿಗೆಲ್ಲ ಉತ್ತರಿಸುವ ನಾಯಕರನ್ನು ಇಂದಿನ ರಾಜಕಾರಣಿಗಳಲ್ಲಿ ಹುಡುಕಿ ಮನಸ್ಸು ಕಣ್ಣು ಎರಡೂ ಸೋಲುತ್ತಿವೆ.
 

Happy Independence Day

Rating
No votes yet

Comments