ನನ್ನನ್ನು ನಂಬಿ, ನಾನೆಂದೂ ಸತ್ಯ ನುಡಿಯಲಾರೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು--೩೦
(೧೫೬) ವಿನಯವಂತಃ ಅಸಲಿಯಾಗಿ ಚಿಂತಿಸುವ ನನ್ನ ಪ್ರತಿಭೆಯನ್ನು ನಾನು ಅನುವಂಶಿಕವಾಗಿ ಪಡೆದಿದ್ದೇನೆ ಎನ್ನಿಸುತ್ತದೆ! ದುರಹಂಕಾರಿಃ ಅನುವಂಶಿಕವಾಗಿ ನನಗೆ ಬಂದಿರುವ ಚಿಂತನೆಯ ಪ್ರತಿಭೆಯನ್ನು ಅಸಲಿಯಾಗಿ ನಾನು ಈ ಜನ್ಮದಲ್ಲೇ ರೂಢಿಸಿಕೊಂಡದ್ದು!
(೧೫೭) ನಿಮ್ಮ ಬಡ-ಹಾಸ್ಯವನ್ನು (ಪಿ.ಜೆ=ಪೂರ್ ಜೋಕ್) ಯಾರಾದರೂ ಮೆಚ್ಚಿಕೊಳ್ಳದಿದ್ದಲ್ಲಿ ಅದಕ್ಕಿರುವ ಎರಡನೇ ಕಾರಣವೆಂದರೆ ಅದರಲ್ಲಿ ಹಾಸ್ಯವು ಇಲ್ಲದಿರುವುದು! ಮೊದಲ ಕಾರಣವೆಂದರೆ ಮೆಚ್ಚದವರಲ್ಲಿರುವ ಹಾಸ್ಯಪ್ರಜ್ಞೆಯ ಕೊರತೆ!
(೧೫೮) ಅತ್ಯಂತ ಆಸಕ್ತಿಕರ ವಿಷಯವೊಂದರ ಗ್ರಹಿಕೆಯು ಅತಿ ನಿಧಾನಗತಿಯಲ್ಲಿ ಆಗುವುದನ್ನೇ ಬೇಸರವೆನ್ನುತ್ತೇವೆ! ಉದಾಹರಣೆಗೆ ಒಂದೇ ದಿನದಲ್ಲಿ ಮನುಷ್ಯನ ಆಯಸ್ಸು ಮುಗಿದುಹೋಗಿಬಿಡುವುದು!
(೧೫೯) ನನ್ನನ್ನು ನಂಬಿ, ನಾನೆಂದೂ ಸತ್ಯ ನುಡಿಯಲಾರೆ! ಕಾರಣಃ ಸತ್ಯ ಆತ್ಯಂತಿಕವಲ್ಲ!
(೧೬೦) ಸತ್ಯ, ನೀತಿ ಮತ್ತು ನ್ಯಾಯಕ್ಕೆ ಪ್ರಾಮುಖ್ಯತೆ ನೀಡುವುದೆಂದರೆ ಅ-ಸತ್ಯ, ಅ-ನೀತಿ ಮತ್ತು ಅ-ನ್ಯಾಯಗಳನ್ನು ಅವಮಾನ ಮಾಡಿದಂತೆ. ಖಳನಾಯಕನಿಲ್ಲದೆ ನಾಯಕ ಹೇಗಾದಾನು? ಕಂಪ್ಯೂಟರಿಗೆ ವೈರಸನ್ನು ಅನ್ವೇಷಿಸಿದವರು ಮಾತ್ರ ಈ ಯುಗಯುಗಾಂತರದ ಅನ್ಯಾಯವನ್ನು ಸರಿದೂಗಿಸಿದವರು!