ವಿಚಿತ್ರ ಸಂಗತಿಗಳು

ವಿಚಿತ್ರ ಸಂಗತಿಗಳು

ಯಾಕ್ರೀ ಗೌಡರೆ, ಮುಖ ಅನ್ನೋದು ಒಂದೇ ಟ್ಯೂಬಿಗೆ 10ಕಡೆ ಪಂಕ್ಚರ್ ಹಾಕದಂಗೆ ಅಯ್ತಲ್ಲಾ ಅಂದ ತಂಬೂರಿ ತಮ್ಮಯ್ಯ. ಹೂ ಕಲಾ, ಯಾಕೋ ಬೆಳಗ್ಗೆ ಎದ್ದ ಟೇಂ ಸರಿಯಿಲ್ಲ .  ಮುಖ ತೊಳೆಯೋಕ್ಕೆ ಅಂತಾ ಬಚ್ಚಲು ಮನೆಗೆ ಹೋದ್ರೆ ಜಾರಿ ಬಿದ್ದು ಹಣೆಗೆ ಹೊಡ್ತ ಬಿತ್ತು. ಕೆರೆ ತಾವ ಹೋದ್ರೆ ಪಂಚೆ ಸಿಕ್ಕಾಕೊಂಡು ಮುಳ್ಳಿನ ಮ್ಯಾಕೆ ಬಿದ್ದು, ಕೆನ್ನೆ ಹರೀತು. ಇನ್ನೇನು ತಿಂಡಿ ತಿನ್ನವಾ ಅಂತ ಹೋದ್ರೆ ಬಿಸಿ ಉಪ್ಪಿಟ್ಟು ಬಾಯಿ ಸುಡ್ತು. ಮನೆಯಿಂದ ಹೊರ ಬರುವಾ ಅಂತಾ ಬಂದ್ರೆ ಚಪ್ಪಲಿ ಕಿತ್ತೋಗಿ ಹೆಣ್ಣು ಐಕ್ಳು ಮ್ಯಾಕೆ ಬಿದ್ದೆ. ಅವರು ಕೆರ ತಗೊಂಡು ಜ್ವರಾ ಬರೋ ತನಕ ಹೊಡೆದ್ರು ಕಲಾ. ಅದಕ್ಕೆ ಮಾತ್ರೆ ತಂದೀವ್ನಿ ಕಲಾ ಅಂತಿದ್ದಾಗೆನೇ ನಿಂಗ, ಸುಡೋ ಚಾ ತಂದು ಗೌಡಪ್ಪನ ತೊಡೆ ಮ್ಯಾಕೆ ಬೀಳಸ್ದ. ಅಯ್ಯಯ್ಯೋ ನಿನ್ ಮನೆ ಕಾಯ್ವೋಗ ಅಂದ ಗೌಡಪ್ಪ. ನೀರು ಹುಯ್ದರೆ ಸಣ್ಣ ಚೆಂಡು ಇದ್ದಂಗೆ ಕೆಂಪಗೆ ಬೊಬ್ಬೆ ಬಂದಿತ್ತು. ಟೇಂ ಸರಿ ಇಲ್ಲಾ ಅಂತಾ ಎದ್ದು ಮನೆಗೆ ಹೊಂಟ. ಅಟ್ಟೊತ್ತಿಗೆ, ಯಾವನೋ ಬಂದು ನಮಸ್ಕಾರ ಗೌಡ್ರೆ ಅಂದ. ಸಂದಾಕಿ ಡ್ರೆಸ್ ಮಾಡ್ಕಂಡಿದ್ದ. ಯಾರಲಾ, ನಾನು ಹಲ್ಲುಪುಡಿ ಕಂಪೆನಿಯಿಂದ ಬಂದಿದೀನಿ.

ಈ ಹಳ್ಳಿಗೆ ನಿಮ್ಮನ್ನೇ ಸೂಪರ್ ವೈಸರ್ ಮಾಡಬೇಕು ಅಂತಾ ನಮ್ಮ ಬಾಸ್ ಕಳಿಸಿದ್ದಾರೆ ಅಂದ. ಹಲ್ಲು ಪುಡಿ ಒಸಿ ತೋರಿಸು ಅಂದು. ಗೌಡಪ್ಪ ಅಲ್ಲೇ ಇದ್ದ ನೀರಲ್ಲೇ ಹಲ್ಲು ಉಜ್ಜಿ ಬಾಯಿ ಮುಕ್ಕಳಿಸಿದ. ಲೇ ಏನ್ಲಾ ಇದು ಚಾ ಚಲ್ಟದ ಪುಡಿ ಮತ್ತು ಇದ್ದಿಲು ಮಿಕ್ಸ್ ಮಾಡದಂಗೆ ಐತಲ್ಲಾ ಅಂದ ಗೌಡಪ್ಪ. ಮತ್ತೆ ನೀವು ಕೊಡೋ ಎರಡು ರೂಪಾಯಿಗೆ ಇನ್ನೇನು ಕ್ಲೋಸ್ ಅಪ್ ಕೊಡಕ್ಕಾ ಆಯ್ತದೆ. ಲೇ ಹಳ್ಯಾಗೆಲ್ಲಾ ಇದನ್ನ ಮಾರಿದರೆ ನಾಯಿ ಹೊಡೆದಂಗೆ ಹೊಡಿತಾರೆ ಅಂದ. ಅದಕ್ಕೆ ಆ ವಯ್ಯ ಹಿಂಗಾ ಅಂದು ಸಲ್ಟು, ಪ್ಯಾಂಟು ಎಲ್ಲಾ ಬಿಚ್ಚಿ ಚಡ್ಯಾಗೆ ಡ್ಯಾನ್ಸ್ ಮಾಡಕ್ಕೆ ಸುರು ಹಚ್ಕಂಡ. ಗೌಡಪ್ಪಂದು ಸಲ್ಟು ಹರದ. ಲೇ ಸುಬ್ಬ. ಇವನು ಹಲ್ಲುಪುಡಿಯೋನು ಅಂತಾನೆ ಹಿಂಗ್ಯಾಕಲ್ಲಾ ಆಡ್ತಾನೆ. ಸ್ವಲ್ಪ ಹೊತ್ತಿಗೆ ವ್ಯಾನ್ ಬಂದು ಅವನನ್ನು ಎತ್ತಾಕಂಡು ಹೋದ್ರು. ನೋಡಿದ್ರೆ ಹಲ್ಲು ಪುಡಿ ಮಾರಿ ಕಾಸು ಕಳಕಂಡು ಹುಚ್ಚು ಹಿಡಿದೈತಂತೆ.ಅಯ್ಯಯ್ಯಪ್ಪಾ.

ಲೇ ನಾನು ಸೀದಾ ಮನೆಗೆ ಹೋಯ್ತೀನಿ ಯಾಕೋ ಟೇಂ ಸರಿಯಿಲ್ಲ ಅಂದು ನಡೀಲಾ ಕೋಮಲ್ ಅಂದು ಗೌಡಪ್ಪ ನನ್ನ ಜೊತೆ ಹೊಂಟ.ಕಾರ್ ನಾಗೆ ಯಾರೋ ಬಂದು ಗೌಡಪ್ಪಂಗೆ ಸಿದ್ದೇಸನ ಗುಡಿ ಎಲ್ಲಿ ಬತ್ತದೆ ಅಂದರು. ಅದು ಬರಕ್ಕಿಲ್ಲಾ ನೀವೇ ಹೋಗಿ ಅಂದ ಗೌಡಪ್ಪ. ವಯಸ್ಸು ನಾಲ್ಕು ಕತ್ತೆಗೆ ಆಗೋ ಅಷ್ಟು ಆಗೈತೆ, ಅಡ್ರೆಸ್ ಹೆಂಗೆ ಹೇಳಬೇಕು ಅಂತ ಗೊತ್ತಿಲ್ಲ ಅಂದು ಸಾನೇ ಉಗಿದ್ರು. ಬಾರಲಾ ಹೋಗುವಾ, ಇನ್ನು ಯಾರು ಕಿತಾನೂ ಮಾತಾಡಕ್ಕಿಲ್ಲ ಅಂದ. ತಡೀಲಾ ಹೆಂಡರು ಬಟ್ಟೆ ಒಗೆಯೋ ಸೋಪು ತರಕ್ಕೆ ಹೇಳವ್ಳೆ ಅಂದು ಅಲ್ಲೇ ಇದ್ದ ರಾಜಮ್ಮನ ಅಂಗಡಿಗೆ ಹೋಗಿ ಸಿಗ್ನಲ್ ಮಾಡ್ದ. ಯಾಕೆ ಹೆಂಗೈತೆ ಮೈಗೆ ಅಂದ್ಲು ರಾಜಮ್ಮ. ಯಾಕವ್ವಾ ಗೌಡ್ರಿಗೆ ಅಂಗೆ ಅಂತ್ಯಲ್ಲಾ ಅಂದೆ.  ಮಗ ಗೌಡಪ್ಪWHEEL ಸೋಪನ್ನ ಸಿಗ್ನಲ್ ನಲ್ಲಿ ತೋರಿಸಿದ್ದು ಸ್ಟೈಲ್ ಅಂಗಿತ್ತು. ರಾಜಮ್ಮನ ಗಂಡ ಬಂದು ಗೌಡಪ್ಪನ ತಲೆ ಮೇಲೆ ಎರಡು ಹಾಕು ಹೋದ. ಸರಿ ಅಲ್ಲಿಂದ ಮನೆ ಕಡೆ ಹೊಂಟ್ವಿ.

ಕಟ್ಟಿಗೆ ಒಡೆಯೋ ಕಿಸ್ನ ಸಿಕ್ಕ. ಏನ್ಲಾ ಎಲ್ಲಲಾ ಹೋಗಿದ್ದಿ. ನಮ್ಮ ರಹಮತ್ ಹೆಂಡರು ಸತ್ತಿದ್ಲು. ಹೆಣಕ್ಕೆ ಕಟ್ಟಿಗೆ ಬೇಕು ಅಂದ್ರು ಕೊಟ್ ಬರವಾ ಅಂತಾ ಹೋಗಿದ್ದೆ ಅಂದ. ಗೌಡ್ರೆ ಒಂದು ಸಾರಿ ನೀವು ಹೋಗಿ ಅವರಿಗೆ ಧೈರ್ಯ ಹೇಳಿ ಬನ್ನಿ ಅಂದ ಕಿಸ್ನ. ಸರಿ ಮಸಾಣಕ್ಕೆ ಹೋದ್ವಿ. ನಮ್ಮ ಗೌಡಪ್ಪ ಹೋಗಿ ಬಿಕ್ಕಿ ಬಿಕ್ಕಿ ಅಳಕ್ಕೆ ಸುರು ಹಚ್ಕಂಡ. ಅವರ ಮನೆಯವರೆಲ್ಲಾ ಸುಮ್ಕಿದಾರೆ. ಇವನು ಯಾಕೆ ಅಳ್ತಾ ಇದಾನೆ ಅಂತ ತಮ್ಮಯ್ಯ ಗೌಡ್ರೆ ಸುಮ್ಕಿದ್ರಿ. ನೋಡಲಾ ನಮ್ಮ ರಹಮತಿ ಮಗಳು ಮೆಹರುನ್ನೀಸಾ ಹೋಗ್ಬಿಟ್ಳಂತೆ ಅಂದಾ. ಇವನಿಗೆ ಹೆಂಗೆ ಅವಳ ಹೆಸರು ಗೊತ್ತು ಅಂತಾ ನಾನು ಅಂತ್ಕೊತ್ತಿದ್ದಾಗೆನೇ ಅಂಗೇ ಅವರ ಮನೆಯವರು ಬಂದು ಮಾರೇ ಸಾಲೇಕೋ ಅಂದು ದಬಾ ದಬಾ ಅಂತಾ ಹೊಡೆದಿದ್ದೇಯಾ. ಯಾಕಲಾ, ಸತ್ತಿರೋದು ಅವರ ಮನೆ ಸೆಂಚುರಿ ಬಾರಿಸಿತ್ತಲ್ಲಾ ರಮೀಜಾಬಿ, ಆ ಮುದುಕಿ ಅಂದೆ, ಅಂಗಾ,

ಮಗಾ ಕಿಸ್ನ ಸಿಗಲಿ ತಾಳು ಅಂದ ಗೌಡಪ್ಪ. ಹೊಡೆದ ಹೊಡೆತಕ್ಕೆ ಗೌಡಪ್ಪ ಅಂಗೇ ತಲೆ ತಿರುಗಿ ಗುಂಡಿ ಪಕ್ಕ ಬಿದ್ದ.

ಸರಿ ಕತ್ತಲಾಗಿತ್ತು, ಗುಂಡ್ಯಾಗೆ ಮುದುಕಿನಾ ಮಣ್ಣು ಮಾಡಬೇಕು, ಅಂತಾ ಎಲ್ಲಾ ರೆಡಿ ಮಾಡ್ಕಂಡ್ರು. ತಂದಿದ್ದ ಗ್ಯಾಸ್ ಲೈಟ್ ಆರಿ ಹೋತು. ಮಣ್ಣೆಲ್ಲಾ ಮಾಡಿ ಎಲ್ಲಾ ಹೊಂಟ್ವಿ. ಯಾರೋ ಕಮ್ಮಿ ಆಗೀದರಲ್ಲಾ ಅಂದಾ, ರಹಮತಿ. ಲೇ ವಾಸನೆ ಗೌಡಪ್ಪ ಎಲ್ಲಲಾ ಅಂತಾ ಎಲ್ಲಾರೂ ಮಸಾಣಕ್ಕೆ ಓಡಿದ್ರೆ. ಕತ್ತಲಾಗೆ ಮುದುಕಿನ ಮಣ್ಣು ಮಾಡೋ ಬದಲು ನಮ್ಮ ಗೌಡಪ್ಪನ್ನ ಮಣ್ಣು ಮಾಡಿದ್ರು. ಮುದುಕಿ ಹೆಣ ಬಾಯಿ ಬಿಟ್ಕಂಡು ಅಲ್ಲೇ ಇತ್ತು. ಜಲ್ದಿ ನಿಖಾಲ್ ರೇ, ವರನಾ ಗೌಡಪ್ಪ ಮರೇಗಾರೆ , ಗಾವ್ ಮೇ ಜಗಡಾ ಹೋತಾರೆ, ಸಾಲೆ ಜಲ್ದಿ ನಿಖಾಲ್ ರೇ ಅಂದ ರಹಮತಿ. ಬೇಗ ಬೇಗ ಮಣ್ಣು ತೆಗೆದರೆ ಗೌಡಪ್ಪ ಏದುಸಿರು ಬಿಟ್ಕಂಡು ಎದ್ದ. ಲೇ ಇವರು ಸಮಾಧಾನ ಮಾಡಕ್ಕೆ ಅಂತ ನನ್ನನ್ನೇ ಮಣ್ಣು ಮಾಡಕ್ಕೆ ಹೊಂಟಿದ್ರಲ್ಲೋ. ಇನ್ನು ನಾನು ಸಾನೆ ಕೆಲಸ ಮಾಡದು ಐತೆ ಅಂದಾ. ಈಗ ಬೆಳಗ್ಗೆ ಎದ್ರೆ ಮೊದಲು ಸಿದ್ದೇಸನ ಪೋಟೋ ನೋಡಿ. ಆ ಮ್ಯಾಕೆ ಇನ್ನೇನಿದ್ರು. ಆಮ್ಯಾಕೆ ಮತ್ತೊಂದು ವಿಸಯ ಮಸಾಣಕ್ಕೆ ಗೌಡಪ್ಪ ಲೈಟ್ ದಾನ ನೀಡಿದಾನೆ.

Rating
No votes yet

Comments