ವಿದ್ಯುತ್ ಸಮಸ್ಯೆ- ದೇಶದ ಗಡಿಯಾರವನ್ನು ಎರಡು ಗಂಟೆ ಹಿಂದಕ್ಕಿಡೋಣ.
ವಿದ್ಯುತ್ ಸಮಸ್ಯೆಯಿಂದ ಹೆಚ್ಚಿನ ಹೊಡೆತ ತಾಳುತ್ತಿರುವುದು ಸಣ್ಣ ಕೈಗಾರಿಕೆಗಳು. ಸಣ್ಣಕೈಗಾರಿಕೆಗಳಲ್ಲಿ ತಮಗಾಗಿ ಉತ್ಪಾದನೆ ಮಾಡಿಕೊಳ್ಳುವ ಸಾಮರ್ಥ್ಯ ಇರುವುದಿಲ್ಲ. ಸರಕಾರಿ ವಿದ್ಯುತ್ತೇ ಬೇಕು. ಸಣ್ಣ ಕೈಗಾರಿಕೆಗಳು ದೇಶದ ಆರ್ಥಿಕತೆಯ ಜೀವಾಳ; ಕೃಷಿ ಬೆನ್ನೆಲುಬು!
ನಮ್ಮ ದೇಶದಲ್ಲಿ ಬೆಳಕು ಬೆಳಗ್ಗೆ ೬ ಗಂಟೆಗೆ ಹರಿಯುತ್ತದೆ. (ಹಿಮಾಲಯದಲ್ಲಿ, ಪೂರ್ವ ರಾಜ್ಯಗಳಲ್ಲಿ ೪ಕ್ಕೆ, ಉತ್ತರಾಯಣ ದಕ್ಷಿಣಾಯಣ ಗಳಲ್ಲಿ ಒಂದರ್ಧ ಗಂಟೆ ಹೆಚ್ಚು ಕಡಿಮೆಯಾಗುತ್ತದೆ. ಸರಾಸರಿ ಆರಕ್ಕೆ ಎಂದು ಇಟ್ಟುಕೊಳ್ಳೋಣ) ಸರಕಾರಿ ವೇಳೆಯ ಪ್ರಕಾರ ಆಫೀಸುಗಳು ಶುರುವಾಗುವುದು ಬೆಳಿಗ್ಗೆ ಹತ್ತಕ್ಕೆ. ಕೆಲಸದ ವೇಳೆ ಹತ್ತರಿಂದ ಸಂಜೆ ಆರಕ್ಕೆ.
ಆಪೀಸುಗಳನ್ನು ಬೆಳಗ್ಗೆ ಎಂಟಕ್ಕೆ ಆರಂಭಿಸೋಣ. ಆರು ಗಂಟೆಗೆ ಎದ್ದರೆ ಎರಡು ತಾಸಲ್ಲಿ ನಿತ್ಯಕರ್ಮಗಳನ್ನು ಮುಗಿಸಬಹುದು. ಎಂಟರಿಂದ ಮದ್ಯಾಹ್ನ ಮೂರು ಗಂಟೆಯ ವರೆಗೆ ಆಪೀಸುಗಳು ತೆರೆದಿರುತ್ತವೆ. ಈ ಸಮಯದಲ್ಲಿ ಸಾಕಷ್ಟು ಬೆಳಕು ಇರುವುದರಿಂದ ವಿದ್ಯುದ್ದೀಪಗಳು ಉರಿಯಬೇಕಿಲ್ಲ. ಓವರ್ ಟೈಮ್ ಮಾಡಿದರೂ ಆರು ಗಂಟೆಗೆ ಮುಗಿಯುತ್ತದೆ. ಅಷ್ಟಾದರೂ ವಿದ್ಯುದ್ದೀಪಗಳ ಅವಶ್ಯಕತೆ ಬೀಳುವುದಿಲ್ಲ. ಹತ್ತಕ್ಕೆ ಶುರುವಾದರೆ ಮನೆಗೆ ಹೊರಡುವುದು ಎಂಟು ಗಂಟೆಯಾಗಿ ವಿದ್ಯುತ್ ಬಳಕೆಯಾಗುತ್ತದೆ.
ಮೂರು ಗಂಟೆಗೆ ಮನೆಗೆ ಬರುವುದರಿಂದ ಸ್ವಲ್ಪ ವಿಶ್ರಾಂತಿ ಪಡೆದು ಸಂಜೆಯ ಶಾಪಿಂಗಿಗೆ ಹೊರಡಬಹುದು.ಶಾಪಿಂಗು ಏಳರಿಂದ ಶುರುವಾಗುವ ಬದಲು ನಾಲ್ಕಕ್ಕೇ ಶುರುವಾಗುವುದರಿಂದ ಕತ್ತಲಾಗುವುದರೊಳಗೆ ಮುಗಿಯುತ್ತದೆ. ರಾತ್ರಿ ಎಂಟರ ಹೊತ್ತಿಗೆಲ್ಲ ಹೊಟಲ್, ಔಷಧಿ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಅಂಗಡಿಗಳನ್ನು ಮುಚ್ಚಬಹುದು. ಇದರಿಂದಾಗಿ ಅಂಗಡಿಗಳಲ್ಲಿ ಬಳಕೆಯಾಗುವ ವಿದ್ಯುತ್ ಉಳಿಯುದಲ್ಲದೇ ಅತೀ ಹೆಚ್ಚು ವಿದ್ಯುತ್ತನ್ನು ಎಳೆಯುವ ಝಗಮಗಿಸುವ ಸೋಡಿಯಂ ದೀಪಗಳು, ಅಂಗಡಿಯ ಬೋರ್ಡುಗಳ ವಿದ್ಯುತ್ ಉಳಿಯುತ್ತದೆ.
ಬೇಗ ಮಲಗಿ ಬೇಗ ಏಳುವುದರಿಂದ ಆರೋಗ್ಯಕ್ಕೂ ಒಳ್ಳೆಯದು.
ಟಿವಿ ಚಾನೆಲ್ ಗಳು ಇಪ್ಪತ್ತನಾಲ್ಕು ತಾಸೂ ಪ್ರಸಾರ ಮಾಡುತ್ತವೆ. ಇಪ್ಪತ್ನಾಲ್ಕು ತಾಸುಗಳ ಬದಲು ಹನ್ನೆರಡು ತಾಸು ಮಾಡಿದರೆ ಒಳಿತಾದೀತು. ಮನರಂಜನೆಯಿಲ್ಲದೇ ಬದುಕಬಹುದು. ಬೇಸಾಯ ಇಲ್ಲದೇ ಬದುಕಲಾದೀತೆ? ಕೈಗಾರಿಕೆ ಇಲ್ಲದೇ ಬದುಕಲಾದೀತೆ? ಇದರ ಇನ್ನೊಂದು ಉಪಯೋಗವೂ ಇದೆ. ಸಂಜೆ ಏಳಕ್ಕೆ ಟಿವಿ ಬಂದ್ ಆದರೆ ಮಕ್ಕಳು ಓದಿನ ಕಡೆ ಗಮನ ಹರಿಸಬಹುದು. ಹಿರಿಯರೂ ಸಹ ಓದು, ಸಂಗ್ರಹ, ಕಲಾತ್ಮಕ ಹವ್ಯಾಸಗಳೆಡೆಗೆ ಹೊರಳಬಹುದು.
ಮನೆಯಲ್ಲಿ ಅತ್ಯಂತ ಹೆಚ್ಚು ವಿದ್ಯುತ್ ಬಳಸುವ ಸಾಧನ ಎಂದರೆ ಟಿವಿ. ಟಿವಿ "ಬಂದ್" ಆದರೆ ಎಂಟು ಟ್ಯೂಬುಲೈಟುಗಳು ಬೆಳಕು ಬೀರುತ್ತವೆ. ಟಿವಿ ನೋಡಿ ಜನ ಉದ್ಧಾರ ಆಗುವುದೂ ಅಷ್ಟರಲ್ಲೇ ಇದೆ!
ಜೊತೆಗೆ ವಿದ್ಯುತ್ ತೆಗೆಯುವುದಾದರೆ ಯಾವ ಯಾವ ತಾಣಗಳಲ್ಲಿ ಎಷ್ಟು ಹೊತ್ತಿಗೆ ತೆಗೆಯಲಾಗುವುದು ಎಂದು ಮೊದಲೇ ತಿಳಿಸಿಬಿಟ್ಟರೆ ಅದಕ್ಕೆ ತಕ್ಕಂತೆ ಕೈಗಾರಿಕೆಗಳಲ್ಲಿ ಕೆಲಸಗಳನ್ನು ಹೊಂದಿಸಿಕೊಳ್ಳಬಹುದು. ನಷ್ಟ ಸಾಕಷ್ಟು ಕಡಿಮೆಯಾಗುತ್ತದೆ.