ಸ್ವತಂತ್ರ
ಸ್ವತಂತ್ರ
’ಸ್ವತಂತ್ರ’ ಎಂಬುದು ನಾಗರೀಕತೆಯ ಉತ್ತುಂಗದ ಸ್ಥಿತಿಯಂತೂ ಹೌದು. ಎಲ್ಲ ಜೀವಿಗಳು ಬಯಸುವ ಅತ್ಯಂತ ಮೂಲಭೂತ ಸ್ಥಿತಿಯೇ ಇದಾಗಿರುವುದು ನಿಜ. ಏಕೆಂದರೆ ಇನ್ನೊಬ್ಬರನ್ನು ಕೇಳದೆ, ಯಾರ ಹಂಗೂ ಇಲ್ಲದೆ ತನ್ನಷ್ಟಕ್ಕೆ ಬದುಕಿನ ವಿವಿಧ ಮಜಲುಗಳನ್ನು ಅನುಭವಿಸುವುದೇ ಅತ್ಯಂತ ನಾಗರೀಕ ವ್ಯವಸ್ಥೆ.
ಇಂತಹ ವ್ಯವಸ್ಥೆಯೊಂದು ಮಾನವ ಸಮಾಜದಲ್ಲಿ ಮೂಡಿಬರಬೇಕಾದರೆ ಸಹಸ್ರ, ಸಹಸ್ರ ವರ್ಷಗಳ ಸಾಮಾಜಿಕ ಪರಿವರ್ತನೆಗಳು ನಡೆದಿರಬಹುದು. ಆದರೂ ಇಂದಿಗೂ ಮನುಷ್ಯ ಸಂಪೂರ್ಣ ಸ್ವತಂತ್ರನಾಗಲಾರ. ಕೆಲವೊಂದು ಸಾಮಾಜಿಕ ಕಟ್ಟುಪಾಡುಗಳು, ಸಂಪ್ರದಾಯಗಳು, ನೀತಿನಿಯಮಗಳು ಮನುಷ್ಯನ ಸ್ವತಂತ್ರಕ್ಕೆ ಕಡಿವಾಣ ಹಾಕಿ ಸಮಾಜ ಸುಸ್ಥಿರವಾಗಿರುವಂತೆ ನೋಡಿಕೊಳ್ಳುತ್ತಿವೆ. ಹೀಗೆ ಸಮಾಜ ಜೀವಿಯಾದ ಮಾನವನಿಗೆ ಕೆಲವಷ್ಟು ಸ್ವತಂತ್ರ ಬೇಕು, ಮತ್ತೆ ಕೆಲವಷ್ಟು ಸ್ವತಂತ್ರದ ಮೇಲೆ ನಿರ್ಬಂಧ ಇರಬೇಕು.
ಮನುಷ್ಯನ ಸಾಮಾಜಿಕ ಬದುಕಿಗೆ ಒಂದು ಮಾರ್ಗದರ್ಶನ ನೀಡುವುದು ರಾಜಕೀಯ ವ್ಯವಸ್ಥೆ. ರಾಜನೊಬ್ಬನ ಅಡಳಿತದಲ್ಲಿ ’ರಾಜಾ ಪ್ರತ್ಯಕ್ಷ ದೇವತಾ’ ಎಂಬ ನಂಬಿಕೆಯಿಂದ ನಾಗರೀಕರೆಲ್ಲರೂ ರಾಜನ ಇಷ್ಟಕ್ಕೆ, ತತ್ವಕ್ಕೆ ಸರಿಯಾಗಿ ತಮ್ಮ ಬದುಕನ್ನು ರೂಪಿಸಿಕೊಂಡು ತಕ್ಕನಾದ ಸಮಾಜವೇ ಮೂಡಿಬರುತ್ತದೆ. ಭಾರತೀಯ ಇತಿಹಾಸದಲ್ಲಿ ನೋಡಿದರೆ ತಿಳಿಯುತ್ತದೆ, ಒಬ್ಬ ರಾಜ ಅನುಸರಿಸಿದ ಧರ್ಮವೇ ಅಂದಿನ ಸಮಾಜದಲ್ಲಿ ಪ್ರಭಲವಾಗಿ, ಜನಮೆಚ್ಚುಗೆ ಪಡೆದು ಮೆರೆಯುತ್ತದೆ. ಅದೇ ರಾಜ ಯಾರದೋ ಪ್ರಭಾವಕ್ಕೊಳಗಾಗಿ ತನ್ನ ಮತವನ್ನು ಬದಲಿಸಿದಾಗ ಸಮಾಜ ಸಹ ಬದಲಾವಣೆಯತ್ತ ಮುಖ ಮಾಡಿದ್ದೂ ಇದೆ. ಇದೆಲ್ಲ ಯಾಕೆ ಹೇಳಿದ್ದೆಂದರೆ ರಾಜಕೀಯವೇ ಸಮಾಜವನ್ನು ಯಾವ ಮಾರ್ಗದ ಕಡೆಗಾದರೂ ತೆಗೆದುಕೊಂಡು ಹೋಗಬಲ್ಲ ಶಕ್ತಿಯಿರುವಂತಹದು.
ಇಂದಿನ ರಾಜಕೀಯ ವ್ಯವಸ್ಥೆಗಳಲ್ಲಿ ಎಷ್ಟೋ ನ್ಯೂನ್ಯತೆಗಳನ್ನು ಕಾಲವೇ ಸರಿಪಡಿಸಿಕೊಂಡು ಬಂದಿದೆ. ನಿಜಕ್ಕೂ ಮನುಷ್ಯ ಬಯಸುವ ’ಸ್ವತಂತ್ರ’ದ ಸ್ಥಿತಿ ಜಾಸ್ತಿಯಾಗಿ ಸಿಗುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತ್ರ. ೨೦ನೇ ಶತಮಾನದ ಮಧ್ಯ ಭಾಗದಲ್ಲಿ ಪ್ರಪಂಚದ ಅನೇಕ ದೇಶಗಳು ರಾಜಕೀಯವಾದ ’ಸ್ವತಂತ್ರ’ವನ್ನು ಪಡೆದ ನಂತರ ಅರಿಸಿಕೊಂಡ ವ್ಯವಸ್ಥೆ ಪ್ರಜಾಪ್ರಭುತ್ವ ಅಡಳಿತ ವಿಧಾನ. ಆದರೆ ಎಲ್ಲ ನಾಗರೀಕರಿಗು ಸಮಾನವಾಗಿ ಈ ’ಸ್ವತಂತ್ರ’ ಸಿಕ್ಕಿತೆ ಎಂಬುದು ಸೂಕ್ಷ್ಮ ವಿಚಾರವಾಗಿದೆ. ಅದಕ್ಕಿಂತಲೂ ಗಹನವಾದ ವಿಚಾರವೆಂದರೆ ಸಿಕ್ಕಿದ ಸ್ವತಂತ್ರವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದೇವೆಯೆ ಎಂಬುದಾಗಿದೆ.
ಸ್ವತಂತ್ರದ ಪರಿಣಾಮದಿಂದ ಒಟ್ಟು ಸಮಾಜದ ನೆಮ್ಮದಿ, ಶಾಂತಿ ಹೆಚ್ಚಾಗಬೇಕಾಗಿತ್ತು. ಆದರೆ ಹಾಗಾಗಲಿಲ್ಲವೆನಿಸುತ್ತದೆ. ಬದಲಿಗೆ ಸ್ವತಂತ್ರದ ನೆಪದಲ್ಲಿ ಪರಿಸರ ನಾಶ, ನೈತಿಕತೆಯ ನಾಶ, ಕಾನೂನುಗಳನ್ನು ಗೌರವಿಸದಿರುವುದು ಎಲ್ಲಾ ನಡೆಯುತ್ತಿದೆ. ಕತ್ತು ಓರೆಮಾಡಿಕೊಂಡು ಕಿವಿಗೆ ಮೊಬೈಲು ಆನಿಸಿಕೊಂಡು, ರಸ್ತೆಯಲ್ಲಿ ಬೈಕು ಓಡಿಸುವ ಹುಡುಗನನ್ನು ತಡೆದಿರೆನ್ನಿ. ಅವನಿಂದ ಬರುವ ಮೊದಲ ಉತ್ತರ ’ನಿಮಗೇನ್ರಿ, ನನಗೂ ಸ್ವತಂತ್ರವಿದೆ’ ಎಂದಾಗಿರುತ್ತದೆ. ಯಾರೋ ರಾಜಕಾರಿಣಿಗಳು ನೈಸರ್ಗಿಕ ಸಂಪತ್ತನ್ನು ಕೊಳ್ಳೆಹೊಡೆದರೂ ಸ್ವತಂತ್ರದ ನೆಪದಲ್ಲಿ ಬಚಾವಾಗಿಬಿಡುತ್ತಾರೆ. ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಗಲೀಜು ಎಲ್ಲ ಕಡೆಯಲ್ಲೂ ಮಾಮೂಲಿಯಾಗಿದೆ. ಇಲ್ಲಿ ಸಾರ್ವಜನಿಕ ಬಸ್ ನಿಲ್ದಾಣವು ಸ್ವಾತಂತ್ರ್ಯದ ಫಲವಾದರೆ, ಗಲೀಜು ಸ್ವೇಚ್ಛೆಯ ಪರಿಣಮ. ಸ್ವತಂತ್ರವು ಸ್ವೇಚ್ಛೆಯಾಗಿ ಪರಿವರ್ತನೆಯಾದರೆ ಸ್ವಾತಂತ್ರದ ಸವಿಯನ್ನು ಸಮಾಜ ಅನುಭವಿಸಲಾರದು.
ಶಿಕ್ಷಣ ಮಾತ್ರದಿಂದ ಸ್ವತಂತ್ರದ ವಿನಾಶವನ್ನು ತಡೆಯಬಹುದು. ರಾಜಕೀಯ ಇಚ್ಚಾಶಕ್ತಿ ಇಲ್ಲದೆ ಇದು ಸಾದ್ಯವಿಲ್ಲ. ರಾಷ್ಟೀಯತೆಯ ಭಾವನೆಯನ್ನು ಮಕ್ಕಳಲ್ಲಿ, ವಿಧ್ಯಾರ್ಥಿಗಳಲ್ಲಿ, ಯುವಜನರಲ್ಲಿ ಶಿಕ್ಷಣದ ಮೂಲಕ ಮೂಡಿಸುವುದೊಂದೇ ಸ್ವಾತಂತ್ರ್ಯದ ಉಳಿವಿಗೆ ಇರುವ ದಾರಿ. ರಾಜಕೀಯದಿಂದ ಲಂಪಟರು, ದಗಾಕೋರರು, ಧನದಾಹಿಗಳು, ಸ್ವಜನ ಪಕ್ಷಪಾತಿಗಳು, ರಾಷ್ಟೀಯ ಸಂಪತ್ತುಗಳ ಲೂಟಿಕೋರರು, ಮುಂತಾದವರನ್ನು ಆಚೆ ಇಡಬೇಕು. ಇದಕ್ಕೆ ಶಿಕ್ಷಣವೇ ಬೇಕಾಗುತ್ತದೆ. ಇಂದಿನ ಸ್ವತಂತ್ರೋತ್ಸವದಲ್ಲಿ ರಾಜಕಾರಣಿಗಳಿಂದ ಹಿಡಿದು ಸಾಮಾನ್ಯರವರೇಗೆ ಎಲ್ಲರಿಗೂ ಸ್ವತಂತ್ರದ ಮಹತ್ವ ಅರ್ಥವಾದರೆ ಅದೇ ಸಾರ್ಥಕವೆನಿಸುತ್ತದೆ.
||ಸರ್ವೇ ಜನಾ: ಸುಖಿನೋ ಭವಂತು||