ಸರ್ವಾಧಿಕಾರವೋ, ಪ್ರಜಾಪ್ರಭುತ್ವವೋ?

ಸರ್ವಾಧಿಕಾರವೋ, ಪ್ರಜಾಪ್ರಭುತ್ವವೋ?

ಬರಹ

 

 

ಇಂದಿಗೂ ರಾಜಸ್ಥಾನದಲ್ಲಿ, ಅಲ್ಲಿನ ರಾಜ, ಮಹಾರಾಜರುಗಳಿಗೆ ಹಬ್ಬದ ಸಮಯದಲ್ಲಿ ಅಥವಾ ವರ್ಷದ ಒಂದು ನಿರ್ದಿಷ್ಟ ಸಮಯದಲ್ಲಿ ಗೌರವಿಸುವ ಪದ್ಧತಿ ರೂಢಿಯಲ್ಲಿದೆ. ನಾನು ಕಂಡಂತೆ ಮೈಸೂರಿನಲ್ಲೂ ಮಹಾರಾಜರ ಬಗ್ಗೆ ವಿಶೇಷ ಆದರ ಅಭಿಮಾನ ಜನರಲ್ಲಿ ಇಂದಿಗೂ ಇದೆ. ಅದಕ್ಕೆಲ್ಲ ಕಾರಣ, ಅವರುಗಳು ನಡೆದುಕೊಂಡ, ಪ್ರಜೆಗಳನ್ನು ನಡೆಸಿಕೊಂಡ ರೀತಿ. ಇಂದು ರಾಜಕೀಯದಂಥ ಒಂದು ಹೊಲಸು ಕ್ಷೇತ್ರ ಇನ್ನೊಂದು ಇರಲಾರದು.
 ಈ ಹಿಂದೆಯೂ ರಾಜಕೀಯವಿತ್ತು, ರಾಜಕಾರಣಿಗಳಿದ್ದರು. ಆದರೆ ಈ ರೀತಿಯ ಅಧಿಕಾರ ಮದ ಇರಲಿಲ್ಲವೆಂದೇ ಹೇಳಬೇಕು. ಏಕೆಂದರೆ, ಯಾವುದೇ ರಾಜಕಾರಣಿ, ಬೀದಿಯಲ್ಲಿ ಒಬ್ಬನನ್ನು ಹೊಡೆಯುವಷ್ಟರ ಮಟ್ಟಿಗೆ ನೀಚನಾಗುತ್ತಾನೆ ಎಂದರೆ, ನಾವು ಎಲ್ಲಿದೇವೆ ಎಂದು ನಮ್ಮನ್ನೇ ಪ್ರಶ್ನಿಸಿಕೊಳ್ಳುವಂತಾಗಿದೆ. ಅಷ್ಟಾದರೂ ಆ ಬಡಪಾಯಿಯ ತಪ್ಪೇನು? ಕೇವಲ ಈ ಮಂತ್ರಿಯ ಕಾರನ್ನು ಹಿಂದಿಕ್ಕಿದ್ದೆ ಒಂದು ದೊಡ್ಡ ಅಪರಾಧವಾಗಿದೆ. ಕೇವಲ ಈ ವಿಷಯಗಳಲ್ಲಿ ಗೌರವವನ್ನು ಬಯಸುವ ಈ ಯಕಶ್ಚಿತ್ ಮಂತ್ರಿ ತಾನು ಜನರಿಂದ ಆರಿಸಿ ಬಂದವನು ಎಂದು ಮರೆತಂತಿದೆ. ಈ ಹಿಂದೆ ನಾನು ಜನಸೇವಕ ಎಂದು ವೋಟು ಗಿಟ್ಟಿಸಿಕೊಳ್ಳುವ ಈ ಜಂತುಗಳು, ನಂತರ " ಐಯಂ ಮಿನಿಸ್ಟರ್" ಎಂದು ಅಹಂಕಾರದಿಂದ ಹೇಳಿಕೊಳ್ಳುವಂತಾಗಿದೆ.

 ತನಗಿಂತ ವಯಸ್ಸಿನಲ್ಲಿ ಹಿರಿಯರ ಜೊತೆಯಲ್ಲಿ ವ್ಯವಹರಿಸುವುದನ್ನು ಕಲಿಯದಿದ್ದ ಮೇಲೆ ಒಬ್ಬ ಮನುಷ್ಯನಾಗಲೂ ಅನರ್ಹ ಎಂದ ಮೇಲೆ ಇನ್ನು ಈ  so called minister ಗೆ ಏನು ಬೆಲೆ? ರಾಜಕಾರಣವನ್ನು ಬದಿಗಿರಿಸಿ ಒಂದು ಮಾನವೀಯ ನೆಲೆಯಲ್ಲಿ ನೋಡಿದರೂ, ಈ ಮಂತ್ರಿ, ಒಂದು ಆಸ್ಪತ್ರೆಯ ತುರ್ತು ವಾಹನವನ್ನೂ ತನ್ನ ವಾಹನವನ್ನು ಹಿಂದಿಕ್ಕಲು ಬಿಡುವುದಿಲ್ಲ ಎಂದು ಅನಿಸುತ್ತದೆ. ಅಲ್ಲಿಗೆ ಈ ಮಂತ್ರಿಯನ್ನು ಆರಿಸಿದ ತಪ್ಪಿಗೆ, ಬೇಗ ಆಸ್ಪತ್ರೆಗೆ ತಲುಪಲಾಗದೆ ರಸ್ತೆಯಲ್ಲೇ ಮರಣಿಸಬೇಕಾಗುತ್ತದೆ ಪಾಪಿ ಪ್ರಜೆ. ಮಂತ್ರಿಯಾದ ಮಾತ್ರಕ್ಕೆ ಒಬ್ಬ ಸಾಮಾನ್ಯ ಪ್ರಜೆಯ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಶೋಷಣೆ ಮಾಡುವುದು ನಿಜಕ್ಕೂ ಶೋಚನೀಯ.
 
ನನಗನ್ನಿಸುತ್ತದೆ, ನಾವು ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವಲ್ಲಿ ವಿಫಲರಾಗಿದ್ದೇವೆ ಆದ್ದರಿಂದಲೇ, ಈ ರೀತಿಯ ಸರ್ವಾಧಿಕಾರಿ ಧೋರಣೆಯ ಮಂತ್ರಿಗಳು ಹೆಚ್ಚಾಗುತ್ತಿದ್ದಾರೆ. ಮೊನ್ನೆ ಬಿಹಾರ ಮತ್ತು ಕರ್ನಾಟಕ ಅಸೆಂಬ್ಲಿಯ ಕದನವನ್ನು ಟಿವಿಯಲ್ಲಿ ವೀಕ್ಷಿಸಿದ ನಮ್ಮ ಕಂಪನಿಯ ಕಕ್ಷಿದಾರನೊಬ್ಬ, ಭಾರತದಲ್ಲಿ ಹೀಗೆಲ್ಲ ಆಗುತ್ತದೆಯೇ ಎಂದು ಕೇಳಿದ. ನಿಜಕ್ಕೂ ಭಾರತದಂತಹ ಒಂದು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಇದೊಂದು ಅವಮಾನಕರ ಸಂಗತಿ. ಇನ್ನು ಮುಂದೆ ನಾವೆಲ್ಲರೂ ಯಾವುದೇ ಒಂದು ನಿರ್ದಿಷ್ಟ ಪಕ್ಷಕ್ಕೆ ನಮ್ಮ ಮತ ನೀಡದೆ, ಕನಿಷ್ಠ, ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುವ ನಾಗರೀಕರಿಗೆ ಮತದಾನ ಮಾಡೋಣ. ಆ ಮೂಲಕ ಒಂದು ಒಳ್ಳೆಯ ಆರೋಗ್ಯಕರ ರಾಜಕೀಯ ಪರಿಸ್ಥಿತಿ ನಿರ್ಮಾಣ ಮಾಡೋಣ.