ಇ-ಲೋಕ-೪

ಇ-ಲೋಕ-೪

ಬರಹ

ಕುಡುಕ ಚಾಲಕನೊಲ್ಲದ ಟೊಯೋಟಾ ಕಾರು
ಕುಡಿದು ಬಂದು ಕಾರು ಚಲಾಯಿಸಲು ಯತ್ನಿಸಿದರೆ ಚಾಲೂ ಆಗಲು ನಿರಾಕರಿಸುವ ಕಾರು ಬಂದರೆ ಕುಡಿದು ಚಲಾಯಿಸಿ ವಾಹನ ಅಪಘಾತವಾಗುವುದನ್ನು ಸುಲಭವಾಗಿ ನಿಯಂತ್ರಿಸಬಹುದು ತಾನೇ? ಕಾರು ತಯಾರಿಕೆಯಲ್ಲಿ ಜಗತ್ತಿನಲ್ಲಿ ದ್ವಿತೀಯ ಸ್ಥಾನದಲ್ಲಿರುವ ಟೊಯೊಟಾ ಕಂಪೆನಿಯು ಇಂತಹ ಕಾರು ತಯಾರಿಸಿದೆ. ಈ ಕಾರಿನ ಸ್ಟಿಯರಿಂಗ್ ವೀಲಿನಲ್ಲಿ ಬೆವರಿನಲ್ಲಿ ಬೆರೆತಿರುವ ಮದ್ಯದ ವಾಸನೆ ಪತ್ತೆ ಹಚ್ಚುವ ಸಂವೇದಕಗಳಿವೆ. ಕುಡಿದ ಚಾಲಕ ಕಾರು ಚಲಾಯಿಸಿದರೆ, ಕಾರಿನ ಸಂವೇದಕಗಳು ಕಾರಿನ ಇಂಜಿನನ್ನು ಸ್ಥಗಿತಗೊಳಿಸಲು ಸೂಚನೆ ನೀಡುವ ಕಾರಣ, ಕಾರು ಚಾಲೂ ಆಗುವುದೇ ಇಲ್ಲ.
ಅಷ್ಟು ಮಾತ್ರವಲ್ಲದೆ ಕುಡಿಯದೆ ಎರ್‍ರಾಬಿರ್‍ರಿ ಕಾರು ಚಲಾಯಿಸಿದರೂ ಕಾರಿನ ಇಂಜಿನ್ ಸ್ಥಗಿತವಾಗುವ ವ್ಯವಸ್ಥೆ ಇದರಲ್ಲಿದೆ. ಅಡ್ಡಾದಿಡ್ಡಿ ಕಾರು ಚಲಾಯಿಸಲಾರಂಭಿಸಿದರೆ, ಕಾರು ಮುಂದೆ ಹೋಗಲು ನಿರಾಕರಿಸುತ್ತದೆ. ಕಣ್ಣಿನ ಪಾಪೆಗಳನ್ನು ಕ್ಯಾಮೆರಾದ ಮೂಲಕ ಗಮನಿಸಿ, ಚಾಲಕ ಕಾರುಗಳನ್ನು ರಸ್ತೆ ಮೇಲೆ ನೆಡಲು ವಿಫಲನಾದರೂ ಕಾರು ಸ್ಥಗಿತವಾಗುವ ಆಧುನಿಕ ವ್ಯವಸ್ಥೆ ಈ ಕಾರಿನಲ್ಲಿರುವುದರಿಂದ ಟೊಯೊಟಾದ ಈ ಕಾರು ಅಪಘಾತಕ್ಕೊಳಗಾಗುವುದು ಬಹು ಕಠಿನ.

ಪ್ಲಾಸ್ಟಿಕ್‌ನಿಂದ ಇಲೆಕ್ಟ್ರಾನಿಕ್ಸ್ ಸಾಧನಗಳು?
ಪ್ಲಾಸ್ಟಿಕ್ ಕಸ ನಮ್ಮನ್ನು ಕಂಗೆಡಿಸುತ್ತಿರುವಂತೆ ಬಂದಿರುವ ಇನ್ನೊಂದು ಸುದ್ದಿಯಂತೆ ಪ್ಲಾಸ್ಟಿಕ್ ಲಾಜಿಕ್ ಎನ್ನುವ ಕಂಪೆನಿ
ಪ್ಲಾಸ್ಟಿಕ್‌ನಿಂದ ಇಲೆಕ್ಟ್ರಾನಿಕ್ ಚಿಪ್‌ಗಳನ್ನೂ ತಯಾರಿಸಲಿದೆ. ಈ ಪ್ಲಾಸ್ಟಿಕ್‌ಗಳು ವಿದ್ಯುತ್‌ನ್ನು ಪ್ರವಾಹಿಸಲು ಬಿಡುವ ಪಾಲಿಮರ್‌ಗಳಿಂದ ತಯಾರಿಸಿದವು. ಸದ್ಯ ಚಿಪ್‌ಗಳನ್ನು ಅರೆವಾಹಕ ವಸ್ತುಗಳಿಂದ ತಯಾರಿಸುತ್ತಾರೆ.ವಿದ್ಯುತ್ ವಾಹಕ ಸಾವಯವ ಪಾಲಿಮರ್‌ಗಳಿಂದ ಚಿಪ್‌ಗಳನ್ನು ತಯಾರಿಸುವಾಗ ಸಾಮಾನ್ಯ ಪ್ಲಾಸ್ಟಿಕ್‌ ಹಾಳೆಗಳ ಮೇಲೆ ವಿದ್ಯುತ್ ಮಂಡಲಗಳನ್ನು ಮುದ್ರಿಸುವ ಅನುಕೂಲ ದೊರೆಯುತ್ತದೆ. ಮೊದಲಾಗಿ ಇ-ಕಾಗದದಂತಹ ತಂತ್ರಜ್ಞಾನಕ್ಕೆ ಅಗತ್ಯವಾದ ಚಿಪ್‌ಗಳನ್ನು ತಯಾರಿಸುವುದರತ್ತ ಪ್ಲಾಸ್ಟಿಕ್ ಲಾಜಿಕ್ ಗಮನಹರಿಸಲಿದೆ.ಕಂಪೆನಿಯ ತಯಾರಿಕ ಘಟಕ ಮುಂದಿನ ವರ್ಷ ಸಿದ್ಧವಾಗಲಿದೆ.

ಎಲ್ಲ ಕಂಪ್ಯೂಟರ್‌ಗಳಂತಲ್ಲ ಈ "ನೂರು ಡಾಲರ್‍"ನ ಲ್ಯಾಪ್‌ಟಾಪ್
ಮಕ್ಕಳು ಶಾಲೆಯಲ್ಲಿ ಬಳಸಲು ಅನುಕೂಲವಾಗುವಂತೆ ಮಿತ ವೆಚ್ಚದಲ್ಲಿ ವಿನ್ಯಾಸಗೊಳಿಸಲಾದ ನೂರು ಡಾಲರ್‌ ಬೆಲೆಯ ಲ್ಯಾಪ್‌ಟಾಪ್ ಥೈಲ್ಯಾಂಡ್,ಲಿಬಿಯಾದಂತಹ ದೇಶಗಳಲ್ಲಿ ಬಳಕೆಗೆ ಸಿದ್ಧವಾಗಿದೆ. ಇದರಲ್ಲಿ ಹಾರ್ಡ್‌ಡಿಸ್ಕ್ ಇಲ್ಲ ಬದಲಿಗೆ ಐನೂರು ಮೆಗಾಬೈಟ್‌ ಸಾಮರ್ಥ್ಯದ ಫ್ಲಾಶ್ ಡ್ರೈವ್ ಇದೆ. ಬ್ಯಾಟರಿಯನ್ನು ಚಾರ್ಜ್ ಮಾಡಲು ಕೈಯಿಂದ ತಿರುಗಿಸುವ ಹ್ಯಾಂಡಲ್ ಇದೆ. ಇದು ನಿಸ್ತಂತು ವ್ಯವಸ್ಥೆ ಹೊಂದಿರುವುದರಿಂದ ಇತರ ಲ್ಯಾಪ್‌ಟಾಪ್ ಬಳಕೆದಾರರ ಜತೆ ಸಂವಹನ ಸಾಧ್ಯ.ಕಚೇರಿಯಲ್ಲಿ ಕಂಪ್ಯೂಟರ್‍ ಬಳಸುವಾಗ ಕಚೇರಿಯ ವ್ಯವಹಾರಗಳನ್ನು ದಾಖಲಿಸಲು ಕಂಪ್ಯೂಟರ್‍ ಬಳಕೆಯಾಗುತ್ತದೆ. ಆದರೆ ಮಕ್ಕಳಿಗೆ ಸಂವಹನ, ಸೃಜನಶೀಲ ಚಟುವಟಿಕೆ, ಇತರರ ಜತೆ ಕಲಿಕೆ ಮತ್ತು ಮಾಹಿತಿ ವಿನಿಮಯಕ್ಕೆ ಈ ಲ್ಯಾಪ್‌ಟಾಪ್ ಬಳಕೆಯಾಗುವಂತೆ ರೂಪಿಸಲಾಗಿದೆ. ವಿಂಡೋಸ್,ಲಿನಕ್ಸ್‌ನಂತಹ ಸಾಮಾನ್ಯ ಕಾರ್ಯನಿರ್ವಹಣಾ ತಂತ್ರಾಂಶಗಳನ್ನು ಬಳಸಲು ಸಾಕಾಗುವಷ್ಟು ಸಾಮರ್ಥ್ಯದ ಯಂತ್ರಾಂಶ ಇದರಲ್ಲಿ ಲಭ್ಯವಿಲ್ಲ. ಹಾಗಾಗಿ ಲಿನಕ್ಸ್ ವ್ಯವಸ್ಥೆಯನ್ನು ಸರಳೀಕರಿಸಿ, ಹೊಸದೇ ಆದ ಬಳಕೆದಾರ ಸಂಪರ್ಕಸಾಧನವನ್ನು ಬಳಸಲಾಗಿದೆ.ಕಡತಗಳನ್ನು ಹುಡುಕುವ ತಾಪತ್ರಯ ನಿವಾರಿಸಲು, ಬಳಕೆದಾರ ಅದುವರೆಗೆ ಮಾಡಿದ ಚಟುವಟಿಕೆಗಳ ಪಟ್ಟಿಯಿಟ್ಟು, ಅದರಿಂದ ಬೇಕಾದ್ದನ್ನು ಆಯ್ದುಕೊಳ್ಳುವ ಸೌಲಭ್ಯ ಕಲ್ಪಿಸಲಾಗಿದೆ.ಎಂಐಟಿಯ ಮೀಡಿಯಾ ಲ್ಯಾಬ್‌ನ ವಿನ್ಯಾಸಗೊಳಿಸಿದ ಲ್ಯಾಪ್‌ಟಾಪ್‌ನ್ನು ಕ್ವಾಂಟಾ ಕಂಪ್ಯೂಟರ್‍ ಕಂಪೆನಿ ತಯಾರಿಸಿ ವಿದ್ಯಾರ್ಥಿಗಳಿಗೆ ಒದಗಿಸುತ್ತಿದೆ. ಭಾರತ ಸರಕಾರವೂ ಆರಂಭದಲ್ಲಿ ಇದನ್ನು ಕೊಳ್ಳುಲು ಉತ್ಸುಕವಾಗಿದ್ದರೂ ನಂತರ ಯೋಜನೆಯಿಂದ ಹಿಂದೆ ಸರಿಯಿತು.

ಮೂಕರಿಗೆ ಮಾತು ಕೊಡುವ ಸಾಧನ
ಮಾತು ಬರದವರು ಸಾರ್ವಜನಿಕ ಸ್ಥಳದಲ್ಲಿರುವಾಗ ಇರಿಸುಮುರಿಸು ಅನುಭವಿಸುವುದು ಸಾಮಾನ್ಯ.ಇದನ್ನು ತಪ್ಪಿಸಲು ಪಿಡಿಎ ಎನ್ನುವ ಡಿಜಿಟಲ್ ಸಾಧನವನ್ನು ಬಳಸಲು ಅನುವು ಮಾಡಿಕೊಡುವ ತಂತ್ರ ಸಿಂಗಾಪುರದಲ್ಲಿ ಬಳಕೆಯಾಗುತ್ತಿದೆ.ಸೆಲ್‌ಫೋನ್‌ನ್ನು ಹೋಲುವ ಈ ಸಾಧನ, ಸಾಮಾನ್ಯವಾಗಿ ಹಸ್ತದಲ್ಲಿ ಹಿಡಿಸುವ ಕಂಪ್ಯೂಟರಿನಂತೆ ಬಳಕೆಯಾಗುತ್ತದೆ. ಇದರಲ್ಲಿ ಕೆಲವು ಸಾಮಾನ್ಯವಾಗಿ ಬಳಕೆಯಾಗುವ ಪದಗಳನ್ನು ಮುದ್ರಿಸಿ ಇಡಲಾಗಿದೆ. ಚಿತ್ರಗಳ ಗುಂಪಿನಿಂದ ಒಂದೊಂದು ಚಿತ್ರ ಆಯ್ದರೆ ಒಂದೊಂದು ಪದದ ಉಚ್ಚಾರ ಹೊರಡಿಸುವಂತೆ ಮಾಡಲಾಗಿದೆ. ಇದನ್ನು ಬಳಸಲು ವ್ಯಕ್ತಿ ಸಂದರ್ಭಕ್ಕೆ ಉಚಿತವಾದ ಚಿತ್ರವನ್ನು ಆಯಬೇಕು. ನಿಗದಿತ ಪದವನ್ನು ಸಾಧನ ಹೊರಡಿಸುವುದರಿಂದ ಇದು ವ್ಯಕ್ತಿಯ ಸಹಾಯಕನಂತೆ ಕಾರ್ಯ ನಿರ್ವಹಿಸುತ್ತದೆ. ದಿನನಿತ್ಯದ ವ್ಯವಹಾರಗಳಿಗೆ ಅಗತ್ಯ ಪದಗಳ ಸಂಗ್ರಹ ಹೊಂದಿದರೆ, ವ್ಯಕ್ತಿಯ ತೊಂದರೆ ಕಿರಿ ಕಿರಿ ಹುಟ್ಟಿಸದಂತೆ ಮಾಡಬಹುದು.ಈಗಾಗಲೇ ಮುನ್ನೂರು ಸಿಂಗಾಪುರಿಯನ್ನರು ಇದನ್ನು ಪ್ರಾಯೋಗಿಕವಾಗಿ ಬಳಸುತ್ತಿದ್ದಾರೆ.

ಹಗ್ಗದ ಗಂಟು ಬರವಣಿಗೆ?
ಒಂದೊಮ್ಮೆ ದಕ್ಷಿಣ ಅಮೆರಿಕಾದಲ್ಲಿ ಹೆಸರು ಮಾಡಿದ್ದ ಇಂಕಾ ನಾಗರೀಕತೆ ಇಕ್ವೆಡಾರ್‌ದಿಂದ ಚಿಲಿಯ ವರೆಗಿನ ಪ್ರದೇಶವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿತ್ತು.ಗುಡ್ಡ ಬೆಟ್ಟಗಳ ನಡುವೆ ಉತ್ತಮ ರಸ್ತೆ ನಿರ್ಮಿಸಿದ ಖ್ಯಾತಿ ಇಂಕಾ ನಾಗರೀಕತೆಗೆ ಇದೆ. ಆದರೂ ಆ ಕಾಲದಲ್ಲಿ ಬರವಣಿಗೆ ಚಾಲ್ತಿಯಲ್ಲಿದ್ದುದಕ್ಕೆ ಯಾವುದೇ ದಾಖಲೆಗಳಾಗಲಿ, ಶಿಲಾಶಾಸನಗಳಾಗಲೀ ಇಲ್ಲ. ಆದರೆ ವಿಚಿತ್ರ ಗಂಟುಗಳುಳ್ಳ ಖೀಪೂ ಎಂಬ ಹಗ್ಗದ ಕುಣಿಕೆಗಳು ಕಂಡುಬಂದಿವೆ. ಈ ಗಂಟುಗಳು ಯಾವುದೋ ಸಂದೇಶ ಹೊಂದಿದೆ ಎಂದು ವಾದಿಸುವವರು ಇದ್ದರು ಈಗ ಸಂಶೋಧಕರೋರ್ವರು ಇದರ ಹಿಂದಿನ ರಹಸ್ಯ ಬಿಡಿಸುವ ಪ್ರಯತ್ನ ಮಾಡಿ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದಾರೆ.
*ಅಶೋಕ್‌ಕುಮಾರ್‍ ಎ

ಈ ಜಾಲತಾಣವನ್ನು ನೋಡಿ:http://ashok567.blogspot.com