ಸಂತಾಪಕೀಯ: ಸಾಮ್ರಾಟರಿಗೆ ಹೇಳಿ ಬಹುಪರಾಖ್!
ಪಬ್ಲಿಕ್ ಮೆಮೊರಿ ಈಸ್ ಶಾರ್ಟ್ ಎನ್ನುವ ಬುದ್ಧಿವಂತಿಕೆಯ ಮಾತೊಂದಿದೆ... ಪಬ್ಲಿಕ್ ಟಾಯ್ಲೆಟ್ ಟೂ ಈಸ್ ಮಚ್ ಶಾರ್ಟ್ ಆಫ್ ವಾಟರ್ ಎಂಬ ಅನುಭವವೇದ್ಯ ಮಾತೂ ಇದೆ. ವರ್ಲ್ಡ್ ಕಪ್ಪಿನಲ್ಲಿ ಚಿಲ್ಲರೆ ತಂಡದೆದುರು ಸೋತು ಸುಣ್ಣವಾದರೂ, ಕೋಟಿ ರುಪಾಯಿ ಲಂಚ ಹೊಡೆದ ಆರೋಪ ತಲೆಯ ಮೇಲೆ ಕೂತಿದ್ದರೂ, ಲಜ್ಜೆಯಿಲ್ಲದ ಕುಕರ್ಮ ಮಾಡಿ ಸಿಕ್ಕುಬಿದ್ದರೂ ಜನರು ಧೈರ್ಯವಾಗಿ ಎದುಗುಂದದೆ ಬಾಳುವುದಕ್ಕೆ ಈ ಮೇಲಿನ ಬುದ್ಧಿವಂತಿಕೆಯ ಮಾತೇ ಆಧಾರ. ಜನರ ಈ ‘ಗಜನಿ’ ಮಾದರಿಯ ಅತ್ಯದ್ಭುತ ನೆನಪಿನ ಶಕ್ತಿಯನ್ನು ವೃದ್ಧಿಸುವುದಕ್ಕಾಗಿ ಅನೇಕ ಟಾನಿಕ್ಕುಗಳು ಹಗಲಿರುಳು ಕೆಲಸ ಮಾಡುತ್ತಿದ್ದರೂ ಒಟ್ಟಾರೆಯಾಗಿ ಸಮಾಜಕ್ಕೆ ಮರೆವಿನ ಶಕ್ತಿಯು ಬಲವಾಗಿ ವೃದ್ಧಿಯಾಗುತ್ತಿದೆ.
ಈ ಮರೆವಿನ ಶಕ್ತಿಯ ವಿರುದ್ಧ ಸೆಣೆಸುವುದಕ್ಕಾಗಿಯೇ ರಾಖಿ ಸಾವಂತಳು ಕ್ಯಾಮರಾದೆದುರು ಯಾರಿಂದಲೋ ಕಿಸ್ಸು ಪಡೆಯುತ್ತಾಳೆ, ರಾಹುಲ್ ಮಹಾಜನ್ ಯಾರಿಗೋ ಕೆನ್ನೆಗೆ ಬಿಗಿಯುತ್ತಾನೆ... ನಮ್ಮ ನೇತಾಗಳು ಕಂಡ ಕಂಡ ಮರದ ಕೊಂಬೆ ಹಿಡಿದು ನೇತಾಡುತ್ತಾರೆ. ಮೂರು ಬಿಟ್ಟು ಮಾರಲು ಕೂತ ವ್ಯಾಪಾರಿಗಳು ಕಂಡಲ್ಲಿ ಜಾಹೀರಾತಿನ ಗುಂಡು ಹಾರಿಸುತ್ತಾರೆ. ಕುಂತಲ್ಲಿ ನಿಂತಲ್ಲಿ ಮಲಗಿದಲ್ಲಿ ಮಗ್ಗಿಯನ್ನು ಉರುಹೊಡೆಸಿ ನೆನಪಿರಿಸಿಕೊಳ್ಳುವಂತೆ ಮಾಡುವ ಶಿಕ್ಷರ ಹಾಗೆ ಎಲ್ಲರೂ ತಮ್ಮ ನೆನಪು ಎಲ್ಲರ ಮೆದುಳುಗಳಲ್ಲಿ ಹಚ್ಚ ಹಸಿರಾಗಿರಬೇಕೆಂದು ಪ್ರಯಾಸ ಪಡುತ್ತಾರೆ.
ಶ್ರೀ ಕೃಷ್ಣನು ಸಹ ತನ್ನನ್ನು ಮರೆತು ಬಿಡಬಾರದೆಂದು ಅಧರ್ಮ ತಲೆಯೆತ್ತಿದಾಗಲೆಲ್ಲಾ ತಾನು ಬಂದೇ ಬರುವೆನ್ ಎನ್ನುವ ಆಶ್ವಾಸನೆಯನ್ನು ನೀಡಿದ್ದಾನೆ. ಆತ ಹೇಗೂ ಬರ್ತೀನಿ ಅಂದಿರುವನಲ್ಲ, ಬಂದಾಗ ನೋಡಿಕೊಳ್ಳೋಣವೆಂದು ಸದ್ಭಕ್ತರು ಆತನ ಆಗಮನಕ್ಕೆ ಪೂರಕವಾದ ‘ಅಧರ್ಮ’ ಸೃಷ್ಟಿಯಲ್ಲಿ ಕಾಯಾ ವಾಚಾ ಮನಸಾ ತೊಡಗಿಸಿಕೊಂಡಿದ್ದಾರೆ.
ನೆನಪು ಹಾಗೂ ಮರೆವಿನ ಬಗ್ಗೆ ಮರೆಯದೆ ಇಷ್ಟು ಗಾಢವಾಗಿ ಯೋಚಿಸುವುದಕ್ಕೆ ಕಾರಣವಿದೆ. ಸತತ ಎರಡು ವರ್ಷಗಳ ಕಾಲ ನಗೆ ಸಾಮ್ರಾಜ್ಯದ ಸಾಮ್ರಾಟರಾಗಿ ಆಳಿದ ನಾವು ಇದ್ದಕ್ಕಿದ್ದ ಹಾಗೆ ಕಣ್ಮರೆಯಾಗಿ, ನಮಗೇ ಎಣಿಸಲು ಮರೆತು ಹೋದಷ್ಟು ದಿನಗಳ ಕಾಲ ಸದ್ದೇ ಇಲ್ಲದಂತೆ ಕೂತಿದ್ದರೂ ಒಬ್ಬೇ ಒಬ್ಬ ಪ್ರಜೆಯೂ ನಮ್ಮನ್ನು ನೆನಪಿಸಿಕೊಳ್ಳಲಿಲ್ಲ. “ಅಯ್ಯೋ, ನಮ್ಮ ಸಾಮ್ರಾಟರು ಎಲ್ಲಿ? ಅವರಿಗೆ ಏನಾಯಿತು? ಅವರ ಆರೋಗ್ಯ ಹೇಗಿದೆಯೋ?” ಎಂದು ಮಾನಿನಿಯರು ಪರಿತಪಿಸಲಿಲ್ಲ. ಸಿಇಟಿ ಕೌನ್ಸೆಲಿಂಗಿಗೆ ಹೊರಟ ಹುಡುಗ ಹುಡುಗಿಯರು ಸಾಮ್ರಾಟರೇ ಕಣ್ಮರೆಯಾದರೆ ಇನ್ನು ನಮಗ್ಯಾರು ದಿಕ್ಕು ಎಂದು ಗೋಳಿಡಲಿಲ್ಲ. ಅಭಿಮಾನಿಗಳ ಸಂಘದಿಂದ ಒಂದಾದರೂ ಆತ್ಮಹತ್ಯಾ ಯತ್ನ ಪ್ರಹಸನಗಳು ನಡೆಯಲಿಲ್ಲ. ಶನಿವಾರ, ಭಾನುವಾರಗಳಂದು ಕೆಲಸವಿಲ್ಲದೆ ಕಂಡ ಕಂಡಲ್ಲಿ ಅಡ್ವೆಂಚರ್ ಬೆನ್ನಟ್ಟಿ ಅಲೆಯುವ ಟೆಕ್ಕಿಗಳು ನಮ್ಮನ್ನು ಪತ್ತೆ ಹಚ್ಚುವ ಹುಮ್ಮಸ್ಸು ತೋರಲಿಲ್ಲ. ಅಸ್ತಿತ್ವದಲ್ಲೇ ಇಲ್ಲದ ನದಿಗೆ ಕಟ್ಟಿದ ಸೇತುವೆಯ ಫುಟ್ ಪಾತಿನಲ್ಲಿ ಬಿದ್ದ ಲಿಪ್ ಸ್ಟಿಕ್ಕಿನ ಒಡತಿಯ ಗಂಡನ ಗುಪ್ತ ಸಂಬಂಧವನ್ನು ಪತ್ತೆ ಹಚ್ಚುವ ಚಾಣಾಕ್ಷ ಪತ್ರಕರ್ತರು ಸಾಮ್ರಾಟರ ಸ್ಟೇಟಸ್ಸು ಅಲೈವ್ ಅಥವಾ ಒನ್ಸ್ ಅಪಾನ್ ಎ ಟೈಮ್ ಆಗಿದೆಯೋ ಎನ್ನುವುದನ್ನು ಹುಡುಕುವ ಆಸಕ್ತಿ ತೋರಲಿಲ್ಲ.
ಇದನ್ನೆಲ್ಲಾ ಕಂಡಾಗ ನಮಗೆ ನಖಶಿಖಾಂತ ಕೋಪ ಉಕ್ಕಿ ಬರಬೇಕಿತ್ತು. ಆದರೆ ಹಾಗಾಗಲಿಲ್ಲ. ಅದಕ್ಕೆ ಕಾರಣಗಳು ಎರಡು. ಒಂದು, ತಂದೆ ತಾಯಿ ಕಲಿಸಿದಂತ ಶಿಸ್ತಿನಿಂದಾಗಿ ನಖವು ಹಾಗೂ ಗೆಳೆಯರು ಕಲಿಸಿದಂತಹ ಅಶಿಸ್ತಿನಿಂದಾಗಿ ನಮ್ಮ ಶಿಖೆಯು ಎಂದಿಗೂ ಕೋಪ ಉಕ್ಕಿಸುವ ಮಟ್ಟಕ್ಕೆ ಬೆಳೆಯಲೇ ಇಲ್ಲ. ನಮಗೆ ಸಿಟ್ಟು ಹುಟ್ಟದಿರುವುದಕ್ಕೆ ಮತ್ತೊಂದು ಕಾರಣ, ನಮ್ಮ ಸಾಮ್ರಾಜ್ಯದ ಜನಸ್ತೋಮದ ಮಾನಸಿಕತೆಯ ಬಗ್ಗೆ ಅಪಾರವಾದ ಅರಿವನ್ನು ನಾವು ಗಳಿಸಿಕೊಂಡಿರುವುದು.
ತನ್ನ ಪ್ರೀತಿಯ ಮಡದಿಯ ಹೆಸರನ್ನು ಜನರು ಮರೆಯದಿರುವಂತೆ ಮಾಡಲು ಷಾಹ್ ಜಹಾನ್ ಅಷ್ಟು ಅದ್ಭುತವಾದ ಮಹಲನ್ನೇ ಕಟ್ಟಿಸಬೇಕಾಯ್ತು. ತನ್ನ ಹೆಸರನ್ನು ಜಗತ್ತು ಎಂದಿಗೂ ನೆನಪಿನಿಂದ ಅಳಿಸಲೇಬಾರದೆಂದು ಅಡಾಲ್ಪ್ ಹಿಟ್ಲರ್ ಲಕ್ಷಾಂತರ ಮಂದಿ ಯಹೂದಿಗಳನ್ನು ಕೊಲ್ಲಿಸಬೇಕಾಯ್ತು. ಅಂಬೇಡ್ಕರ್ ಹೆಸರನ್ನು ಜನತೆ ಮರೆತುಬಿಡಬಾರದೆಂದು ಸರಕಾರವು ಒಂದೇ ತರಗತಿಯ ಮೂರು ಭಾಷೆಯ ಪಠ್ಯಗಳಲ್ಲಿ ಪಾಠವನ್ನು ಇಡಬೇಕಾಯಿತು. ಹೀಗಿರುವಾಗ ನಮ್ಮ ನೆನಪು ಪ್ರಜೆಗಳಲ್ಲಿ ಹಸಿರಾಗಿರಬೇಕೆಂದು ಬಯಸುವುದು ಪ್ರವಾಹದಲ್ಲಿ ಮನೆ ಕಳೆದುಕೊಂಡು ಸಂತ್ರಸ್ತರ ನಿಧಿಯ ಸೂಕ್ತ ವಿನಿಯೋಗವನ್ನು ಬಯಸಿದ ಹಾಗಲ್ಲವೇ? ಹೀಗಾಗಿ ನಾವು ಪ್ರಜೆಗಳು ನಮ್ಮನ್ನು ಮರೆತುಹೋದದ್ದಕ್ಕೆ ವ್ಯಥೆ ಪಡುವುದಿಲ್ಲ.
ಚಲಾವಣೆಯಲ್ಲಿಲ್ಲದ ಕಾರಣದಿಂದಾಗಿ ಮನುಕುಲವು ಬಾಲ, ಮೈಮೇಲಿನ ರೋಮಗಳನ್ನೆಲ್ಲ ಕಳೆದುಕೊಂಡಿದೆ ಎನ್ನುತ್ತದೆ ವಿಕಾಸ ವಾದ. ಹೀಗಿರುವಾಗ ಚಲಾವಣೆಯಿಂದ ತಪ್ಪಿಸಿಕೊಂಡರೆ ನಮ್ಮ ಸಾಮ್ರಾಟ ಪಟ್ಟವೂ ಕಣ್ಮರೆಯಾಗಿಬಿಡುವ ಅಪಾಯವನ್ನು ಮನಗಂಡು ನಾವು ಬಾಲವನ್ನು ಕಾಲುಗಳ ಮಧ್ಯೆ ಸಿಕ್ಕಿಸಿಕೊಂಡು ನೌಕರಿಗೆ ಹಾಜರಾಗಿದ್ದೇವೆ. ಹೇಳಿ ಸಾಮ್ರಾಟರಿಗೆ ಬಹುಪರಾಖ್!