ಪ್ರಕೃತಿ ನಿರ್ಮಿಸಿದ ಸೇತುವೆ - ಕಲ್ಸಂಕ

ಪ್ರಕೃತಿ ನಿರ್ಮಿಸಿದ ಸೇತುವೆ - ಕಲ್ಸಂಕ

ಪ್ರಕೃತಿಯ ಮಡಿಲಲ್ಲಿ ಹುಡುಕಿದಷ್ಟೂ ವೈಶಿಷ್ಟ್ಯಗಳ ಸರಮಾಲೆ, ಒಂದಿಲ್ಲೊಂದು ವಿಸ್ಮಯ. ಹಾಗೆಯೇ ನಮ್ಮೂರಿನಲ್ಲೊಂದು ಅಂದರೆ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕು ಕಲಗಾರು - ಮಲವಳ್ಳಿಗೆ ಹೊಂದಿಕೊಂಡಂತೆ ಅಪರೂಪದ ಶಿಲಾಸೇತು ಇದೆ.ಅದೇ ಕಲ್ಸಂಕ.

ಈ ಸೇತು ನಮ್ಮೂರಿನ ತೋಟ ಗದ್ದೆಗಳ ಮೂಲಕ ಹಾದು ಹೋಗುವ ಹೊಳೆ ಹಳ್ಳಗಳೆಲ್ಲ ಸೇರಿ ದೊಡ್ಡದಾಗಿರುವ ಹೊಳೆಯ ನೀರಿನ ಹರಿವಿನಿಂದಾಗಿ ಕೆಂಪು ಕಲ್ಲಿನ ಶಿಲಾ ಪದರದ  ಅಡಿಯಲ್ಲಿನ ಮಣ್ಣೆಲ್ಲಾ ಕೊರೆದು ಮೇಲ್ಗಡೆಯ ಶಿಲಾ ಪದರ ಮಾತ್ರಾ ಉಳಿದುದರಿಂದ ನಿರ್ಮಾಣ ಗೊಂಡಂತಹ ಸೇತುವೆ. ಈ ಸೇತುವೆ ಮೊದಲು ಏಳು ಕಲ್ಲು ಹಾಸುಗಳಿಂದ ಕೂಡಿದ್ದ ಅಗಲವಾದ ಸೇತುವೆ ಆಗಿತ್ತೆಂದು ಹೇಳುತ್ತಾರೆ. ಇದಕ್ಕೆ ಪುಷ್ಟಿ ನೀಡುವಂತೆ ಹೊಳೆಯಲ್ಲಿ ಮುರಿದು ಬಿದ್ದಂತಿರುವ ಕಲ್ಲು ಹಾಸುಗಳ ತುಣುಕನ್ನು ನಾವು ನೋಡುತ್ತೇವೆ.

ಈರೀತಿಯಾಗಿ ನಿರ್ಮಾಣ ಗೊಂಡ ಸೇತುವೆಗಳು ಪ್ರಪಂಚದಲ್ಲಿಯೇ ಎರಡೆಂದೂ, ಅವುಗಳಲ್ಲಿ ನಮ್ಮೂರಿನ ಕಲ್ಸಂಕವೂ ಒಂದೆಂದು ಹೇಳಲಾಗಿದೆ. ಮೊದಲನೆಯದು ದಕ್ಷಿಣ ಅಮೆರಿಕಾದ ಉಟಾದಲ್ಲೂ ಇನ್ನೊಂದ ಭಾರತದ ಅದರಲ್ಲಿಯೂ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಲವಾಟ ಗ್ರಾಮಕ್ಕೆ ತಾಗಿಕೊಂಡಿರುವ ಉ.ಕ. ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ನಮ್ಮೂರಲ್ಲಿ. (ಹೀಗೆ ಹೇಳುವುದೇಕೆಂದರೆ ಒಮ್ಮೆ ನೋಡಬೇಕೆಂಬ ಹಂಬಲ ಉಳ್ಳವರಿದ್ದರೆ ಅನುಕೂಲ ವಾಗಲೆಂಬ ಉದ್ದೇಶದಿಂದ) ಈ ಸೇತುವೆಯು 15 ಅಡಿ ಆಳದ ಹೊಳೆಗೆ ನಿರ್ಮಾಣಗೊಂಡ ಸುಮಾರು 35 ಅಡಿ ಉದ್ದ, 4-5 ಅಡಿ ಅಗಲ, 2-ರಿಂದ 4 ಅಡಿ ದಪ್ಪದ ಕೆಂಪು ಕಲ್ಲು ಹಾಸಿನ ಸೇತುವೆಯಾಗಿದೆ.ಇದರ ಮೇಲೆ ಎತ್ತಿನ ಗಾಡಿಗಳು, ದನ, ಕರುಗಳು ಓಡಾಡುತ್ತಿದ್ದವು, ಸಧ್ಯ ಮನುಷ್ಯ ಮತ್ತು ಪ್ರಾಣಿಗಳು ಮಾತ್ರಾ ಓಡಾಡುತ್ತಿವೆ.

ಮೊನ್ನೆ ಸ್ವತಂತ್ರ ದಿನಾಚರಣೆಯ ರಜಾದಿನದ ಮಧ್ಯಾಹ್ನ ತೆಗೆದ ಈ ಸೇತುವೆ ಮತ್ತು ಅದರ ಸುತ್ತು ಮುತ್ತಲಿನ ಹೊಳೆ, ಗದ್ದೆ, ಅಲ್ಲಿಯೇ ಬಿದ್ದಿದ್ದ ಮುಳ್ಳಕ್ಕಿಯ ಮುಳ್ಳುಗಳು, ಪೂಜೆ ಮಾಡುತ್ತಿರುವ ದೇವರು ಇತ್ಯಾದಿಗಳ ಫೋಟೋಗಳನ್ನು ಇದರೊಂದಿಗೆ ಇಟ್ಟಿದ್ದೇನೆ.

ಕಲ್ಸಂಕ ಎಂದಾಕ್ಷಣ ನಮಗೆಲ್ಲಾ ನೆನಪಾಗುವುದೇ ಹೊಳೆಯೂಟ. ಅದರ ಬಗ್ಗೆ ಒಂದೆರೆಡು ಸಾಲು. ಎಳ್ಳಮವಾಸ್ಯೆ ದಿನದಿಂದ ಒಂದು ಮಾಸದ ಯಾವುದಾದರೂ ಒಂದು ದಿನ ನಮ್ಮ ಕಡೆಗಳಲ್ಲಿ ಹೊಳೆ ಊಟ ಮಾಡುವುದು ಸಂಪ್ರದಾಯವಾಗಿ ಬಂದಿದೆ. ಹಿಂದೆ ನಾವೆಲ್ಲ ಚಿಕ್ಕವರಿದ್ದಾಗ ಹೊಳೆಯೂಟದ  ದಿನ ಸಾಮಾನ್ಯವಾಗಿ ಊರಿನ ಮಹಿಳೆಯರು ಮಕ್ಕಳು ಒಂದಾಗಿ, ಗಂಡಸರೆಲ್ಲ ಒಂದಾಗಿ (ಬೇರೆ ಬೇರೆ ದಿನಗಳಲ್ಲಿ) ಗುಂಪು ಕಟ್ಟಿಕೊಂಡು  ಬೆಳಿಗ್ಗೆ ಎಲ್ಲರ ಮನೆಯಿಂದ ಒಂದೋ ಎರಡೋ ಪಾತ್ರೆ ಪಗಡೆಗಳನ್ನೂ ಅಡಿಗೆ ಸಾಮಗ್ರಿಗಳನ್ನು ಹೊತ್ತುಕೊಂಡು ಯಾವುದಾದರೂ ದೊಡ್ಡ ದೊಡ್ಡ ಹೊಳೆ ದಂಡೆಗೆ ಹೋಗಿ ಅಲ್ಲಿಯೇ ಸ್ನಾನ ಅಡಿಗೆ ಪಾಯಸ, ಇತ್ಯಾದಿಗಳನ್ನು ಮಾಡಿ, ಹೊಳೆಯಲ್ಲಿನ ಮೀನುಗಳಿಗೆ ಅಕ್ಕಿ - ಎಳ್ಳುಗಳನ್ನು ಬೀರಿ, ಸುತ್ತಲಿನ ವನದೇವತೆಗಳಿಗೆ ಹಣ್ಣು ಕಾಯಿಗಳನ್ನು ಅರ್ಪಿಸಿ, ಹೊಳೆ ದಂಡೆಯ ಮೇಲೇ ಊಟ ಮಾಡಿ ಮಲಗೆದ್ದು ಅಡಿಗೆಯಲ್ಲಿ ಉಳಿದದ್ದನ್ನು ಹಂಚಿಕೊಂಡು ಮನೆಗೆ ಮನೆಗೆ ಬಂದು ಮನೆಯಲ್ಲಿರುವವರಿಗೆ ಅಲ್ಲಿನಡೆದ ಘಟನೆಗಳಿಗೆ ಸ್ವಲ್ಪ ಉಪ್ಪು ಖಾರಗಳನ್ನು ಸೇರಿಸಿ ರಸವತ್ತಾಗಿ ಹೇಳುತ್ತಿದ್ದುದು ಈಗಲೂ ನೆನಪಾಗುತ್ತದೆ.

ಈಗಿರುವ ಸೇತುವೆಯ ಅಡಿಯಲ್ಲಿ ಪೂರ್ವದಿಕ್ಕಿನ ಕೊನೆಯಲ್ಲಿ ಸುತ್ತಮುತ್ತಲಿನ ಜನರ/ ರೈತಾಪಿ ವರ್ಗದವರು ಪೂಜಿಸಿಕೊಂಡು ಬರುತ್ತಿರುವ ವನ ದೇವತೆಯೂ ಇಲ್ಲಿ ನೆಲೆಸಿದ್ದಾಳೆ. (ನಾವು ಚಿಕ್ಕವರಿದ್ದಾಗ ಇದನ್ನು ಗಣಪತಿ ಎಂದೂ, ಇತ್ತೀಚಿನ ದಿನಗಳಲ್ಲಿ ಚೌಡಮ್ಮನೆಂದೂ ಕರೆಯುತ್ತಿದ್ದಾರೆ ಅದು ಏನೇ ಇರಲಿ ಪ್ರಸ್ತುತ ಚೌಡಮ್ಮನೆಂದೆ ಇಟ್ಟುಕೊಂಡು) ಈ ದೇವರಿಗೆ ಸುತ್ತಮುತ್ತಲಿನ ಜನ ಮಕ್ಕಳಾಗದವರು ಮಕ್ಕಳಿಗಾಗಿ, ಮಳೆ ಬೆಳೆ ಚನ್ನಾಗಿರಲೆಂದು ಅನೇಕ ರೀತಿಯಲ್ಲಿ ಹರಕೆ ಹೊತ್ತು ಪೂಜೆ - ಹರಕೆಗಳನ್ನು ಸಲ್ಲಿಸುತ್ತಾರೆ.

ಹಾಗೆ ಅಲ್ಲಿ ನಾನು ನೋಡಿ ಇನ್ನೂ ನೆನಪಿನಲ್ಲಿರುವ ವಿಷಯವೊಂದನ್ನು ಹೇಳಲೇ ಬೇಕು. ಅದೆಂದರೆ ಮಲವಳ್ಳಿ ಗಪ್ಪಣ್ಣ ಅಲ್ಲೆ ಹತ್ತಿರದ ಅವರ ಗದ್ದೆ ಬ್ಯಾಣಗಳಲ್ಲಿ ಕೆಲಸ ಮುಗಿಸಿ ಇದೇ ಕಲ್ಸಂಕದ ಹೊಳೆಗೆ ಬಂದು ಬಟ್ಟೆ ತೊಳೆಯುತ್ತಿದ್ದರು. ಇದರಲ್ಲೇನು ವಿಶೇಷ ಎಂದರೆ ಅವರು ಸೋಪಿನ ಬದಲಾಗಿ ಯಾವುದೋ ಒಂದು ಮರ ಬಳ್ಳಿಯ ತುಂಡನ್ನು ತಂದು ಜಜ್ಜಿ ಅದನ್ನು ಬಟ್ಟೆಗೆ ತಿಕ್ಕಿ ನೊರೆ ಬರಿಸಿ ಬಟ್ಟೆ ತೊಳೆಯುತ್ತಿದ್ದರು. ನನಗೆ ಅದರ ಬಗ್ಗೆ ಕುತೂಹಲ ಯಾವ ಬಳ್ಳಿ ಎಂದು ಕೇಳಿದಾಗ ಅದು ಗಣಪೆ ಬಳ್ಳಿ ಎಂದು ತಿಳಿಸಿದರು. ಅಂದರೆ ಗಣಪೆ ಬಳ್ಳಿಯ ರಸ ಮಾರ್ಜಕವಾಗಿ ಬಳಸುತ್ತಿದ್ದರು. ಈಗ ಇದನ್ನು ನಾವು ಊಹಿಸಲೂ ಸಾಧ್ಯವಿಲ್ಲ.

ಏನೆ ಇರಲಿ ಈ ಕಲ್ಸಂಕದ ಕೆಳಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 206 ಕ್ಕೆ ಇದೇ ಹೊಳೆಗೆ ಇಂದು ಕಾಂಕ್ರೀಟ್ ಸೇತುವೆ ಇದೆ. ಈ ಸೇತುವೆ ಸಹ ಐತಿಹಾಸಿಕ ಘಟನೆಯಲ್ಲಿ ತನ್ನನ್ನು ಗುರುತಿಸಿಕೊಂಡಿದೆ. ಸ್ವಾತಂತ್ರ ಹೋರಾಟದ ಕಾಲದಲ್ಲಿ ಬ್ರಿಟಿಶ್ ಅಧಿಕಾರಿಗಳು  ನಮ್ಮ ಊರುಗಳಿಗೆ ಬರುವ ಮಾರ್ಗವಾಗಿದ್ದ ಈ ಸೇತುವೆ ಸಹ ಚಳುವಳಿ ಕಾಲದಲ್ಲಿ  ಅವರ ಸಂಚಾರಕ್ಕೆ ಅಡಚಣೆ ಸಲುವಾಗಿ ಮುರಿಯಲ್ಪಟ್ಟು ಹೊಸದಾಗಿ ನಿರ್ಮಿತಗೊಂಡಿದ್ದಾಗಿದೆ.

ಹೀಗಿರುವ ಈ ಸೇತುವೆಯು geomarphalagical map of India ದಲ್ಲಿ ಗುರುತಿಸಲ್ಪಟ್ಟಿದೆ. ಇಷ್ಟೊಂದು ವಿಶೇಷತೆ ಇರುವ ಸೇತುವೆಮೇಲೆ  ಬೇರು ಬಿಳಲುಗಳು ಬೆಳೆದು ಇಂದು ಮುರಿದು ಬೀಳುವ ಹಂತದಲ್ಲಿದೆ. ಇದರ ರಕ್ಷಣೆಗಾಗಿ ಹಲವರಲ್ಲಿ ಮನವಿಯನ್ನೂ ಸಲ್ಲಿಸಲಾಗಿದೆ ಅಷ್ಟೆ . ಆಸಕ್ತರು ಮುರಿದು ಬೀಳುವುದರೊಳಗಾಗಿ ನೋಡಿ ಹೋಗಿ.

 

 

 

Rating
No votes yet

Comments