ಸ್ವಾಮಿಯೇ ಸರಣಂ ಅಯ್ಯಪ್ಪ

ಸ್ವಾಮಿಯೇ ಸರಣಂ ಅಯ್ಯಪ್ಪ

ನಾವು ಮಾಡಿರೋ ಪಾಪ ಎಲ್ಲಾ ಹೋಗ್ ಬೇಕೂ ಅಂದ್ರೆ. ಅಯ್ಯಪ್ಪ ಸ್ವಾಮಿ ಮಾಲೆ ಹಾಕ್ಬೇಕು. ಕಟ್ಟು ನಿಟ್ಟಿನ ವ್ರತ ಮಾಡೋದ್ರಿಂದ ನಮ್ಮ ಪಾಪಗಳೆಲ್ಲಾ ಹೋಯ್ತದೆ ಅಂದಾ ಗೌಡಪ್ಪ. ಗೌಡರೆ ನಮಗೆ ಇನ್ನೂ ಮದುವೆನೇ ಆಗಿಲ್ಲ. ಅದೆಂಗೆ ಪಾಪ ಹೋಯ್ತದೆ ಅಂದಾ ಪಟಾಲಂ ಪಾಂಡು. ಲೇ ಆ ಪಾಪ ಅಲ್ಲಾ ಕಲಾ ತಪ್ಪು ಮಾಡಿದ್ರೆ ಅಂತಾ ಅಂದ ಗೌಡಪ್ಪ. ಮತ್ತೆ ಅಂಗೆ ಹೇಳಿ. ನಮ್ಮ ಗೆಳೆಯರ ಬಳಗ ಎಲ್ಲಾ ಮಾಲೆ ಹಾಕಬೇಕು ಅಂತಾ ಆತು, ಟೇಲರ್  ರಂಗಂಗೆ ಕಪ್ಪು ಬಟ್ಟೆಯಲ್ಲಿ ಒಂದು ಹತ್ತು ಸಲ್ಟು ಹೊಲೆಯಕ್ಕೆ ಹೇಳಿದ್ವಿ. ಮಗಾ ಎಲ್ಲಾ ಅವರಪ್ಪನ ಅಳತೆ ತಗೊಂಡು ಹೊಲ್ದಿದ್ದ. ನಿಂಗ ಪಂಚೆ ಹಾಕ್ದೇ ಇದ್ರು ನಡೀತಿತ್ತು. ಅಟೊಂದು ಉದ್ದ ಸಲ್ಟು ಇತ್ತು. ಸರೀ ಗುರುಸ್ವಾಮಿಯಾಗಿ ಗೌಡಪ್ಪ ನಮಗೆಲ್ಲಾ ಮಾಲೆ ಹಾಕಿಸ್ದ. ಲೇ ಗೌಡಪ್ಪ ಯಾವಾಗ ಗುರುಸ್ವಾಮಿ ಆದ ಎಂದ ಸುಬ್ಬ. ಅದ್ಯಾವಾಗೋ ಒಂದು ಸಾರಿ ಗಾಂಜಾ ಮಾರಕ್ಕೆ ಅಂತಾ ಕೇರಳಕ್ಕೆ ಹೋಗಿದ್ನಂತೆ ಅವಾಗ ಸಬರಿ ಮಲೈಗೆ ಹೋಗಿ ಬಂದ್ನಿದ್ದಂತೆ ಹೋಗಲಿ ಬುಡುಲಾ. ಗೌಡಪ್ಪನ ಮನೆ ಮುಂದೆ ಚಪ್ಪರ ಹಾಕಿ ಅಲ್ಲೇ ಅಯ್ಯಪ್ಪನ ಪೋಟೋ ಇಟ್ಟು ದಿನಾ ಪೂಜೆ. ನಮ್ಮ ಭಜನೆ ಯಾವ ಮಟ್ಟದಲ್ಲಿತ್ತು ಅಂದ್ರೆ ನಾವು ಸಬರಿ ಮಲೈಗೆ ಹೋಗೋ ತನಕ ರಾತ್ರಿ ಹೊತ್ತು ಹಳ್ಯಾಗೆ ಯಾರೂ ನಿದ್ದೆ ಮಾಡ್ತಾ ಇರ್ಲಿಲ್ಲ.

ಸರಿ ಬೆಳಗ್ಗೆನೇ ತಣ್ಣೀರನಾಗೆ ಸ್ನಾನ. ಎಲ್ಲಾ ಕೆರೆಗೆ ಹೋಗ್ತಾ ಇದ್ವಿ. ಮಗಾ ಗೌಡ ನಮ್ಮುಂದೆ ಪೋಸ್ ಕೊಡಕ್ಕೆ. ಮನೇಲ್ಲಿ ಇರೋ ಡ್ರಮ್ಮಿ ನ ನೀರು ಹುಯ್ಕಂತಿದ್ದ. ತಂಡಿಗೆ ಸ್ವಲ್ಪ ಹೊತ್ತು ಹಂಗೇ ಷಟ್ಕಂಡಂಗೆ ಇರೋನು. ಆಮ್ಯಾಕೆ ಹೆಂಂಂಂಗ್ರಲಾ ಅನ್ನೋನು. ಜ್ವರ ಬಂದು ನಾಲ್ಕು ಇಂಜೆಕ್ಸನ್ ಮಾಡಿಸಿದ್ವಿ. ಮಗಾ ಒಂದೇ ಸೈಡಿಗೆ ಮಲಗೋನು. ದಿನಕ್ಕೆ ಒಬ್ಬೊಬ್ಬರು ಮನೇಲಿ ಊಟ. ಒಂದು ದಿನ ತಂಬೂರಿ ತಮ್ಮಯ್ಯನ ಮನೇಗೆ ಊಟಕ್ಕೆ ಹೋಗಿದ್ವಿ. ಅವನ ಅವ್ವ ಅನ್ನ ಒದಗಲಿ ಅಂತಾ ಸೋಡಾ ಹಾಕವ್ಳೆ. ರಾತ್ರಿ ಎಲ್ಲರೂ ಒಂದು ಹತ್ತು ಕಿತಾ ಕೆರೆತಾವ ಹೋಗಿದ್ವಿ. ಹಂಗೇ 10ಕಿತಾ ಸ್ನಾನ. ಕಟ್ಟಿಗೆ ಕಿಸ್ನ ಯಾವಾಗಲೂ ಬರೋದು ಹೋಗೋದು ಕೆರೆತಾವನೇ ಇದ್ದು ಬೆಳಗ್ಗೆ ಬಂದ. ಅವತ್ತು ಭಜನೆಗಿಂತ ಕೆರೆತಾವ ಹೋಗಿದ್ದೇ ಜಾಸ್ತಿ ಆತು. ಸಣ್ಣ ಕರುಳು, ದೊಡ್ಡ ಕರುಳು ಎಲ್ಲಾ ಹೋಗೈತೆ ಕಲಾ ಅಂತಿದ್ದ ಸುಬ್ಬ.

ನೋಡ್ರಲಾ ಯಾರೇ ತಪ್ಪು ಮಾಡಿದ್ರೂ ಗುರುಸ್ವಾಮಿ ಆದ ನಾನೇ ಸಿಕ್ಷೆ ಕೋಡೋನು ಅಂತಿದ್ದ ಗೌಡಪ್ಪ. ಸುಬ್ಬ ಬರೀ ನಿಮ್ಮಜ್ಜಿ ಅಂತಾ ಬಯ್ದಿದ್ದಕ್ಕೆ ಅವತ್ತಿನ ದಿನದ ಎಳ್ಳೀರು, ಬಾಳೆಹಣ್ಣು ಮತ್ತಿತರೆ ಖರ್ಚನ್ನು ಅವನೇ ನೋಡಿಕೊಂಡಿದ್ದ. ನಾವು ಸಬರಿ ಮಲೈಯಿಂದ ವಾಪಸ್ಸು ಬಂದು 6 ತಿಂಗಳು ಆದ ಮ್ಯಾಕೆ ಸಾಲ ತೀರಿಸಿದ್ದ. ಗೌಡಪ್ಪ ಹಳೇ ಸೇಡು ತೀರಸ್ಕಂತಿದ್ದ. ಒಂದು ಸಾರಿ ಕಿಸ್ನ, ಸೀತುಗೆ ಬಾರೀ ರೇಗಸ್ತಾ ಇದ್ದ. ಸೀತು ಸಿಟ್ಟು ಬಂದು ಲೇ ನಿಮ್ಮಜ್ಜಿ ಅಂತಾ ಹೇಳ್ತಿದ್ದಾಗೆನೇ ಗೌಡಪ್ಪ ನೀನು ನಾಳೆ ಅಂದ. ಅದಕ್ಕೆ ಸೀತು ತಡೀರಿ ಇನ್ನೂ ನನ್ನ ಮಾತೇ ಮುಗಿದಿಲ್ಲ ಅಂದು ಲೇ ನಿಮ್ಮಜ್ಜಿ ಸಬರಿಗೆ ಹೋಗಿ ಬಂದ್ಯಾರೇನಲೇ ಕಿಸ್ನ. ಸ್ವಾಮಿಯ ದರುಸನ ಪಡೆದಿರುವರಾ. ಸ್ವಾಮಿಯೇ ಸರಣಂ ಅಯ್ಯಪ್ಪ. ಮಗಾ ಅಂಗೇ ಹಾಡು ಹೇಳಿ ಬಚಾವಾಗಿದ್ದ. ಇದೇ ಚಾನ್ಸು ಅಂತಾ ನಿಂಗ, ಗೌಡ ಸ್ವಾಮಿ, ನಿಮ್ಮ ಹೆಂಡರು ಸ್ವಾಮಿಗೆ ಹೇಳಿ ನಮಗೆಲ್ಲಾ ಚಾ ಸಾಮಿ ಕೊಡೊಕ್ಕೇ ಹೇಳಿ ಸ್ವಾಮಿ. ನಮ್ಮ ಹೆಂಡರು ಸ್ವಾಮಿ ಇವತ್ತು ಊರ್ನಾಗೆ ಇಲ್ಲಾ ಸ್ವಾಮಿ. ಅದಕ್ಕೆ ತಮ್ಮ ಕ್ಯಾಂಟೀನ್ ಸ್ವಾಮಿಲ್ಲಿ ನಮಗೆಲ್ಲಾ ಚಾ ಸ್ವಾಮಿ ಹೇಳಿ ಸ್ವಾಮಿ ಅಂತಾ ಬಚಾವು ಆಗ್ತಿದ್ದ. ಅಟ್ಟೊತ್ತಿಗೆ ಕಿಸ್ನ ಬಂದ. ಕಿಸ್ನ ಸ್ವಾಮಿ ಎಲ್ಲಿ ಹೋಗಿದ್ರಿ ಸ್ವಾಮಿ. ಕೆರೆ ಸ್ವಾಮಿ ಬರಕ್ಕೆ ಹೇಳಿದ್ರು. ಅಂಗೇ ಬೀಡಿ ಸ್ವಾಮಿ ನಾನು ಬೇಡ ಅಂದ್ರೂ ನಿಮ್ಮ ಆರೋಗ್ಯ ಸ್ವಾಮಿ ಕೆಟ್ಟೋಯ್ತದೆ ಅಂದಿದ್ದಕ್ಕೆ ಎರಡು ಬೀಡಿ ಸ್ವಾಮಿ ಸೇದಿ ಹೊಗೆ ಸ್ವಾಮಿ ಬಿಟ್ಟು ಬಂದೆ ಅಂದ. ಅಯ್ಯೋ ಮಗನೇ, ಲೇ ಗೌಡಪ್ಪ ಸ್ವಾಮಿ ಬಯ್ದ. ಲೇ ಮಗನೇ ಅಯ್ಯಪ್ಪಾ. ನೀನು ಯಾರ ಮಗನೋ ಅಯ್ಯಪ್ಪಾ. ನಿನ್ನ ಮುಖಕ್ಕೆ ದೋಸೆ ಸ್ವಾಮಿ ಹುಯ್ಯಲಿ ಎಂದು ಪನಿಸ್ ಮೆಂಟ್ ತಪ್ಪಿಸ್ಕಂಡ. ಲೇ ತಂಬೂರಿ ಸ್ವಾಮಿ ಎಲ್ರಲೆ. ಅವನ ಸ್ವಾಮಿ ಲೋಫರ್  ಸ್ವಾಮಿ. ಸರಿಯಿಲ್ಲಾ. ಮಗಾ ಸ್ವಾಮಿ ಹೆಣ್ಣು ಸ್ವಾಮಿಗೆ ಲೈನ್ ಸ್ವಾಮಿಗೆ ಹೋಗವ್ನೆ. ಬಯ್ದಲಾ ಸ್ವಾಮಿ. ನಾನೆಲ್ಲಿ ಬಯ್ದೆ ಕಡೆಗೆ ಸ್ವಾಮಿ ಸೇರಿಸಿದ್ದೀನಲ್ಲಾ ಸ್ವಾಮಿ.

ಗೌಡಪ್ಪ ಬೆಳಗ್ಗೆನೇ ಕಾಲು ಕಿಸ್ಕಂಡ್ ಚಪ್ಪರದಾಗೆ ಮಲಗಿದ್ದ. ಏನು ಆಯ್ತಲಾ ಸುಬ್ಬ. ಮಗಾ ಕೆರೆತಾವ ಕಪ್ಪ ಬಟ್ಯಾಗೆ ಹೋಗವ್ನೆ. ಕತ್ತಲಾಗೆ ಇವನ ಕಲರ್ ಹಂಗೇ ಬಟ್ಟೆ ಕಲರ್ ಕಪ್ಪು ಇದ್ದಿದ್ದಕ್ಕೆ ಎಮ್ಮೆ ಗುದ್ಕಂಡ್ ಹೋಗೈತೆ ಅಂದಾ ಸುಬ್ಬ. ಸರಿ ಇರುಮುಡಿ ಅಂದ್ರೆ ಎಲ್ಲಾವೂ ರೊಟ್ಟಿ, ಮುದ್ದೆ ಕಟ್ಕಂಡಿದ್ವು. ಎಲ್ಲಾವೂ ಪೂಜೆ ಮಾಡೋದೆ. ಗುರುಸಾಮಿ ಗೌಡಪ್ಪ ಮುಂದೆ. ಹೆಣ್ಣು ಐಕ್ಳು ಕಾಲು ತೊಳೆಯೋ ಬೇಕಾದ್ರೆ ತಂಬೂರಿ ನುಲಿಯೋನು. ಅವನಿಗೂ ದಂಡ ಹಾಕಿದ್ದ ಗೌಡಪ್ಪ. ಸರಿ ವ್ಯಾನ್ ಮಾಡಿದ್ವಿ. ವ್ಯಾನ್ ಹತ್ತೋ ಬೇಕಾದ್ರೆ ಗೌಡಪ್ಪ ಇರುಮುಡಿ ಸಮೇತ ದಪ್ಪ ಅಂತಾ ಒಳಗೆ ಬಿದ್ದ. ಪಂಚೆ ಕಾಲಿಗೆ ಸಿಕ್ಕಾಕಂಡಿತ್ತಂತೆ. ಹೋಗೋ ಬೇಕಾದ್ರೆ ಒಟ್ಟಿಗೆ ಹೋದೋರು ಬರೋ ಬೇಕಾದ್ರೆ ವಾರಕ್ಕೆ ಒಬ್ಬಬ್ಬರಂತೆ ಬಂದ್ವಿ. ಖಾಲಿ ವ್ಯಾನ್ ಯಾಕು ಹೋಗಬೇಕು ಅಂತಾ ನಿಂಗ ಪ್ಯಾಸೆಂಜರ್ ಹಾಕ್ಕಂಡ್ ಬಂದಿದ್ದ. ಗೌಡಪ್ಪ ತಿಂಗಳು ಆದ್ ಮ್ಯಾಕೆ ಬಂದ. ಯಾಕ್ ಸ್ವಾಮಿ. ಲೇ ನಿಮ್ಮ ಮುಖಕ್ಕೆ ನನ್ನ ಹಳೇ ಎಕ್ಕಡ ಹಾಕ. ಲೇ ಸಬರಿ ಮಲೈ ಬಂದಯ್ತಿ ಅಂತಾ, ಮಂಗಳೂರ್ನಾಗೆ ಇಳಿಸಿದೀರಾ. ಯಾರದೋ ವ್ಯಾನ್ ಹಿಡಕಂಡು ಆಮ್ಯಾಕೆ ಸಬರಿ ಮಲೈಗೆ ಹೋಗಿ ಬಂದೆ ಕನ್ರಲಾ. ಸುಬ್ಬ ನಾನೇ ಕನಲಾ ಮಾಡಿದ್ದು. ಮಗಾ ನನಗೆ ದಂಡ ಹಾಕಿರಲಿಲ್ವಾ. ಎಲ್ಲಾ ಕಪ್ಪು ಬಟ್ಯಾಗೆ ಇದ್ದಿದ್ದಕ್ಕೆ ಗೌಡಪ್ಪನ ಇಳಿಸಿದ್ದು ಗೊತ್ತೇ ಆಗಿರಲಿಲ್ಲಾ. ಈಗ ಗುರುಸ್ವಾಮಿ ಯಾಗ್ರೀ ಅಂದ್ರೆ ಗೌಡಪ್ಪ ಎಗರಿಸಿ ಒದಿತೀನಿ ಅಂತಾನೆ.  

Rating
No votes yet

Comments