ಗೌಡಪ್ಪ ಇನ್ ಟೂರಿಂಗ್ ಟಾಕೀಸ್

ಗೌಡಪ್ಪ ಇನ್ ಟೂರಿಂಗ್ ಟಾಕೀಸ್

ಬೆಳಗ್ಗೆನೇ ಸುಬ್ಬ ಮನೆಗೆ ಬಂದ, ಏನಲಾ, ಲೇ ಪಿಚ್ಚರ್ ನೋಡದೆ ಸಾನೆ ದಿನಾ ಆಗೈತೆ. ನಮ್ಮೂರ ಟೆಂಟ್ ನಾಗೆ ಭಾಗ 1 ಮತ್ತು ಭಾಗ 2 ಹಾಕವ್ರೆ ಹೋಗೋಣ ಅಂದಾ. ಯಾವುದು ಸಾಂಗ್ಲಿಯಾನನ ಅಲ್ಲಾ ಕಲಾ. ಸತ್ಯ ಸಂದೇಸ. ಏ ಥೂ ಅಂತದಕ್ಕೆಲ್ಲಾ ನಾ ಬರಕ್ಕಿಲ್ಲಾ, ಇನ್ನೊಂದು ಟೆಂಟ್ನಾಗೆ ರಾಜಣ್ಣಂದು ಬಬ್ರುವಾಹನ ಹಾಕವ್ರೆ ಅದಕ್ಕೆ ಬೇಕಾದರೆ ಹೋಗೋಣ ಅಂದೆ. ಸರಿ ಸಂಜೆ 5ಕ್ಕೆ ನಮ್ಮ ಗೌಡಪ್ಪ, ನಾನು ಹಂಗೇ ಸುಬ್ಬ ಬೈಕ್ನಾಗೆ ಹೊಂಟ್ವಿ. ವೀಕೆಂಡ್ ಪ್ರೋಗ್ರಾಮ್.  ಮಗಾ ಗೌಡಪ್ಪಂಗೆ ತ್ರಿಬ್ಸ್ ಪ್ರಾಬ್ಲಮ್ ಬೇರೆ. ಸಣ್ಣ ರಸ್ತೆ ಬರ್ತಿದಂಗೆನೇ ಕೆಳಗೆ ಇಳಿದು ನಮಗೆ ಬೈಕ್ ತಳ್ಳೋಕೆ ಹಚ್ಚೋನು. ತಾನು ಮಾತ್ರ ಯಾವುದೇ ಹೆಣ್ಣು ಐಕ್ಳು ಹೋದರೂ ನಮ್ಮ ಕೆಲಸದಾವು ಅಂತಾ ನಮ್ಮನ್ನ ತೋರಿಸೋನು. ಹಿಂಗಾಗೇ ಇವನು ಒಂದು ಕಿತಾ ಪೆಟ್ರೋಲ್ ಹಾಕಿಸಿದರೆ ಒಂದು ತಿಂಗಳು ಬತ್ತದಂತೆ.

ನಡೆದು ನಡೆದು ಸಾಕಾಗಿತ್ತು. ಲೇ ಎಲ್ಲಾ ಎಳ್ಳೀರು ಕುಡಿಯವಾ ಅಂದ. ಸರಿ ಎಳ್ಳೀರು ಕುಡೀತಾ ಇದ್ವಿ. ಯಾವನೋ ಒಬ್ಬ ಸೈಕಲ್ನಾಗೆ ನಮ್ಮ ನಿಂತಿರೋ ಬೈಕನ್ನು ಓವರ್ ಟೇಕ್ ಮಾಡ್ದ. ಗೌಡಪ್ಪ ಎಳ್ಳೀರು ಹಂಗೇ ಇಟ್ಟು ಅವನನ್ನ ಬೆನ್ನತ್ತಿಕೊಂಡು ಹೋಗಿ ದಬಾ ದಬಾ ಅಂತಾ ಹೊಡೆದ ಬಂದ. ಯಾಕ್ರೀ ಗೌಡ್ರೆ ಅಂದಾ ಸುಬ್ಬ. ನೋಡಲಾ ನಮ್ಮ ವಾಹನವನ್ನು ಯಾರೇ ಓವರ್ ಟೇಕ್ ಮಾಡಿದರೂ ಹೊಡೀರಿ ಅಂತಾ ನಮ್ಮ ಗೌಡರು ಹೇಳಿದಾರೆ ಅಂದ. ಯಾರು ದೇವೆಗೌಡರಾ ಅಲ್ಲ ಕಲಾ ಬಚ್ಚೇಗೌಡ. ಸರಿ ಮತ್ತೆ ಎಳ್ಳೀರು ಕುಡಿತಾ ಇದ್ದ. ಇನ್ನೊಬ್ಬ ನಡೆದುಕೊಂಡು ಹೋಗೋನು ನಮ್ಮ ಬೈಕ್ ದಾಟಿ ಹೋದ. ಮತ್ತೆ ಗೌಡಪ್ಪ ಅವನನ್ನ ಬೆನ್ನತ್ತಿಕೊಂಡು ಹೋದ. ದಬಾ ದಬಾ ಅಂತಾ ಸವಂಡ್ ಕೇಳ್ತು. ಆಮ್ಯಾಕೆ ನೋತ್ತೀವಿ ಗೌಡಂಗೆ ನಾಯಿ ಹೊಡೆದಂಗೆ ಹೊಡದವ್ನೆ, ಗೌಡಪ್ಪನ ಮುಖ ತಂಬಿಟ್ಟಿಗೆ ಟಿಂಕರಿಂಗ್ ಮಾಡ್ದಂಗೆ ಆಗಿತ್ತು. ಯಾಕ್ರೀ ಗೌಡ್ರೆ, ಲೇ ಅವನು ಮಾಜಿ ಸೈನಿಕ ಅಂತೆಲೇ, ಕರಾಟೆ ಬೇರೆ ಕಲ್ತಾವ್ನೆ ಅದಕ್ಕೆ ನನಗೇ ಹೊಡೆದ ಕನ್ರಲಾ ಅಂದ. ಗೌಡಪ್ಪ ಟೆನ್ನಿಸ್ ಕಿಸ್ನ ಆದಂಗೆ ಆಗಿದ್ದ.
ಸರಿ ಟಾಕೀಸ್ ಬಂತು. ಚೆಡ್ಡಿ ಮ್ಯಾಕೆ ಪಂಚೆ ಕಟ್ಟಿದ್ದ. ಏ ಥೂ ಪಂಚೆ ಬಿಡ್ರಿ. ಗೌಡಪ್ಪ ತನ್ನ ಟಿಕೇಟ್ ಕಾಸು ಮಾತ್ರ ಕೊಟ್ಟ. ನಿಮ್ಮದು ನೀವೇ ಹಾಕಳಿ ಅಂದ. ಟಿಕೆಟ್ ಕೌಂಟರ್ನಾಗೆ ಸುಬ್ಬನ ಕೈ ಸಿಕ್ಕಾಕಂಡಿತ್ತು. ಕ್ಯಾಸಿಯರ್ ನೀನು ಎನ್ಲಾ ಪೂರ್ತಿ ಕೈನೇ ಒಳಗೆ ಬಿಟ್ಟಿದೀಯಾ ಅಂದ್ನಂತೆ. ಕೈಯೆಲ್ಲಾ ಗಾಯ. ಅರಿಸಿನ ಇಲ್ಲಾ ಬುಡಲಾ. ಸುಬ್ಬ ಮಗಾ ಗೌಡಪ್ಪನ ಕಾಸ್ನಾಗೆ ಮೂರು ಗಾಂಧಿ ಟಿಕೇಟ್ ತಂದಿದ್ದ. ಗೌಡಪ್ಪ ಲೇ ನಾನು ಹೇಳಿದ್ದು ಫಸ್ಟ್ ಕ್ಲಾಸ್ ಕಣ್ಲಾ. ನೀವು ಕೊಟ್ಟಿರೋ ಕಾಸಿಗೆ ಏನು ಆಪರೇಟರ್ ರೂಂನಾಗೆ ಕೂರಿಸಕ್ಕೆ ಆಯ್ತದಾ ಅಂತ ಬುರುಡೆ ಬಿಟ್ಟ  ಸುಬ್ಬ, ಮಗಾ ಸುಬ್ಬ ಹೆಂಗಲಾ ಅನ್ನೋನು, ಗೌಡಪ್ಪನ ಕಾಸ್ನಾಗೆ ಎಲ್ಲಾರೂ ನೋಡ್ದಂಗೆ ಆತು ಬಿಡು ಅಂದ. ಸ್ಕ್ರೀನ್ ಇಂದ ಬರೀ 10 ಅಡಿ ಆಟೆಯಾ. ಸರಿ ಪಿಚ್ಚರ್ ಸುರುವಾತು, ಗೌಡಪ್ಪ ಸಿಗರೇಟ್ ಹಚ್ಕಂಡ. ಮಧ್ಯ ಹೊಗೆ ಬರೋದ್ರಿಂದ ಪಿಚ್ಚರ್ ಡಿಮ್ ಆಗಿ ಕಾಣೋದು. ಲೇ ಕಾರ್ಬನ್ ಚೇಂಜ್ ಮಾಡ್ರಲೇ ಅಂದ್ವು ಜನ. ಆಪರೇಟರ್ ಬಂದು ಗೌಡಪ್ಪಂಗೆ ಸಾನೆ ಉಗಿದಿದ್ದ. ಆರಿಸಲಾ ಸಿಗರೇಟ್ ಅಂದೋನು ಟಾಕೀಸ್ ನಾಗೆ ಸಿಗರೇಟ್ ಸೇದಿದ್ದಕ್ಕೆ 300ರೂ ದಂಡ. ಮಗಂದು ಹಳೇ ಟೆಂಟ್. ಬರೀ ಕಂಬನೇ ಇತ್ತು. ಬಬ್ರುವಾಹನ ಕಂಬದ ಮ್ಯಾಕೆ ಇದ್ರೆ , ಅರ್ಜುನ ಪರದೇ ಮೇಲೆ ಇರೋನು. ಬಾಯಿ ಆಡಿಸಿ ಏಟೋ ಹೊತ್ತಾದ್ ಮ್ಯಾಕೆ ಡೈಲಾಗ್ ಕೇಳೋದು. ಅದು ನೀರನಾಗೆ ಮಾತಡದಂಗೆ. ಲೇ ಜಾರಿಣಿಯ ಮಗನೆ ಅಂತಿದ್ದಾಗೆನೇ ಗೌಡಪ್ಪ ಅಳೋನು. ಯಾಕ್ರೀ. ನಮ್ಮಪ್ಪಂಗೆ ನಾನು ಎರಡನೆ ಹೆಂಡರು ಮಗ ಕಲಾ ಅಂದ, ಅದೇ ಬಬ್ರುವಾಹನ ಬೈಯ್ದರೆ ಸೀಟಿ ಹೊಡೆಯೋನು. ಖುಸಿ ಬಡ್ಡೇ ಹತ್ತದಕ್ಕೆ.
ಸರಿ ಗೌಡಪ್ಪ ಮಕ್ಕೊಂಡ. ಯಾಕ್ರೀ. ಲೇ ಅವರು ಬಾಣ ಬಿಟ್ರೆ ಮೈಮ್ಯಾಕೆ ಬಂದಂಗೆ ಆಯ್ತದೆ ಕಲಾ. ಅಂಗೇ ಅವನು ಉಗಿದ್ರೆ ಟವಲ್ನಾಗೆ ಒರೆಸಿಕೊಳ್ಳಬೇಕು ಅನ್ನಸ್ತದೆ ಕಲಾ ಅಂದೋನು ಕುಂತು ನೋಡಿದರೆ ಎಲ್ಲಾ ದೆವ್ವದ ತರಾ ಕಾಣ್ತದೆ. ಅದಕ್ಕೆ ಮಕ್ಕೊಂಡು ನೋಡ್ತಾ ಇದೀನಿ ಅಂದಾ. ಹತ್ತತ್ತು ನಿಮಿಸಕ್ಕೂ ತಲೆಯಿಂದ ಲಟಿಗೆ ತೆಗೆಯೋನು. ಗುಟ್ಕಾ ಬೇರೆ ಉಗಿದಿದ್ರು ಅದರ ಮ್ಯಾಕೇನೇ ಪೇಪರ್ ಹಾಕ್ಕೊಂಡು ಮಲಗಿದ್ದ ಗೌಡಪ್ಪ. ಕತ್ತಲಾಗೆ ಒಂದಿಬ್ಬರು ತುಳಿದು ಹೋಗಿದ್ರು. ಸರೀ ಇಂಟರ್ ವಲ್ ಬಂತು. ಸುಬ್ಬ ಒಂದು ದೊಡ್ಡ ಪಟ್ಟಣದಾಗೆ ಮಂಡಕ್ಕಿ ಕಟ್ಟಿಸ್ಕಂಡ್ ಬಂದಿದ್ದ. ನಾವೆಲ್ಲಾ ತಿಂದಿದ್ದು ಎರಡೇ ದಪ. ಮಗಾ ಹಿಂದಿದ್ದೋನು ಕತ್ತಲಾಗೆ ಎಲ್ಲಾ ತಿಂದವ್ನೆ. ಗೌಡಪ್ಪ ಅವನಿಗೆ ಸಾನೆ ಬಯ್ದ. ಅಲ್ಲ ಕನ್ರಲಾ ಆವಾಗಿನ ಯುದ್ದ ಅಂದ್ರೆ ಮೈಮ್ಯಾಕೆ ಒಂದು 10ಕೆಜಿ ಕಬ್ಬಿಣ, ಕೈನಾಗೆ ಒಂದು 10 ಕೆಜಿ ಕಬ್ಬಿಣ ಇಡ್ಕಂಡು ಹೊಡೆದಾಡಬೇಕಿತ್ತು ಕನ್ರಲಾ. ಬರೀ ಸಾರು ಅನ್ನ ಹಾಕಿದ್ರೆ ಮುಂಡೇವುಕ್ಕೆ ಚೂರಿನೂ ಎತ್ತಕ್ಕೆ ಆಯ್ತಿರಲಿಲ್ಲ. ನಮ್ಮ ಸೀತು ಆಡದಂಗೆ ಆಡೋವು ಅಂದ ಗೌಡಪ್ಪ. ಇಟ್ಟೊಂದು ಜನಾನ್ನ ಎಲ್ಲಿಂದ ಹಿಡಕಂಡ್ ಬಂದಾವ್ರೆ, ಅವರಿಗೆ, ಊಟ, ಬ್ಯಾಟ ಅಂತಿದ್ದ. ಎಲ್ಲಿ ಹೋಯ್ತದೆ ದರ್ಬೇಸಿ ಬುದ್ದ ಅಂದ ಸುಬ್ಬ.  ಸರಿ ಅಲ್ಲೊಂದು ಹೆಂಗಸು ಕುಂತಿತ್ತು. ಮಗಾ ಗೌಡಪ್ಪ ತನ್ನ ಸ್ಥಾನಪಲ್ಲಟ ಆಗಿದ್ದ. ಅವಳ ಹತ್ರ ಹೋಗಿ ಕಷ್ಟ ಸುಖ ವಿಚಾರಸವ್ನೆ. ಇವನು ಇಷ್ಟೆಲ್ಲಾ ಮಾತಾಡಿದ್ರೂ ಅವಳು ಒಂದು ಮಾತು ಬಯ್ತಾ ಇಲ್ಲಾ ಯಾಕಲಾ ಅಂದಾ ಸುಬ್ಬ. ಸರಿ ಪಿಚ್ಚರ್ ಬಾಳ ಸಂದಾಗಿತ್ತು ಕನ್ಲಾ. ಕರ್ನಾಟಕದಾಗೆ ಎರಡು ರಾಜಣ್ಣ ಇದಾರೆ ಅಂತಾ ಇವತ್ತೇ ಗೊತ್ತಾಗಿದ್ದು ಅಂದಾ ಗೌಡಪ್ಪ. ಮತ್ತೊಬ್ಬ ರಾಜಣ್ಣನ ಹೆಂಡರು ಯಾರಲಾ ಅಂದ. ರೀ ಅದು ಡಬ್ಬಲ್ ಆಕ್ಟಿಂಗ್. ಸರೀ ಪಿಚ್ಚರ್ ಮುಗೀತು. ಯಾರಲಾ ಆ ಹೆಣ್ಣು ಅಂದ ಗೌಡಪ್ಪ, ಓಹ್ ಅದಾ  ನಿಮ್ಮನೆ ಬಚ್ಚಲು, ಮತ್ತಿತರೆ ಕ್ಲೀನ್ ಮಾಡೋ ನಂಜಿ ಅಂದೆ, ನಾನೇ ಟಿಕೆಟ್ ತೆಗಸಿದ್ದೆ ಅಂದ ಸುಬ್ಬ. ಯಾವಾಗ ಕೆಟ್ಟ ಮೊಸರು ವಾಸನೆ ಬಂತು ಡೌಟ್ ಬಂತಲಾ ಅಂದೋನು ಅಂಗೇ ಕೆರೆಯಕ್ಕೆ ಸುರು ಹಚ್ಕಂಡ. ಸೀಟಿನ ಜುಂಗ್ನಾಗು ಕೆರೆದ್ವಿ. ಸುಖ ಅನ್ಸಿಲ್ಲ ಅಂತಾ ಕಾಣ್ತದೆ. ಕಡೆಗೆ ಬರೀ ಚೆಡ್ಯಾಗೆ ನಿಂತಿದ್ದ. ಯಾಕ್ರೀ ಗೌಡ್ರೆ ಲೇ ಕಡಿತಾ ತಡಿಯಕ್ಕೆ ಆಯ್ತಾ ಇಲ್ಲಾ ಕಲಾ ಅಂದೋನು ಗೋಡೇಗೆ ಬೆನ್ನು ಉಜ್ಜಕ್ಕೆ ಸುರು ಮಾಡ್ದ. ಅಲ್ಲಿ ನೋಡ್ರಲಾ ಬಬ್ರುವಾಹನನ ತರಾ ಮಾತ್ತಾವ್ನೆ ಅನ್ನೋವು ಜಲಾ. ಕಡೆಗೆ ಮನೆಗೆ ಹೋಗಿ ಕುದಿಯೋ ನೀರ್ನಾಗೆ ಸ್ನಾನ ಮಾಡ್ದ. ಈಗ ನಂಜಿಗೆ 500ರೂಪಾಯಿ ಸಂಬಳ ಹೆಚ್ಚಿಗೆ. ಎಲ್ಲಿ ತನ್ನ ಹೆಂಡರಿಗೆ ಚಂಗುಲಿ ಬುದ್ದಿ ಗೊತ್ತಾಯ್ತದೋ ಅಂತಾ. ಏ ಥೂ ಗೌಡಪ್ಪನ ಬುದ್ದಿಗೆ ಬೆಂಕಿ ಹಾಕ ಅಂದಾ ಸುಬ್ಬ.

Rating
No votes yet

Comments