ಇದಲ್ಲ ಗೆಳತೀ, ಅಂತಿಮ ವಿದಾಯ!

ಇದಲ್ಲ ಗೆಳತೀ, ಅಂತಿಮ ವಿದಾಯ!

ನಗುಮೊಗದಿಂದ ನನ್ನ ಕಳುಹಿಸಲು ಆಗದಿದ್ದರೆ
ಮತ್ತದೇ ಬಲವಂತದ ನಗೆಯ ಯತ್ನವೇಕೆ?
ಹೊರಡುವ ಸಮಯದಲ್ಲಿ ಅಳಬಾರದು ಎಂದಿದ್ದ
ನನ್ನ ಮಾತುಗಳನ್ನೇ ಪಾಲಿಸುವ ಹಟವೇತಕೆ ?

ಇಂದು ನೀನತ್ತರೆ ನನಗಿಲ್ಲ ಯಾವ ರೀತಿಯ ನೋವು
ಮತ್ತೆ ನಮ್ಮ ಮಧ್ಯೆ ಉಳಿಯುವ ದೂರಕ್ಕೆ, ಇರಲಿ
ಒಂದಿಷ್ಟು ಮಧುರ ಅಗಳುಗಳು ಉಪ್ಪಿನ ಮುತ್ತುಗಳು
ಅಳುವೆಯಾದರೆ ಅತ್ತು ಬಿಡು; ಕಂಬನಿಯ ಭಾರ ನನಗಿರಲಿ

ನೋವಿನ ಅರಿವು ನನಗಿಲ್ಲ ಎನಬೇಡ, ಅದೇ ಭಾವನೆಗಳು  
ನಿನ್ನ ಪ್ರತಿಬಿಂಬ ನಾನು, ನನ್ನಲ್ಲೂ ಅವೇ ಭಾವಾವೇಶಗಳು
ಇನ್ನು ಹೊರಡುವೆ ನಾನು, ನಿನ್ನ ಕಂಗಳ ದಿಟ್ಟಿಸಲು ಆಗದು ಎನಗೆ
ಹೊಟ್ಟೆಯ ದಾರಿಯ ಮರೆತು ಉಳಿಯುವೆ ಇಲ್ಲೇ, ಭಯ ನನಗೆ

ಮೂಕನನ್ನಾಗಿಸುವ ಲೋಕ, ಕಾಣದ ದಾರಿ
ಆದರೂ ನಾ ಮರಳಿ ಬರುವೆನೆಂಬ ನಂಬಿಕೆ ನಿನ್ನಲ್ಲಿರಲಿ
ಕಾರಣವೊಂದಿರಬೇಕು ಗೆಳತಿ ಹಿಂತಿರುಗಿ ಬರಲು
ಸದ್ಯಕ್ಕೆ ಕನಸೊಂದೆ, ಆ ಕಾರಣ ನೀನೆಂಬ ಭರವಸೆ ನಿನ್ನಲ್ಲಿರಲಿ

Rating
No votes yet

Comments