ನನಗಿಂದು ರಕ್ಷಣೆ ಬೇಕು!

ನನಗಿಂದು ರಕ್ಷಣೆ ಬೇಕು!

 


"ರಕ್ಷಾಬಂಧನದ
ಈ ಶುಭ ದಿನದಂದು
ಹಾರ್ದಿಕ
ಶುಭ ಹಾರೈಕೆಗಳು,
ದೇವರು ಸದಾ
ಹೀಗೆಯೇ
ಹರಸುತ್ತಿರಲಿ"


ಇಂದು ಮುಂಜಾನೆ
ನನ್ನ ಪ್ರೀತಿಯ
ಸಹೋದರಿಯರಿಗೆಲ್ಲಾ
ನನ್ನ ಜಂಗಮ
ದೂರವಾಣಿಯ ಮೂಲಕ
ಈ ಶುಭ ಸಂದೇಶಗಳನ್ನು
ರವಾನಿಸಿ ಮುಗಿಸಿದ್ದೆನಷ್ಟೇ,
ಅತ್ತಕಡೆಯಿಂದ ಕರೆ ಬಂತು,


ನೋಡಿದ್ರೆ, ಆಕೆಯದು,
ಏನಿರಬಹುದು ವಿಶೇಷ
ಎಂಬ ಆಶ್ಚರ್ಯದಿಂದಲೇ
ಉತ್ತರಿಸಿದೆ,
ನಾನು "ನಮಸ್ಕಾರ"
ಅನ್ನುವ ಮೊದಲೇ
ಬೈಗುಳದ ಸುರಿಮಳೆ
"ಹೆಂಗಿದೆ ಮೈಗೆ
ತಲೆಗಿಲೆ ಕೆಟ್ಟಿದೆಯಾ?
ಇಷ್ಟು ದಿನ ಸಖೀ,
ಸಖೀ ಅಂತ ಕವನ
ಬರೀತಿದ್ದವರು
ಈದಿನ ರಾಖಿ, ರಾಖಿ
ಅಂತಿದೀರಲ್ರೀ
ಏನಾಗಿದೆ ನಿಮಗೆ?
ಯಾವಾಗ ಸಿಗ್ತೀರಾ
ಮಾತಾಡ್ಬೇಕು ನಿಮ್ಜೊತೆ...
....... ........ .....
....... ........ .....
....... ........ ....."


ಏನೋ ಎಡವಟ್ಟು ಆಗಿದೆ,
ಎಲ್ಲೋ ಕಥೆ ಕೆಟ್ಟಿದೆ,
ಎಂಬುದರ ಅರಿವಾಗಲು
ಹಿಡಿಯಲಿಲ್ಲ ಹೆಚ್ಚು
ಸಮಯ ನನಗೆ,
"ಹಲೋ... ಹಲೋ...
ಸ್ವಲ್ಪ ಇರು, ಆಮೇಲೆ
ನಾನೇ ಕರೇ ಮಾಡ್ತೀನಿ..."
ಅಂತ ಮಾತು ಮುಗಿಸಿದೆ.


ನನ್ನಿಂದ ರವಾನೆಯಾದ
ಸಂದೇಶಗಳ ಪಟ್ಟಿ
ನೋಡಿದಾಗ ಅರಿವಾಯ್ತು,
ನನ್ನೆಲ್ಲಾ ಸಹೋದರಿಯರ
ಜೊತೆಗೇ, ನನ್ನ
ಸಹೊದರಿಯ ಹೆಸರಿನ
ಸಾಮ್ಯತೆ ಇರುವ
ಆಕೆಗೂ ನನ್ನಿಂದ,
ಅನಾಮತ್ತಾಗಿ ಈ ದಿನ,
ರಕ್ಷಾಬಂಧನದ ಸಂದೇಶ
ರವಾನೆಯಾಗಿ ಬಿಟ್ಟಿತ್ತು!


ಸಂಜೆ ಭೇಟಿ ಆದಾಗ,
ಸಮಜಾಯಿಷಿ ನೀಡಬೇಕು,
ರಮಿಸಬೇಕು, ನನ್ನಲ್ಲಿರುವ
ಸಹನಶೀಲತೆಯನ್ನು
ಇಂದು ನಾ ಒರೆಗೆ ಹಚ್ಚಬೇಕು;


ಅದಕ್ಕಾಗಿ, ನನಗೆ
ನಿಮ್ಮೆಲ್ಲರ ಬೆಂಬಲ ಬೇಕು
ಶುಭ ಹಾರೈಕೆಗಳು ಬೇಕು
ರಕ್ಷಾಬಂಧನದ ಈ ದಿನದಂದು
ನನಗೆ ರಕ್ಷಣೆ ಬೇಕು
ನೀವೆಲ್ಲಾ ನನ್ನನ್ನು
ಹರಸುವಿರಲ್ಲಾ?
*********


ಆತ್ರಾಡಿ ಸುರೇಶ ಹೆಗ್ಡೆ

Rating
No votes yet

Comments