ಸದನದಲ್ಲಿ ದಶಾವತಾರ!

ಸದನದಲ್ಲಿ ದಶಾವತಾರ!

ಬರಹ

  ಈಚೆಗಷ್ಟೇ ನಮ್ಮ ಶಾಸಕರು ವಿಧಾನಸೌಧದಲ್ಲಿ ಹಾಡು ಹೇಳಿದರು, ಅಂತ್ಯಾಕ್ಷರಿ ಆಡಿದರು, ಊಟ ಮಾಡಿದರು, ನಿದ್ದೆಯನ್ನೂ ಮಾಡಿ ಎದ್ದರು. ಮುಂದಿನ ದಿನಗಳಲ್ಲಿ ಅವರು ಇನ್ನೇನೇನು ಮಾಡಬಹುದೆಂಬ ಐಡಿಯಾವನ್ನು ಅವರ ಉಪಯೋಗಕ್ಕಾಗಿ ನಾನಿಲ್ಲಿ ಅವರಿಗೆ ಕೊಡಲಿಚ್ಛಿಸುತ್ತೇನೆ:
  * ’ಭಾವಿ ಪ್ರಧಾನಿ ರಾಹುಲ್’ ಎಂಬ ನಾಟಕವನ್ನು ಆಡಬಹುದು. ಹಗಲು ಸದನದ ಬಾವಿಯಲ್ಲಿ ಪ್ರತಿಭಟನೆ, ರಾತ್ರಿ ಮೊಗಸಾಲೆಯಲ್ಲಿ ’ಭಾವಿ ಪ್ರಧಾನಿ ರಾಹುಲ್’ ನಾಟಕ. ಸರಿಹೊಂದುತ್ತದೆ.
  * ರಾಜ್‌ಕುಮಾರ್ ಅಭಿನಯದ ’ಮಣ್ಣಿನ ಮಗ’ ಚಲನಚಿತ್ರದ ಪ್ರದರ್ಶನವನ್ನು ಏರ್ಪಡಿಸಿ, ದೇವೇಗೌಡರನ್ನು ಆಮಂತ್ರಿಸಿ, ಅವರ ಅಧ್ಯಕ್ಷತೆಯಲ್ಲಿ ಚಿತ್ರ ನೋಡಿ ಆನಂದಿಸಬಹುದು.
  * ’ಗಣಿ ಮಹಾತ್ಮೆ ಅಥವಾ ಗಾಲಿಜನಾಸುರ ವಧೆ’ ಎಂಬ ಯಕ್ಷಗಾನ ಆಡಬಹುದು. ಜನಾರ್ದನ ಪೂಜಾರಿ ವಿಶೇಷ ಆಮಂತ್ರಿತರು. ಯಕ್ಷಗಾನದಲ್ಲಿ ಪಾತ್ರವೊಂದನ್ನು ಅಭಿನಯಿಸುವಂತೆ ಪೂಜಾರಿಯವರನ್ನು ವಿನಂತಿಸಿಕೊಳ್ಳಲಡ್ಡಿಯಿಲ್ಲ.
  * ಒಗಟು ಬಿಡಿಸುವ ಆಟ ಆಡಬಹುದು. ರೇವಣ್ಣ ಮಾತಾಡತೊಡಗಿದರೆ ಸಾಕು, ಅವರ ಮಾತೆಲ್ಲವೂ ಒಗಟಿನಂತಿರುತ್ತವೆ. ಅವನ್ನು ಬಿಡಿಸುತ್ತಹೋದರಾಯಿತು.
  * ಉದಯ ಟಿವಿಯವರಿಗೆ ಹೇಳಿ ಕಣ್ಣನ್ ಅವರ ’ಹರಟೆ’ ಕಾರ್ಯಕ್ರಮ ಏರ್ಪಡಿಸಿಕೊಂಡು ನಕ್ಕು ನಲಿಯಬಹುದು. ಮುಂದೊಂದು ದಿನ ಅದರ ಪ್ರಸಾರವನ್ನು ಟಿವಿಯಲ್ಲಿ ನೋಡಿ ಪ್ರಜೆಗಳಾದ ನಾವೂ ಧನ್ಯರಾಗುತ್ತೇವೆ.
  * ಮ್ಯೂಸಿಕಲ್ ಚೇರ್ ಆಡಬಹುದು. ಮುಂದೆ ಅಧಿಕಾರದ ಕುರ್ಚಿ ಗಿಟ್ಟಿಸಿಕೊಳ್ಳಲು ಈ ಕಸರತ್ತು ನೆರವಿಗೆ ಬರುತ್ತದೆ.
  * ಯೋಗಾಭ್ಯಾಸ ಮಾಡಬಹುದು. ಯಾಕೆಂದರೆ, ಯೇಗ್ದಾಗೆಲ್ಲಾ ಐತೆ.
  * ’ಜೋಗಯ್ಯ’ದ ಸಾಮೂಹಿಕ ಅಘೋರಿ ಕುಣಿತ ಏರ್ಪಡಿಸುವಂತೆ ಶಿವಣ್ಣ ಮತ್ತು ಪ್ರೇಮ್ ಅವರನ್ನು ವಿನಂತಿಸಿಕೊಂಡು ಆ ಅದ್ಭೂತ ಕುಣಿತ ನೋಡಿ ಥ್ರಿಲ್ ಅನುಭವಿಸಬಹುದು.
  * ಆರ್.ಎಲ್. ಶಿವರಾಮೇಗೌಡರಿಗೆ ಹೇಳಿದರೆ ನಂ....ನಾಚ್ ವ್ಯವಸ್ಥೆ ಮಾಡುತ್ತಾರೆ. ರಾತ್ರಿಯಿಡೀ ಜೊಲ್ಲು ಸುರಿಸುತ್ತ ನೋಡಬಹುದು.
  * ಥೂ, ಇಂಥ ನಾಚ್ ಎಲ್ಲ ಬೇಡ ಅನ್ನುವಂತಿದ್ದರೆ ಸದನದ ಮೊಗಸಾಲೆಯಲ್ಲಿ ವಿವಿಧ ಹೋಮಗಳನ್ನು ಮಾಡಬಹುದು. ಟೈಂಪಾಸೂ ಆಗುತ್ತದೆ, ಇಷ್ಟಾರ್ಥಸಿದ್ಧಿಯೂ ಆಗುತ್ತದೆ. ಯಾವ ಯಾವ ಹೋಮ ಮಾಡಿದರೆ ಒಳ್ಳೆಯದೆಂದು ರೇವಣ್ಣನನ್ನು ಮತ್ತು ರೇವಣ್ಣನ ಪಿತಾಶ್ರೀಯನ್ನು ಕೇಳಿ ನಿರ್ಧರಿಸುವುದುತ್ತಮ.
  ’ಸದನದಲ್ಲಿ ದಶಾವತಾರ’ ಎಂಬುದಾಗಿ ಹತ್ತು ಚಟುವಟಿಕೆಗಳನ್ನು ಮಾತ್ರ ಇಲ್ಲಿ ಸೂಚಿಸಿದ್ದೇನೆ. ಇವು ಖರ್ಚಾದಮೇಲೆ ಶಾಸಕರು ನನ್ನನ್ನು ಸಂಪರ್ಕಿಸಿದಲ್ಲಿ ಇನ್ನಷ್ಟು ಐಡಿಯಾಗಳನ್ನು ಕೊಡುತ್ತೇನೆ. ಯಾವ ಚಾರ್ಜೂ ಇಲ್ಲ. ಆಬ್ಸಲೂಟ್ಲೀ ಫ್ರೀ. ರೌರವಾನ್ವಿತ, ಕ್ಷಮಿಸಿ, ಗೌರವಾನ್ವಿತ ಶಾಸಕರು ಅಹರ್ನಿಶಿ ನಮ್ಮ ಸೇವೆ ಮಾಡುವಾಗ ಅದಕ್ಕೆ ಪ್ರತಿಯಾಗಿ ನಾನು ಅವರಿಗೆ ಇಷ್ಟಾದರೂ ಸೇವೆ ಸಲ್ಲಿಸದಿದ್ದರೆ ಹೇಗೆ?