ರಕ್ಷಾ ಬಂಧನಕ್ಕೆ ಅರ್ಥವಿಲ್ಲವಾ

ರಕ್ಷಾ ಬಂಧನಕ್ಕೆ ಅರ್ಥವಿಲ್ಲವಾ

ಬೆಳಗ್ಗೆನೇ ಗೌಡಪ್ಪ ಬೀದಿಲ್ಲಿ ಇರೋ ಹೆಣ್ಣು ಐಕ್ಳಿಗೆ ರಾಖಿ ಕಟ್ಟೋನು 10ರೂಪಾಯಿ ಇಸ್ಕಳೋನು. ಕಟ್ಟೋನು ಎಡಗೈ ಒಡ್ಡೋನು. ಒಂತರಾ ತಿರಪುತಿಯಲ್ಲಿ ತೀರ್ಥ ಹಾಕ್ತಿದ್ದಂಗೆ ಎಡಗೈ ಒಡ್ಡೋ ತರಾ ಇತ್ತು. ಕೈಗೆ ಒಂತರಾ ಬೊಂಬಾಯಿ ಮಿಠಾಯಿ ಸುತ್ತಿದಂಗೆ ಸತ್ತುತ್ತಿದ್ದ. ಆವನು ಕಟ್ಟುತ್ತಿದ್ದ ರಾಖಿನೋ ಕಿತ್ತು ಹೋದ ಜನಿವಾರ ಇದ್ದಂಗೆ ಇತ್ತು. ಹೋಲ್ ಸೇಲ್  ಆಗಿ 2ರೂಪಾಯಿ ಹಂಗೆ ತಂದು 8ರೂಪಾಯಿ ಲಾಭ ಮಾಡ್ಕಂತಾ ಇದ್ದ. ಸರಿ ನಾನು ಹೋದೆ. ಅಲ್ರೀ ಅವರು ರಾಖಿ ಕಟ್ಟಿದರೆ ನೀವು ದುಡ್ಡು ಕೊಡಬೇಕು. ಇದೇನು ಉಲ್ಟಾ ಅಂದೆ. ನಮ್ಮ ಹಳ್ಳಿ ಹೆಣ್ಣು ಐಕ್ಳಿಗೆ ಗೊತ್ತಾಗಲ್ಲ ನೀ ಸುಮ್ಕಿರಲಾ ಅಂದು,  ಕೋಮಲ್ ಎಲ್ಲಲಾ ನಿನ್ನ ಹೆಂಡರು ಅಂದಾ ಗೌಡಪ್ಪ. ಮನೇಲ್ಲಿ ಅವಳೆ ಅಂದೆ. ಸರೀ ನೀ ಇಲ್ಲೇ ಇರು ನಾನು ನಿಮ್ಮನಗೆ ಹೋಗಿ ಬತ್ತೀನಿ ತಡಿ ಅಂದ. ಯಾಕೆ ಹೆಂಗೈತೆ ಮೈಗೆ. ಲೇ ನಿನ್ನ ಹೆಂಡರು ನನ್ನ ತಂಗಿ ಇದ್ದಂಗೆ ಅಂದು ರಾಖಿ ಕಟ್ಟು ಬಂದ. ಅಲ್ಲೂ 10ರೂಪಾಯಿ ಕಿತ್ತಿದ್ದ. ಹಂಗೇ ಅಕ್ಕಪಕ್ಕದ ಮನೆಯೋರಿಗೆಲ್ಲಾ ಕಟ್ಟು ಬಂದಿದ್ದ. ಅವತ್ತಿನ ದಿನದ ಕಲಕ್ಸನ್ ಹತ್ತತ್ರ 5ಸಾವಿರ ರೂಪಾಯಿ ಮಾಡಿದ್ದ. ಸರೀ ಎಲ್ಲಾ ಹೆಣ್ಣು ಐಕ್ಳು ಕೈಯಲ್ಲಿದ್ದಿದ್ದ ರಾಖಿ ಬೆಳಗ್ಗೆ ಹೊಳೀತಾ ಇತ್ತು. ಊಟ ಆದ್ ಮ್ಯಾಕೆ ನೋಡಿದ್ರೆ ರಾಖಿ ಕುಚ್ಚ ಬಿದ್ದು ಹೋಗಿ ಬರೀ ದಾರ ಮಾತ್ರ ನೇತಾಡ್ತಾ ಇತ್ತು. ಅವು ಅದನ್ನೇ ತಿರುಚೋವು. ಕೆಲವೊಬ್ಬರದು ಸಗಣಿ ಬಣ್ಣ ಬಂದಿತ್ತು. ವರಮಹಾಲಕ್ಸ್ಮಿ ಹಬ್ಬದ ಕಂಕಣ ದಾರ ತರಾ ಆಗಿತ್ತು.

ಸರೀ ಮಧ್ಯಾಹ್ನ ಮ್ಯಾಕೆ ಸುಬ್ಬ ಬಂದೋನು, ಲೇ ನಮ್ಮ ಪಕ್ಕದ್ಮನೆ ರಂಗಿ ನಂಗೆ ರಾಖಿ ಕಟ್ಟಿಬುಟ್ಲು ಕನ್ಲಾ ಅಂದ. ಲೇ ಅದಕ್ಕೆ ನೀ ಏನ್ ಏನ್ಲಾ ಮಾಡ್ದೇ. ನೋಡು ನೀ ರಾಖಿ ಕಟ್ಟಿದೀಯಾ ನಾ ನಿನಗೆ ತಾಳಿ ಕಟ್ಟೋ ತನಕ ಬುಡಕ್ಕಿಲ್ಲಾ ಅಂತಾ ಅಂದೆ ಕನ್ಲಾ ಅಂದ ಸುಬ್ಬ. ಅಯ್ಯೋ ನಿನ್ ಮಖಕ್ಕೆ ನಮ್ಮನೆ ಹಳೇ ಕಲಗಚ್ಚು ಹುಯ್ಯಾ. ರಾಖಿ ಕಟ್ಟಿದ್ ಮ್ಯಾಕೆ ಅವಳು ನಿನ್ ತಂಗಿ ಕಲಾ ಅಂದ ಗೌಡಪ್ಪ. ಸರಿ ನಿಂಗ ಓಡಿ ಬಂದೋನೆ ನೀನು ನನ್ನ ತಂಗೀನಾ ಮದುವೆ ಆಗು. ನಾನು ನಿನ್ನ ತಂಗೀನಾ ಮದುವೆ ಆಯ್ತೀನಿ ಅಂದಾ. ಲೇ ಸುಬ್ಬನ ತಂಗಿ ಯಾರಲಾ ಅಂದಾ ಗೌಡಪ್ಪ. ಅದೇ ರಂಗಿ. ಮತ್ತೆ ನಿನ್ನ ತಂಗಿ ಯಾರಲಾ. ನಾ ಪಿರುತಿ ಮಾತ್ತಿದ್ನಲ್ಲಾ ನಂಜಿ ಅವಳು ನಂಗೆ ರಾಖಿ ಕಟ್ಟವಳೆ ಅಂದ. ಲೇ ನಿಂಗ ನಿನ್ನ ಲವರ್ ಹುಣ್ಣಿಮ್ಯಾಗೆ ಕಾನೋದೆ ಕಸ್ಟ ಐತೆ. ನಮ್ಮ ಸುದ್ದಿಗೇನಾದ್ರೂ ಬಂದರೆ ಆಟೆಯಾ ಅಂದ ಸುಬ್ಬ. ಸರೀ ಅಟ್ಟೊತ್ತಿಗೆ ಸುಬ್ಬಿ ಬಂದು ಗೌಡಪ್ಪಂಗೆ ರಾಖಿ ಕಟ್ಟಿದ್ಲು. ಅದು ಒಳ್ಳೇ ತೇರಿನ ಹಗ್ಗಕ್ಕೆ ತೆಂಗಿನ ಕಾಯಿ ಗೊನೆ ಕಟ್ಟಿದಂಗೆ ಇತ್ತು. ಗೌಡಪ್ಪ ಬಲಗೈಗೆ ಎಡಗೈ ಒತ್ತುಕೊಟ್ಟಕಂಡು ನಿಂತಿದ್ದ. ಏನವ್ವಾ ಸುಬ್ಬಿ, ರಾಖಿ ಸಾನೆ ಸಣ್ಣದಾಯ್ತಲಾ ಅಂದೆ. ನಮ್ಮ ಅಣ್ಣ ಗೌಡಪ್ಪಂಗೆ ಅಂತಾ ಇನ್ನೊಂದು ಮಾಡ್ಸೀವ್ನಿ. ಹಿಂದಗಡೆ ಗಾಡ್ಯಾಗೆ ತರ್ತಾ ಇದಾರೆ ಅಂದ್ಲು. ಏನು ನನ್ನ ಹೆಣಕ್ಕೆ ಹಾಕಕ್ಕಾ ಅಂದ ಗೌಡಪ್ಪ. ಅಲ್ಲಾ ನಿಮ್ಮ ಕೈಗೆ ಕಟ್ಟಾಕೆ ಅಂದ್ಲು ಸುಬ್ಬಿ.

ಸರೀ ಸಂಜೆತಾವ ಮನೆ ಹತ್ರಾ ಹೋದೆ. ಗೌಡಪ್ಪನ ಮನ್ಯಾಗೆ ರಾಖಿ ಹಬ್ಬ. ಏನು ಎಲ್ಲಾವು ಕೈ ಕೊಟ್ಟು ರಾಖಿ ಕಟ್ಟಿಸ್ಕಂತಾ ಇದ್ವು. ಆರ್ ಎಸ್ ಎಸ್ ನೋರು ಬೇರೆ ಒಂದು ಚೀಲ ಮಡಗಿದ್ರು. ಗೌಡಪ್ಪಂಗೆ ಕಟ್ಟಿ ಕಟ್ಟಿ ಬೆರಳೆಲ್ಲಾ ಸಾನೇ ನೋವು ಬಂದಿತ್ತು. ಲಟಿಗೆ ತೆಗೆಯೋನು ಕಟ್ಟೋನು. ಯಾಕ್ರೀ ಗೌಡ್ರೆ ಲಟಿಗೆ ಮುರೀತೀರಾ ಅಂದ್ರೆ,. ನಿಂಗಲ್ಲಾ ಬುಡವ್ವಾ ಅನ್ನೋನು. ಹೆಣ್ಣು ಐಕ್ಳು ಲಕ್ಸ್ಮೀ ಹಬ್ಬದ ಕಂಕಣ ಅನ್ನೋವು ಮುಂಡೇವು. ಎಲ್ರಿಗೂ ಸ್ವೀಟು ಅಂತಾ ಬಡ್ಡೆ ಹೈದ ಮುಗ್ಗಲು ಬೆಲ್ಲ ಕೊಟ್ತಿದ್ದ. ಅದರಾಗೆ ಕಲ್ಲು ಸಿಕ್ತು ಅಂತಾ ಮುಂಡೇವು ಗೌಡಪ್ಪನ ಮನೆ ಮುಂದೆ ಎಸೆದು ಹೋದ್ರೆ, ಗೌಡಪ್ಪನ ನಾಯಿ ತಿನ್ನೋದು. ಕಡೆಗೆ ಗೌಡಪ್ಪನ ಭಾಸಣ. ನೋಡ್ರವಾ ರಕ್ಸಾ ಬಂದನ ಅಂದ್ರೆ. ಹಿಂಗೆ ಹಗ್ಗ ಕಟ್ಟಿದ್ ಮ್ಯಾಕೆ. ಅವರು ಅಣ್ಣ ತಂಗಿ ಆಯ್ತಾರೆ ಅಂದ. ಮತ್ತೆ ನಮ್ಮ ಯಜಮಾನ್ರು ತಂಬಿಟ್ಟು ರಾಮ, ಪಕ್ಕದ ಮನೆ ಪದ್ಮಂಗೆ ನೀನು ನನ್ನ ತಂಗಿ ಇದ್ದಂಗೆ ಅಂತಾ ಕುತ್ತಿಗೆಗೆ ಅರಿಸಿನ ದಾರ ಕಟ್ಟಿದ್ರು ಅಂದ್ಲು ರಾಜಮ್ಮ. ಅವಾಗ ಅವಳ ತಂಗಿ ಆಗಕ್ಕಿಲ್ಲಾ, ನಿನ್ನ ಗಂಡಂಗೆ ಎರಡನೇ ಹೆಂಡರು ಆಯ್ತಾಳೆ ಕಣಮ್ಮಿ ಅಂದ ಗೌಡಪ್ಪ. ಈ ಐಡೀರೀಯಾ ನಂಗಾದ್ರೂ ಬರಬಾರದಿತ್ತಾ ಅಂತಾ ಕೈ ಹೊಸ್ಕಂಡ. ರಾಜಮ್ಮ ಹಂಗೇ ಎದ್ದು ತಂಬಿಟ್ಟೂ ಅಂತಾ ಹೊಂಟ್ಲು. ನೋಡ್ರವಾ ನಿಮಗೆ ಯಾರೇ ರಾಖಿ ಕಟ್ಟಿದ್ರೂ ಅವರ ಬಾಯಿಗೆ ಸಿಹಿ ಹಂಗೇ ಕಾಸು ಕೊಡಬೇಕು. ನಿಮಗೆ ಒಳ್ಳೆದಾಯ್ತದೆ ಅಂದ ಗೌಡಪ್ಪ. ಸರೀ ಎಲ್ಲಾ ಮುಗೀತು. ಒಂದು ಮಣ ಲೋಟ ತಟ್ಟೆ ಬಿದ್ದೈತೆ ಬಂದು ಎಲ್ಲಾ ತೊಳಿ ಅಂದ್ಲು ಗೌಡಪ್ಪನ ಹೆಂಡರು.

ಸರಿ ಬೆಳಗ್ಗೆ ಗೌಡ ಮನೆತಾವ ಹೋದ್ರೆ ನಾಯಿ ಸತ್ತು ಹೋಗಿತ್ತು. ಯಾಕ್ರೀ ಗೌಡ್ರೆ ನಾಯಿ ಹಿಂಗೆ ಮಕ್ಕೊಂಡೈತೆ ಅಂದೆ. ಲೇ ಅದು ನಿನ್ನೆ ಸಾನೇ ಬೆಲ್ಲ ತಿಂದು ನಿಗರ್ಕಂಡೈತೆ ಅಂದಾ ಗೌಡಪ್ಪ. ಮತ್ತೆ ನಿವ್ಯಾಕೆ ಹಿಂಗೆ ನೆಗ್ಗಿರೋ ತಾಮ್ರದ ಚೊಂಬು ತರಾ ಇದೀರಿ ಅಂದೆ. ಲೇ ನನ್ನ ಎರಡನೇ ಹೆಂಡರು ತಮ್ಮ ಬಂದಿದ್ದ ಕಲಾ. ನನ್ನ ಹೆಂಡರು ಅವನಿಗೆ ನಿನ್ನೆ ರಾತ್ರಿ ಸರ್ ಪ್ರೈಸ್ ಕೊಡಬೇಕು ಅಂತಾ ಮಕ್ಕೊಂಡೋನಿಗೆ ರಾಖಿ ಕಟ್ಟಿದ್ಲು ಕನ್ಲಾ. ಒಳ್ಳೇದು ಆತು ಬಿಡಿ. ಅವಳು ಕತ್ತಲಾಗೆ ಅವನ ತಮ್ಮ ಅಂತಾ ತಿಳ್ಕಂಡು ನನಗೆ ಕಟ್ಟಿದಾಳೆ ಕನ್ಲಾ ಅಂದ. ಮತ್ತೆ ಈಗ. ನನ್ನ ತಂಗಿನಾ ತವರಿಗೆ ಬಾ ತಂಗಿ ಅಂತಾ ಅವಳ ತಮ್ಮ ಕರ್ಕಂಡು ಹೋದ ಕನ್ಲಾ ಅಂದ. ಮತ್ತೆ ಮುಂದಿನ ವರ್ಸ ರಾಖಿ ಹಬ್ಬ. ರಾಖಿನೂ ಬೇಡ ರಾಖಿ ಸಾವಂತೂ ಬೇಡ ಹೋಗಲಾ ಅಂತಾ ಕಣ್ಣೀರು ಒರೆಸ್ಕಂಡ.

ಸಂಪದದ ಎಲ್ಲಾ ಮಿತ್ರರಿಗೂ ರಕ್ಷಾ ಬಂಧನದ ಶುಭಾಷಯಗಳು

 

Rating
No votes yet

Comments