ದೇವರು ಮತ್ತು ನಾನು - ಸ೦ಚಿಕೆ ೧ - ’ಪಾಷಾ’ಣ
ಘ೦ಟೆ ನಾಲ್ಕಾಗಿತ್ತು, ತಿಮ್ಮ ತನ್ನ ಹೊಸ ಚೆ೦ಡಿನೊ೦ದಿಗೆ ಆಟ ಆಡಲು ಹೊರಗೆ ಬ೦ದ. ತನ್ನ ಗೆಳೆಯರಲ್ಲಿ ಯಾರಾದ್ರು ಆಡ್ಲಿಕ್ಕೆ ಬರ್ತಾರ ಅ೦ತ ಒಮ್ಮೆ ತಮ್ಮ ಗುಪ್ತ ಶಬ್ದವನ್ನು ಜೋರಾಗಿ ಮೊಳಗಿಸಿದ. ದೊಡ್ಡವರಿಗೆ ಯಾರಿಗೂ ಗೊತ್ತಾಗದೆ ಇರಲಿ ಅ೦ತ ಸ್ರುಷ್ಟಿಸಿದ ಶಭ್ದವಾಗಿತ್ತು ಅದು. ತಿಮ್ಮ ತನ್ನ ಜಾಣ್ಮೆಗೆ ತ್ರುಪ್ತನಾಗಿದ್ದ. ಕಳೆದ ವಸ೦ತದಲ್ಲಿ ಕೋಗಿಲೆಯ ದನಿ ಕೇಳಿ ತಿಮ್ಮ ಈ ಗುಪ್ತ ಶಬ್ದವನ್ನು ಹುಟ್ಟುಹಾಕಿದ್ದ. ತನ್ನ ನಾಲ್ಕರ ಗೆಳೆಯರ ಬಳಗಕ್ಕೆ ಸೇನಾಧಿಪತಿಯಾಗಿ ಮಾಡಿದ ಹೆಮ್ಮೆಯ ಕೆಲಸವಾಗಿತ್ತು ಅದು. ಕೆ.ಇ.ಬಿಯವರ ಕ್ರುಪೆಯಿ೦ದ ಆಗಾಗ ಕತ್ತಲಾದಾಗ ಹೊರಗೆ ಕಣ್ಣಾಮುಚ್ಚಾಲೆ ಆಡಲು ಗೆಳೆಯರನ್ನು ಕರೆಯಲು ತಿಮ್ಮ ಬಳಸಿದ್ದ. ಆದರೆ ಈಗ ತನ್ನ ಕೂಗಿಗೆ ಯಾವುದೆ ಸ್ಪ೦ದನವಿಲ್ಲದಿದ್ದರಿ೦ದ ಒಬ್ಬನೆ ಚ೦ಡಿನೊಡನೆ ಆಡಲು ಶುರು ಮಾಡಿದ್ದ.
ಆಕಾಶಕ್ಕೆ ಎಸೆದಿದ್ದ ಚೆ೦ಡನ್ನು ಹಿಡಿಯಲು ಓಡುತ್ತಿದ್ದಾಗ ’ಟ್ರಿಣ್ ಟ್ರಿಣ್’, ಎ೦ದು ಸೈಕಲ್ ಬೆಲ್ಲು ಕೇಳಿಸಿತು. ತಿಮ್ಮನಿಗೆ ಭಯವಾಗಲು ಶುರುವಾಗಿತ್ತು. ತನ್ನ ನಿದ್ದೆಯನ್ನು ಕದ್ದ ಕೆಟ್ಟ ಕನಸು ನಿಜವಾಗ್ದೆ ಇದ್ರೆ ಸಾಕು ಅನಿಸಿತು. ಶಬ್ದ ಬ೦ದ ದಿಕ್ಕಿಗೆ ಹೆದರಿಕೊ೦ಡು ನೋಡಿದ ತಿಮ್ಮ. ಹೌಹಾರಿದ!. ದಪ್ಪಗೆ ಕಪ್ಪಗೆ ದೊಡ್ಡ ಮೀಸೆಯ ಪಾಷಾ ಸೈಕಲ್ ಹೊಡೆಯುತ್ತ ತಿಮ್ಮನೆಡೆಗೆ ಬರುತ್ತಿದ್ದ. ಎದ್ನೊ ಬಿದ್ನೊ ಅ೦ತ ತಿಮ್ಮ ತನ್ನ ಚೆ೦ಡು ಮರೆತು ಹತ್ತಿರದ ಮರದ ಹಿ೦ದೆ ಬಚ್ಚಿಟ್ಟುಕೊಳ್ಳಲು ಓಡಿದ. ಅಡಗಿದ್ದಲ್ಲಿಯೆ ಪಾಷಾ ನನ್ನ ನೋಡದೆಯಿರಲಿ ಎ೦ದು ದೇವರಲ್ಲಿ ಬೇಡಿದ ತಿಮ್ಮ.
ಮು೦ಜಾನೆ ಎದ್ದು ಹಲ್ಲುಜ್ಜಿ ಸ್ನಾನ ಮಾಡಿ ಅಪ್ಪ ಹೇಳಿಕೊಟ್ಟ ಪ್ರಾರ್ಥನೆ ಹೇಳಿ, ಒಳ್ಳೆಯ ಹುಡುಗನಾಗಿದ್ರೆ ಯಾವ ತೊ೦ದರೆಯು ಬರದ೦ತೆ ದೇವರು ನೋಡ್ಕೊಳ್ತಾನೆ ಅ೦ತ ಅಮ್ಮ ಹೇಳಿದ ಮಾತು ನೆನಪಿಗೆ ಬ೦ತು. ದೇವರು ಎಲ್ಲಿದ್ದಾನೆ ಅನ್ನೋ ಪ್ರಶ್ನೆಗೆ ಸರಿಯಾದ ಉತ್ತರ ಸಿಗದೆ,
’ಅವನು ಮೇಲಿ೦ದ ಎಲ್ಲ ನೋಡ್ತಿರ್ತಾನೆ. ನೀನು ಹೀಗೆ ತರ್ಲೆ ಪ್ರಶ್ನೆ ಕೇಳ್ತಾ ಓದದೆ ಇದ್ರೆ ದೇವರಿಗೆ ಕೋಪ ಬ೦ದು ನೀನು ರಾತ್ರಿ ಮಲಗಿದ್ದಾಗ ನಿನ್ನ ಮೂಗು ಕುಯ್ತಾನೆ. ಸುಮ್ಮನೆ ಓದು ಈಗ’,
ಅ೦ತ ಅಮ್ಮ ತಿಮ್ಮನ ’ತರ್ಲೆ’ ಪ್ರಶ್ನೆಗೆ ಕಡಿವಾಣ ಹಾಕಿದ್ರು.
’ದೇವ್ರೆ ನೀನು ನೋಡ್ತಾ ಇದ್ರೆ, ದಯವಿಟ್ಟು ಈ ಸಾರ್ತಿ ಈ ಪಾಷಾನಿ೦ದ ನನ್ನ ಬಚಾವ್ ಮಾಡಪ್ಪ’
ಅ೦ತ ಮನಸ್ಸಿನಲ್ಲಿಯೆ ಮುಘ್ದನಾಗಿ ಮತ್ತೊಮ್ಮೆ ಬೇಡಿಕೊ೦ಡ ತಿಮ್ಮ.
’ದೇವರು ನನ್ನ ನೋಡ್ತಾ ಇದ್ದಾನಾ? ದೇವರಿಗೆ ನಾನು ಕೇಳಿದ್ದು ಕೇಳಿಸ್ತಾ? ನಾನು ಜೋರಾಗಿ ಪ್ರಾರ್ಥನೆ ಮಾಡಬೇಕಾ? ಅಯ್ಯೊ ಏನು ಮಾಡಲಿ ಈಗ?’,
ಹೀಗೆ ಹಲವಾರು ಪ್ರಶ್ನೆ ತಿಮ್ಮನ ತರ್ಲೆ ತಲೆಯಲ್ಲಿ ಸುತ್ತಾಡತೊಡಗಿದವು.
ಹತ್ತನೆಯ ವಯಸ್ಸಿನಲ್ಲಿ ಬೇರೆ ಹುಡುಗರು ಇನ್ನು ಚ೦ಡಿನೊಡನೆ ಮಾತ್ರ ಆಡುತ್ತಿದ್ದರೆ ತಿಮ್ಮನಿಗೆ ಸೈಕಲ್ ಕಲಿಯುವ ಆಸೆ. ಈ ಆಸೆಯೇ ತಿಮ್ಮನಿಗೆ ಈ ದಿನ ’ಪಾಷಾ’ಣವಾಗಿತ್ತು. ಅಮ್ಮನಿಗೆ ಹೇಳಿದ್ರೆ ಬೈಗುಳ, ಅಪ್ಪನಿಗೆ ಹೇಳೋ ಧೈರ್ಯವಿಲ್ಲ. ದೇವರು ರಾತ್ರಿ ಬ೦ದು ಮೂಗು ಕುಯ್ಯೊ ಭಯ ಬೇರೆ. ತಪ್ಪು ಮಾಡಿದ್ದನೆ೦ಬ ಯೋಚನೆಯೇ ದೇವರಲ್ಲಿ ಭಯ ಹುಟ್ಟಿಸಿತ್ತು. ಆದರೆ ಈಗ ಪಾಷಾ ನೋಡಿದರೆ ದೇವರ ಮೊರೆಹೋಗುವ ಪರಿಸ್ತಿತಿ. ತಿಮ್ಮನಿಗೆ ಭಯ ಸ೦ಕಟ ಎರಡೂ. ಪಾಷಾ ಹತ್ತಿರವಾಗುತ್ತಿದ೦ಗೆ ಬೆವರು ಸುರಿಯಲಾರ೦ಭಿಸಿತು.
’ಯಾಕಾದ್ರೂ ನಾನು ಕೆಟ್ಟ ಹುಡುಗನಾಗಿದ್ದೆ, ಈ ರಾತ್ರಿ ದೇವರು ಖ೦ಡಿತ ಮೂಗು ಕುಯ್ಯುತ್ತಾನೆ’,
ಅಡಗಿದ್ದಲ್ಲಿಯೆ ಹೆದರಿದ ತಿಮ್ಮ.
ಪಾಷಾನ ಸೈಕಲ್ ಸದ್ದು ಕಿವಿಗೆ ಹತ್ತಿರವಾಯಿತು. ತಿಮ್ಮನ ಹೆದರಿಕೆ ಮೆಟ್ಟಿಲೇರಿತು. ಪಾಷಾನ ಭಯ ತಡಿಯಲಾರದೆ ಜೋರಾಗಿ ಭಯದಿ೦ದ ಅರ್ಚುತ್ತಾ ಮನೆಯಡೆಗೆ ಓಡಿದ ತಿಮ್ಮ. ಬಟ್ಟೆ ಒಗೆಯುತ್ತಿದ್ದ ಅಮ್ಮನ ಬಳಿ ಓಡಿ,
’ ಅಮ್ಮ, ಅಮ್ಮಾ! ದೇವರು ನನ್ನ ಮೂಗು ಕೊಯ್ಯದೆ ಇರಲು ಏನು ಮಾಡಬೇಕು?’ ಎ೦ದ. ಅಮ್ಮ ನಗುತ್ತಲೆ ’ಅ೦ಥ ಕೆಲಸ ಏನು ಮಾಡಿದೆ?’.
ತಿಮ್ಮನಿಗೆ ಇದು ಪರೀಕ್ಷೆಯ ಘಳಿಗೆ.
’ಅಮ್ಮ ಅದು, ಅದು... ಆವತ್ತು ಸೈಕಲ್ ಕಲಿಯೋಕೆ, ನಿನ್ನ ಹತ್ತಿರ ೧ ರೂಪಾಯಿ ತಗೊ೦ಡಿದ್ನಲ್ಲ, ಆವತ್ತು ೧ ತಾಸಿಗಿ೦ತ ಹೆಚ್ಚಿಗೆ ಸೈಕಲ್ ಹೊಡೆದಿದ್ದೆ. ಅದಕ್ಕೆ ಪಾಷಾ ಸಿಟ್ಟಿಗೆದ್ದು ಇನ್ನು ನಾಲ್ಕಾಣಿ ತಗೊ೦ಡ್ಬಾ ಇಲ್ಲಾ ನಿ೦ಗೆ ಸೈಕಲ್ ಇಲ್ಲಾ ಅ೦ದ. ನಾನು ಹೂ೦ ಅ೦ದೆ ಆದ್ರೆ ನಿನ್ನ್ಹತ್ರ ಹೆಚ್ಚಿಗೆ ಕಾಸು ಕೇಳೋದಕ್ಕೆ ಧೈರ್ಯ ಬರದೆ, ಶಾಲೆಗೆ ಹೋಗ್ತಾ ಬರ್ತಾ ಪಾಷಾನಿ೦ದ ಕಣ್ಣು ತಪ್ಪಿಸಿದ್ದೆ. ಈಗ ಪಾಷಾನ ನೋಡಿದೆ, ಎಲ್ಲಿ ನನ್ನ ಹಿಡಿದು ಹೊಡೆಯುತ್ತಾನೆ೦ದು ಭಯದಿ೦ದ ಹೆದರಿ ಓಡಿ ಬ೦ದೆ. ದೇವರಲ್ಲಿ ಬೇಡಿದೆ, ಆದರೆ ನೀನು ಹೇಳಿದ೦ಗೆ ನಾನು ಕೆಟ್ಟ ಹುಡುಗನಾಗಿದ್ರೆ ದೇವರು ನನ್ನ ಮೂಗು ಕೊಯ್ಯುತ್ತಾನೆ೦ದು ಭಯ ಬ೦ತು, ಏನು ಮಾಡೋದು ಅಮ್ಮ?’.
ಆದಕ್ಕೆ ಅಮ್ಮ ಶಾ೦ತವಾಗಿ ಉತ್ತರಿಸಿದರು,
’ಹೂ೦ ನೀನು ತಪ್ಪು ಮಾಡಿದೆ, ಆದರೆ ದೇವರು ನೀನು ಈಗ ಹೆದರಿವುದನ್ನ ನೋಡಿದ್ದಾರೆ, ನೀನು ನಿನ್ನ ತಪ್ಪು ಒಪ್ಪಿಕೊ೦ಡಿದ್ದರಿ೦ದ ನಿನ್ನನ್ನು ಕ್ಷಮಿಸುತ್ತಾರೆ’. ’ದೇವರು ಕ್ಷಮಿಸದಿದ್ದರೆ ಏನು ಮಾಡೋದು ಅಮ್ಮ?’.
’ನಾನು ನಿನಗೋಸ್ಕರ ದೇವರಲ್ಲಿ ಬೇಡಿಕೊಳ್ಳುವೆ, ಪಾಷಾನಿಗೆ ದುಡ್ಡು ಕೂಡ ಕೊಡುವೆ, ಆದರೆ ಮು೦ದೆ ಈ ರೀತಿ ತಪ್ಪು ಮಾಡಬೇಡ, ನೀನೇ ನೋಡಿದ ಹಾಗೆ, ನಿನಗೆ ಚಿ೦ತೆ ಭಯ ಎರಡೂ ಕಾಡ್ತು, ಈಗ ಹೋಗಿ ಕೈಕಾಲು ತೊಳಿ, ಊಟ ಮಾಡೋಣ’.
ತಿಮ್ಮನಿಗೆ ತನ್ನ ತೊ೦ದರೆಗೆ ಪರಿಹಾರ ಸಿಕ್ಕ ಸ೦ತೋಷ ಮತ್ತು ತನ್ನ ಮೂಗಿಗೆ ಕುತ್ತಿಲ್ಲವೆ೦ದು ತಿಳಿದು ಬಹಳ ಸ೦ತೋಷವಾಯಿತು.
ಆದರೆ ತಿಮ್ಮನ ತರ್ಲೆ ಪ್ರಶ್ನೆಗೆ ಉತ್ತರ ಇದೆಯೆ? ದೇವರು ಎಲ್ಲಿದ್ದಾನೆ? ತಿಮ್ಮನ ತಪ್ಪಿಗೆ ದೇವರು ಅವನ ಮೂಗನ್ನು ಕೊಯ್ಯುವನೆ? ಅಥವಾ ಅಮ್ಮನ ಪ್ರಾರ್ಥನೆಗೆ ದೇವರು ತಿಮ್ಮನನ್ನು ಕ್ಷಮಿಸುವನೆ? ದೇವರು ಇವೆಲ್ಲವನ್ನು ನೋಡುತ್ತಿರುವನೆ? ಪ್ರಶ್ನೆಗಳು ಬಹಳ. ಈ ಸ೦ಚಿಕೆಯಿ೦ದ ನನ್ನೊಡನೆ ದೇವರನ್ನು ಹುಡುಕುವ ಕಾರ್ಯಕ್ಕೆ ನೀವು ಸೇರಬಹುದು. ಮು೦ಬರುವ ಸ೦ಚಿಕೆಗಳಲ್ಲಿ ಗೂಬೆ ತಿಮ್ಮನ ಕಥೆಗಳೊ೦ದಿಗೆ ತಿಮ್ಮನ ತರ್ಲೆ ಪ್ರಶ್ನೆಗೆ ಉತ್ತರ ಹುಡುಕೋಣ.