ಐತಿಹಾಸಿಕ ದೇವಾಲಯಗಳ ರಕ್ಷಣೆ
ಹಾಸನ ಸಮೀಪ ಹೊನ್ನಾವರ ಗ್ರಾಮದ ಐತಿಹಾಸಿಕ ಪ್ರಸನ್ನ ಚನ್ನಕೇಶವ ದೇವಾಲಯದ ದು:ಸ್ಥಿತಿ
ಪ್ರಸನ್ನ ಚನ್ನಕೇಶವ
ದೇವಾಲಯದ ಒಳಗಿನ ಒಂದು ಶಿಲ್ಪ
ಅಂತೂ ಬಂತು ಜೀರ್ಣೋದ್ಧಾರಕ್ಕೆ ಮುಹೂರ್ತ
ಪ್ರಸನ್ನ ಚನ್ನಕೇಶವ ಅಲಂಕರಿಸಿದಾಗ
.ಶ್ರೀಯುತ ನಟರಾಜ್ ಪಂಡಿತರಿಗೆ ದೇವಾಲಯಗಳೆಂದರೆ ಅದೆಲ್ಲಿಲ್ಲದ ಪ್ರೀತಿ. ಅದರಲ್ಲೂ ಪುರಾತನ ದೇವಾಲಯಗಳೆಂದರೆ ಅದನ್ನು ರಕ್ಷಿಸಲು ಟೊಂಕ ಕಟ್ಟಿ ನಿಲ್ಲುವ ಪ್ರವೃತ್ತಿ. ಇವರೊಡನೆ ಶ್ರೀಯುತ ರಾಮಸ್ವಾಮಿಯವರು ಹೆಗಲು ಕೊಟ್ಟರೆ ಆಧಾರಸ್ತಂಭವಾಗಿ ನಿಲ್ಲುವವರು ಹಾಸನದ ಶ್ರೀಯುತ ಸಿ.ಎಸ್.ಕೃಷ್ಣಸ್ವಾಮಿಯವರು.ಇವರೆಲ್ಲರ ಶ್ರಮದ ಫಲವಾಗಿ ಹಾಸನ ಜಿಲ್ಲೆಯ ದುದ್ದ ಸಮೀಪದ ಹೊನ್ನಾವರ ಎಂಬ ಗ್ರಾಮದಲ್ಲಿ ಜೀರ್ಣಾವಸ್ಥೆಯಲ್ಲಿದ್ದ ಪ್ರಸನ್ನ ಚನ್ನಕೇಶವ ದೇವಾಲಯದ ಜೀರ್ಣೋದ್ಧಾರದ ಕೆಲಸ ಪ್ರಾರಂಭವಾಗಿದೆ. ವಿವರಗಳನ್ನು ಇನ್ನೊಂದೆರಡು ದಿನಗಳಲ್ಲಿ ಇದೇ ಬ್ಲಾಗ್ ಬರಹದಲ್ಲಿ ಮುಂದುವರೆಸಲಾಗುವುದು.
--------
ಐತಿಹಾಸಿಕ ದೇವಾಲಯದ ವಿಶೇಷ ರಕ್ಷಣಾ ಪ್ರಯತ್ನ:
ಹಾಸನ ತಾಲ್ಲೂಕು ದುದ್ದ ಹೋಬಳಿಯ ಹೊನ್ನಾವರ ಗ್ರಾಮವು ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದು, ಹಾಸನ ಜಿಲ್ಲಾ ಕೇಂದ್ರದಿಂದ 20 ಕಿ.ಮೀ. ದೂರದಲ್ಲಿದೆ. ಗ್ರಾಮದ ಜನಸಂಖ್ಯೆ 1300 ಹೊಂದಿರುವ ಈ ಪುಟ್ಟಗ್ರಾಮದಲ್ಲಿ 860 ವರ್ಷಗಳ ಐತಿಹಾಸಿಕ ಹಿನ್ನೆಲೆ ಹೊಂದಿರುವ ಶ್ರೀ ಪ್ರಸನ್ನ ಚೆನ್ನಕೇಶವ ದೇವಾಲಯವಿದೆ.
ಈ ದೇವಾಲಯದ ಮುಂದಿರುವ 50 ಸಾಲುಗಳ ನಿರ್ಮಾಣ ಶಾಸನ-ದಾನ ಶಾಸನದ ಪ್ರಕಾರ ಈ ದೇವಾಲಯವು ಕ್ರಿ.ಶ,1149 ವಿಭವ ಸಂವತ್ಸರದ ಮಾಘ ಶುದ್ದ ತ್ರಯೋದಶಿಯಂದು ಶನಿವಾರ ರೋಹಿಣಿ ನಕ್ಷತ್ರದಲ್ಲಿ ಲೋಕಾರ್ಪಣೆಯಾಗಿದೆ ಎಂದು ತಿಳಿದು ಬರುತ್ತದೆ.
ದೇವಾಲಯವು ಊರಿನ ಹೊರಭಾಗದಲ್ಲಿ ಕೆರೆಗೆ ಹೊಂದಿಕೊಂಡಂತಿದೆ. ಶಾಸನದ ಪ್ರಕಾರ ಹೊಯ್ಸಳ ಸಾಮ್ರಾಜ್ಯವನ್ನು ಶತ್ರುಗಳ ಹಿಡಿತದಿಂದ ಬಿಡಿಸಿ ಹೊಯ್ಸಳ ಚಕ್ರವರ್ತಿ 1ನೇ ನರಸಿಂಹನ ಪಟ್ಟಾಭಿಷೇಕಕ್ಕೆ ಕಾರಣ ಕರ್ತನಾದ ಮಹಾಪ್ರಧಾನ ಹೆಗ್ಗಡೆ ಲಕ್ಷ್ಮಯ್ಯನು ದೇವಾಲಯಕ್ಕೆ ಬಿಟ್ಟ ದಾನಶಾಸನಗಳ ವಿವರಣೆ ಇದೆ.
ಶಾಸನ ಧ್ಯಾನ ಶ್ಲೋಕದಲ್ಲಿ-ಮೂರು ಲೋಕಗಳಲ್ಲೂ ಪೂಜಿತನಾದ ಸರ್ವಕರ್ಮಗಳಿಗೂ ಮತ್ತು ಅವುಗಳ ಫಲಾಫಲಗಳಿಗೂ ಸಾಕ್ಷೀಭೂತನಾದ ಆ ಪರಮಾತ್ಮ ಕೇಶವ ಅಥವಾ ಶಿವನನ್ನು ನಿತ್ಯವೂ ನಮಸ್ಕರಿಸುತ್ತೇನೆ ಎಂದಿದೆ.
ದಾನಶಾಸನದ ಅಂತಿಮ ಚರಣದಲ್ಲಿ ತಾವು ದೇವಾಲಯಗಳಿಗೆ ನೀಡಿರುವ ದಾನಗಳು ಶಾಶ್ವತವಾಗಿ ಯಾರಿಂದಲೂ ಅಪಹರಿಸ್ಪಡದೇ ಪರಮಾತ್ಮನ ಸೇವೆಗೆ ಶಾಶ್ವತವಾಗಿ ಅರ್ಪಿತವಾಗಲೆಂಬ ವಿವರವಿದೆ. ಈ ದಾನವನ್ನು ಅಪಹರಿಸುವ ವ್ಯಕ್ತಿಯು 60 ಸಾವಿರ ವರ್ಷ ಕ್ರಿಮಿಯಾಗಿ ಭೂಮಿಯಲ್ಲಿ ಹುಟ್ಟುತ್ತಾನೆ ಎಂಬ ಎಚ್ಚರಿಕೆ ಇದೆ.
ದೇವಾಲಯವು ಸಹಜ ಹೊಯ್ಸಳ ಶೈಲಿಯಲ್ಲಿದ್ದು ಮುಖಮಂಟಪ, ನವರಂಗ, ಅಂತರಾಳ ಗರ್ಭಗೃಹವನ್ನು ಹೊಂದಿದೆ. ನವರಂಗದ ಮೇಲ್ಚಾವಣಿಯಲ್ಲಿನ ಅಷ್ಠದಿಕ್ಪಾಲಕರ ಕೆತ್ತನೆ ನವಗ್ರಹಗಳ ಕೆತ್ತನೆ ನೋಡುಗರ ಗಮನ ಸೆಳೆಯುತ್ತದೆ,.
ದೇವಾಲಯದ ಪ್ರವೇಶ ದ್ವಾರದಲ್ಲಿನ ಮತ್ತುಗರ್ಭಗೃಹದ ಪ್ರವೇಶದ್ವಾರದಲ್ಲಿನ ಅಪರೂಪದ ದ್ವಾರಲಕ್ಷ್ಮಿಯ ವಿಗ್ರಹವು ತುಂಬಾ ಮನಮೋಹಕವಾಗಿದೆಎರಡು ಆನೆಗಳು ಲಕ್ಷ್ಮಿಯ ಪಾದಕ್ಕೆ ನಮಿಸುತ್ತಿವೆ. ಇಬ್ಬರು ಚಾಮರ ಧಾರಣಿಯರು ಲಕ್ಷ್ಮಿಗೆ ಚಾಮರ ಸೇವೆ ಸಲ್ಲಿಸುತ್ತಿದ್ದಾರೆ. ತುದಿಯಲ್ಲಿ ಎರಡು ಸಿಂಹಗಳ ಭಂಗಿ ವಿಶೇಷವಾಗಿದೆ.
ಇಷ್ಟೆಲ್ಲಾ ಐತಿಹಾಸಿಕ ಹಿನ್ನೆಲೆಯಲ್ಲಿ ಹೊಂದಿರುವ ಗ್ರಾಮದ ಈ ದೇವಾಲಯವು ಯಾವುದೋ ಒಂದು ಕಾಲಘಟ್ಟದಲ್ಲಿ ಗ್ರಾಮಸ್ಥರಿಂದ ನಿರ್ಲಕ್ಷ್ಯಕಕ್ಕೆ ಒಳಗಾಗಿದೆ. ಇದರಿಂದಾಗಿ ದೇವಾಲಯದ ಮೇಲೆ ಬೆಳೆದಿರುವ ಅಪಾರ ಪ್ರಮಾಣ ಗಿಡಗುಂಟೆಗಳು ದೇವಾಲಯದ ಗೋಡೆಗಳ ಬಿರುಕು ಬಿಡುವಂತೆ ಮಾಡಿದೆ. ದೇವಾಲಯದ ಹೊರಭಾಗದ ಕಲ್ಲುಗಳ ಸುಂದರ ಕೆತ್ತನೆಯ ಶಿಲ್ಪಗಳು ಸಂಪೂರ್ಣ ನೆಲಕಚ್ಚಿವೆ. ದೇವಾಲಯದ ಗೋಪುರ ಕುಸಿದಿದೆ.
ಈ ಮಾಹಿತಿಯನ್ನು ಸಂಗ್ರಹಿಸಿ ಹಾಸನ ಜಿಲ್ಲಾ ಐತಿಹಾಸಿಕ ಸ್ಮಾರಕಗಳ ಸಂರಕ್ಷಣಾ ವೇದಿಕೆಯು ಗ್ರಾಮಕ್ಕೆ ಭೇಟಿ ಇತ್ತು ಗ್ರಾಮಸ್ಥರ ಸಭೆ ನಡೆಸಿ, ಈ ಐತಿಹಾಸಿಕ ದೇವಾಲಯವನ್ನು ಉಳಿಸಿಕೊಳ್ಳಬೇಕಾದ ಅವಶ್ಯಕತೆಯನ್ನು ವಿವರಿಸಿತು.
ಈ ವಿಚಾರದಿಂದ ಪ್ರೇರಿತವಾದ ಗ್ರಾಮಸ್ಥರು ಸಭೆ ನಡೆಸಿ, 19-07-2009ರಂದು ಭಾನುವಾರ ದೇವಾಲಯದ ಆವರಣವನ್ನು ಸ್ವಚ್ಛತೆಗೊಳಿಸಿದರು. ಶ್ರೀ ಚನ್ನಕೇಶವನ ಸನ್ನಿದಿಯಲ್ಲಿ ಶ್ರೀ ನಾರಾಯಣ ಹೋಮ ಮತ್ತು ಅಭಿಷೇಕದ ಕಾರ್ಯಕ್ರಮವಿತ್ತು. ಕಾರ್ಯಕ್ರಮದಲ್ಲಿ ಹಾಸನ ಶಂಕರ ಭಜನಾ ಮಂಡಲಿಯವರು ಹೊನ್ನಾವರ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಗ್ರಾಮಸ್ಥರು ಉದ್ದೇಶಿಸಿ ಸಂಸ್ಥೆಯ ಗೌರವಾಧ್ಯಕ್ಷರಾದ ಶ್ರೀ. ಸಿ.ಎಸ್.ಕೃಷ್ಣಸ್ವಾಮಿಮ ಮಾತನಾಡಿದರು.
ಈ ಕಾರ್ಯಕ್ರಮವು ಗ್ರಾಮದಲ್ಲಿ ಹಬ್ಬದವಾತಾವರಣ ಉಂಟುಮಾಡುವುದರಲ್ಲಿ ಯಶಸ್ವಿಯಾಯಿತು. ಅಲ್ಲದೇ ದೇವಾಲಯದ ಅಭಿವೃದ್ಧಿಗಾಗಿ ಸ್ಥಳದಲ್ಲಿ ರೂ: 25,000-00ಕ್ಕೂ ಹೆಚ್ಚು ಹಣ ಸಂಗ್ರಹವಾಯಿತು. ಕಾರ್ಯಕ್ರಮವು ಗ್ರಾಮಸ್ಥರಲ್ಲಿನ ದೈವಶ್ರದ್ಧೆಯ ಪ್ರತೀಕವೆನೆಸಿತು. ಸರ್ವಪ್ರಯತ್ನದ ,ಮೂಲಕ ದೇವಾಲಯವನ್ನು ರಕ್ಷಿಸಲೇಬೇಕು ಎಂಬ ಧೃಢನಿಶ್ಚಯ ಎದ್ದು ಕಾಣುತ್ತಿತ್ತು. (ಶಾಸನ ಆಧಾರ ಎಪಿಗ್ರಾಫಿಯಾ ಕರ್ನಾಟಕ, ಹಾಸನ ಜಿಲ್ಲೆ. ಸಂಪುಟ 8 ಶಾಸನ ಸಂಖ್ಯೆ: 95,96,97,98)
ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಸಂಸ್ಥೆಯ ನಿರಂತರ ಪ್ರಯತ್ನ ಮತ್ತು ಪತ್ರ ವ್ಯವಹಾರದ ಫಲವಾಗಿ ಈ ದೇವಾಲಯ ಜೀರ್ಣೋದ್ಧಾರ ಕಾರ್ಯವು ರಾಜ್ಯ ಪುರಾತತ್ವ ಮತ್ತು ಸಂಗ್ರಹಾಲಯ ಇಲಾಖೆಯು 2009-10ನೇ ಸಾಲಿನ ಕ್ರಿಯಾಯೋಜನೆಯಲ್ಲಿ ಸೇರ್ಪಡೆಯಾಗಿದೆ. ಅಲ್ಲದೇ ಶ್ರೀರ್ಘದಲ್ಲಿಯೇ ದೇವಾಲಯದ ಜೀರ್ಣೋದ್ಧಾರ ಕಾರ್ಯವು ಶ್ರೀ ನಾರಾಯಣ ಹೋಮದೊಂದಿಗೆ ಪ್ರಾರಂಬವಾಗಲಿರುವುದು ಅತೀವ ಸಂತಸದ ಸಂಗತಿಯಾಗಿದೆ.
ಸದರಿ ದೇವಾಲಯ ಮತ್ತು ಹಾಸನದ ಸುತ್ತಮುತ್ತಲ ಹೋಯ್ಸಳರ ಕಾಲದ ದೇವಾಲಯಗಳಾದ ಹಿರೇಕಡಲೂರು, ಅಡಗೂರು, ಶಂಖ, ಹೊಳಲು ಮತ್ತು ಕೊಂಡಜ್ಜಿ ದೇವಾಲಯಗಳ ವಿವರವನ್ನು ಕನ್ನಡ ವೆಬ್ಸೈಟ್ನಲ್ಲಿ ವೀಕ್ಷಿಸಬಹುದಾಗಿದೆ.
ವೆಬ್ಸೈಟ ವಿಳಾಸ :- www.ourtemples.in
ಲೇಖಕರು :- ಟಿ.ವಿ.ನಟರಾಜ್ ಪಂಡಿತ್
ಸಂಚಾಲಕರು, ಹಾಸನ ಜಿಲ್ಲಾ ಐತಿಹಾಸಿಕ ಸ್ಮಾರಕಗಳ ಸಂರಕ್ಷಣಾ ವೇದಿಕೆ
ಹಾಸನ.
ಮೊಬೈಲ್ - 9964536150
ಇ.ಮೇಲ್ ವಿಳಾಸ:- tvnatrajpandith@gmail.com
---------------------------------------------------------
Comments
ಉ: ಐತಿಹಾಸಿಕ ದೇವಾಲಯಗಳ ರಕ್ಷಣೆ
ಉ: ಐತಿಹಾಸಿಕ ದೇವಾಲಯಗಳ ರಕ್ಷಣೆ
In reply to ಉ: ಐತಿಹಾಸಿಕ ದೇವಾಲಯಗಳ ರಕ್ಷಣೆ by sm.sathyacharana
ಉ: ಐತಿಹಾಸಿಕ ದೇವಾಲಯಗಳ ರಕ್ಷಣೆ
ಉ: ಐತಿಹಾಸಿಕ ದೇವಾಲಯಗಳ ರಕ್ಷಣೆ
In reply to ಉ: ಐತಿಹಾಸಿಕ ದೇವಾಲಯಗಳ ರಕ್ಷಣೆ by hariharapurasridhar
ಉ: ಐತಿಹಾಸಿಕ ದೇವಾಲಯಗಳ ರಕ್ಷಣೆ
ಉ: ಐತಿಹಾಸಿಕ ದೇವಾಲಯಗಳ ರಕ್ಷಣೆ
ಉ: ಐತಿಹಾಸಿಕ ದೇವಾಲಯಗಳ ರಕ್ಷಣೆ