ನವ ಭಾರತ ನಿರ್ಮಾಣ: ಒಂದು ಚಿಂತನೆ

ನವ ಭಾರತ ನಿರ್ಮಾಣ: ಒಂದು ಚಿಂತನೆ

Comments

ಬರಹ

ಇತ್ತೀಚಿಗೆ,ಎರಡನೇ ತರಗತಿಯಲ್ಲಿ(ಆಂಗ್ಲ ಮಾಧ್ಯಮದಲ್ಲಿ) ಓದುತ್ತಿರುವ ಪುಟ್ಟ ಹುಡುಗಿಯ ಕನ್ನಡ ಜ್ಞಾನವನ್ನು ಕಂಡು ನಮಗಿರುವ ಇಂಗ್ಲೀಷ್ ವ್ಯಾಮೋಹದ ಪರಿಣಾಮಗಳ ದರ್ಶನವಾಗಿ ನಡುಕ ಹುಟ್ಟಿತು. ಇದು ಕೇವಲ ಒಂದು ಮಗುವಿನ ಕಥೆಯಲ್ಲ ಕರ್ನಾಟಕದ ಅಥವಾ ಭಾರತದ ಯಾವುದೇ ಮಹಾನಗರಗಳಲ್ಲಿ ಓದುತ್ತಿರುವ ಶೇಕಡಾ 80 ಮಕ್ಕಳ ಮಾತೃಭಾಷಾ ಜ್ಞಾನ ಅದೇ ಮಟ್ಟದಲ್ಲಿ ಇರುತ್ತದೆ ಎಂಬುವುದರಲ್ಲಿ ಎರಡು ಮಾತಿಲ್ಲ.

ಇಂದು ಎಲ್ಲ ಪೋಷಕರ ತಲೆಯಲ್ಲಿ ಇಂಗ್ಲೀಷ್ ಎಂಬ ಹುಳು ಹೊಕ್ಕಿ ಬಿಟ್ಟಿದೆ. ಮಗು ಹುಟ್ಟುತ್ತಲೇ ಇಂಗ್ಲಿಷ್ ರೈಮ್ಸ್ ಗಳನ್ನು ಅವರ ಮುಗ್ಧ ಮನಸ್ಸಿನೊಳಗೆ ತುರುಕುತ್ತಾರೆ. ಹಿಂದೆ ತಿಥಿ,ವಾರ,ನಕ್ಷತ್ರ,ಸಂವತ್ಸರಗಳ ಹೆಸರುಗಳನ್ನು ಕಂಠ ಪಾಠ ಮಾಡಿಸುವ ಕ್ರಮವಿತ್ತು ಈಗ ಅವುಗಳ ಜಾಗವನ್ನು ಸಂಡೇ ಮಂಡೆಗಳು ಜನವರಿ,ಫೆಬ್ರವರಿಗಳು ಆಕ್ರಮಿಸಿವೆ. ಮಗು ಇಂಗ್ಲಿಷಿನಲ್ಲಿ ಮಾತನಾಡುವುದೇ ಪ್ರತಿಷ್ಠೆಯೆಂದು ಭಾವಿಸಿ "ಇಂಟರ್ನಾಷನಲ್ ಶಾಲೆಗಳಿಗೆ" ಸೇರಿಸುವ ಧಾವಂತವಂತೂ ತೀರಾ ಸಾಮಾನ್ಯ.

ಇನ್ನು ನಮ್ಮ ನೆರೆ ರಾಷ್ಟ್ರವಾದ ಚೀನಾ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿದೆ. ಇನ್ನು ಕೇವಲ "ಎರಡು ದಶಕಗಳಲ್ಲಿ ಚೀನಾ ಜಗತ್ತಿನ ಮೇಲೆ ತನ್ನ ಪ್ರಾಬಲ್ಯ ಸಾಧಿಸುತ್ತದೆ!!" ಎಂಬುದು ನನ್ನ ಊಹೆ. ನನಗಿರುವ ತಿಳುವಳಿಕೆಯ ಪ್ರಕಾರ ಚೀನಿಯರ ಪ್ರಬಲ ಅಸ್ತ್ರವೆಂದರೆ "ಭಾಷೆಯೇ ಹೊರತು ಇನ್ಯಾವ ಅಣ್ವಸ್ತ್ರವೂ ಅಲ್ಲ"ಅಥವಾ ನಕಲಿ ಉತ್ಪನ್ನಗಳೂ ಅಲ್ಲ. ಚೀನಿಯರನ್ನು ನಾನು ಗೌರವಿಸುವುದು ಆ ಕಾರಣಕ್ಕಾಗಿಯೇ. ಅವರು ಎಂದೂ ತಮ್ಮ ಭಾಷೆಯನ್ನು ಬಿಟ್ಟುಕೊಟ್ಟು ಇಂಗ್ಲೀಷ್ ವ್ಯಾಮೋಹಕ್ಕೆ ಬಲಿಯಾದವರಲ್ಲ. ಈ ವಿಷಯದಲ್ಲಿ ಜಪಾನೀಯರೂ ಹಿಂದಿಲ್ಲ.

ಆದರೆ ಭಾರತೀಯರ ಬುದ್ಧಿ,ಸಾಮರ್ಥ್ಯ,ಶಕ್ತಿಗಳೆಲ್ಲವು ಪಾಶ್ಚಾತ್ಯ ದೇಶಗಳ ಪಾಲಾಗುತ್ತಿರುವುದು ಖೇದಕರ. ಇದಕ್ಕೆ ಒಂದೇ ಕಾರಣ ಭಾರತೀಯರ ಅನ್ಯಭಾಷೆಗಳ ಮೇಲಿನ ಪ್ರೀತಿ (ಉದಾಹರಣೆಗೆ: ಸುಮಾರು ೪-೫ ವರ್ಷಗಳಿಂದ ಬೆಂಗಳೂರಿನಲ್ಲಿರುವ ಉತ್ತರಭಾರತೀಯನೊಬ್ಬ ಕನ್ನಡ ಕಲಿಯುವ ಗೋಜಿಗೆ ಹೋಗದಿದ್ದರೂ ಸಹ, ಕೇವಲ ೧ ವರ್ಷದಲ್ಲಿ ಫ್ರೆಂಚ್ ಅಥವಾ ಗೆರ್ಮನ್ ಭಾಷೆಯನ್ನು ಕಲಿತು ಪರದೇಶಕ್ಕೆ ಹಾರುತ್ತಾನೆ). ಹಣದ ವ್ಯಾಮೋಹಕ್ಕೊಳಗಾಗಿ ಭಾರತೀಯರು ಯಾವ ದೇಶದಲ್ಲಿ ಬೇಕಾದರೂ ದುಡಿಯುತ್ತಾರೆ ಅಲ್ಲಿನ ಭಾಷೆ ಸಂಸ್ಕೃತಿಗಳನ್ನು ಕಲಿಯುತ್ತಾರೆ( ಇದು ಭಾರತೀಯರ ದೊಡ್ದತನವೂ ಹೌದು!! ಏಕೆಂದರೆ ಜಗತ್ತಿನ ಬೇರೆ ಯಾವುದೇ ದೇಶದ ಜನರಲ್ಲಿ ಪರಿಸ್ಥಿತಿಗೆ ಒಗ್ಗುವ ಗುಣಗಳಿಲ್ಲ), ಅನಾದಿ ಕಾಲದಿಂದ ಬಂದ ಸಂಸ್ಕೃತಿ ಸಂಪ್ರದಾಯಗಳನ್ನು ತೀರಾ ಸಾಧಾರಣವೆಂಬಂತೆ ಮರೆಯುತ್ತಾರೆ.

ಪಾಶ್ಚಾತ್ಯರು ಪ್ರಾಣಿಗಳಂತೆ ಕಾಡಿನಲ್ಲಿ ಅಲೆದು ವಾಸಿಸುತ್ತಿರುವಾಗಲೇ, ಖಗೋಳಶಾಸ್ತ್ರ, ರಸಾಯನಶಾಸ್ತ್ರ,ಗಣಿತಗಳಲ್ಲಿ ಮಹತ್ತರವಾದ ಸಂಶೋಧನೆಗಳನ್ನು ಮಾಡಿದ ಸಂತತಿಯವರಾದ ಭಾರತೀಯರಿಗೆ ಈ ಗತಿ ಬರಬಾರದಿತ್ತು. ಇಷ್ಟೆಲ್ಲಾ ಸಾಮರ್ಥ್ಯಗಳನ್ನು ಹೊಂದಿರುವ ನಾವು ಕೆಲಸಗಳನ್ನರಸಿ ಪರದೇಶಗಳಿಗೆ ಏಕೆ ಹೋಗಬೇಕು? ಅಥವಾ ಭಾರತದಲ್ಲಿಯೇ ಇದ್ದುಕೊಂಡು ವಿದೇಶಿ ಉದ್ದಿಮೆಗಳಿಗೆ ನಾವೇಕೆ ಕೆಲಸಮಾಡಬೇಕು? ಇದರಿಂದ ಉತ್ತಮ ಆದಾಯ ಗಳಿಸಬಹುದು ಎಂಬುದು ಒಪ್ಪಿಕೊಳ್ಳಲೇ ಬೇಕಾದ ಅಂಶವಾದರೂ ಇದರಿಂದ ನಮ್ಮ ಸಾಮರ್ಥ್ಯ ಬುದ್ಧಿವಂತಿಕೆಯೆಲ್ಲ ಪರಕೀಯರ ಪಾಲಾಗುವುದಿಲ್ಲವೇ? ಹೀಗೆ ಯೋಚಿಸಿದ್ದಲ್ಲಿ ನಾವು ಸ್ವತಂತ್ರರು ಎಂದೂ ಹೇಳುವುದಕ್ಕೂ ಹಿಂಜರಿಯಬೇಕಾಗುತ್ತದೆ. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮವೇ ಮಾಡಬೇಕಾಗಬಹುದು.

ಇದಕ್ಕೆ ಸಮರ್ಪಕ ಉತ್ತರವೆಂದರೆ ದೇಶದಲ್ಲಿ ಭಾಷಾಕ್ರಾಂತಿ ಆಗಬೇಕಿದೆ. ಮೊದಲು ನಾವು ರಾಷ್ಟ್ರೀಯ ಭಾಷೆಯೊಂದನ್ನು ಸರ್ವಾನುಮತದಿಂದ ಆಯ್ಕೆ ಮಾಡಬೇಕಾದುದು ಮೊದಲ ಕೆಲಸ. ನಂತರ ಆಯಾ ಭಾಷಾವಾರು ಪ್ರಾಂತ್ಯಗಳಲ್ಲಿ ಆ ಭಾಷೆಯ ಹಾಗು ರಾಷ್ಟ್ರಭಾಷೆಯ ಮಾಧ್ಯಮದಲ್ಲಿ ಮಾತ್ರ ಶಿಕ್ಷಣ ನೀಡುವಂತೆ ಮಾಡಬೇಕು (ಬೇಕಿದ್ದಲ್ಲಿ ಇಂಗ್ಲೀಷನ್ನು ಒಂದು ಭಾಷೆಯಾಗಿ ಕಲಿಯಲು ಅವಕಾಶ ಕೊಡಬಹುದು). ಈ ದಿಸೆಯಲ್ಲಿ ಎಲ್ಲ ವಿಜ್ಞಾನ ಹಾಗು ತಂತ್ರಜ್ಞಾನ,ವ್ಯವಹಾರ, ಬ್ಯಾಂಕಿಂಗ್, ಕಾನೂನು ಮತ್ತು ಆಡಳಿತಕ್ಕೆ ಸಂಬಧಪಟ್ಟ ಎಲ್ಲ ಬರಹಗಳನ್ನು, ಕಡತಗಳನ್ನು ಆಯಾ ರಾಜ್ಯಗಳ ಭಾಷೆಗಳಿಗೆ ತರ್ಜುಮೆ ಮಾಡುವ ಕೆಲಸ ಮಹತ್ತರವಾದುದು. ಯುವಕರಿಗೆ ಹಾಗು ಅನುಭವಿಗಳಿಗೆ ಪ್ರಾಶಸ್ತ್ಯ ನೀಡಿ ಹೊಸ ಉದ್ದಿಮೆಗಳನ್ನು ಸ್ಥಾಪಿಸಿ ಅದರಿಂದ ವಿಪುಲ ಉದ್ಯೋಗವಕಾಶಗಳನ್ನು ಸೃಷ್ಟಿಸಬಹುದು. ನವ ಭಾರತ ನಿರ್ಮಾಣ ಮಾಡಬಹುದು. ವಿದೇಶೀಯರು ಬೇಕಿದ್ದಲ್ಲಿ ಭಾರತೀಯ ಭಾಷೆಯನ್ನು ಕಲಿತು ಇಲ್ಲಿ ಕೆಲಸ ಮಾಡಬಹುದು (ಉದಾ: ಕರ್ನಾಟಕದಲ್ಲಿ ಕೆಲಸ ಮಾಡಬೇಕಿದ್ದಲ್ಲಿ ಕನ್ನಡ ಕಲಿಯಬೇಕು ಅಥವಾ ತಮಿಳು ನಾಡಿನಲ್ಲಿ ಕೆಲಸ ಮಾಡಬೇಕಿದ್ದಲ್ಲಿ ತಮಿಳು ಕಲಿಯಬೇಕು). ಆದರೆ ಭಾರತೀಯರು ರಾಷ್ಟ್ರಭಾಷಾ ಮಾಧ್ಯಮದಲ್ಲಿ ಕಲಿತಿರುತ್ತಾದರಿಂದ ಅವರು ಎಲ್ಲಿ ಬೇಕಾದರೂ ಕೆಲಸ ಮಾಡುವ ಅವಕಾಶ ಕಲ್ಪಿಸಬಹುದು. ಭಾರತವನ್ನು ಜಗತ್ತಿನ ಉತ್ತುಂಗಕ್ಕೇರಿಸಬಹುದು.

ಜೈ ಹಿಂದ್.

 

 

(ವಿ.ಸೂ.: ಈ ಯೋಚನೆ ತೀರಾ ಬಾಲಿಶವೆನಿಸಬಹುದು ಅಥವಾ ಯಾವುದೊ ಉತ್ತಮ ಸಿನಿಮಾ ಕಥೆಯೆಂದೂ ಅಭಿಪ್ರಾಯ ಬರಬಹುದು. ಆದರೆ ಇದೊಂದು ಜವಾಬ್ದಾರಿಯುತ ಭಾರತೀಯ ಪ್ರಜೆಯ ಚಿಂತನೆ.ಇದನ್ನು ವಾಸ್ತವಕ್ಕೆ ತಂದಲ್ಲಿ ಹೊಸ ಯುಗಕ್ಕೊಂದು ನಾಂದಿ ಹಾಡಬಹುದು. ಯುವಕರು,ಪೋಷಕರು ಮತ್ತು ರಾಜಕಾರಣಿಗಳು ಓದಲೇಬೇಕಾದಂತಹ ಲೇಖನವಿದು.

ನಿಮ್ಮ ಚಿಂತನೆಗಳು ಹಾಗು ಅಭಿಪ್ರಾಯಗಳನ್ನು ಇಲ್ಲಿ ಚರ್ಚಿಸಬಹುದು ಅಥವಾ ಕೆಳಕಂಡ ವಿಳಾಸಕ್ಕೆ ಈ-ಅಂಚೆಯನ್ನು ಕಳುಹಿಸಬಹುದು

sathe.8901@gmail.com )

ಈ ಲೇಖನವು sathe8901.blogspot.com ನಲ್ಲಿ ಈಗಾಗಲೆ ಪ್ರಕಟಗೊಂಡಿದೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet