2004 ನೇ ಇಸ್ವಿಯಲ್ಲಿ ಒಂದು ಶನಿವಾರ...

2004 ನೇ ಇಸ್ವಿಯಲ್ಲಿ ಒಂದು ಶನಿವಾರ...

ಅದು 2004 ನೇ ಇಸ್ವಿ.. ಶನಿವಾರದ ಒಂದು ದಿನ ಬೆಂಗಳೂರಿನ ಮಲ್ಲೇಶ್ವರಂ ಏರಿಯಾದಲ್ಲಿ ಇರೋ "ರಾಕ್ ಲೈನ್" ಬಾರಿನಲ್ಲಿ ಮೂರು ಜನ ಸ್ನೇಹಿತರು ಬೆಳಿಗ್ಗೆ 11.30 ಕ್ಕೇನೇ ಕುಡಿಯೋಕೆ ಶುರು ಮಾಡಿದ್ರು.. ಆ ಮೂವರ ಹೆಸರು ಶಿವಕುಮಾರ್, ರಂಗನಾಥ ಮತ್ತು ಯಳವತ್ತಿ. ರಂಗನಾಥ್ ಮತ್ತು ಯಳವತ್ತಿ ಕುಡಿಯೋದು ಕಲಿತು ಕೇವಲ 6 ತಿಂಗಳು ಆಗಿತ್ತಷ್ಟೇ.. ಆದರೂ, ಅವತ್ತು ದೊಡ್ಡ ಕುಡುಕರ ಥರಾ ಬೆಳಿಗ್ಗೆಯಿಂದ ಸಂಜೆ 6 ರವರೆಗೆ ಕುಡಿದರು.

ಶಿವಕುಮಾರ್ ಅವರಿಬ್ಬರಿಗೆ ಬೈ ಹೇಳಿ ಬೆಂಗಳೂರಿನ ಯಾವುದೋ ಏರಿಯಾದಲ್ಲಿರೋ ತನ್ನ ಮನೆಗೆ ಹೊರಟ.. ರಂಗನಾಥ ಮತ್ತು ಯಳವತ್ತಿ ಮಧುಗಿರಿಗೆ ಹೋಗಬೇಕಿತ್ತು. ಅದು ಬೆಂಗಳೂರಿನಿಂದ 2 ಗಂಟೆಗಳ ಪ್ರಯಾಣ. ಹೊಸದರ ಹುಮ್ಮಸ್ಸಿನಲ್ಲಿ ಎಲ್ಲರೂ ಜಾಸ್ತೀನೇ ಕುಡಿದಿದ್ದರು. ಅದರಲ್ಲಿ ಯಳವತ್ತಿ ಎಲ್ಲರಿಗಿಂತ 2 ಪೆಗ್ ಜಾಸ್ತಿ ಎತ್ತಿದ್ದ..

ಬಾರ್ ನಿಂದ ಈಚೆ ಬಂದ ಯಳವತ್ತಿ, ಬಾರ್ ನ ಎಡಗಡೆ ರಸ್ತೆಯ ಕಡೆಗೆ ಹೊರಟ. ಆಗ ರಂಗನಾಥ ಇವನನ್ನು ತಡೆದು,

"ಲೇ ಯಳವತ್ತಿ.. ನೀನು ಜಾಸ್ತಿ ಕುಡಿದಿದೀಯ ಕಣ್ಲ. ಮಲ್ಲೇಶ್ವರಂ ಬಸ್ ಸ್ಟ್ಯಾಂಡ್ ಇರೋದು ಈ ಕಡೆ"
ಅಂತಾ ವಿರುದ್ಧ ದಿಕ್ಕಿನಲ್ಲಿ ತೋರಿಸಿದ.. ಅದಕ್ಕೆ ಯಳವತ್ತಿ
"ಲೇ ರಂಗನಾಥ.. ಬಸ್ ಸ್ಟ್ಯಾಂಡ್ ಇರೋದು ಈ ಕಡೆ.. ಬಾ ಅಂತಾ ಕರೆದ.. ಅನುಮಾನಗೊಂಡ ರಂಗನಾಥ ದಾರಿಯಲ್ಲಿ ಬರುತ್ತಿದ್ದ ಮೂವರನ್ನು ಕೇಳಿದ. ಅವರು ಯಳವತ್ತಿ ಹೋಗುತ್ತಿರೋ ಕಡೆಗೆ ದಾರಿ ತೋರಿಸಿದಾಗ, ಮರುಮಾತನಾಡದೇ ಯಳವತ್ತಿ ಹಿಂದೆ ಹೊರಟ.,

ಒಂದೈದು ಹೆಜ್ಜೆ ಹಾಕಿರಬೇಕು.. ಮುಂದೆ ನಡೆದುಕೊಂಡು ಹೋಗುತ್ತಿದ್ದ ಯಳವತ್ತಿಯನ್ನು ರಂಗನಾಥ ಬಂದವನೇ ಹಿಡಿದುಕೊಂಡ.. ಒಳ್ಳೇ ಪೇಷಂಟ್ ನ ಕರಕೊಂಡು ಹೋಗೋ ಹಾಗೆ, ಯಳವತ್ತಿಯ ಎರಡೂ ತೋಳನ್ನು ಹಿಡಿದುಕೊಂಡು ಹೆಜ್ಜೆ ಹಾಕತೊಡಗಿದ. ಕೂಡಲೇ ಯಳವತ್ತಿ ಇದ್ದೋನು..

"ಲೇ ರಂಗ.. ಇದೇನ್ಲ ಇದು.. ನನ್ ಯಾಕೆ ಹಿಂಗೆ ಹಿಡ್ಕಂಡಿದಿಯ? ಬಿಡ್ಲ.. ಜನ ನೋಡ್ದೋರು, ನನ್ ನೋಡಿ ಏನಾರಾ ಅನ್ಕಂಡಾರು"

ರಂಗನಾಥ ಯಳವತ್ತಿಗೆ ಸುಮ್ನೆ ಬಾ, ಆಮೇಲೆ ಹೇಳ್ತೀನಿ ಅಂತಾ ಕರಕೊಂಡು ಹೊರಟ.. ಅಲ್ಲೇ ರಸ್ತೆಯಲ್ಲಿ ಹೊಗುತ್ತಿದ್ದ ಒಂದೆರಡು ಚಂದುಳ್ಳಿ ಚೆಲುವೆಯರು, ಇವರನ್ನೇ ನೋಡಿಕೊಂಡು ಮುಸಿ ಮುಸಿ ನಗುತ್ತಾ ಹೋದಾಗ ಯಳವತ್ತಿಗೆ ಅವಮಾನವಾದಂತಾಗಿ,

"ಲೋ ರಂಗ.. ನಾನು ಎಲ್ರಿಗಿಂತ ಜಾಸ್ತಿ ಕುಡ್ದಿರಬಹುದು, ಆದ್ರೆ, ನಾನು ಕರೆಕ್ಟಾಗಿ ಇದೀನಿ.. ನಾನೇನು ತೂರಾಡ್ಕಂಡು ಬತ್ತಿಲ್ಲ... ನನ್ನ ನೀನು ಹಿಡ್ಕಂಡಿರೋದು ಬಿಡ್ತೀಯೋ ಇಲ್ಲೋ" ಅಂದ.. ಆದರೂ ರಂಗನಾಥ ಅವನನ್ನು ಬಿಡಲಿಲ್ಲ..

ಕೊನೆಗೆ ಯಳವತ್ತಿಗೆ ಸಿಟ್ಟು ಬಂದು.. ಅವನನ್ನು ದೂರ ತಳ್ಳಿ,

" ನಾನೇನು ತೂರಾಡ್ಕಂಡು ಬೀಳಲ್ಲ.. ಸುಮ್ಕೆ ಬಾ." ಅಂತಾ ರಂಗನಾಥನಿಗೆ ಜಬರ್ ದಸ್ತ್ ಮಾಡಿ ಹೇಳಿದ..

ಆಗ ರಂಗನಾಥ ಹೇಳಿದ್ದು,

"ಲೇ ಯಳವತ್ತಿ.. ನೀನು ತೂರಾಡ್ಕಂಡು ಬೀಳ್ತೀಯ ಅಂತಾ ನಾನು ನಿನ್ನ ಹಿಡ್ಕಂಡಿಲ್ಲ.. ನಾನು ಎಲ್ಲಿ ಬಿದ್ದೋಗ್ತೀನಿ ಅಂತಾ ನಿನ್ನ ಹಿಡ್ಕಂಡು ಬತ್ತಿದ್ದೀನಿ ಕಣ್ಲ.." ಅಂದ.....

Rating
No votes yet

Comments