ಸೌರಶಕ್ತಿ ಕಿಟ್ ಈಗ ಸರಳ

ಸೌರಶಕ್ತಿ ಕಿಟ್ ಈಗ ಸರಳ

ಬರಹ

ಸೌರಶಕ್ತಿ ಕಿಟ್ ಈಗ ಸರಳ

 

ಸೌರಶಕ್ತಿಯನ್ನು ವಿದ್ಯುಚ್ಛಕ್ತಿಯಾಗಿಸಿ,ಅದನ್ನು ಮನೆಯ ವಿದ್ಯುತ್ ಪ್ಲಗ್ ಮೂಲಕ,ಮೆಸ್ಕಾಂ ವಿದ್ಯುತ್‌ಗೆ ಸೇರಿಸುವ ಹಾಗಿದ್ದರೆ ಎಷ್ಟು ಚೆನ್ನ! ಮೆಸ್ಕಾಂನಿಂದ ನಾವು ಪಡೆವ ವಿದ್ಯುಚ್ಛಕ್ತಿಯ ಪ್ರಮಾಣ ಕಡಿಮೆಯಾಗುತ್ತದೆ-ವಿದ್ಯುತ್ ಬಿಲ್ ತಗ್ಗುತ್ತದೆ.ಇಂತಹ ಸರಳ ಕಿಟ್ ಒಂದನ್ನು ಕ್ಲೇರಿಯಾನ್ ಅಮೆರಿಕಾದ ಪವರ್ ಕಂಪೆನಿಯು ತಯಾರಿಸಿದೆ.ಸೌರಫಲಕಗಳು,ವಿದ್ಯುತ್ತನ್ನು ಹೊರಗಿನ ಪವರ್ ಕಂಪೆನಿಯಿಂದ ಪಡೆದ ವಿದ್ಯುತ್ತಿನ ರೂಪಕ್ಕೆ ಪರಿವರ್ತಿಸಲು ವಿದ್ಯುತ್ ಮಂಡಲ ಇರುವ ಒಂದು ಪೆಟ್ಟಿಗೆಯ ಜತೆ ಈ ಸಾಧನ ಬರುತ್ತದೆ.ಪವರ್ ಕಟ್ ಆದರೆ,ಸೌರಕಿಟ್ ಕೆಲಸ ನಿಲ್ಲಿಸುತ್ತದೆ.ಅಂತೆಯೇ ಓವರ್‌ಲೋಡ್ ಆದರೂ ಸಾಧನ ವಿದ್ಯುತ್ ಉತ್ಪಾದಿಸದು.ಇದನ್ನು ಆರುನೂರು ಡಾಲರಿನಷ್ಟು ಬೆಲೆಗೆ ಬಳಕೆದಾರರಿಗೆ ಒದಗಿಸಲು ಕಂಪೆನಿ ನಿರ್ಧರಿಸಿದೆ.ಅಲ್ಲಿನ ರಾಜ್ಯಗಳಲ್ಲಿ ಲಭ್ಯವಿರುವ ಸಬ್ಸಿಡಿಯಂತಹ ಸವಲತ್ತುಗಳ ಲಾಭ ಪಡೆದರೆ,ಈ ಕಿಟ್‌ಗಳ ಖರ್ಚು ಮೂರು-ನಾಲ್ಕು ವರ್ಷಗಳಲ್ಲಿ ಗ್ರಾಹಕನಿಗೆ ವಾಪಸ್ಸು ಬರುತ್ತದೆ.ಒಂದು ಮನೆಯಲ್ಲಿ ಎರಡು ಮೂರು ಕಿಟ್‌ಗಳಿಗೆ ಬೇಡಿಕೆ ಬರಬಹುದು ಎಂದು ಕಂಪೆನಿಯ ಅಂದಾಜು.ಮನೆಯ ವಯರಿಂಗ್ ಬದಲಿಸದೆ,ಸೌರಶಕ್ತಿಯನ್ನು ಗ್ರಿಡ್ ಶಕ್ತಿಯ ಜತೆಜತೆಯೇ ಬಳಸುವ ಸೌಲಭ್ಯ ಜನರಿಗೆ ಆಕರ್ಷಕವಾಗಿ ಕಾಣಬಹುದು ಎಂಬುದು ಕಂಪೆನಿಯ ಎಣಿಕೆ.ಮುಂದೆ ಗಾಳಿಯಿಂದ ವಿದ್ಯುತ್ ತಯಾರಿಕೆಗೂ ಇಂತಹುದೇ ಕಿಟ್‌ಗಳನ್ನು ತಯಾರಿಸಿ,ಒದಗಿಸುವ ಯೋಚನೆಯೂ ಕ್ಲೇರಿಯಾನ್‌ದ್ದು.
--------------------------------------------------------
ಮೈಸೂರು ಅರಮನೆಯ ಯಥಾದರ್ಶನ

http://www.mysorepalace.tv/360_Eng/index.html ಅಂತರ್ಜಾಲ ವಿಳಾಸಕ್ಕೆ ಭೇಟಿ ಕೊಟ್ಟರೆ,ನಿಮಗೆ ಮೈಸೂರು ಅರಮನೆಯ ದರ್ಶನವಾಗುತ್ತದೆ.ಅರಮನೆಯ ಒಳಗೆ ನಿಂತು ನೋಡಿದ ಅನುಭವ ಕೊಡುವ ಈ ಮಿಥ್ಯಾದರ್ಶನ,ವೀಕ್ಷಕ ವಿವರಣೆಯನ್ನೂ ಒಳಗೊಂಡಿದೆ.ಅರಮನೆಯ 21 ವಿವಿಧ ಭಾಗಗಳ ಯಥಾದರ್ಶನ ನಿಮಗಾಗುತ್ತದೆ.ಚಾವಣಿಯ ಕಡೆಯ ನೋಟ,ಅರಮನೆಯ ಒಳಗಡೆ ನಿಂತು ನೋಡಿದ ಅನುಭವಗಳೂ ನಿಮಗೆ ಲಭ್ಯ.
-----------------------------
ಬಾಹ್ಯಾಕಾಶ ಯಾನ ನಿಯಂತ್ರಣ
ಬಾಹ್ಯಾಕಾಶಕ್ಕೆ ಜನರನ್ನು ಪ್ರವಾಸ ಕರೆದೊಯ್ಯುವ ಸೇವೆ ಒದಗಿಸುವ ವರ್ಜಿನ್ ಗ್ಯಾಲಾಕ್ಟಿಕ್ ಅಂತಹ ಕಂಪೆನಿಗಳ ಸೇವೆ ಲಭ್ಯವಾಗಲಿಕ್ಕೆ ಇನ್ನು ಹೆಚ್ಚು ತಡವಾಗದು.ನಾಸಾದ ಸ್ಪೇಸ್ ಶಟಲ್ ಕೂಡಾ ಈಗ ಹಳೆಯದಾಗಿದ್ದು,ಅದನ್ನು ಬಳಕೆ ಹೆಚ್ಚು ಸಮಯ ನಡೆಯದು.ನಂತರ,ಅಂತಾರ್ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಜನರನ್ನು ಕರೆದೊಯ್ಯಲು,ಖಾಸಗಿ ಸೇವೆಯನ್ನೇ ಅವಲಂಬಿಸಬೇಕಾದೀತು.ಇವೆಲ್ಲದರಿಂದ ಬಾಹ್ಯಾಕಾಶ ವಾಹನಗಳ ಹೋಗುವಿಕೆ ಮತ್ತು ಬರುವಿಕೆ ಹೆಚ್ಚಾದಂತೆಲ್ಲಾ,ಬಾಹ್ಯಾಕಾಶದಲ್ಲೂ ಸಂಚಾರ ನಿಯಂತ್ರಣ ಬೇಕಾಗುತ್ತದೆ.ಈ ಬಗ್ಗೆ ನಿಯಮಗಳನ್ನು ಮಾಡಲು ಅಮೆರಿಕಾದ ಫೆಡರೇಶನ್ ಆಫ್ ಏವಿಯೇಶನ್ ಎರೊನಾಟಿಕ್ಸ್(FAA)ವು ಸ್ಟಾನ್‌ಫರ್ಡ್ ವಿವಿಯ ತಜ್ಞರನ್ನು ಕೇಳಿದೆ.ವಿಮಾನಗಳ ನಿಯಂತ್ರಣದ ರೀತಿಯೇ ಇಂತಹ ಬಾಹ್ಯಾಕಾಶಯಾನಗಳನ್ನು ನಿಯಂತ್ರಿಸುವ ಬಗ್ಗೆ ತಜ್ಞರು ಸಲಹೆಗಳನ್ನು ನೀಡಿ,ನಿಯಮಗಳನ್ನು ರೂಪಿಸಬೇಕಿದೆ.ಈ ಯಾನಗಳು ಸುರಕ್ಷಿತವಾಗುವಂತೆ ಮಾಡುವ ಜವಾಬ್ದಾರಿಯ ಜತೆ,ಬಾಹ್ಯಾಕಾಶ ವಾಹನಗಳು,ವಿಮಾನಗಳಿಗೆ ಡಿಕ್ಕಿಯಾಗದಂತೆ ಮಾಡುವುದು,ಸವಾಲೇ ಸರಿ.
--------------------------------------------------------------------------
ಇಂಟೆಲ್‌ನಿಂದ ಮೆಕಾಫಿ ಕಂಪೆನಿ ಖರೀದಿ
ಇಂಟೆಲ್ ಚಿಪ್ ತಯಾರಿಕೆಗೆ ಹೆಸರುವಾಸಿಯಾದ ಕಂಪೆನಿ.ಮೆಕಾಫಿ ಎನ್ನುವ ಆಂಟಿ-ವೈರಸ್‌ದಂತಹ ಕಂಪ್ಯೂಟರ್ ಭದ್ರತಾ ತಂತ್ರಜ್ಞಾನ ಒದಗಿಸುವ ಕಂಪೆನಿ.ಇಂಟೆಲ್ ಕಂಪೆನಿಯು ಮೆಕಾಫಿಯನ್ನು ಕೊಳ್ಳಲು ನಿರ್ಧರಿಸಿದೆ.ಇದಕ್ಕೆ ಇಂಟೆಲ್,ಮೆಕಾಫಿ ಕಂಪೆನಿಯ ಶೇರು ಖರೀದಿ,ನೇರ ಹಣ ಪಾವತಿ ಇತ್ಯಾದಿಗಳಿಗೆ ಸುಮಾರು ಏಳು ಮುಕ್ಕಾಲು ಬಿಲಿಯನ್ ಡಾಲರು ಖರ್ಚು ಮಾಡಬೇಕಾಗುತ್ತದೆ.ಇಂಟೆಲ್ ಇನ್ನು ಮುಂದೆ ತನ್ನ ಸಂಸ್ಕಾರಕದಲ್ಲೇ ಭದ್ರತಾ ಸವಲತ್ತುಗಳನ್ನು ಅಳವಡಿಸುವ ಯೋಚನೆಯಿಂದ ಈ ಖರೀದಿ ಮಾಡಿದೆ ಎನ್ನುವುದು ಸ್ಪಷ್ಟ.ಯಂತ್ರಾಂಶದಲ್ಲೇ ಭದ್ರತಾ ತಂತ್ರಜ್ಞಾನ ಅಳವಡಿಸಿದರೆ,ಅದು ಹೆಚ್ಚು ಚುರುಕಾಗಿ ಕೆಲಸ ಮಾಡುತ್ತದೆ.ಅಲ್ಲದೆ,ಕಂಪ್ಯೂಟರಿಗೆ ಆಪರೇಟಿಂಗ್ ತಂತ್ರಾಂಶ ವ್ಯವಸ್ಥೆ ಲೋಡ್ ಆಗುವ ಮೊದಲೇ,ಬಳಕೆದಾರನ ಬಗ್ಗೆ ಖಚಿತ ಪಡಿಸಿಕೊಳ್ಳುವಂತಹ ಸೌಲಭ್ಯಗಳನ್ನು ಅಳವಡಿಸಲು ಇಂಟೆಲ್ ಇನ್ನು ಮುಂದಾಗಬಹುದು.ಕ್ಲೌಡ್ ಕಂಪ್ಯೂಟಿಂಗ್ ಎನ್ನುವ ತಂತ್ರದ ಮೂಲಕ,ಬೇಕಾದ ಸ್ಮರಣಕೋಶಗಳು,ತಂತ್ರಾಂಶಗಳನ್ನು ಅಂತರ್ಜಾಲ ಮೂಲಕವೇ ಪಡೆಯುವ ವಿಧಾನ ಜನಪ್ರಿಯವಾಗುತ್ತಿರುವ ಈ ದಿನಗಳಲ್ಲಿ,ಬಳಕೆದಾರನಿಗೆ ಮೋಸವಾಗುವುದನ್ನು ತಡೆಯಲು,ಹೊಸ ವಿಧಾನಗಳನ್ನು ಅಳವಡಿಸಲೂ ಇಂಟೆಲಿಗೆ ಈ ಖರೀದಿ ಹೆಚ್ಚು ನೆರವಾಗಬಹುದು.ಸೆಲ್‌ಪೋನ್‌ನಂತಹ ಮೊಬೈಲ್ ಸಾಧನಗಳ ತಯಾರಿಕೆಯತ್ತವೂ ಇಂಟೆಲ್ ಗಮನಹರಿಸಿದೆ.
---------------------------------------------------------------------------
ಸೂರ್ಯ ಪ್ರದಕ್ಷಿಣೆ ಮುಗಿಸಿದ ನೆಪ್ಚೂನ್
ನೆಪ್ಚೂನ್ ಗ್ರಹವನ್ನು ಮೊದಲ ಬಾರಿಗೆ ನೋಡಿದ ಬಗ್ಗೆ ಅಧಿಕೃತವಾಗಿ ದಾಖಲಿಸಿದ್ದು,1846ರಲ್ಲಿ.ಆಮೇಲೆ ನೆಪ್ಚೂನ್ ಸೂರ್ಯನ ಸುತ್ತ ಒಂದು ಸುತ್ತು ಪ್ರದಕ್ಷಿಣೆಯನ್ನಿನ್ನೂ ಪೂರೈಸಿಲ್ಲ.ಆಗಸ್ಟ್ ಇಪ್ಪತ್ತರಂದು, ಸೂರ್ಯ ಮತ್ತು ನೆಪ್ಚೂನ್ ನಡುವೆ ಭೂಮಿ ಸರಳರೇಖೆಯಲ್ಲಿ ಬಂದಿದೆ.ಇದರಿಂದ ಆ ದಿನ ಭೂಮಿ ಮತ್ತು ನೆಪ್ಚೂನ್ ಗ್ರಹಗಳು ಅತ್ಯಂತ ಸನಿಹಕ್ಕೆ ಬಂದಂತಾಯಿತು.ಬರುವ ವರ್ಷ ನೆಪ್ಚೂನ್ ಗ್ರಹದ ಸ್ಥಾನ,ಅದನ್ನು ಗುರುತಿಸಿದ ವರ್ಷ ಇದ್ದ ಸ್ಥಾನವನ್ನೇ ತಲುಪಿ,ಒಂದು ಪ್ರದಕ್ಷಿಣೆ ಮುಗಿಸಿದಂತಾಗುತ್ತದೆ.
-------------------------------------
ಸ್ಥಳೀಯ ಭಾಷೆ:"ಪದ" ಸಂಸ್ಕಾರಕ

ಲೋಹಿತ್ ಡಿ ಶಿವಮೂರ್ತಿ ಎಂಬ ಕನ್ನಡಿಗ ತಂತ್ರಜ್ಞರ ಲೋಹಿತ್ ತಂತ್ರಾಂಶದ ಬಗ್ಗೆ ಈ ಅಂಕಣದಲ್ಲಿ ಓದಿದ್ದಿರಿ.ಇದೀಗ ಈ ಪದಸಂಸ್ಕಾರಕ ಮತ್ತಷ್ಟು ಅಭಿವೃದ್ಧಿಯಾಗಿದೆ.ಅದರ ವಿಂಡೋಸ್ ಆವೃತ್ತಿ ಮಾತ್ರವಲ್ಲದೆ ಲೀನಕ್ಸ್ ಆವೃತಿಯೂ ಲಭ್ಯವಿರುವುದು ವಿಶೇಷ.ಲೀನಕ್ಸ್‌ನಲ್ಲಿ ಬರಹದ ತರಹ ಕನ್ನಡದ ಪದಸಂಸ್ಕಾರಕ ಲಭ್ಯವಿರಲಿಲ್ಲ,(ಕನ್ನಡ ಟೈಪಿಸಲು ಸ್ಕಿಮ್,ಐಬಸ್ ಅಂತಹ ಸಾಧನಗಳು ಮೊದಲಿನಿಂದಲೂ ಇವೆ)."ಪದ"ದಲ್ಲಿ ಕನ್ನಡ ಮಾತ್ರವಲ್ಲದೆ,ಹಿಂದಿ,ಮಲಯಾಳಂ ಮುಂತಾದ ಹತ್ತು ಭಾಷೆಗಳಲ್ಲಿ ಟೈಪಿಂಗ್ ಸಾಧ್ಯ,ಇದರಲ್ಲಿ ಟ್ಯಾಬ್ ತೆರೆದು ಹೊಸ ಕಡತ ಮೂಡಿಸಬಹುದು.rank ಎನ್ನುವ ಪದವನ್ನು ಸರಿಯಾಗಿ ಮೂಡಿಸುವುದು ಹೆಚ್ಚಿನ ತಂತ್ರಾಂಶಗಳಲ್ಲಿ ಸಾಧ್ಯವಾಗುತ್ತಿಲ್ಲ."ಪದ"ದಲ್ಲಿ ಇದು ಸರಿಯಾಗಿ ಮೂಡುವುದು ವಿಶೇಷ.ಕಡತವನ್ನು ಪಿಡಿಎಫ್ ರೂಪದಲ್ಲಿ ಉಳಿಸುವ ಸೌಕರ್ಯವೂ ಬಳಕೆದಾರರಿಗಿದೆ.ಮೊದಲ ಅಕ್ಷರ ಟೈಪಿಸಿದ ಕೂಡಲೇ ಪದಸಹಾಯ ಸಿಗುತ್ತದೆ.http://lodyaashi.com ಅಂತರ್ಜಾಲ ತಾಣದಿಂದ ಇದನ್ನು ಇಳಿಸಿಕೊಳ್ಳಬಹುದು.
--------------------------------------------------------
ಟ್ವಿಟರ್ ಚಿಲಿಪಿಲಿ
*ಕಳೆದ ಎರಡು ತಿಂಗಳಿಂದ ದಿನಾಲೂ ಹತ್ತು ಗಂಟೆ ಕೆಲಸ ಮಾಡುತ್ತಿದ್ದೆ.ಇಂದು ಕಂಪೆನಿಯಿಂದ ನಾನು ಕೆಲಸದ ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ನೋಟೀಸ್ ಬಂದಿದೆ.ದಿನಕ್ಕೆ ಗರಿಷ್ಠ ಒಂಭತ್ತು ಗಂಟೆ ಕೆಲಸ ಮಾಡಬಹುದಷ್ಟೆ.:ಟಿಸಿಎಸ್ ಉದ್ಯೋಗಿ.
*ಕ್ಷೌರಿಕನ ಸಮಸ್ಯೆ:ಹಳ್ಳಿಯ ಕೌರಿಕನೋರ್ವನು ತನ್ನ ಸೇವೆ,ಸ್ವತ: ಬೋಳಿಸಿಕೊಳ್ಳದವರಿಗಷ್ಟೇ ಎಂದು ಶಪಥ ಮಾಡಿದರೆ,ಆತನ ಕ್ಷೌರ ಮಾಡುವವರು ಯಾರು?
*ಬ್ಯಾಂಕಿಂದ ನನಗೆ ಸಾಲ ವಸೂಲಾತಿಯ ಬಗ್ಗೆ "ಅಂತಿಮ" ನೋಟೀಸು ಬಂದಿದೆ.ಹಾಗಾದರೆ,ಇನ್ನು ನನಗೆ ಅವರ ಕಾಟ ಇರಲಾರದಷ್ಟೇ?
*ಪಾಕಿಸ್ತಾನ್:"ನೆರೆ"ರಾಷ್ಟ್ರ
*the quick brown fox jumps over the lazy dog ವಾಕ್ಯದ ವಿಶೇಷತೆ ಏನು? ಇದರಲ್ಲಿ ಇಂಗ್ಲೀಷಿನ ಎಲ್ಲಾ ಅಕ್ಷರಗಳೂ ಇವೆ.
Udayavani Bangalore
Udayavani
Udayavani Unicode
-------------------------------------------------------------
*ಅಶೋಕ್‌ಕುಮಾರ್ ಎ