ಅದನ್ನು ಕೆಳಗೆ ಬಿಡಿ
ಒಬ್ಬ ಅಧ್ಯಾಪಕರು ತನ್ನ ಕೈಯ್ಯಲ್ಲೊಂದು ನೀರು ತುಂಬಿದ ಗಾಜಿನ ಲೋಟವೊಂದನ್ನು ಹಿಡಿದು ತನ್ನ ಪಾಠ ಆರಂಭಿಸಿದ್ದರು.
ಈ ಗಾಜಿನ ಲೋಟ ಎಷ್ಟು ಭಾರ ಇರಬಹುದು?
ನೂರು ಗ್ರಾಂ , ನೂರೈವತ್ತು..? ಅಲ್ಲ ಇನ್ನೂರು..!!" ವಿದ್ಯಾರ್ಥಿಗಳಿಂದ ತರಹೇ ವಾರೀ ಉತ್ತರ.
"ಇದನ್ನು ತೂಕ ಮಾಡುವವರೆಗೆ ನಿಜವಾದ ತೂಕ ಸರಿಯಾಗಿ ನಾನೂ ಹೇಳಲಾರೆ, ಆದರೆ ನನ್ನ ಪ್ರಶ್ನೆ ಇದಲ್ಲ.." ಅಧ್ಯಾಪಕರೆಂದರು.
"ನಾನೀ ಲೋಟವನ್ನು ಕೆಲವು ಸಮಯದವರೆಗೆ ಹೀಗೆ ಹಿಡಿದೇ ಇದ್ದರೆ ಏನಾಗುತ್ತದೆ?"
"ಏನೂ ಆಗಲ್ಲ" ಎಂದನೊಬ್ಬ ವಿದ್ಯಾರ್ಥಿ
"ಅದು ನಿಜ, ಆದರೆ, ಹೀಗೇ ಒಂದು ಗಂಟೆ ಹಿಡಿದುಕೊಂಡಿದ್ದರೆ..?"
"ನಿಮಗೆ ಕೈ ನೋವು ಬರಬಹುದು" ಎಂದನು ಮತ್ತೊಬ್ಬ
"ಹೌದು ಸರಿಯಾದ ಉತ್ತರ, ಅದೇ ,ನಾನು ಇದನ್ನು ಒಂದು ದಿನವಿಡೀ ಹಿಡಿದುಕೊಂಡೇ ಇದ್ದರೆ?" ಕೇಳಿದರು ಅಧ್ಯಾಪಕರು.
"ನಿಮ್ಮ ಕೈ ಜೋಮು ಹಿಡಿಯ ಬಹುದು, ಮಾಂಸ ಖಂಡಗಳ ಒತ್ತಡದಿಂದಾಗಿ ಪಾರ್ಶ್ವ ವಾಯುವೂ ಆಗಬಹುದು, ನಿಮಗೆ ಆಸ್ಪತ್ರೆ ದರ್ಶನವಂತೂ ಖಂಡಿತ ಸರ್" ಈ ಉತ್ತರಕ್ಕೆ ಎಲ್ಲರೂ ನಕ್ಕರು.
"ತುಂಬಾನೇ ಒಳ್ಳೆಯ ಉತ್ತರವಿದು, ಆದರೆ ಇದೆಲ್ಲಾ ಆಗುತ್ತಿರುವಾಗ ಈ ಲೋಟದ ಭಾರದಲ್ಲೇನಾದರು ಬದಲಾವಣೆ ಆಗುತ್ತದೆಯೇ..?" ಅಧ್ಯಾಪಕರು
"ಇಲ್ಲಾ ಸರ್" ಈ ಬಾರಿ ಎಲ್ಲರೂ ಒಕ್ಕೊರಲಿನಿಂದ ಉತ್ತರಿಸಿದರು.
"ಹಾಗಾದರೆ, ಹೇಳಿ ನನ್ನ ಕೈ ನೋವು, ಒತ್ತಡ ಎಲ್ಲಿಂದ ಬಂತು..?"
ಈ ಬಾರಿ ಕ್ಲಾಸಿನಲ್ಲಿ ಸೂಜಿಬಿದ್ದರೂ ಕೇಳುವಷ್ಟು ಶಾಂತಿ.
"ಹಾಗಾದರೆ ಈ ನೋವಿನಿಂದ ತಪ್ಪಿಸಿಕೊಳ್ಳುವ ದಾರಿ..?"
"ಅದನ್ನು ಕೆಳಗೆ ಹಾಕಿ ಸರ್" ಎಂದರು ಎಲ್ಲರೂ
"ಹೌದು ಇದೇ ನಿಜವಾದ ಉತ್ತರ, ಜೀವನದ ಸಮಸ್ಯೆಗಳು ಈ ಗಾಜಿನ ಗ್ಲಾಸಿನ ಹಾಗಿನವು, ಅದನ್ನು ಸ್ವಲ್ಪ ಸಮಯ ನಾವು ಹಿಡಿದಿಟ್ಟರೆ ಸರಿ, ಆದರೆ ಅವುಗಳನ್ನು ಜಾಸ್ತಿ ಹಿಡಿದಿಟ್ಟರೆ ನಿಮಗೆ ದೈಹಿಕ ,ಮಾನಸಿಕ ನೋವು ಮತ್ತು ಒತ್ತಡಗಳನ್ನು ತರಬಲ್ಲವು, ಇನ್ನೂ ಜಾಸ್ತಿ ಸಮಯ ನೀವು ಅದನ್ನು ಹಿಡಿದುಕೊಂಡಿದ್ದರೆ ಅವುಗಳು ನಿಮ್ಮನ್ನು ಭಾಗಶಃ ನಿರ್ವೀರ್ಯಗೊಳಿಸಿ ದುರ್ಬಲರನ್ನಾಗಿಸುವುವು.
ನಮ್ಮ ಜೀವನದಲ್ಲಿ ಸಮಸ್ಯೆ ಮತ್ತು ಸವಾಲುಗಳನ್ನು ಕುರಿತ ಚಿಂತನೆ ಒಳ್ಳೆಯದೇ, ಆದರೆ ಅವುಗಳೇ ನಮ್ಮನ್ನು ಆವರಿಸಲು ನಾವು ಬಿಡಬಾರದು,
ಬೇಗನೇ ಅವುಗಳನ್ನು ಕೆಳಗೆ ಬಿಡಬೇಕು.
ರಾತ್ರೆಯ ನಿದ್ದೆಗೆ ಹೋಗುವ ಮೊದಲು ಈ ಒತ್ತಡಗಳು ಸಮಸ್ಯೆಗಳನ್ನು ಅಲ್ಲಲ್ಲಿಯೇ ಬಿಟ್ಟು ಬಿಡಬೇಕು.
ಆಗಲೇ ನೀವು ಬೆಳಿಗ್ಗೆ ಏಳುವಾಗ ಹೊಸ ಮನುಷ್ಯರಾಗಿರುತ್ತೀರಿ, ದಿನದ ಯಾವುದೇ ಹೊಸ ಸವಾಲು, ಹೊಸ ಸಮಸ್ಯೆಗಳನ್ನು ಎದುರಿಸಲು ಸಮರ್ಥರಾಗಿರುತ್ತೀರಿ.
ಅದಕ್ಕೇ ಇಂದು ನೀವು ನಿಮ್ಮ ಕೆಲಸಗಳನ್ನು ಮುಗಿಸಿ ಮನೆಗೆ ಹೊರಡುವಾಗ ಸ್ನೇಹಿತರೇ ನನ್ನ ಈ ಮಾತನ್ನು ಅವಶ್ಯ ನೆನಪಿಡಿ.
"ಅವುಗಳನ್ನು ಕೆಳಗೆ ಬಿಡಿ"
"ಮಿಂಚಂಚೆಯ ಆಧಾರ"