ಜಲದ ಕಣ್ಣುಗಳನ್ನು ಅರಳಿಸಬೇಕಿದೆ.

ಜಲದ ಕಣ್ಣುಗಳನ್ನು ಅರಳಿಸಬೇಕಿದೆ.

ಬರಹ

 
ದಿನ ಕಳೆದ ಹಾಗೆ ಯಾಂತ್ರಿಕವಾಗುತ್ತಿರುವ  ಬದುಕ ಪಲುಕುಗಳನ್ನು, ಆಧುನಿಕತೆಯ ಮೂಲಕ ಕಂಡುಕೊಂಡಿರುವ ಸವಲತ್ತುಗಳ ಉರುಳುಗಳನ್ನು, ರೌರವ ನರಕವನ್ನು ನಮ್ಮೊಳಗೆ ಸೃಷ್ಟಿಸಿರುವ ಒತ್ತಡಗಳನ್ನೂ ನೀಗಿಕೊಳ್ಳಲು ಲಲಿತಕಲೆಯ ಒಂದಲ್ಲ ಒಂದು ವಿಭಾಗ ನಮ್ಮ ನೆರವಿಗೆ ಬಂದೊದಗುತ್ತಲೇ ಇವೆ. ಅದು ಸಾಹಿತ್ಯ ಓದುವುದು, ಚಿತ್ರಕಲೆಯನ್ನೋ, ಶಿಲ್ಪಕಲೆಯನ್ನೋ ನೋಡುವುದು, ಸಂಗೀತವನ್ನು ಕೇಳುವುದು ಹಾಗೇ ನೋಡನೋಡುತ್ತಲೇ ಕೇಳುವುದೂ ಆಗಿರುವ ಸಿನಿಮಾ ಅಥವ ನಾಟಕ ಯಾವುದೋ ಒಂದು ಆಗಿ ನಮ್ಮ ವಿಷಾದದ ಹೊತ್ತುಗಳಲ್ಲಿ ಚೈತ್ರದ ಚಿಗುರನ್ನು ಪಲ್ಲವಿಸಿವೆ, ಸಂತಸದ ಸಮಯವನ್ನು ದುಪ್ಪಟ್ಟುಗೊಳಿಸಿವೆ. ಲಲಿತ ಕಲೆ  ಮನುಷ್ಯನಿಗೆ ಬೇಕೇ ಬೇಕು ಅಂತ ವಾದಿಸುವವರ ಸಮಸಮವಾಗಿ ಅದೆಲ್ಲವನ್ನೂ ನಿರಾಕರಿಸಿ ಕಲೆಯ ಗೊಡವೆಗೆ ಕೈಹಾಕದೆಯೇ ಭವ್ಯವಾಗಿ ಬದುಕು ನಡೆಸಿದವರ, ನಡೆಸುತ್ತಿರುವವರ ದೊಡ್ದ ಪಟ್ಟಿಯೇ ನಮ್ಮೆದುರು ತೆರೆದುಕೊಳ್ಳುತ್ತದೆ. ಆದರೂ ಕಲೆ ಮನುಷ್ಯನಲ್ಲಿ ಕಡಿಮೆಯಾಗುತ್ತಿರುವ ಮನುಷ್ಯತ್ವವನ್ನು ಪೂರೈಸಿಕೊಳ್ಳಲಾದರೂ ಬೇಕೇ ಬೇಕು. ಏಕೆಂದರೆ ಲಲಿತಕಲೆಯ ವಿವಿಧ ವಿಭಾಗಗಳಲ್ಲೂ ಒಂದು ಸಾಮಾನ್ಯವಾದ ಧರ್ಮವಿದೆ. ಅದೆಂದರೆ ಬದುಕನ್ನು ಪ್ರೀತಿಸುವಂತೆ ಉದ್ದೀಪಿಸಿ ಅದರ ಅರ್ಥವನ್ನು ಹಿಗ್ಗಲಿಸಿ ಸಾರ್ಥಕಪಡಿಸುವುದು.


ಪ್ಲೇಟೋ ತನ್ನ ಆದರ್ಶ ರಾಜ್ಯದಲ್ಲಿ ಕವಿಗಳಿಗೆ ಜಾಗವಿರುವುದಿಲ್ಲ ಅಂತ ಹೇಳಿದ್ದು ನೆನಪಿರುವ ಹಾಗೇ ಕಾಳಿದಾಸನಿಲ್ಲದ ಭೋಜರಾಜನನ್ನು, ಪಂಪನಿಲ್ಲದ ಅರಿಕೇಸರಿಯನ್ನೂ ಊಹಿಸಿಕೊಳ್ಳುವುದು ಅಸಾಧ್ಯ. ವ್ಯಾಂಗೋ ಗೆರೆಗಳಿಗೆ ಜೀವ ಬರಿಸಿದ್ದನ್ನು, ತನ್ನ ಗಾಯನದಿಂದಲೇ ದೀಪ ಬೆಳಗಿಸಿದ ಸಂಗೀತಗಾರನ ಕತೆಯಂಥ ಹಲವು ಕಥಾನಕಗಳನ್ನು, ಚಾಪ್ಲಿನ್‌ನಿಂದ ಹಿಡಿದು ನಿನ್ನೆ ಮೊನ್ನೆ ಸಿನಿಮಾದ ವ್ಯಾಕರಣ ಕಲಿತು ಅದ್ಭುತ ಚಿತ್ರಗಳನ್ನು ಮಾಡುತ್ತಲೇ ಇರುವ ಅಸಂಖ್ಯರನ್ನು, ನೀನಾಸಂ, ರಂಗಾಯಣ, ಎನೆಸ್ಡಿ ಮುಂತಾದ ಸಂಸ್ಥೆಗಳ ಮೂಲಕ ತಯಾರಾಗಿ ಈಗ ಸದ್ಯದ ಸಿನಿಮಾ, ರಂಗಭೂಮಿ, ದೂರದರ್ಶನಗಳಲ್ಲಿ ಹೊಸತನವನ್ನು ತಂದು ತಂದು ಪೇರಿಸುತ್ತಿರುವ ಪ್ರತಿಭೆಗಳನ್ನೂ ಹಾಗೆಲ್ಲ ನೇಪಥ್ಯಕ್ಕೆ ಸರಿಸುವ ಹಾಗಿಲ್ಲ. ಆದರೂ ಒಟ್ಟೂ ಪ್ರಜಾ ಸಂಖ್ಯೆಗೆ ಲಲಿತಕಲೆಗಳ ಮೋಡಿಗೆ ಸಿಲುಕಿದವರ ಸಂಖ್ಯೆಯನ್ನು ಹೋಲಿಸಿದರೆ ಅದು ಕಡಿಮೆಯೆಂದೇ ನಮಗೆಲ್ಲರಿಗೂ ಗೊತ್ತು. ಹಾಗಿದ್ದೂ ಸಾಹಿತಿಗಳ ನಡುವೆ, ಸಿನಿಮಾ ಮಾಡುವವರ ನಡುವೆ, ಸಂಗೀತಗಾರರ ನಡುವೆ, ಕಲಾವಿದರ ನಡುವೆ ಒಂದು ಅಘೋಷಿತ ಯುದ್ಧ ನಡೆಯುತ್ತಲೇ ಇರುತ್ತದೆ. ತಾನು ನಂಬಿದ್ದು, ಸ್ರೃಷ್ಟಿಸಿದ್ದೇ ಮಹತ್ವದ್ದು ಅನ್ನುವ ಇರಾದೆಯೇ ಇದಕ್ಕೆಲ್ಲ ಮೂಲ. ಏಕಂ ಸತ್ ವಿಪ್ರಾ ಬಹುದಾ ವದಂತಿ ಅನ್ನುವುದು ಗೊತ್ತಿದ್ದೂ ಇರುವ ಒಂದೇ ಸತ್ಯವನ್ನು ಸಾಹಿತಿಗಳೂ ಕಲಾವಿದರೂ ಅವರವರಿಗೆ ತಿಳಿದ ಮಟ್ಟದಲ್ಲಿ ವ್ಯಾಖ್ಯಾನಿಸುತ್ತಿರುವುದೂ ಇದಕ್ಕೆ ಪ್ರಮುಖ ಕಾರಣ.

 

ಲಲಿತ ಕಲೆಗಳ ಒಂದೊಂದು ವಿಭಾಗಕ್ಕೂ ಒಂದೊಂದು ವಿಶೇಷ ಲಕ್ಷಣಗಳಿವೆ. ಪ್ರತಿ ಕಲೆಗೂ ಸಾಧನಗಳು ಬೇರೆ,ಬೇರೆ. ಸಾಹಿತಿ ತಾನು ತನ್ನ ಕಾಲದಲ್ಲಿ ನೋಡಿದ್ದನ್ನು ಅನುಭವಿಸಿದ್ದನ್ನು ಆಗಿನ ಭಾಷೆ, ಶೈಲಿ, ಸಂಪ್ರದಾಯ, ಕಟ್ಟಳೆಗಳನ್ನು ಅನುಸರಿಸಿ ದಾಖಲು ಮಾಡುತ್ತಾನೆ. ತನ್ನ ಪ್ರತಿಭೆಗೆ ತಕ್ಕ ಶಬ್ದಾರ್ಥ,ಧ್ವನಿಗಳ ಮೂಲಕ ಆ ಸಮಯದಲ್ಲಿ ಹೊಳೆದ ಸೌಂದರ್ಯವನ್ನು ಬುದ್ಧಿಯಿಂದ ಸೆರೆಹಿಡಿದು, ಧಾರಣೆಯಿಂದ ನಿಲ್ಲಿಸಿ ತನ್ನ ಕೃತಿಯಲ್ಲೊಂದು ಜಾಗವನ್ನು ಕೊಟ್ಟು ಸಲಹಿರುತ್ತಾನೆ. ಸಾಹಿತ್ಯವೆಂಬುದು ಎಲ್ಲ ಕಾಲಕ್ಕೂ ಸಹಜವಾದ, ಮಾನವ ಪ್ರಪಂಚಕ್ಕೆಲ್ಲ ಸಾಮಾನ್ಯವಾಗಿ ಹೊಂದುವ, ರಸಸೃಷ್ಟಿಯಾಗಿರುವುದರಿಂದ ಸಾಹಿತಿಯೊಬ್ಬನ ಕೃತಿ ಮುಂದೆ ಎಲ್ಲ ಕಾಲದಲ್ಲೂ ಅದನ್ನು ಸವಿಯುವವರಿಗೆ ಅಕ್ಷಯಪಾತ್ರೆಯಾಗಿ ಒದಗುತ್ತಲೇ ಇರುತ್ತದೆ, ಅದಕ್ಕೆ ಅಂಥ ತಾಕತ್ತು ಇದ್ದರೆ. ಹಾಗೇ ದೂಷಿಸುವವರಿಗೂ ಅದು ಅಕ್ಷಯಪಾತ್ರೆಯೇ ಸರಿ! ಇನ್ನು ಚಿತ್ರಕಾರ-ಚಿತ್ರಕ್ಕೆ ಬೇಕಾಗುವ ಬಣ್ಣ, ರೂಪರೇಖೆ, ಕುಂಚ, ಹಲಗೆ, ಕಾಗದ,ಬಟ್ಟೆ ಇತ್ಯಾದಿ ಇತ್ಯಾದಿಗಳನ್ನು ಅನುಕೂಲಕ್ಕೆ ತಕ್ಕಂತೆ ಯೋಚಿಸಿ ಯೋಜಿಸುತ್ತಾನೆ. ಸಂಗೀತವಂತೂ ನಾದ, ಶಾರೀರ, ಪಕ್ಕ ವಾದ್ಯ, ಸಾಧನೆ ಇತ್ಯಾದಿಗಳಿಂದ ಹುಲುಸುಗೊಂಡರೆ, ಶಿಲ್ಪಿ ತನ್ನ ವ್ಯವಸಾಯಕ್ಕೆ ಮಣ್ಣು, ಕಲ್ಲು, ಗಾರೆ, ಮರ, ಲೋಹ, ಬಟ್ಟೆ, ಬೆಂಡು. ಉಳಿ, ಸುತ್ತಿಗೆ, ಚಾಣ ಇತ್ಯಾದಿಗಳನ್ನು ಬಳಸಿ ತನ್ನಿಷ್ಟದ ಕೃತಿಯನ್ನು ರಚಿಸುತ್ತಾನೆ. ರಸಾಸ್ವಾದನೆ ಅದನ್ನು ಸವಿಯುವವರ ಮಟ್ಟಕ್ಕೆ ತಕ್ಕ ಆಳ ಅಗಲಗಳ ವ್ಯಾಖ್ಯೆಯನ್ನು ತುಂಬಿಕೊಡುತ್ತದೆ.  

 

ಬದುಕಿನ ಅರ್ಥವನ್ನು ಬಗೆಬಗೆಯಾಗಿ ಬಗೆಯುತ್ತಲೇ ಇರುವ ಸಾಹಿತಿ-ಕಲಾವಿದರನ್ನು ಅನುಮಾನಿಸುವುದು, ಸನ್ಮಾನಿಸುವುದು, ಸಾಮಾಜಿಕ ಸಾಂಸ್ಕೃತಿಕ ಕಾರಣಗಳಿಂದ ಅವನನ್ನು ಎತ್ತಿ ಮೆರಸುವುದು ಹಾಗೇ ಎತ್ತಿ ಎಸೆಯುವುದನ್ನೂ ಲೌಕಿಕ ಮಾಡುತ್ತಲೇ ಬಂದಿದೆ. ಟಿ.ಆರ್.ಪಿಗಳ ಕಾಲದಲ್ಲಿ ಇದು ಸಹಜವೂ, ನ್ಯಾಯವೂ ಆದುದೇ ಆಗಿದೆ! ಸಮಾಜದ ಆಶಯಕ್ಕೆ ಅಂದರೆ ಪ್ರಭುತ್ವಕ್ಕೆ  ಪೂರಕವಾಗಿ ಕೃತಿ ರಚಿಸುವವನಿಗೆ ಇರುವ ಮಾನ ಮರ್ಯಾದೆಗಳು ಅದಕ್ಕೆ ವಿರೋಧಿಯಾಗಿರುವವನಿಗೆ ಸಲ್ಲುವುದು ಯಾವತ್ತೂ ವಿಳಂಬವೇ. ಏಕೆಂದರೆ ಸತ್ಯದ ಹುಡುಕುವಿಕೆಯಲ್ಲಿ ಯಾವತ್ತೂ ಪರಿಣಾಮಗಳು ತಟ್ಟಂತ ಸಿಕ್ಕ ಉದಾಹರಣೆಗಳು ಇಲ್ಲವೇ ಇಲ್ಲ. ಸತ್ಯ ಎನ್ನುವುದು ಸಿಗುತ್ತದೋ ಇಲ್ಲವೋ ಅಂಥದೊಂದು ಸತ್ಯವನ್ನು ಬೆನ್ನು ಹಿಡಿದು ಹೊರಡುವುದೇ ನಿಜಕ್ಕೂ ಅಗ್ನಿದಿವ್ಯದ ಅಸಲಿಯತ್ತು. ಉಪನಿಷತ್ತಿನಿಂದ ಓಷೋವರೆಗೂ ಈ ಇದೇ ಸತ್ಯದ ಹುಡುಕುವಿಕೆಯೇ ನಮ್ಮೆಲ್ಲ ಸಾಹಿತಿ-ಕಲಾವಿದರನ್ನೂ ಪೋಷಿಸಿದೆ, ತನ್ನ ಉದರದಲ್ಲಿಟ್ಟುಕೊಂಡು ಕಾಪಾಡಿದೆ. ತಾನು ಬದುಕಿದ್ದ ಕಾಲದಲ್ಲಿ ಅಜ್ಞಾತನಾಗಿದ್ದ ಬೋದಿಲೇರ್, ಸತ್ತ ನಂತರವೇ ತೀವ್ರ ತರದ ಚರ್ಚೆಗಳನ್ನು ಹುಟ್ಟುಹಾಕಿದ ಬ್ರೆಕ್ಟ್, ಎಂಟುನೂರು ವರ್ಷಗಳ ಹಿಂದೆ ರಚಿತವಾದರೂ ಇವತ್ತಿಗೂ ಹೊಸ ಹೊಸ ಜಿಜ್ಞಾಸೆಗಳಿಗೆ ಒಡ್ಡುವ ವಚನಗಳು, ಲಿಯಾನಾರ್ಡೊ ಡಾವಿಂಚಿಯ ಚಿತ್ರಗಳು, ಯಾವುದೋ ಉತ್ಖನನದಲ್ಲಿ ಸಿಕ್ಕುವ ಪುರಾತನರ ಜೀವನಶೈಲಿಯ ಪುರಾವೆಗಳು ಯಾವತ್ತೂ ವರ್ತಮಾನದ ಜನಜೀವನ ಆಧುನಿಕತೆಯ ಬಾಗಿಲಿನಲ್ಲಿದ್ದೂ ಹೇಗೆ ಇನ್ನೂ ತನ್ನ ಹಳೆಯ ಹೊಸಿಲಲ್ಲೇ ಏದುಸಿರು ಬಿಡುತ್ತಿದೆ ಅಂತ ಪ್ರಮಾಣೀಕರಿಸುತ್ತಲೇ ಬಂದಿವೆ.

 

ವರ್ತಮಾನದ ಸಾಹಿತ್ಯ ನಿರ್ಮಾಪಕರನ್ನು, ಅದರಲ್ಲೂ ಪರಂಪರೆಯ ಹಂಗಿಲ್ಲದೇ ತಾನು ತಿಳಿದ ಸಂಗತಿಯೇ ದೊಡ್ಡದೆಂದು ವಾದಕ್ಕೆ ನಿಲ್ಲುವವರನ್ನು ಪರಂಪರೆಯೆಂಬ- ಬಳಸದೇ ಅಂದಗೆಟ್ಟ ಸರೋವರಕ್ಕೆ ಒಮ್ಮೆ ಕರೆದೊಯ್ದು-ಈಗಿನ ಬಹುತೇಕರು ಹೇಳುವ ಹಾಗೇ ಆ ಸರೋವರದ ನೀರು ಬಳಸುವವರಿಲ್ಲದೇ ಕೊಳಚೆಯಾಗಿ ಕೆಸರು ತುಂಬಿದೆ. ಹಸಿರು ಪಾಚಿಗಟ್ಟಿ ಹೂಳು ತುಂಬಿಕೊಂಡಿದೆ-ಅದರ ಹೂಳನ್ನೆತ್ತಿ ತೆಗೆದು ಎಸೆದು, ಸ್ವಲ್ಪ ಆಳಕ್ಕೆ ಅದನ್ನು ತೋಡಿ ವಿಸ್ತರಿಸಿ, ಎಲ್ಲೋ ಮುಚ್ಚಿ ಹೋಗಿರುವ ಜಲದ ಕಣ್ಣುಗಳನ್ನು ತೆರೆದು ಹೆಚ್ಚು ನೀರು ಬಂದು ಸೇರುವಂತೆ ಮಾಡಿದರೆ ಜೊತೆಗೇ ಕುಸಿದಿರುವ ಸೋಪಾನದ ಪಾವಟಿಗೆಗಳನ್ನು ದುರಸ್ತಿ ಮಾಡಿಸಿದರೆ ಆ ಕೊಳದ ನೀರನ್ನೇ ಆಶ್ರಯಿಸಿ ಉದ್ಯಾನವನ್ನೇ ಬೆಳಸಬಹುದು. ಉದ್ಯಾನ ನಿರ್ಮಾಣವಾದರೆ ಅಳುವ ಮಕ್ಕಳು ಆಟವಾಡಲು ಬಂದಾವು. ಹಕ್ಕಿ ಪಕ್ಷಿಗಳ ಜೊತೆಜೊತೆಗೇ ದಣಿವಾರಿಸಿಕೊಳ್ಳಲು ನಮಗೂ ಒಂದಿಷ್ಟು ತಾವು ಸಿಕ್ಕುತ್ತದೆ. ಆಗ ಆರಾಮವಾಗಿ ಕೂತು ಮುರಿದು ಕಟ್ಟಿದ ಸರೋವರದ ದಡದಲ್ಲಿ ಭಾಷೆಯ ಸಂಗತಿಗಳನ್ನು ಅರ್ಥಮಾಡಿಕೊಳ್ಳಬಹುದು. ಅದು ಬಿಟ್ಟು ಯಾವ ಮೂಲದಿಂದ ಮನೆಯ ನಲ್ಲಿಯಲ್ಲಿ ನೀರು ಬರುತ್ತದೋ ಎಂಬ ಅರಿವಿಲ್ಲದೇ ಬರಿದೇ ತೋಡಿ ತೋಡಿ ಬಳಸಿದರೆ ನೀರಿನ ಮಹತ್ವ ಅರಿಯುವುದಾದರೂ ಹೇಗೆ? ಭಾಷೆಯ ಸಂಗತಿ ಸಿದ್ಧಿಸುವುದಾದರೂ ಹೇಗೆ?- ಅಂತ ಕೇಳೋಣವೆಂದರೆ ನಮ್ಮ ಲೋಕೋಪಯೋಗಿ ಇಲಾಖೆಯು ಹೆಜ್ಜೆ ಹೆಜ್ಜೆಗೆ ತೋಡಿಸಿರುವ ಕೊಳವೆ ಬಾವಿಗಳ ಅಟಾಟೋಪದಲ್ಲಿ ಜಲದ ಕಣ್ಣುಗಳೇ ಮಾಯವಾಗಿ ಆಳದಾಳಕ್ಕೆ ತೋಡಿದರೂ ಬರಿಯ ಧೂಳೇ ಎದ್ದೆದ್ದು ಮುಖಕ್ಕೆ ರಾಚುತ್ತಿರುವ ವರ್ತಮಾನದಲ್ಲಿ ಸರೋವರದ ಕಲ್ಪನೆಗಳೇ ಸುಳ್ಳಾಗುತ್ತಿರುವಾಗ ಸರಸವೆಂಬುದು ಸುಲಭಕ್ಕೆ ದಕ್ಕದ ಸಂಗತಿಯಾಗುತ್ತಿದೆ.


ಕವಿ-ಕಲಾವಿದನ ಕೈಯಲ್ಲಿ ಅರಳುವ ಹೂವು ಸಹೃದಯರ ಹೃದಯವನ್ನು ಮುಟ್ಟಬೇಕು ಅನ್ನುವುದು ಎಲ್ಲ  ಕೃತಿಕಾರರ ಗುರಿ. ಕೃತಿ ಎನ್ನುವುದು ಅಳತೆ,ಬಣ್ಣ,ತೂಕ,ಸಮಂಜಸ ಆಕಾರ ಇತ್ಯಾದಿಗಳ ಶಾಸ್ತ್ರಬದ್ಧ ನಿರೂಪಣೆ. ಕೊಂಚ ಏರುಪೇರಾದರೂ ಅದನ್ನು ಸಮಾಜ ಸ್ವೀಕರಿಸುವುದಿಲ್ಲ. ಸಹೃದಯ ಎನ್ನುವವನೂ ಈ ಸಮಾಜದಿಂದಲೇ ಬಂದವನಾದ್ದರಿಂದ ಅವನನ್ನು ಸುಲಭಕ್ಕೆ ಒಪ್ಪಿಸಲಾಗುವುದಿಲ್ಲ. ತನ್ನ ಕೃತಿಯೇ ಶ್ರೇಷ್ಠ ಅಂತ ನಂಬಿರುವ ಕೃತಿಕಾರ ಅದನ್ನು ಪ್ರಮಾಣಿಸಲು ತಕ್ಕ ಪರಿಸರವನ್ನು ನಿರ್ಮಾಣ ಮಾಡಬೇಕಾಗುತ್ತದೆ. ಕೃತಿಯನ್ನು ಕಡ್ಡಾಯವಾಗಿ ಒಪ್ಪಿಸಲಾಗುವುದಿಲ್ಲವಾದರೂ ಅತ್ಯುತ್ತಮವಾದ ಕೃತಿ ಕಂಡೊಡನೆಯೇ ಓದುಗನನ್ನು/ನೋಡುಗನನ್ನು ಅದು ಚಕಿತಗೊಳಿಸುತ್ತದೆ. ವಿಶೇಷವೊಂದನ್ನು ಕಂಡೊಡನೆಯೇ ಬಾಕಿಯೆಲ್ಲವನ್ನೂ ಮರೆತು, ಅದರ ಅರ್ಥ ಸಂಕೇತಗಳನ್ನು ಧ್ಯಾನಿಸುತ್ತ, ಅದು ಗ್ರಾಹ್ಯವಾದಂತೆಲ್ಲ ಕಣ್ಣರಳಿಸಿಕೊಂಡು, ಕಿವಿ ತೆರೆದುಕೊಂಡು, ನೆತ್ತರ ಕಾವು ಏರಿಸಿಕೊಂಡು ಮೆಚ್ಚುಗೆಯ ಮಾತನಾಡುವುದು ಸಹೃದಯನ ಲಕ್ಷಣ. ಹಾಗೇ ತನ್ನರಿವನ್ನು ಹಿರಿದುಗೊಳಿಸದ ಏನನ್ನೂ ಅದು ಎಷ್ಟೇ ಮೌಲ್ಯದ್ದಿದ್ದರೂ ಈ ಸಹೃದಯ ಅದನ್ನು ನಿರಾಕರಿಸಿ ಕೈಕೊಡವಿ ಬಿಡುತ್ತಾನೆ. ಉಳಿ ಹಿಡಿದವರನ್ನೆಲ್ಲ ಶಿಲ್ಪಿಯೆಂದು ಒಪ್ಪದ, ಪದ್ಯ ಕಟ್ಟುವವರನ್ನೆಲ್ಲ ಕವಿಗಳೆಂದು ಒಪ್ಪದ, ಎಗರೆಗರಿ ಬೀಳುವರನ್ನೆಲ್ಲ ನರ್ತಕರೆಂದು ಮಾನ್ಯ ಮಾಡದ, ಮನೆ ಕಟ್ಟುವ ಮೇಸ್ತ್ರಿಗಳನ್ನೆಂದೂ ವಾಸ್ತು ಶಿಲ್ಪಿ ಅಂತ ಕರೆಯದ ದಾಷ್ಟೀಕತನ ಈ ಸಹೃದಯನದ್ದು. ಆವೇಶ ಶುದ್ಧಿ ಮತ್ತು ರೂಪಣ ನಾವೀನ್ಯತೆ ಇದ್ದವರು ಪರಂಪರೆ ಮೀರಿಸುವ ತಾಕತ್ತು ತೋರಿಸುತ್ತಾರೆ. ಅಂಥ ಹೆಚ್ಚುಗಾರಿಕೆಗಳನ್ನು ಈ ಲೋಕ ಮಾನ್ಯ ಮಾಡುತ್ತಲೇ ಬಂದಿದೆ. ಆದರೆ ತಾನೇ ಘೋಷಿಸಿಕೊಂಡ ನಾವೀನ್ಯತೆ ಮೂಲೆ ಸೇರಿದೆ.


ಕಲೆ ಕಲೆಯಾಗದೇ ಕಲೆಯಿಂದ ಅನ್ಯ ಕೆಲಸಗಳನ್ನು ಮಾಡಿಸಿದಾಗಲೆಲ್ಲ ವಿಪ್ಲವಗಳುಂಟಾಗಿವೆ. ಕಲೆ ಇರುವ ನೀತಿ ನಿಯಮಗಳನ್ನು ಗಾಳಿಗೆ ತೂರಿ ಜೀವನದರ್ಶನವನ್ನು ಬಿಂಬಿಸದೇ ಚಪಲತೆಗಳನ್ನೂ, ವಿಕ್ಷಿಪ್ತತೆಯನ್ನೂ ಸಲ್ಲದ ಮಾರ್ಗಗಳಲ್ಲಿ ಪ್ರದರ್ಶಿಸಹೋದಾಗಲೆಲ್ಲ ಅಭಿವ್ಯಕ್ತಿ ಸ್ವಾತಂತ್ರ್ಯದ ಮಾತು ಹೆಚ್ಚುಹೆಚ್ಚು ಚರ್ಚಿತವಾಗಿದೆ. ಇರುವುದನ್ನು ಕೆಡಹದೇ ಹೊಸತನ್ನು ಕಟ್ಟುವುದು ಹೇಗೆ ಸಾಧ್ಯ ಎಂಬ ಮೊಟ್ಟೆ-ಕೋಳಿಗಳ, ಬೀಜ-ವೃಕ್ಷಗಳ ಹಳೆಯ ಮಾತು ಮತ್ತೆ ಮತ್ತೆ ಮಥಿಸಿದೆ. ಹುಟ್ಟಿದ ನವನೀತವೂ ಇತಿಹಾಸಕ್ಕೆ ಸೇರಿದೆ.


ರಾಜ್ಯ, ಸಾಮ್ರಾಜ್ಯಗಳು ಉರುಳಿ, ರಾಜ ಮಹಾರಾಜರು ಅಳಿದು, ಸರ್ವಾಧಿಕಾರಿಗಳೂ ಮಡಿದು ಇತಿಹಾಸ ಮತ್ತೆ ಮತ್ತೆ ಅನುರಣಿಸುವ ಸತ್ಯವೆಂದರೆ ಕಲೆಯೂ, ಕಲಾವಿದರೂ ನೂರ್ಕಾಲ ಸಾಯದೇ ಬದುಕಿದ್ದಾರೆ, ಬದುಕುಳಿದಿರುವವರಿಗೂ ಮಾರ್ಗದರ್ಶಕರಾಗಿ ದಿಕ್ಸೂಚಿಗಳಾಗಿ ನಿಲ್ಲದ ನಾವೆಗೆ ದಿಕ್ಕು ದೆಸೆ ಕಾಣಿಸಿದ್ದಾರೆ. ಕಲೆ ಇಂಥವರೇ ಬೇಕೆಂಬ ಬಲೆಯನ್ನೇನೂ ನೇಯ್ದಿಲ್ಲ. ಕಲೆಯೊಡನೆ ಸೆಣಸಾಡುವುದೆಂದರೆ ಅದನ್ನು ಅರೆದು ಕುಡಿಯುವುದು ಎಂದೇನೂ ಅಲ್ಲ. ಕಲೆಯನ್ನು ಆಸ್ವಾದಿಸುವ ಕಣ್ಣು,ಕಿವಿ,ಮೂಗುಗಳ ಸೂಕ್ಷ್ಮ ನಮಗೆ ಗೊತ್ತಿರಬೇಕಷ್ಟೆ. ನಮಗೇ ಅರಿವಿರದ ಸಹಸ್ರ ಭಾವಗಳು ಸದಾ ನಮ್ಮೊಡನೆ ಯುದ್ಧಕ್ಕೆ ನಿಂತೇ ಇರುತ್ತವೆ. ಶಾಂತಿಯ ಮಂತ್ರ ಜಪಿಸಿ ಅವನ್ನು ತಣಿಸುವ ಸೂಕ್ಷ್ಮತೆ ಬೇಕಷ್ಟೆ. ಬದುಕಿನ ವಿಕಟಾಟ್ಟಹಾಸಗಳ ನಡುವೆಯಿರುವ ನೆಮ್ಮದಿಯ ಸಣ್ಣದನಿಯೊಂದನ್ನು ಉದ್ದೀಪಿಸಿ, ಅದನ್ನೇ ಬೆಳಸಿ, ಅನ್ಯರ ದುಃಖ ದುಮ್ಮಾನಗಳನ್ನೂ ನಮ್ಮದೆನ್ನುವಂತೆ ಕಾಣುವ ವಿನಯ ಸಾಹಿತ್ಯದ ಓದು ಕಲಿಸಿದರೆ, ಸಂಗೀತದ ಭಾವತೀವ್ರತೆಗಳು ಸಂಕಟವನ್ನೂ, ಸಂತೋಷವನ್ನೂ ರಾಗ ಛಾಯೆಯ ಅನುಸರಣೆಯಿಂದಲೇ ಶ್ರೋತೃವಿನಲ್ಲಿ ಪಡಿಮೂಡಿಸುತ್ತದೆ. ಕಲಾಕೃತಿಯೊಂದು ಅದನ್ನು ಪರಿಶೀಲಿಸುವ ಹಂತದಲ್ಲೇ ನೋಡುಗನಲ್ಲಿ ಭಾವಸಾಗರವನ್ನು ಕಾಣಿಸಿರುತ್ತದೆ.


ಎಂದಿಗೂ ನಿಲ್ಲದ ಕಾಲದ ಗಡಿಯಾರದಲ್ಲಿ ನಾವೆಲ್ಲರೂ ಚಲಿಸುವ ಮುಳ್ಳುಗಳೇ. ಕಾಲ ಸರಿದಂತೆ, ಅನುಭವ ಸಾಂಧ್ರವಾದಂತೆ ವ್ಯಾಖ್ಯೆಗಳು ಬದಲಾಗುವುದು ಸಹಜ. ಆಧುನಿಕತೆ ತನ್ನೊಡಲೊಳಗೇ ಪರಂಪರೆಯನ್ನು ಧರಿಸಿದೆ. ಕಾಲದ ಪ್ರವಾಹದಲ್ಲಿ ಸಮಾಜವಾದದ ಪಳಿಯುಳಿಕೆಗಳಷ್ಟೇ ಉಳಿದಿರುವ ಹೊತ್ತಲ್ಲಿ ಮುಂದೊಂದು ದಿನ ಜಾಗತೀಕರಣದ ದಿವ್ಯ ಅನುಸಂಧಾನಗಳೂ ಬಣ್ಣಕಳಕೊಂಡ ಬಟ್ಟೆಯಾಗುವುದೂ ಖಚಿತ ಮತ್ತು ಸರ್ವ ವಿದಿತ. ಇಂತೆಲ್ಲ ತಿಳುವಳಿಕೆಗಳಿದ್ದರೂ ಮತ್ತೆ ಮತ್ತೆ ಕೆಸರೆರಚಿ ಎದುರಿನವರ ಬಟ್ಟೆ ಗಲೀಜು ಮಾಡುವುದು, ನಿರ್ವಿವಾದವಾಗಬಾರದೆಂಬ ಏಕೈಕ ಕಾರಣಕ್ಕೆ ಪ್ರತಿವಾದವನ್ನು ಹುಟ್ಟುಹಾಕುವುದು, ಅಭಿವ್ಯಕ್ತಿ ಸ್ವಾತಂತ್ರ್ಯದ ಮಾತೆತ್ತಿ ವಿಕೃತದ ಹೇಳಿಕೆಗಳಲ್ಲೇ ಸ್ವಮಗ್ನವಾಗುವುದು ಇತಿಹಾಸದುದ್ದಕ್ಕೂ ನಡೆದಿರುವ ನಡೆಯುತ್ತಲೇ ಇರುವ ಮತ್ತು ಮುಂದೂ ನಡೆಯುವ ಮತ್ತು ಆ ಮೂಲಕವೇ ಕಲೆಯ ಅನುಸಂಧಾನಕ್ಕೆ ಸಾಮಾನ್ಯರನ್ನೂ ಎಳೆತರುವುದು ನಡೆದೇ ಇರುತ್ತದೆ, ಸೂರ್ಯಚಂದ್ರರಿರುವವರೆಗೂ!


( ಈ ಪ್ರಬಂಧಕ್ಕೆ ವಿ.ಸೀತಾರಾಮಯ್ಯನವರ ‘ಕವಿ ಕಾವ್ಯದೃಷ್ಟಿ’ ವಿವೇಚನೆಗಳ ಪುಸ್ತಕ ಸ್ಪೂರ್ತಿ ನೀಡಿದೆ)
(ಮಯೂರ ಸೆಪ್ಟೆಂಬರ್ ೨೦೧೦ರ ಸಂಚಿಕೆಯಲ್ಲಿ ಪ್ರಕಟಿತ ಬರಹ)