ಗೃಹ ಪ್ರವೇಶ - ಎಲ್ಲರೂ ಬರಬೇಕು

ಗೃಹ ಪ್ರವೇಶ - ಎಲ್ಲರೂ ಬರಬೇಕು

ನಮ್ಮೂರು ಗೌಡರು ಅವರ ತೋಟದ ತಾವ ಹೊಸಾ ಮನೆ ಕಟ್ಟಿಸಿದಾರೆ. ಅದೂ ವಾಸ್ತು ಪ್ರಕಾರ ಅಂತೆ ಯಾರಿಗೂ ಇನ್ನೂ ತೋರಿಸಿಲ್ಲ. ಗೃಹ ಪ್ರವೇಸದ ದಿನಾನೇ ನೀವು ನೋಡ್ ಬೇಕ್ರಲಾ ಅಂದವ್ನೆ, ಅದಕ್ಕೆ ನಾವು ಕಾತುರದಿಂದ ಕಾಯ್ತಾ ಇದೀವಿ. ಗೌಡರೆ ಮನೆಗೆ ಎಷ್ಟು ಖರ್ಚಾತು ಅಂದೆ. ನೋಡ್ಲಾ ಮನೆ ಕಟ್ಟಿಸೋದಕ್ಕಿಂತ ಗೃಹ ಪ್ರವೇಸಕ್ಕೆ 10ಸಾವಿರ ಜಾಸ್ತಿ ಖರ್ಚಾಗೈತಿ ಅಂದ. ಅದೆಂಗ್ರಿ. ಬಂದಿರೋರಿಗೆಲ್ಲಾ ಸೀರೆ, ಚೆಡ್ಡಿ ಬಟ್ಟೆ. ಉಣ್ಣಕ್ಕೆ ಇತ್ಯಾದಿ ಬುಡಲಾ ಅಂದ. ನೋಡಲಾ ಮುಂದಿನ ವಾರನೇ ಗೃಹ ಪ್ರವೇಸ ಮಡಿಗಿದೀನಿ. ನೀನೂ ನನ್ನ ಜೊತೆ ಸ್ವಲ್ಪ ಓಡಾಡಿಕೊಂಡಿರಬೇಕು ಏನಲಾ. ಆಯ್ತು ಬುಡ್ರಿ ಅಂದೆ.

ಮಗಾ ದೂರದ ಸಂಬಂಧಿಕರಿಗೆಲ್ಲಾ ಎಲ್ಲಿ ಕಾಸು ಖರ್ಚಾಯ್ತದೆ ಅಂತಾ 50ಪೈಸೆ ಕಾಗದದಾಗೆ ಗೃಹ ಪ್ರವೇಸದ ಬೆಳಗ್ಗೆ ಬನ್ನಿ ಅಂತಾ ಬರೆದು ಹಾಕಿದ್ದ. ಇನ್ನು ಊರ್ನೋರೇಗೆ ಬಾಯ್ನಾಗೆ ಹೇಳಿದ್ದ. ಆಹ್ವಾನ ಪತ್ರಿಕೆ ದುಡ್ಡು ಉಳಿಸಿದ್ದ. ಸರಿ ಎಲ್ಲಾ ಸಾಮಾನು ತಂದು ಗೌಡನ ಮನೆಗೆ ಸುರಿದ್ವಿ. ಉಸ್ತುವಾರಿ ಎಲ್ಲಾ ಕಟ್ಟಿಗೆ ಒಡೆಯೋ ಕಿಸ್ನಂದು. ನೋಡಲಾ ಅಡುಗೆ ಭಟ್ಟಂಗೆ ಜಾಸ್ತಿ ಸಾಮಾನು ಕೊಡಬೇಡ. ಹಂಗೇ ಎಲ್ಲಾದನ್ನೂ ಗಾಡ್ಯಾಗೆ ಹೊಸ ಮನೆಗೆ ಸಾಗಿಸು ಅಂದಿದ್ದ. ಇವನು ಗಾಡ್ಯಾಗೆ ಸಾಗಿಸೋ ಬೇಕಾದ್ರೆ ಹಿಂದುಗಡೆ ಇದ್ದ ಬಾಳೆ ಎಲೆ ದನಾ ತಿಂದಿತ್ತು. ಕಡೆಗೆ ತರಗಿನ ಎಲೇಲಿ ಊಟ ಹಾಕಿದ್ದಾತು. ಸರಿ ಗೃಹ ಪ್ರವೇಸ ಬಂದೇ ಹೋತು. ನಮ್ಮ ಗೆಳೆಯರ ಬಳಗ ಹೋದ್ವಿ. ಲೇ ಕೋಮಲಾ ಮನೆ ಬಣ್ಣ ಆಕಾಶದ ಬಣ್ಣ ಒಂದೇ ಐತಲ್ಲಾ, ಯಾಕಲಾ ಅಂದ ಸುಬ್ಬ. ಹೂಂ ಕಲಾ. ಬಡ್ಡೆ ಐದ ಪೇಂಟರ್ ಹೊಸಾ ಡಿಸೈನ್ ಅಂತಾ ಎಲ್ಲಾ ಬಣ್ಣನೂ ಮಿಕ್ಸ್ ಮಾಡಿ ಹೊಡೆದು ಹಿಂಗ್ ಮಾಡವ್ನಂತೆ ಅಂದೆ. ಸರೀ ಗೌಡಪ್ಪನ ಪೋಟೋ ಮನೆ ಮ್ಯಾಕೆ ಯಾಕೆ ಹಾಕ್ಯರಲಾ. ಲೇ ಅದು ಗೌಡಪ್ಪನ ಪೋಟೋ ಅಲ್ಲ ಕಲಾ. ಅದು ದೃಷ್ಟಿ ಬೊಂಬೆ ಕಲಾ ಅಂದೆ. ಸರೀ ಮನೆ ಒಳಗೆ ಹೋದ್ರೆ ಕೆಟ್ಟ ವಾಸನೆ ಬರೋದು. ವಾಸ್ತು ಪ್ರಕಾರ ಅಂತಾ ಬಚ್ಚಲು ಮನೆ ಮುಂದಗಡೆ ಕಟ್ಟಿಸಿದ್ದ. ಬಾಗಿಲು ಯಾರೋ ಹಲಸಿನ ಮರದ್ದು ಮಾಡಿಸು ಅಂದಿದ್ರಂತೆ. ಹಸೀ ಹಲಸಿನ ಮರ ಕುಯಿಸಿ ಮುಂದುಗಡೆ ಬಾಗಿಲು ಮಾಡ್ಸಿದ್ದ. ತಂಡಿಗೆ ಅದು ಉಬ್ಕಂಡಿತ್ತು. ಹಿಂದಗಡೇ ಒಂದು ದಪ್ಪನೇ ಕಲ್ಲು ಮಡಗಿದ್ದ. ದೇವರು ಕೋಣೆ ಹಾಲ್ನಾಗೆ ಇತ್ತು. ಇನ್ನು ನೀರಿನ ಟ್ಯಾಂಕ್ ಎಲ್ಲಿ ಅಂತಾ ನೋಡಿದ್ರೆ. ಅಡುಗೆ ಮನ್ಯಾಗೆ. ಲೇ ಗೌಡಪ್ಪ ಅವನ ಹೆಂಡರು ಸಾಯಿಸಕ್ಕೆ ಮಾಡಿರೋ ಪ್ಲಾನ್ ಅಂತಿದ್ದ ನಿಂಗ. ರೂಂನಾಗೆ ಒಬ್ಬರು ಒಳಗೆ ಹೋದ್ರೆ ಮತ್ತೊಬ್ಬರು ಹೋಗಂಗೇ ಇಲ್ಲ. ಅಂತಾ ದೊಡ್ಡ ಮಂಚ.

ರಾಜಕೀಯದೋರೆಲ್ಲಾ ಬಂದಿದ್ರು. ನೋಡ್ರೀ ಗ್ರಾನೈಟ್ ಅಂತಾ ತೋರಿಸ್ತಾನೆ. ಎಲ್ಲೈತೆ ಗ್ರಾನೇಟ್.  ಅದರ ಮ್ಯಾಕೆ ಒಂದು 5ಸೆಂ.ಮೀ ಮಣ್ಣು ಇತ್ತು. ಎಲ್ಲಾವೂ ಬಂದು ಅಲ್ಲೇ ಕಾಲು ಒರೆಸೋವು. ಇದರ ಮಧ್ಯೆ ಗೌಡಪ್ಪನ ಅಕ್ಕ ಜಾರಿ ಬಿದ್ದು ಕಾಲು ಮುರಕಂಡಿದ್ಲು. ಆಸ್ಪತ್ರೆಗೆ ಗಂಜಿ ಕೊಡಕ್ಕೆ ಕಿಸ್ನ ರೆಡಿಯಾಗಿದ್ದ. ಅಡುಗೆ ಭಟ್ಟ ಉಗೀತಾ ಇದ್ದ ನಾವೇನೂ ಗೃಹ ಪ್ರವೇಸಕ್ಕೆ ಬಂದಿದೀವೋ ಇಲ್ಲಾ ಆಸ್ಪತ್ರಾಗೆ ಅಡುಗೆ ಮಾಡ್ತಿದೀವೋ ಅಂತಾ. ಎಲ್ಲಾವೂ ಚಾ ಚಾ ಚಾ ಅಂತಿದ್ರೂ ಅಂತಾ ಹಂಡ್ಯಾಗೆ ಕಾಯಿಸಿ ಮಡಗಿದ್ದ. ಮುಂಡೇವು ಚೊಂಬ್ನಾಗೆ ತಂದು ಲೋಟಕ್ಕೆ ಸುರಿಯೋವು. ಸರೀ ಊಟಕ್ಕೆ ಅಂತಾ ಷಾಮಿಯಾನ ಹಾಕಿದ್ವಿ. ಏನು ಎಲ್ಲಾವೂ ತಿನ್ನೋದೇ. ಪ್ಲಾಸ್ಟಿಕ್ ಲೋಟ. ಗಾಳಿಗೆ ಹಂಗೇ ಹಾರೋದು. ಏ ಥೂ. ಅದರ ಮ್ಯಾಕೆ ಮುದ್ದೆ ಮಡಗಿರಿ ಅಂತಿದ್ದ ಸುಬ್ಬ. ಏನ್ ಊಟ ಜೋರಾಗಿ ನಡೀತಾ ಇತ್ತು. ಷಾಮಿಯಾನದ ಗೂಟಕ್ಕೆ ತಮ್ಮಯ್ಯ ಎಮ್ಮೆ ಕಟ್ಟಿದ್ದ. ಒಂದು ಸಾರಿ ಎಳೀತು ನೋಡಿ ಷಾಮಿಯಾನ ಅಂಗೇ ಬಿದ್ದಿದ್ದೇಯಾ. ಮಗಂದು ಒಳಗಿದ್ದೋರ ಮುಖಾ ಚಿತ್ರಾನ್ನ ಆಗಿತ್ತು. ಮುಖಂಡರು ಇವನ ಮನೆಗೆ ಒಂದಿಷ್ಟು ಬೆಂಕಿಹಾಕ ಅಂತಾ ಮುಖ ಒರೆಸ್ಕಂಡು ಎದ್ದು ಹೋದ್ವು. ಅಡುಗೆ ಭಟ್ಟ ಮಕ್ಕಂಡಿದ್ದ. ಯಾಕಪ್ಪಾ. ಅನ್ನ ಬೇಯಿಸಿ ಬೇಯಿಸಿ ಸಾಕಾಗಿ ಹೋಗೈತೆ ಅಂದಾ. ತೇರು ಗಾಲಿಗೆ ಎಡೆ ಇಟ್ಟಂಗೆ ಇತ್ತು ಒಬ್ಬರೊಬ್ಬರ ಎಲೆ. ಏನಾದ್ರೂ ಗೌಡಪ್ಪ ಕ್ಯಾಟರಿಂಗ್ ಕೊಟ್ಟಿದ್ರೆ. ಎಲೆಗೆ 500ರೂಪಾಯಿ ಆಗಿರೋದು. ಮುದ್ದೆಗೂ ಸಾರಿಗೂ ಮ್ಯಾಚೇ ಆಗ್ತಿರಲಿಲ್ಲ. ಯಾಕಲಾ ಸುಬ್ಬ, ಮಗಾ ಕಿಸ್ನ ಅಡುಗೆ ಭಟ್ಟಂಗೆ ಎಲ್ಡೇ ಕಾಯಿ ಕೊಟ್ಟಾವ್ನೆ. ಅಂಗೇ ತರಕಾರಿ ಉಳಿದೈತೆ ಅಂತಾ ಆಗಲೇ ಅಂಗಡಿಗೆ ವಾಪಸ್ಸು ಕೊಟ್ಟಾವ್ನೆ ಕಲಾ ಅಂದಾ ಸುಬ್ಬ. ಹೌದೇನ್ಲೇ ಕಿಸ್ನ. ಹೂಂ. ಗೌಡಪ್ಪ ಜಾಸ್ತಿ ಸಾಮಾನು ಕೊಡಬೇಡ ಅಂದವ್ನೆ ಅಂದ.

ಗೌಡಪ್ಪಂಗೆ ಬಂದಿರೋ ಪ್ರಸಂಟೇಸನ್ ಯಾರ್ಯಾರೋ ಹೊಡಕಂಡ್ ಹೋಗಿದ್ರು. ಕೊಟ್ಟಂಗೂ ಯಾರೋ ಇಸ್ಕಳೋರು, ಯಾರು ಅಂತಾ ಜ್ಞಾಪನ ಬತ್ತಾ ಇಲ್ಲಾ ಅಂದ. ಕೆಲವು ಅವನ ಮನೆ ತಟ್ಟೇನೇ ಅವನಿಗೆ ಕೊಟ್ಟು ಹೋಗಿದ್ವು. ಇನ್ನೇನು ನಾವು ಊಟಕ್ಕೆ ಕೂರಬೇಕು. ಅಟ್ಟೊತ್ತಿಗೆ ಯಾವನೋ ಲಾಯರಪ್ಪ ಬಂದು ಗೌಡಂಗೆ ಕಾಗದ ಕೊಟ್ಟ. ಅದರಾಗೆ ನೋಡಿದ್ರೆ, ಈ ಜಾಗ ನಮ್ಮದು, ನ್ಯಾಯಾಲಯದಾಗೆ ಇತ್ಯರ್ಥ ಆಗೋ ತನಕ ಯಾರೂ ವಾಸ ಮಾಡಂಗಿಲ್ಲ ಅಂತಾ ಪಕ್ಕದೂರು ಪಟೇಲ ಕೇಸ್ ಹಾಕವ್ನಂತೆ. ಗೌಡಪ್ಪ ತಂದಿದ್ದ ಸಾಮಾನೆಲ್ಲಾ ಮತ್ತೆ ಹಳೆ ಮನೆಗೆ ಹಾಕಲಾ ಕಿಸ್ನ ಅಂದ. ಆಗಲೇ ಕಿಸ್ನ ಸತ್ತ ಹೆಣ ಆದಂಗೆ ಆಗಿದ್ದ. ಜೀವನ ಎಲ್ಲಾ ಗೌಡಪ್ಪನ ಮನೆ ಸಾಮಾನು ಸಾಗಿಸೋದೆ ಆತು ಅಂತಿದ್ದ ಕಿಸ್ನ. ಆದ್ರೆ ಗೌಡಪ್ಪ ಮಾತ್ರ ಹೊಸಾ ಮನೆಗೆ ದಿನಾ ಹೋಗಿ ಕಸಾ ಹೊಡೆದು ಬತ್ತಾನೆ. ನಾಳೆ ನಮ್ಮಂಗೇ ಆದ್ರೆ ಅಂತಾ.

Rating
No votes yet

Comments