ಬೆಳದಿಂಗಳ ಬಾಲೆ

ಬೆಳದಿಂಗಳ ಬಾಲೆ

ಬರಹ

ಅದು ಸೃಷ್ಟಿಯ ಮೊದಲ ಹಂತ. ಜಗತ್ತಿನ ಸೃಷ್ಟಿಯನ್ನು ಮುಗಿಸಿದ್ದ ಬ್ರಹ್ಮ. ಕಲ್ಲು, ಮಣ್ಣು, ಭೂಮಿ, ಸೂರ್ಯ, ಸೌರ ವ್ಯೂಹ, ಬ್ರಹ್ಮಾಂಡ ಎಲ್ಲವೂ ಸೃಷ್ಟಿಗೊಂಡವು. ತನ್ನ ಸೃಷ್ಟಿಯನ್ನು ನೋಡಿ ಸ್ವತಃ ಬ್ರಹ್ಮನೇ ಖುಷಿ ಪಟ್ಟ. ಗರ್ವದಿಂದ ಬೀಗಿದ. ಆದರೆ ಎಲ್ಲೂಒಂದು ಲೂಒಪ ಎದ್ದು ಕಾಣುತಿತ್ತು. ಎಷ್ಟಾದರೂ ಜಡ, ಜದವಲ್ಲವೀ? ಇದನ್ನರಿತ ಬ್ರಹ್ಮ ಜೀವದ ಬೀಜವನ್ನು ಭೂಮಿಗೆ ತರಲುನಿಸ್ಚಿಯಿಸಿದ. ಅಂದಿಗೆ ಶುರುವಾಯಿತು ಭುವಿಯ ಮೇಲೆ ಜೀವ. ವೈರಸ್, ಬ್ಯಾಕ್ಟೀರಿಯ, ಕ್ರಿಮಿ ಕೀಟ, ಜಲರಾಷಿಗಳು ಒಂದೊಂದಾಗಿಸೃಷ್ಟಿಗೊಂಡವು. ಇಷ್ಟೆಲ್ಲಾ ಆದರೂ ತನ್ನ ಸೃಷ್ಟಿಯಲ್ಲಿ ಏನೋ ಕೊರತೆ ಇದೆ ಎಂದು ಬ್ರಹ್ಮ ಕೊರಗುತ್ತಿದ್ದನು, ಕಾರಣ ತಿಳಿಯದೆ ನರಳುತ್ತಿದ್ದನು. ಇದೆ ರೀತಿಯಲ್ಲ ಜಗತ್ತು ಕೆಲವು ಯುಗಗಳವರೆಗೂ ನಡೆಯಿತು.ಒಂದು ಅಮೋಘ ಗಳಿಗೆಯಲ್ಲಿ ಬ್ರಹ್ಮನ ಮನಸಿಗೆ ಆ ಕೊರತೆ ಏನು ಎಂದು ಭಾಸವಾಯಿತು. ಅದು ಸ್ವತಃ ಯೋಚಿಸಬಲ್ಲ ಒಂದುಜೀವರಾಶಿ ಎಂದು ತಿಳಿಯಿತು. ಮರುಕ್ಷಣವೇ ಬ್ರಹ್ಮ ಆ ಸೃಷ್ಟಿಯಲ್ಲಿ ಕಾರ್ಯನಿರತನಾದ. ಇಷ್ಟು ಕಾಲ ತಾನು ಮಾಡಿದ್ದು ಅರಮನೆ, ಸಿಂಹಾಸನವಾದರೆ ತಾ ಮಾಡಹೊರಟಿರುವುದು ಮುಕುಟ ಎಂದರಿತ ಬ್ರಹ್ಮ ತನ್ನನ್ನು ತಾನೆ ಪೂರ್ಣವಾಗಿ ಆ ಕಾರ್ಯದಲ್ಲಿ ತೊಡಗಿಸಿಕೊಂಡನು. ಅದರ ಫಲವಾಗಿ ಕ್ರಿಶ್ಚಿಯನ್ನರ ಆಡಂ (ಮತ್ತು ಈವ್) ಅಥವಾ ಹಿಂದೂಗಳ ಮನು (ಮತ್ತು ತನ್ನ ಧರ್ಮಪತ್ನಿ)ಜೀವ ತಾಳಿದರು.ಈ ರೀತಿಯಲ್ಲಿ ಭುವಿಯ ಮೇಲೆ ಮಾನವ ರಾಶಿಬೇರೂರಿತು. ಈ ಬ್ರಹ್ಮಾಂಡದಲ್ಲಿ ಅತಿ ದೊಡ್ಡ ಕಲೆಗಾರ ಬ್ರಹ್ಮನೇ ಆಗಿರಬೇಕು ಏಕೆಂದರೆ ಅವನು ಸ್ತ್ರೀಗೆ ರೂಪಕೊಟ್ಟನು. ಈ ರೀತಿ ಬಹಳ ಯುಗಗಳು ಕಳೆದವು. ಎಂದಿನಂತೆ ಬ್ರಹ್ಮ ಸೃಷ್ಟಿಕಾರ್ಯದಲ್ಲಿ ತೊಡಗಿದ್ದ. ಆ ಅನಾದಿ ಕಾಲದಿಂದ ಇಂದಿನವರೆಗೂ ಬ್ರಹ್ಮ ಮಾನವರನ್ನು ಸೃಷ್ಟಿ ಮಾಡಿ, ಅವರು ಮಾಡುವಪಾಪ ಕಾರ್ಯಗಳನ್ನು ನೋಡಿ ಬೇಸತ್ತಿದ್ದ್ದರೂ, ತನ್ನ ಕರ್ಮವನ್ನು ಮಾಡದೆ ಇರುವುದು ಪಾಪವೆಂದು ಬಗೆದು ಎಂದಿನಂತೇ ತನ್ನ ಕೆಲಸವನ್ನು ಮುಂದುವರಿಸಿದನು.

ಅದು ಒಂದು ವಿಶಿಷ್ಟ ಬೆಳದಿಂಗಳ ರಾತ್ರಿ. ಆಕಾಶ ಬೆಳದಿಂಗಳ ಕಿರಣಗಳ ಶಾಂತಿಯುತವಾದ ಕ್ರಾಂತಿಯೊಂದಿಗೆ ಕಂಗೊಳಿಸುತ್ತಿತ್ತು. ಎಲ್ಲ ರೀತಿಗಳಲ್ಲಿಯೂ ಆ ವಾತಾವರಣ ಯಾವುದೋ ಒಂದು ಮಹತ್ಕಾರ್ಯಕ್ಕೆ ಪೀಠಿಕೆಯಂತೆ ತೋರುತ್ತಿತ್ತು. ಬ್ರಹ್ಮ ಈ ವಾತವರಣ   ಒಂದು ಸುಂದರ ಹೆಣ್ಣಿನ ಸೃಷ್ಟಿಗೆ ಸೂಕ್ತ ಎಂದು ತೀರ್ಮಾನಿಸಿ ಕಾರ್ಯಮಗ್ನನಾದನು. (ಹೆಣ್ಣಿನ ಪರ ಪಕ್ಷಪಾತ ಅಂದಿಗೆ ಶುರುವಾಗಿರಬೇಕು. ) ಅತೀಂದ್ರಿಯ ಶಕ್ತಿಗಳೆಲ್ಲವೂ ಕೂಡಿಬಂದಂತೆ , ಸೌಂದರ್ಯವೇ ಮೈವೆತ್ತಿ ಬಂದಂತೆ ಪ್ರಕಾಶಿಸುತ್ತಿದ್ದಳು ಆ ಚೆಲುವೆ. ತನ್ನ ಸೃಷ್ಟಿಯನ್ನು ಕಂಡು ಸ್ವತಃ  ಬ್ರಹ್ಮನೆ ಚಕಿತಗೊಂಡನು. ಎಷ್ಟೋ ಯುಗಗಳಿಂದ ತಾನು ಸೃಷ್ಟಿಕಾರ್ಯದಲ್ಲಿ ತೊಡಗಿದ್ದರೂ ಇಂತಹ ಅತೀವ ಸುಂದರಿಯನ್ನು ಸೃಷ್ಟಿಸಲು ಆಗದೆ ಇರಲು ಕಾರಣವೇನಿರಬಹದು ಎಂದು ಯೋಚಿಸತೊಡಗಿದ . 'ಒಂದು ಮೇರುಕೃತಿಗೆ ಲೇಖಕನು ಎಷ್ಟು ಮುಖ್ಯವೋ, ಪರಿಸರ ಮತ್ತು ಸ್ಫೂರ್ತಿ ಅಷ್ಟೆ ಮುಖ್ಯ' ಅದೇ ರೀತಿ ತನ್ನ ಈ ಹೊಸ ಮೇರುಕೃತಿಗೆ ಸ್ಪೂರ್ತಿ ಏನಿರಬಹುದೆಂದು ತಿಳಿಯದಿದ್ದರೂ ಪ್ರಾಯಶಃ ಆ ಮಹತ್ ಗಳಿಗೆ ಹಾಗು ಪರಿಸರವೇ ಕಾರಣವಿರಬಹುದೆಂದು ತಿಳಿದುಸುಮ್ಮನಾದನು, ಸುಮ್ಮನಿರಲು ಯತ್ನಿಸಿದನು. ಕಣ್ಣಿಗೆ ಕುಕ್ಕುವಂತ ಆ ಸೌಂದರ್ಯದ ಸೆಳೆತಕ್ಕೆ ಗುರಿಯಾದ ಬ್ರಹ್ಮ ತನ್ನ ಸೃಷ್ಟಿ ತನ್ನನ್ನೇ ಸೆಳೆತಕ್ಕೀಡುಮಾಡುತ್ತದೆ ಎಂದು ಎಂದೂ ಎಣಿಸಿರಲಿಕ್ಕಿಲ್ಲ. ತನ್ನ ಸೃಷ್ಟಿಯ ಮಾಯೆಗೇ ಮರುಳಾದ ಮಂಕ ಬ್ರಹ್ಮನ ಪರಿ ಅಣ್ಣನವರ ವಚನದಲ್ಲಿ ಹೇಳಿದಂತಾಗಿತ್ತು. ( ಈ ಮಾಯೆಯ ಕಳವಳ ಎನ್ನೋಳವಲ್ಲ) ಆ ಚೆಲುವೆಯ ಮಂದಹಾಸವನ್ನು ನೋಡಿ ಮನಸೋತ ಬ್ರಹ್ಮ ಆಕೆಯ ಮನೋಭಿಲಾಷೆಯನ್ನು ಈಡೇರಿಸುವುದಾಗಿ ವರವ ನೀಡಿದನು. ಸೌಂದರ್ಯದೊಂದಿಗೆ ಜಾಣ್ಮೆಯನ್ನು ಹೊಂದಿದ್ದ ಆ ಚೆಲುವೆ ತನ್ನ ಸೌಂದರ್ಯಕ್ಕೆ ಸಾತ್ವಿಕತೆಯ ಮೆರುಗನ್ನು ನೀಡಲು ಯಾಚಿಸಿದಳು. ಮರುಕ್ಷಣವೇ ಆಕೆ ಸೌಂದರ್ಯ ಹಾಗು ಸಾತ್ವಿಕತೆಯ ಸಂಗಮದಿಂದ ಕಂಪಿಸತೊಡಗಿದಳು. ಸೌಂದರ್ಯ ನೀರಾದರೆ ಸಾತ್ವಿಕತೆಯೊಂದಿಗೆ ಕೂಡಿದ ಸೌಂದರ್ಯ ಅಮೃತದಂತೆ . ಸೌಂದರ್ಯ ಸಾಮಾನ್ಯ ಕೃತಿಯಾದರೆ ಸಾತ್ವಿಕತೆಯೊಂದಿಗೆ ಕೂಡಿದ ಸೌಂದರ್ಯ ಮೇರು ಕೃತಿಯಂತೆ. ಸೌಂದರ್ಯ ಸಾಮನ್ಯ ಮರವಾದರೆ ಸಾತ್ವಿಕತೆಯೊಂದಿಗೆ ಕೂಡಿದ ಸೌಂದರ್ಯ ಕಲ್ಪವೃಕ್ಷದಂತೆ . ಸೌಂದರ್ಯ ಧೇನುವಾದರೆ ಸಾತ್ವಿಕತೆಯೊಂದಿಗೆ ಕೂಡಿದ ಸೌಂದರ್ಯ ಕಾಮಧೇನುವಿನಂತೆ. ಸೌಂದರ್ಯ ಆನಂದದಾಯಕವಾದರೆ ಸಾತ್ವಿಕತೆಯೊಂದಿಗೆಕೂಡಿದ ಸೌಂದರ್ಯ ಸಚ್ಚಿದಾನಂದಕರ.

ಈ ಚೆಲುವೆಯನ್ನು ತನಗಾಗಿಯೇ ಮೀಸಲಿಡಬೀಕೆಂಬ ಹುಳು ಅವನ ಮೂರು ತಲೆಗಳಲ್ಲಿ ಬರದೇ ಏನು ಇರಲಿಲ್ಲ. ಆದರೆ ಸರಸ್ವತಿಯನ್ನು ಮದುವೆಯಾಗಿ ಶಿವನ ಕೋಪಕ್ಕೆ ಗುರಿಯಾಗಿದ್ದ ಬ್ರಹ್ಮ ಮತ್ತೆ ಆ ತಪ್ಪನ್ನು ಪುನರಾವರ್ತಿಸಲು ಧೈರ್ಯ ಮಾಡಲಿಲ್ಲ. ಈ ಚೆಲುವೆಯನ್ನು ಯಾರು ಒಲಿಸಿಕೊಳ್ಲುವರೋ ಎಂಬ ಅಸೂಯೆಯೊಂದಿಗೆ ಬ್ರಹ್ಮ ಅವಳನ್ನು ಬೀಳ್ಕೊಟ್ಟನು. ಈ ರೀತಿ ಭುವಿಗೆ ಬಂದಳು ನನ್ನ ಕನಸಿನ ಲೀಲೆ, ಮನಸ್ಸಿನ ಜ್ವಾಲೆ, ಆ ಬೆಳದಿಂಗಳ ಬಾಲೆ.