ರಾಜ್ಯ "ಅಪಾಲರು"
ಮಾನ್ಯರೆ,
ಕೆಳಗಡೆ ಇರುವ ಸುದ್ದಿಗಳು ನಮ್ಮ ಸನ್ಮಾನ್ಯ ರಾಜ್ಯಪಾಲರಾದ ಹೆಚ್.ಆರ್.ಭಾರದ್ವಾಜ್ ಕುರಿತಾದದ್ದು. ಸರಕಾರಕ್ಕೆ ಮಾರ್ಗದರ್ಶನ ನೀಡುವ ಬದಲು ಸಂಘರ್ಷಕ್ಕೆ ಈಡು ಮಾಡಿರುವ ಪ್ರಸಂಗಗಳೆ ಜಾಸ್ತಿ. ಇವರ ಧೀರ್ಘಾಡಳಿತದ ಅನುಭವ ರಾಜ್ಯದ ಜನ ಸಾಮನ್ಯರಿಗೆ ಅನುಕೂಲವಾಗುವಂತಿದ್ದರೆ ಹೇಗಿರುತಿತ್ತು? ರಾಜ್ಯದಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿರುವ ವಿದ್ಯುತ್ ಸಮಸ್ಯೆಗೆ ಪರಿಹಾರ ಕೊಡಿಸುವುದಾಗಿರಲಿ, ನೆರೆ ಸಂತ್ರಸ್ತರಿಗೆ ಕೇಂದ್ರದಿಂದ ಸಹಾಯ ತರುವುದಾಗಲಿ, ರಾಜ್ಯಕ್ಕೆ ಅನುಕೂಲವಾದ ರೈಲ್ವೆ ಯೋಜನೆ ಗಳನ್ನು ತರುವುದಾಗ್ಲಿ, ಸದ್ಯಕ್ಕೆ ಕಾವೇರಿ ಜಲಾನಯನದಲ್ಲಿ ಅತಿ ಕಡಿಮೆ ಮಳೆಯಾಗಿರುವುದರಿಂದ ತಮಿಳು ನಾಡಿಗೆ ನೀರು ಬಿಡುವುದಕ್ಕೆ ಆಗದೆ ಇರುವ ಪರಿಸ್ಥಿತಿ ಇದೆ, ಅದನ್ನು ತಮಿಳು ನಾಡಿಗೆ ಮನವರಿಕೆ ಮಾಡಿಕೊಡಬಹುದಲ್ವ. ಮಹಾದಾಯಿ ಯೋಜನೆಯಿಂದ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಕುಡಿಯುವ ನೀರಿನ ಅನುಕೂಲ ವಾಗುತ್ತದೆ, ಅದನ್ನು ಗೋವಾ ಸರ್ಕಾರಕ್ಕೆ ತಿಳಿ ಹೇಳಿ ಯೋಜನೆಗೆ ಅಸ್ತು ಮಾಡಿಸಬಹುದಾಗಿತ್ತು. ಹೇಳುತ್ತಾ ಹೋದರೆ ನೂರೆಂಟು ಸಮಸ್ಯೆಗಳಿವೆ, ಅದು ಬಿಟ್ಟು, ಈ ತರಹ ಉಪಯೊಗ ವಿಲ್ಲದ ವಿಷಯಗಳಿಗೆ ನಿಮ್ಮ ಸಮಯವನ್ನು ವ್ಯಯಿಸಿದರೆ ಆಗುವ ನಷ್ಟ ಯಾರಿಗೆ? ನಮಗೆ ಸ್ವಾಮಿ, ರಾಜ್ಯದ ಜನಕ್ಕೆ.
ನೀವೇನಂತೀರಾ?
ರಂಗನಾಥ.
23 ಆಗಸ್ಟ್ 2010: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಜಾರಿಗೆ ಮುಂದಾಗಿರುವ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಒಡೆದು ಆಳುವ ನೀತಿಯಾಗಿದೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದ್ದು, ಗೋ ಹತ್ಯೆ ನಿಷೇಧ ವಿಧೇಯಕಕ್ಕೆ ಅಂಕಿತ ಹಾಕುವುದು, ಬಿಡುವುದು ರಾಷ್ಟ್ರಪತಿಗೆ ಬಿಟ್ಟ ವಿಚಾರ ಎಂದು ಸ್ಪಷ್ಟಪಡಿಸಿದ್ದಾರೆ.
ಮೈಸೂರು, ಆ. 22: ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವಿ.ಜಿ.ತಳವಾರ್‌ರನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಇಂದಿಲ್ಲಿ ನಡೆಯಿತು. ತಮ್ಮ ಅಧಿಕಾರವಧಿಯಲ್ಲಿ ಅಕ್ರಮ ನೇಮಕಾತಿ ನಡೆಸಿರುವರೆನ್ನಲಾದ ವಿಶ್ರಾಂತ ಕುಲಪತಿ ಡಾ.ವಿ.ಜೆ.ಶಶಿಧರ ಪ್ರಸಾದ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಕುರಿತು ರಾಜ್ಯಪಾಲರ ಆದೇಶಕ್ಕೆ ವಿರುದ್ಧವಾಗಿ ಕುಲಪತಿ ಮಾತನಾಡಿದ್ದಾರೆ ಎಂಬುದೇ ಘಟನೆಗೆ ಕಾರಣ.
ಗುರುವಾರ, 29 ಜುಲೈ 2010 : ರಾಜ್ಯ ಸರಕಾರ ತರಲು ಉದ್ದೇಶಿಸಿರುವ ಗೋ ಹತ್ಯೆ ನಿಷೇಧ ಮಸೂದೆಗೆ ಅಂಕಿತ ಹಾಕಲು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನಿರಾಕರಿಸಿದ್ದಾರೆ.
ಬುಧವಾರ, 21 ಜುಲೈ 2010:ಗೋಹತ್ಯೆ ನಿಷೇಧ ಕಾಯ್ದೆ ಸೇರಿದಂತೆ ಒಟ್ಟು 12 ಮಸೂದೆಗಳು ನನಗೆ ಇನ್ನೂ ತಲುಪಿಲ್ಲ, ನನ್ನ ಬಳಿ ಬಂದ ನಂತರ ಅಧ್ಯಯನ ನಡೆಸಿ ಅವುಗಳನ್ನು ಅಂಗೀಕರಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ರಾಜ್ಯಪಾಲರು ಸ್ಪಷ್ಟಪಡಿಸಿದ್ದಾರೆ.
ಶನಿವಾರ, 17 ಜುಲೈ 2010: ರಾಜ್ಯ ಸರಕಾರ ಹಾಗೂ ನಾಡಿನ ಹಿತದೃಷ್ಟಿಯಿಂದ ಭ್ರಷ್ಟ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನೇರವಾಗಿ ತಾಕೀತು ಮಾಡಿದ್ದಾರೆ.
ಗುರುವಾರ,15 ಜುಲೈ 2010: ರಾಜ್ಯಪಾಲರು ಕಾಂಗ್ರೆಸ್ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆ ಎಂಬ ಬಿಜೆಪಿ ನಾಯಕರ ಟೀಕೆಗಳಿಗೆ ಅಚ್ಚರಿಯ ಪ್ರತಿಕ್ರಿಯೆ ನೀಡಿರುವ ಎಚ್.ಆರ್. ಭಾರದ್ವಾಜ್, ಈ ಕುರಿತು ನನಗೆ ಹೆಮ್ಮೆಯಿದೆ ಎಂದು ಹೇಳಿಕೊಂಡಿದ್ದಾರೆ. ಎಚ್.ಆರ್. ಭಾರದ್ವಾಜ್ ಸಂವಿಧಾನದ ಕಾವಲುಗಾರನಂತೆ ವರ್ತಿಸುವ ಬದಲು ಕಾಂಗ್ರೆಸ್ ಏಜೆಂಟರಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆಡಳಿತ ಪಕ್ಷ ಬಿಜೆಪಿ ಆರೋಪಿಸಿತ್ತು. ಇದಕ್ಕೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, 'ಹೌದು, ನಾನು ಕಾಂಗ್ರೆಸ್ಸಿಗ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ' ಎಂದಿದ್ದಾರೆ.
ಗುರುವಾರ, 15 ಜುಲೈ 2010: ದೇಶದ ಆರ್ಥಿಕ ಭದ್ರತೆ ಗಮನದಲ್ಲಿಟ್ಟುಕೊಂಡು ಪೆಟ್ರೋಲಿಯಂ ಉತ್ಪನ್ನ ಬೆಲೆ ಏರಿಕೆ ಮಾಡಿರುವುದರಲ್ಲಿ ತಪ್ಪಿಲ್ಲ ಎಂದು ಕೇಂದ್ರ ಸರಕಾರದ ನಿಲುವನ್ನು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಸಮರ್ಥಿಸಿಕೊಂಡಿದ್ದಾರೆ.
ಗುರುವಾರ, 9 ಜುಲೈ 2009: ರಾಜ್ಯಪಾಲನಾಗಿ ಸಂವಿಧಾನ ರಕ್ಷಿಸುವುದು ತಮ್ಮ ಮುಖ್ಯವಾದ ಹೊಣೆಗಾರಿಕೆಯಾಗಿದೆ ಎಂದು ರಾಜ್ಯದ ನೂತನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹೇಳಿದ್ದಾರೆ.
ಮಂಗಳವಾರ, 6 ಜುಲೈ 2010: ತಮ್ಮ ಬಗ್ಗೆ ಅನೇಕ ಟೀಕೆಗಳು ಬರುತ್ತಿವೆ. ಕೆಲವರು ತಮ್ಮನ್ನು ಕಾಂಗ್ರೆಸ್ ಏಜೆಂಟ್, ಪ್ರತಿಪಕ್ಷದ ವಕ್ತಾರನಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದು, ಇದಕ್ಕೆಲ್ಲ ತಾನು ಸೊಪ್ಪು ಹಾಕುವುದಿಲ್ಲ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ತಿರುಗೇಟು ನೀಡಿದ್ದಾರೆ.
ಶುಕ್ರವಾರ, 2 ಜುಲೈ 2010: ರಾಜಕಾರಣಿಗಳು ಜನಸೇವೆ ಮಾಡಬೇಕೆ ವಿನಃ, ವ್ಯವಹಾರವನ್ನಲ್ಲ. ವ್ಯವಹಾರ ಮಾಡಲು ಬೇರೆ ಜನರಿದ್ದಾರೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮತ್ತೊಮ್ಮೆ ಕೆಲವು ಸಚಿವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ, 19 ಜೂನ್ 2010: ಗೋ ಹತ್ಯೆ ನಿಷೇಧ ಮಸೂದೆ ಅಂಗೀಕಾರವಾಗಿಲ್ಲ: ಭಾರದ್ವಾಜ್
1 ಜೂನ್ 2010: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಮತ್ತು ಜನರ ಮೂಲಭೂತ ಹಕ್ಕುಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದಿರುವ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಸರ್ಕಾರ ತನ್ನ ಜವಾಬ್ದಾರಿ ಮರೆತು ನಡೆದರೆ ಸಂವಿಧಾನದಲ್ಲಿನ ರಾಜ್ಯಪಾಲರ ತಾಖತ್ತು ಏನೆಂಬುದನ್ನು ತೋರಿಸಬೇಕಾದೀತು ಎಂದು ಪರೋಕ್ಷವಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆಬುಧವಾರ,
19 ಮೇ 2010: ರಾಜ್ಯದ ವಿಶ್ವವಿದ್ಯಾನಿಲಯಗಳ ಕ್ಯಾಂಪಸ್‌ಗಳಲ್ಲಿ ರಾಜಕೀಯದ ರೋಗ ಬಡಿದಿದ್ದು, ಅದನ್ನು ತಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಗುಡುಗಿದ್ದಾರೆ.
ಸೋಮವಾರ, 17 ಮೇ 2010: ಸಚಿವ ಸಂಪುಟದ ಸಹೋದ್ಯೋಗಿಗಳನ್ನು ಹದ್ದು ಬಸ್ತಿನಲ್ಲಿಟ್ಟುಕೊಂಡು ಅವರ ನಡತೆ ಸರಿಯಾಗಿರುವಂತೆ ನೋಡಿಕೊಳ್ಳಬೇಕೆಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನೀತಿಪಾಠ ಹೇಳಿದ್ದಾರೆ.
ಶನಿವಾರ, 8 ಮೇ 2010: ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿದ್ದು ಅದರಿಂದಾಗಿ ಜನ ಸಂಕಷ್ಟದಲ್ಲಿದ್ದಾರೆ. ಆದರೆ ಜನಪ್ರತಿನಿಧಿಗಳು ಹಗರಣಗಳಲ್ಲಿ ತೊಡಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಶನಿವಾರ ಆರೋಪಿಸಿದ್ದಾರೆ.
ಮಂಗಳವಾರ, 9 ಫೆಬ್ರವರಿ 2010: ಸೋಮಣ್ಣ ಅವರು ಬೇರೆ ಪಕ್ಷದಿಂದ ವಲಸೆ ಬಂದವರು ಮತ್ತು ಸಕ್ರಿಯ ರಾಜಕಾರಣದಲ್ಲಿದ್ದಾರೆ. ಹಾಗಾಗಿ ಅವರನ್ನು ವಿಧಾನಪರಿಷತ್ತಿಗೆ ಅವರನ್ನು ನಾಮಕರಣಗೊಳಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಸರಕಾರದ ಶಿಫಾರಸನ್ನು ತಿರಸ್ಕರಿಸಿದ್ದರು
ಸೋಮವಾರ, 1 ಫೆಬ್ರವರಿ 2010: ಬಾಬರಿ ಮಸೀದಿ ಧ್ವಂಸ ಪ್ರಕರಣದಿಂದಾಗಿ ಇಡೀ ವಿಶ್ವದಲ್ಲಿಯೇ ಭಾರತೀಯರು ತಲೆ ತಗ್ಗಿಸುವಂತಾಗಿದೆ ಎಂದಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಇತ್ತೀಚೆಗೆ ರಾಜ್ಯದಲ್ಲಿ ಮರುಕಳಿಸುತ್ತಿರುವ ಚರ್ಚ್ ದಾಳಿ ಪ್ರಕರಣಗಳ ಬಗ್ಗೆ ಕಿಡಿಕಾರಿದರು.
ಬೆಂಗಳೂರು, ಸೆ. 6 : ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಗತ್ಯ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಹಿತರಕ್ಷಣೆಗಾಗಿ ದಿಟ್ಟ ನಿಲುವು ತಾಳುವುದಾಗಿ ಹೇಳಿದ್ದಾರೆ.
Comments
ಉ: ರಾಜ್ಯ "ಅಪಾಲರು"
In reply to ಉ: ರಾಜ್ಯ "ಅಪಾಲರು" by harsha.st
ಉ: ರಾಜ್ಯ "ಅಪಾಲರು"
ಉ: ರಾಜ್ಯ "ಅಪಾಲರು"
In reply to ಉ: ರಾಜ್ಯ "ಅಪಾಲರು" by asuhegde
ಉ: ರಾಜ್ಯ "ಅಪಾಲರು"