ಕಾಣದ ಸತ್ಯಗಳಿಗಾಗಿ ಹುಡುಕುತ್ತ ...!.

ಕಾಣದ ಸತ್ಯಗಳಿಗಾಗಿ ಹುಡುಕುತ್ತ ...!.

 

ಅಗೋಚರವಾದ ದಾರಿಯಲ್ಲಿ

ಗೋಚರಿಸುವ ಸತ್ಯಗಳಿಗಾಗಿ

ಪುಟ್ಟ ದೀಪದೊಂದಿಗೆ ಸಾಗುತ್ತೇನೆ.

 

ಗಾಳಿಯ ರೂಪದಲ್ಲಿ

ಕತ್ತಲೆಯು ಕೆನ್ನಾಲಿಗೆ ಚಾಚಿ

ಭಯ ಹುಟ್ಟಿಸುವ

ಶಬ್ಧಗಳೊಂದಿಗೆ ಬಂದಾಗ.

 

ದೀಪದ ಬೆಳಕಲ್ಲಿ ನಿಂತ ನನಗೆ

ನಾ ಬಂದದ್ದಾದರೂ ಏಕೆ

ಎಂಬುದು ಮರೆತೇ ಹೋಗಿರುತ್ತದೆ.

 

ಸತ್ಯಗಳನ್ನು ಹುಡುಕುವ ತವಕದಲ್ಲಿ

ನನ್ನೊಳಗೆ ನನಗೆ ಕಾಣದ

ಹಲವಾರು ಭಯಗಳು ರೂಪುಗೊಂಡು

ತಪ್ಪಿಸಿಕೊಳ್ಳಲು ಹೆಣಗಾಡುತ್ತೇನೆ.

 

ಆಸೆ, ನಿರಾಸೆ, ಧ್ವೇಶ,

ಅಸೂಯೆ, ಮೋಹಗಳೆಲ್ಲವು

ನನ್ನನ್ನೇ ಸುತ್ತುವರೆದು ನಿಲ್ಲುತ್ತವೆ.

 

ನನಗೆ ತಿಳಿಯದ ನನ್ನೊಳಗೂ ಹಲವು

ತಪ್ಪುಗಳಿರುವುದನ್ನು ಕಂಡು

ಪರರ ತಪ್ಪುಗಳಿಗಾಗಿ ಹುಡುಕುವುದು

ಸರಿಯಲ್ಲವೆಂದೆನಿಸಿ.

 

ಬೆಳಗುತ್ತಿದ್ದ ದೀಪವನ್ನಾರಿಸಿ

ಕತ್ತಲಲ್ಲಿ ನಡೆದು ಸಾಗುತ್ತೇನೆ

ಏನೂ ಕಾಣದ ನನಗೀಗ,

ಬಾನ ಚಂದಿರನೇ ಜತೆಯಾಗುತ್ತಾನೆ. 

                                                                       ವಸಂತ್

 

Rating
No votes yet

Comments