ಅವಳ ಮನಸು

ಅವಳ ಮನಸು

ಬರಹ

ಅಡುಗೆಮನೆಯೊಳಗೆಲ್ಲೋ ಕೆಲಸದಲಿ ತೊಡಗಿರಲು
ಹಿತ್ತಿಲಲಿ ಕೇಳಿಸಿತು ಅವನ ಕೂಗು.

"ಬಾರೆ ಇಲ್ಲಿಗೆ ಒಮ್ಮೆ, ಪೆಟ್ಟಾಯ್ತು ಸ್ವಲ್ಪ"
ಸುಮ್ಮಗೆ ಕರೆಯುವರೇ?, ನೋಡಬೇಕಾಯ್ತಲ್ಲ!

ಬೆಳಗಿಂದ ಅವನ ಜೊತೆ, ಮಾತಾಡಿಯೇ ಇಲ್ಲ,
ಸಣ್ಣ ಜಳಗ ಬಳಿಕ, ಪೂರ್ತಿ ಮೌನ.

ರಾಜಿಯಾಗುವ ಮನಸು ಬಂದಿಹುದೋ ಅವನಿಗೆ?
ನಾನು ಬಗ್ಗುವುದಿಲ್ಲ, ಏನಾದರಾಗಲಿ!

ಹೊರ ಬಂದು ನೋಡಿದರೆ, ಕಂಡುದಿನ್ನೇನು?
ಅವನ ಪಕ್ಕದಿ ಕತ್ತಿ, ಕೈಯೆಲ್ಲ ರಕ್ತ.

ಕಣ್ಣಾಲಿಗಳು ತುಂಬಿ ಮಾತೇ ಹೊರಡುತಲಿಲ್ಲ
ಇನಿಯನಾ ಪಾಡನು, ನೋಡುವುದು ಹೇಗೆ..

ಒಳಗೋಡಿ ತಂದಳು, ಹಳೆಯ ಸೀರೆಯ ಚೂರ
ರಕ್ತದಲಿ ಮುಳುಗೆದ್ದ ಬೆರಳಿಗುಪಚಾರ.

ನಿಮಗೇಕೆ ಬೇಕಿತ್ತು, ಸಲ್ಲದಾ ಈ ಕೆಲಸ
ಎಂದೂ ಮಾಡಿಲ್ಲ, ಇಂಥ ಸಾಹಸವ.

ಇನ್ನೊಮ್ಮೆ ಕತ್ತಿಯನು ಮುಟ್ಟಿದರೆ ನನ್ನಾಣೆ
ಗೊತ್ತಿಲ್ಲಾದ ಕೆಲಸ, ಮಾಡುವುದು ಬೇಡ

ನಿಮಗೇನೋ ಆದರೆ ನಡುಗುವುದು ನನ್ನೆದೆಯು
ಕೈಮುಗಿವೆ ದಮ್ಮಯ್ಯ, ಕ್ಷಮಿಸಿಬಿಡಿ ನನ್ನ.

ಇನ್ನೆಂದು ಜಗಳವನು ಮಾಡೆ ನಾ ನಿಮ್ಮ ಜೊತೆ,
ನಗುಲಿರುವೆನು ಎಂದೂ, ತಿಳಿಯಿತಲ್ಲ.

ಈಗೊಮ್ಮೆ ಒಳಬನ್ನಿ, ನನ್ನ ಜೀವವೇ ನೀವು
ಎನ್ನುತಲಿ ನಡೆದಳು, ಅವನ ಬಳಸಿ