ಮರಳುಗಾಡಿನಲ್ಲಿ ರಂಜಾನ್ ಆಚರಣೆ
ಇತ್ತೀಚಿಗೆ ದಟ್ಸ್ ಕನ್ನಡದಲ್ಲಿ ಪ್ರಕಟವಾಗಿದ್ದ ನನ್ನ ಬರಹ, ನನ್ನ ಮೆಚ್ಚಿನ ಸಂಪದಿಗರು ಓದಲೆಂದು ಇಲ್ಲಿ ಮರು ಪ್ರಕಟಿಸುತಿದ್ದೇನೆ.
Ranganath......
'ರಂಜಾನ್'. ಇದು ಸಾಮನ್ಯವಾಗಿ ಭಾರತದಲ್ಲಿ ನಾವು ಉಪಯೋಗಿಸುವ ಶಬ್ದ. ಆದರೆ ಅರಬ್ಬಿಯಲ್ಲಿ ಇದನ್ನು 'ರಮದಾನ್' ಎಂದು ಕರೆಯುತ್ತಾರೆ. ಇಸ್ಲಾಂ ಕ್ಯಾಲೆಂಡರಿನ ಒಂಬತ್ತನೇ ತಿಂಗಳು 'ರಮದಾನ್'. ಪ್ರತಿ ಮುಸ್ಲಿಂ ಈ ಮಾಸ ಪೂರ್ತಿ ಉಪವಾಸ ವ್ರತ ಆಚರಿಸಿ ತಿಂಗಳ ನಂತರ ಈದ್-ಉಲ್-ಫಿತರ್ ಎನ್ನುವುದರೊಂದಿಗೆ ಉಪವಾಸ ವ್ರತ ಮುಗಿಸುತ್ತಾನೆ.
ಪವಿತ್ರ ರಂಜಾನ್ ಮಾಸಾಚರಣೆ ಈಗ ಪ್ರಪಂಚದೆಲ್ಲೆಡೆ ಶುರುವಾಗಿದೆ. ದೇಹ ಮತ್ತು ಆತ್ಮ ಶುದ್ದಿಯಿಂದ ಅಲ್ಲಾನಿಗೆ ಹತ್ತಿರವಾಗುವುದು. ಮಾನಸಿಕವಾಗಿ ತಮ್ಮನ್ನು ತಾವು ನಿಗ್ರಹಿಸಿಕೊಂಡು ಪರಿಶುದ್ದ ಮನಸ್ಸಿನಿಂದ ಪರಿಪೂರ್ಣ ವ್ಯಕ್ತಿಯಾಗುವುದು ಆಚರಣೆ ಹಿಂದಿನ ಮೂಲ ಉದ್ದೇಶ. ತಿಂಗಳ ನಂತರ ದೇಹದ ತೂಕ ಇಳಿಸಿಕೊಂಡು ಸಧೃಡ ಶರೀರದಿಂದ ಮತ್ತೆ ತಮ್ಮ ದೈನಂದಿನ ಚಟುವಟಿಕೆಗಳಿಗೆ ತಯಾರಾಗಬೇಕು.
ಅತಿ ಹೆಚ್ಚು ಮುಸ್ಲಿಂ ರಾಷ್ಟ್ರಗಳಿರುವ ಗಲ್ಫ್ ಪ್ರದೇಶ ಹಾಗು ಉತ್ತರ ಆಫ್ರಿಕಾ ಖಂಡದಲ್ಲಿ ಇದರ ಆಚರಣೆ ಬಹು ವೈಶಿಷ್ಟ್ಯದಿಂದ ಕೂಡಿರುತ್ತದೆ. ಪ್ರತಿಯೊಬ್ಬ ಮುಸ್ಲಿಂ, ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಊಟ, ನೀರು, ಕಾಫಿ, ಚಹ, ಫಲಹಾರ ಸೇವನೆ, ಧೂಮಪಾನ, ಕಾಮಕ್ರಿಯೆಗಳು ಮಾಡಬಾರದು. ಸಿಟ್ಟು, ಕೋಪ ತಾಪ, ದರ್ಪ, ದ್ವೇಷ, ಅಸೂಯೆ, ಮೋಸ, ದಗಾ ವಂಚನೆಗಳಿಂದ ದೂರವಿರಬೇಕು.
ಅತಿಮುಖ್ಯ ಆಚರಣೆಗಳು : ಆದಷ್ಟು ಮನಸ್ಸನ್ನು ನಿಗ್ರಹಿಸಿಟ್ಟುಕೊಂಡು ಏಕಾಗ್ರತೆ ಮತ್ತು ಶಾಂತಚಿತ್ತ ಕುರಾನ್ ಪಠಣ ಮಾಡುತ್ತಿರಬೇಕು. ಒಳ್ಳೆಯ ಆಲೋಚನೆಗಳತ್ತ ಮನಸ್ಸನ್ನು ಕೇಂದ್ರೀಕರಿಸಿ, ಬಡವರಿಗೆ ಸಹಾಯಹಸ್ತ ಚಾಚುತ್ತ ಸಮಾಜಕ್ಕೆ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಬೇಕು. ಯಾವುದೇ ಸ್ವಾರ್ಥವಿಲ್ಲದ ಸೇವೆ ಆ ಭಗವಂತನಿಗೆ ಬಲು ಪ್ರೀತಿ. ಸಾಧ್ಯವಾದಷ್ಟು ಬಂಧು ಬಳಗ, ಸ್ನೇಹಿತರನ್ನು ಭೇಟಿ ಮಾಡುತ್ತಿರಬೇಕು. ಯಾವುದೇ ರೀತಿಯ ಮನೋರಂಜನೆಗಳಿಗೆ ಅವಕಾಶವಿಲ್ಲ. ಸಾರ್ವಜನಿಕವಾಗಿ ಯಾವುದೇ ರೀತಿಯ ಸಂಗೀತವನ್ನು ಹಾಕಬಾರದು ಹಾಗು ಕೇಳಬಾರದು. ಕಳ್ಳತನ, ಮೋಸ, ದ್ರೋಹ, ರೋಷಕ್ಕೆ ಕಡಿವಾಣ ಹಾಕಬೇಕು. ತಾವು ಉಳಿಸಿದ ಹಣದಲ್ಲಿ ಇಂತಿಷ್ಟು ಭಾಗವನ್ನು ಬಡಬಗ್ಗರಿಗೆ ಸಹಾಯ ಮಾಡಲೇಬೇಕು. ಹಾಗು ಬಡ್ಡಿಯ ಹಣದಿಂದ ಜೀವನ ಮಾಡಬಾರದು.
ರಂಜಾನ್ ಮಾಸದಲ್ಲಿ ಕನಿಷ್ಠ ದಿನಕ್ಕೆ 5 ಬಾರಿ ನಮಾಜ್ ಮಾಡಲೇಬೇಕು. ಮಸೀದಿಯಲ್ಲಿ ಸಾಧ್ಯವಾಗದೆ ಇದ್ದರೆ ತಮಗೆ ಅನುಕೂಲವಾದ ಸ್ಥಳದಲ್ಲಿ ಮಾಡಬಹುದು. ಮೇಲಿನವು ಕೆಲ ಅತಿಮುಖ್ಯ ಆಚರಣೆಗಳು. ಸೂರ್ಯಾಸ್ತ ಆದಮೇಲೆ ಸಂಜೆ 6.30 ಸುಮಾರಿನಲ್ಲಿ ನಮಾಜ್ ಮಾಡಿದ ಮೇಲೆ ಕರ್ಜೂರ ಸೇವನೆಯಿಂದ ಉಪವಾಸ ಅಂತ್ಯಗೊಳ್ಳುತ್ತದೆ. ಬಹುತೇಕ ಸಾತ್ವಿಕ ಮುಸಲ್ಮಾನರೆಲ್ಲ ಇದನ್ನು ಕಡ್ಡಾಯವಾಗಿ ಆಚರಣೆ ಮಾಡುತ್ತಾರೆ. ಆಚರಣೆ ಮಾಡದ ಮುಸ್ಲಿಮರನ್ನು ತುಚ್ಚರಾಗಿ ಕಾಣುತ್ತಾರೆ.
ಕಾನೂನು ಕಟ್ಟಳೆ : ಇಲ್ಲಿನ ಸರಕಾರಗಳು ಕೆಲವು ಕಾನೂನುಗಳನ್ನು ಮಾಡಿವೆ. ಯಾವುದೇ ಹೊಟೆಲ್ ಗಳನ್ನು ಸಾಯಂಕಾಲದವರೆಗೆ ತೆರೆಯಬಾರದು. ಮುಸ್ಲಿಮೇತರರೂ ಕೂಡ ಸಾರ್ವಜನಿಕವಾಗಿ ಏನನ್ನೂ ತಿನ್ನಬಾರದು. ಸಂಗೀತ ಕೇಳುವುದು, ನರ್ತನ ಮಾಡುವುದು ನಿಷಿದ್ದ. ಹೀಗೆ ಮಾಡಿದರೆ ಯಾರು ಬೋಕಾದರೂ ಪೋಲೀಸರಿಗೆ ಮಾಹಿತಿ ನೀಡಬಹುದು. ಉಲ್ಲಂಘಿಸಿದವರನ್ನು ಒಂದು ತಿಂಗಳ ತನಕ ಜೈಲಿನಲ್ಲಿ ಇಡಲಾಗುತ್ತದೆ. ಕೆಲ ರಾಷ್ಟ್ರಗಳಲ್ಲಿ ಗಡಿಪಾರು ಸಹ ಮಾಡಲಾಗುತ್ತದೆ. ಉಪವಾಸ ಮಾಡುವವರಿಗೆ ಅನುಕೂಲವಾಗುತ್ತದೆ ಎನ್ನುವ ಉದ್ದೇಶದಿಂದ ಎಲ್ಲ ಸರ್ಕಾರಿ ಹಾಗು ಸರ್ಕಾರೇತರ ಕಛೇರಿಗಳು ಬೆಳಿಗ್ಗೆ 8ರಿಂದ ಮಧ್ಯಾನ್ಹ 2 ಗಂಟೆಯವರೆಗೆ ಮಾತ್ರ ಕೆಲಸ ನಿರ್ವಹಿಸುತ್ತವೆ.
ಒಂದು ಮುಖ್ಯ ಸಂಗತಿಯೆಂದರೆ, ಕಾಯಿಲೆಯಿಂದ ಬಳಲುತಿದ್ದವರು ಉಪವಾಸ ಮಾಡಲೇಬೇಕೆನ್ನುವ ನಿಯಮವಿಲ್ಲ. ಅವರಿಗೆ ವಿನಾಯಿತಿ ನೀಡಲಾಗಿದೆ. ಸಾಮನ್ಯವಾಗಿ ಭಾರತದಲ್ಲಿ ಬಹುತೇಕ ದಿನಗಳು ವಾಸವಿದ್ದ ನಮಗೆ ಇಲ್ಲಿನ ಸಂಪ್ರದಾಯಗಳು ಒಗ್ಗದೇ ಹೋದರೂ, ಇಲ್ಲಿನವರ ಸಂಪ್ರದಾಯಗಳಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ. ಈ ಎಲ್ಲ ಬಿಗಿ ನಿಯಮಗಳಿಂದ ಮುಸ್ಲಿಂಮೇತರರಿಗೆ ಬಹುತೇಕ ತೊಂದರೆ ಉಂಟಾಗುವುದು ಸಹಜ. ಸಾಮನ್ಯವಾಗಿ ಭಾರತೀಯರು ಹೆಚ್ಚಿನ ಪ್ರತಿರೋಧವಿಲ್ಲದೆ ಎಂಥದೇ ನಿರ್ಬಂಧವಾಗಲೀ ಅದಕ್ಕೆ ಒಗ್ಗಿಕೊಂಡು ಬಾಳುತ್ತಾರೆ.
ಅಷ್ಟೇ ಅಲ್ಲ. ಬೇರೆಯವರ ಆಚರಣೆಗಳಿಗೆ ತೊಂದರೆ ಕೊಡದೆ ಅವರ ವಿಚಾರಗಳಿಗೆ ಗೌರವ ಕೊಟ್ಟು ತಮ್ಮ ಪಾಡಿಗೆ ತಾವು ಇದ್ದು ಬಿಡುತ್ತಾರೆ. ಬಹುತೇಕ ಪಾಶ್ಚಿಮಾತ್ಯರು ಸಹ ಇದೇ ವಿಧಾನವನ್ನು ಅನುಸರಿಸುತ್ತಾರೆ. ಮುಸ್ಲಿಂಜನರ ಭಾವನೆಗಳಿಗೆ ಧಕ್ಕೆ ಬಾರದಂತೆ ನಡೆದುಕೊಳ್ಳುವುದು ಸಹಜವಾದ ವಿಷಯವೇ ಆಗಿರುತ್ತದೆ. ಟಿವಿ ಮತ್ತು ಪತ್ರಿಕಾ ಮಾಧ್ಯಮಕ್ಕೆ ಅಷ್ಟೊಂದು ಸ್ವಾತಂತ್ರ್ಯವಿಲ್ಲದಿರುವದರಿಂದ ಮುಸ್ಲಿಮೇತರ ಹಕ್ಕುಗಳನ್ನು ಯಾರು ಎತ್ತಿ ಹಿಡಿಯುವುದಿಲ್ಲ, ಪ್ರಶ್ನಿಸುವುದಿಲ್ಲ.
ಒಂದುಸಾರಿ ಒಬ್ಬ ಅರಬ್ಬಿ ಮನುಷ್ಯ ನಮಗೆ ಹೇಳಿದ್ದ.
"ನೀವಂದುಕೊಂಡಂತೆ ಕಾನೂನುಗಳು ಅಷ್ಟೊಂದು ಕಠಿಣವಾಗಿಲ್ಲ, ನೀವು ಸಹ ಉಪವಾಸ ಮಾಡಿ ಅಂತ ಕಾನೂನು ಇಲ್ಲ, ಆದರೆ ಎಲ್ಲರೆದುರಿಗೆ ಮಾತ್ರ ತಿನ್ನಬೇಡಿ. ಇದು ಉಪವಾಸ ಮಾಡುತ್ತಿರುವ ವ್ಯಕ್ತಿಯ ಭಾವನೆಗಳನ್ನು ಕೆರಳಿಸುತ್ತದೆ. ಅವನ ಏಕಾಗ್ರತೆಗೆ ಭಂಗ ತಂದು ಹೊಟ್ಟೆ ಹಸಿವಾಗುವ ಲಕ್ಷಣಗಳು ಇರುತ್ತವೆ ಅನ್ನುವ ಉದ್ದೇಶ ದಿಂದ ಇದು ಮಾಡಲಾಗಿದೆ ಅಷ್ಟೆ. ನಿಮ್ಮ ತಿನ್ನುವ ಹಕ್ಕುಗಳನ್ನು ನಾವೇನು ಕಸಿದುಕೊಂಡಿಲ್ಲ."
ತಿನ್ನಬೇಕು ಅನ್ನಿಸಿದರೆ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಆರಾಮವಾಗಿ ತಿನ್ನಿ. ಆದರೆ ಒಬ್ಬ ಯುರೋಪಿಯನ್ ಪ್ರಜೆ ನಮ್ಮ ಸ್ನೇಹಿತರನ್ನು ಕೇಳಿದ್ದ,
"ನೀವು ಇಷ್ಟೆಲ್ಲ ನಿರ್ಭಂಧ ಹೇರಿ ನಮ್ಮ ತಿನ್ನುವ ಹಕ್ಕನ್ನು ಕಸಿದುಕೊಳ್ಳುತ್ತೀರ ಆದರೆ ಮನೆಯಲ್ಲಿ ಸುಮ್ಮನೆ ನೀವೇನು ಕುಳಿತಿರುತ್ತೀರ? ಇಲ್ಲತಾನೆ ಟೀವಿ ನೋಡ್ತೀರ, ಪುಸ್ತಕ ಓದುತ್ತೀರ, ಟೀವಿನಲ್ಲೊ ಪುಸ್ತಕದಲ್ಲೊ ತಿನ್ನುವ ಯಾರದರು ತಿನ್ನುತ್ತಿರುವ ದೃಶ್ಯಗಳು ಬಂದರೆ ಏನು ಮಾಡುತ್ತೀರ? ಒಂದು ವೇಳೆ ರಾತ್ರಿ ಅಡುಗೆಗೆ ಟೀವಿಯಲ್ಲಿ ಹೊಸರುಚಿ ಅಡುಗೆ ಕಾರ್ಯಕ್ರಮ ಪ್ರಸಾರವಾಗುತಿದ್ದರೆ ಅದನ್ನು ನೋಡಿ ಬರೆದುಕೊಂಡು ಹೊಸರುಚಿ ಅಡುಗೆಗೆ ಪ್ರಯತ್ನ ಪಡುಬಹುದಲ್ಲ?
ಅದನ್ನು ನೋಡಬೇಕಾದರೆ ನಿಮ್ಮ ಮನಸ್ಸಿನ ಭಾವನೆಗಳಿಗೆ ಏನು ಆಗುವುದಿಲ್ಲವೊ? ಪತ್ರಿಕೆಗಳಲ್ಲಿ, ಪುಸ್ತಕದಲ್ಲಿ, ಜಾಹಿರಾತಿನಲ್ಲಿ ತಿನ್ನುವ ವಸ್ತುಗಳ ಬಗ್ಗೆ ಜಾಹಿರಾತು ಕೊಟ್ಟಿರುತ್ತಾರೆ, ಅದನ್ನು ನೋಡಿದಾಗ ನಿಮ್ಮಲ್ಲಿ ಯಾವಭಾವನೆ ಉಂಟಾಗುತ್ತದೆ. ಮಧ್ಯಾಹ್ನದ ಮೇಲೆ ನೀವು ರಾತ್ರಿ ಅಡುಗೆಯ ಬಗ್ಗೆ ಚಿಂತೆ ಮಾಡುವುದಿಲ್ಲವೆ?" ಯಾರಿಂದಾದರು ಸರಿಯಾದ ಉತ್ತರ ಸಿಕ್ಕೀತೆ? ಇಲ್ಲ.. ಒಂದೊಂದುಸಾರಿ ಪ್ರಶ್ನೆ, ಪ್ರಶ್ನೆಗಳಾಗಿಯೆ ಉಳಿದು ಬಿಡುತ್ತವೆ.
ಒಟ್ಟಿನಲ್ಲಿ ನನಗಂತೂ ಪದೇ ಪದೇ ನೆನಪಾಗೋದು ನನ್ನ ಭಾರತ. ಸರ್ವಧರ್ಮೀಯರಿಗೆ ಬದುಕುವ ಹಕ್ಕನ್ನು ಕೊಟ್ಟು ಸಂತೋಷದ ಜೀವನ ನಡೆಸುವಂತ ಅವಕಾಶ ಕೊಟ್ಟಿರುವ ನಮ್ಮ ಭಾರತ ಮಾತೆಗೆ ಸಹಸ್ರ ನಮನ. ವಂದೇ ಮಾತರಂ.