ತೆಂಗಿನ ಮರ ಹತ್ತುವ ಸ್ಪರ್ಧೆ

ತೆಂಗಿನ ಮರ ಹತ್ತುವ ಸ್ಪರ್ಧೆ

ನಮ್ಮ ಗೆಳೆಯರ ಬಳಗ ಎಲ್ಲಾ ಪಂಚಾಯ್ತಿ ಆಫಿಸ್ನಾಗೆ ಸೇರಿದ್ವಿ. ಅದೇ ಟೇಮಿಗೆ ನಮ್ಮ ಗೌಡಪ್ಪನೂ ಬಂದ. ಏನ್ರಲಾ ಬೆಳಗ್ಗೆ ಏನು ಕ್ಯಾಮೆ ಇಲ್ಲಾ ಅಂತಾ ಹಲ್ಟೆ ಹೊಡಿತಾ ಇದೀರಾ. ನಿಂಗ ನಿನ್ನ ಅಂಗಡಿಯಿಂದ ಹತ್ತರಾಗೆ 20 ಚಾ ತಗೊಂಡು ಬಾರಲಾ ಅಂದ. ಮತ್ತೆ ಕಾಸು ಅಂದ ನಿಂಗ. ಪಂಚಾಯ್ತಿ ಲೆಕ್ಕಕ್ಕೆ ಹಾಕಲಾ. ಸರಿ ಹಿಂಗೇ ಮಾತುಕತೆ ನಡೀತಾ ಇತ್ತು. ಎಲ್ಲಾ ಬೀದಿ ಹೆಂಗಸರು, ಗಂಡಸರು ಗೌಡಪ್ಪನ ಬಾಯ್ನಾಗೆ ಬಂದು ಹೋಗಿದ್ದರು. ನೋಡ್ರಲಾ ತೆಂಗಿನ ಮರ ಹತ್ತುವ ಸ್ಪರ್ದೇ ಇಟ್ಟರೆ ಹೆಂಗಲಾ ಅಂದ ಗೌಡಪ್ಪ. ಬೇಡ ಕಣ್ರೀ ಮಳೆಗಾಲ ಯಾರಾದರೂ ಕಿಸ್ಕಂಡರೆ ಆಟೆಯಾ ಅಂದ ಸುಬ್ಬ. ಏನು ಆಗಕ್ಕಿಲ್ಲಾ, ಮುಂದಿನ ವಾರನೇ ನಮ್ಮ ತೋಟದಾಗೆ ತೆಂಗಿನ ಮರ ಹತ್ತುವ ಸ್ಪರ್ಧೆ ಅಂತಾ ಅನಂನ್ಸ್ ಮಾಡ್ಸಲೇ ಅಂದ ಸುಬ್ಬಂಗೆ ಗೌಡಪ್ಪ.
ಅಲ್ಲಾ ಗೌಡ್ರೆ ಗೆದ್ದೋರಿಗೆ ಏನು ಪ್ರೈಜ್. ಎರಡು ಸಿಪ್ಪೇಕಾಯಿ ಕನ್ಲಾ ಅಂದ ಗೌಡಪ್ಪ. ಆದ್ರೆ ನೋಡಪ್ಪಾ ಮೇಲೆ ಹತ್ತಿದೋರು, ಮರದಾಗೆ ಇರೋ ಕಸ,ಹುಳ ತೆಗಿಬೇಕು ಅಂಗೇ ಬಲಿತಿರೋ ಕಾಯಿನ್ನ ಉದುರಿಸಬೇಕು. ಯಾರು ಚೆನ್ನಾಗಿ ಕಿಲೀನ್ ಮತ್ತು ಹೆಚ್ಚಿನ ಕಾಯಿ ಉದುರಿಸುತ್ತಾರೋ ಅವರಿಗೆ ವಿಶೇಷ ಪ್ರೈಜ್. 4 ಸಿಪ್ಪೇ ಕಾಯಿ ಅಂದಾ ಗೌಡಪ್ಪ. ನೋಡ್ಯದಾ ಗೌಡಪ್ಪನ ಪಿಲಾನ್, ಇತ್ಲಾಗೆ ಅವನ ಮರನೂ ಕಿಲೀನ್ ಆಗಿರಬೇಕು. ಅಂಗೇ ಕಾಯಿನ್ನು ಉದುರಿಸಬೇಕು. ಮಗಾ ದುಡ್ಡು ಉಳಿಸಕ್ಕೆ ಈ ಆಟ ಆಡಿಸ್ತಾವ್ನೆ ಅಂದ ದೊನ್ನೆ ಸೀನ. ಕಡೆಗೆ ವಿಚಾರಿಸಿದ್ರೆ ಅದು ನಿಜವಾಗಿತ್ತು. ಮಳೆಗಾಲದಲ್ಲಿ ಯಾರೂ ಮರ ಹತ್ತಿಕ್ಕಿಲ್ಲ ಹಂಗೇ ಜಾಸ್ತಿ ಕಾಸು ಕೇಳ್ತಾರೆ ಅಂತಾ ಗೌಡಪ್ಪ ಈ ಆಟ ಇಟ್ಟಾವನೆ ಅಂತಾ ನಮ್ಮ ಗೆಳೆಯರ ಬಳಗಕ್ಕೆ ಗೊತ್ತಾಯ್ತು. ಲೇ ಮಗ ಗೌಡಂಗೆ ಸರಿಯಾಗೇ ಪಾಠ ಕಲಿಸಬೇಕು ಅಂದ್ವಿ.


ಸರಿ ಸ್ಪರ್ಧೆಗೆ ಸುತ್ತಮುತ್ತಲಿನ ಹಳ್ಳಿಯೋರು ಹೆಸರು ಕೊಟ್ಟಿದ್ರು. ಎಲ್ಲಾ ಚೆಡ್ಡಿ ಮ್ಯಾಕೆ ಬಂದು ನಿಂತ್ಕಂಡ್ವು. ನೋಡ್ರಲಾ ಒಬ್ಬಬ್ಬರಾಗೆ ಒಂದೊಂದು ಮರ ಹತ್ತಬೇಕು ಅಂದ ಗೌಡಪ್ಪ. ಲೇ ಕಿಸ್ನ ಅವರು ಕೆಡವಿದ್ದು ಕಾಯಿನ್ನ ತೋಟದ ಮನೆಗೆ ಹಾಕಲೇ ಅಂದ ಗೌಡಪ್ಪ. ಆಹಾ ಗೌಡಪ್ಪ ನಿನಗೆ ಐತೆ ತಾಳು ಅಂದಾ ಸುಬ್ಬ.ಪ್ರತೀ ಮರದಾಗೂ ಮುಳ್ಳಿನ ತಂತಿ ಸುತ್ತಿದ್ದ. ಕಳ್ಳರು ಹತ್ತಬಾರದು ಅಂತಾ ಅದು ಅಂಗೇ ಇತ್ತು. ಗೌಡ್ರೆ ಅದನ್ನ ತೆಗಿಸ್ ಬಾರದಿತ್ತಾ ಅಂದೆ. ಮತ್ತೆ ಸುತ್ತಕ್ಕೆ ನಿಮ್ಮಪ್ಪ ಕಾಸು ಕೊತ್ತಾನ ಅಂದಾ ಗೌಡಪ್ಪ. ಸರಿ ಮೊದಲು ತಂಬಿಟ್ಟು ರಾಮ, ಹತ್ತೋಕೆ ಸುರು ಮಾಡ್ದ. ತಂಬಿಟ್ಟು ರಾಮ 5 ನಿಮಿಟ್ನಾಗೆ ಮೇಲೆ ಹೋದೋನು ಒಂದು 50ಕಾಯಿ ಕೆಡವಿದ. ಹಂಗೇ ಅಲ್ಲಿದ್ದ ಕಸ ತೆಗೆದ. ಕಾಯಿ ಕೆಳಗೆ ಬಿದ್ದಂಗು ಕಿಸ್ನ ಚೀಲಕ್ಕೆ ತುಂಬೋನು. ಒಣಗಿರೋ ಹ್ಯಾಡೆಯೆಲ್ಲಾ ಗಾಡಿಗೆ ಹಾಕೋನು. ನೀರು ಕಾಯಿಸಕ್ಕೆ ಆಯ್ತದೆ ಅಂತಾ. ಸರಿ ರಾಮ ಇಳಿಯಲಾ ಅಂದೆ. ಮಳೆ ಬೇರೆ ಬಂದು ಮರ ಹಸಿ ಆಗಿತ್ತು. ಮೇಲಿದ್ದೋನು ರೊಯ್ ಅಂತಾ ಒಂದೇ ನಿಮಿಸಕ್ಕೆ ಕಳಗೆ ಇದ್ದ. ಮುಳ್ಳಿನ ತಂತಿ ಹೆಂಗೆ ಗೀರಿತ್ತು ಅಂದರೆ ರಾಮಂಗೆ ಡೌಟ್ ಬಂದಿತ್ತು ಇದು ನಂದೇ ಎದೆಯಾ ಅಂತಾ. ಮಗಂದು 20ಟ್ರಾಕ್ ಹೈವೇಗೆ ಕೆಂಪು ಪಟ್ಟಿ ಹೊಡೆದಂಗೆ ಆಗಿತ್ತು. ಇಳಿತಿದ್ದಂಗೆ ಎಲ್ಲಾ ಅರಿಸಿನ ಬಳಿದ್ವಿ. ಈಗ ತಂತಿ ಪಕಡು ಸೀತು. ರಾಮನ ಪರಿಸ್ಥಿತಿ ನೋಡಿ ನಾನು ಹತ್ತಕ್ಕಿಲ್ಲಾ ಅಂದಾ ಸೀತು.  ಗೌಡಪ್ಪ ಹತ್ತಲೇ ಅಂತಾ ಒತ್ತಾಯ ಮಾಡೋನು. ನೋಡಿದ್ರೆ ಅದೊಂದು ಮರದ್ದ ಕಾಯಿ ಅಂಗೇ ಉಳಿತದಲ್ಲಾ ಅಂತಾ. ಇವನ ದರ್ಬೇಸಿ ಬುದ್ದಿಗೆ ಬೆಂಕಿ ಹಾಕ ಅಂದಾ ಸುಬ್ಬ.
ಸರಿ ಗೌಡಪ್ಪನ ಮಗ ಮರಿ ನಂಜೇಗೌಡ ಹತ್ತುತ್ತಿದ್ದಾರೆ ಅಂದಾ ಸುಬ್ಬ. ಲೇ ಬೇಡ ಕಲಾ ಅಂದಾ ಗೌಡಪ್ಪ. ಅವೆಲ್ಲಾ ಗೊತ್ತಿಲ್ಲ ಹೆಸರು ಕೊಟ್ಟಾಗೈತೆ ಹತ್ತಲೇ ಬೇಕು ಅಂತಾ ಮಗಂಗೆ ದೊಡ್ಡ ಮರನೇ ಹತ್ತಿಸಿದ್ವಿ. ಮಗಂಗೆ ಅಭ್ಯಾಸ ಇಲ್ಲಾ ಹತ್ತು ಅಡಿ ಹೋಗ್ತಿದ್ದಂಗೆನೇ ಕೈ ಕಾಲು ನಡಗೊಕೆ ಸುರುವಾತು. ಲೇ ಯಾರು ಹಿಡಿಬೇಡ್ರಿ ಗೌಡಪ್ಪನ ಮಗ ಬೀಳಲಿ ಅಂದ ಸುಬ್ಬ. ಸರಿ ಮೇಲೋದೋನು ಅಂದು 10ಕಾಯಿ ಕಿತ್ತ. ಗೌಡಪ್ಪ ಮ್ಯಾಕೆ ನೋಡೋನು. ಮಗಾ ಯಾವಾಗ ಬೀಳ್ತಾನೋ ಅಂತಾ. ಅಂತು ಕೈ ಜಾರೇ ಬಿಡ್ತು. ಅಪ್ಪಯ್ಯ............, ಲೇ ಬಲೆ ಹಿಡಿರಲಾ ಅಂದಾ ಗೌಡಪ್ಪ. ಎಲ್ಲೈತೆ ಬಲೆ ಅಂದಾ ಸುಬ್ಬ. ಸರಿ ಗೌಡಪ್ಪನೇ ಪಂಚೆ ಬಿಚ್ಚಿ ಕ್ಯಾಚ್ ಹಿಡಿಯಕ್ಕೆ ರೆಡಿಯಾಗಿದ್ದ. ಬಂದು ಬಿದ್ದರೆ ಗೌಡಪ್ಪ ಮತ್ತು ಮಗ, ಇಬ್ಬರೂ ಅಂಟಕಂಡಿದ್ರು. ಗೌಡಪ್ಪನ ಮಗನ ಕಾಲು, ಮುಖ ಎಲ್ಡೂ ಸಾನೇ ಡಾಮೇಜ್. ಸರ್ಕಾರಿ ಆಸ್ಪತ್ರಾಗೆ ಹಾಕಿದ್ದಾತು.
ಗೌಡಪ್ಪಂಗೆ ಸಿಟ್ಟು ಬಂದು ಹೋಗಿತ್ತು. ಈಗ ಸುಬ್ಬ ಹತ್ತುತಾನೆ ಅಂದ. ನಾನು ಹೆಸರೇ ಕೊಟ್ಟಿಲ್ಲ ಅಂದಾ ಸುಬ್ಬ. ನಾ ಬರೆದುಕೊಂಡಿದೀನಿ ಹತ್ತಲಾ ಅಂದಾ ಗೌಡಪ್ಪ. ಮಗಾ ಸುಬ್ಬ ನಿಂತರೆ ಕಾಯಿ ಸಿಗೋ ಅಂತಾ ಮರ ಹತ್ತಿ ಅಲ್ಲಿಂದನೇ ಜಂಪ್ ಮಾಡಿ ಹೆಂಗೆ ಗೌಡ್ರೆ ಅಂದಾ. ಗೌಡಪ್ಪ ಹಲ್ಲು ಕಡಿಯೋನು. ಅಟ್ಟೊತ್ತಿಗೆ ಧಪ್ ಅಂತಾ ಸವಂಡ್ ಬಂತು. ನೋಡಿದ್ರೆ ಗೌಡಪ್ಪನ ತಲೆ ಮೇಲೆ ದೊಡ್ಡ ಕಾಯಿ ಬಿದ್ದಿತ್ತು. ಮಗ ನಿಂಗ ಪಕ್ಕದ ಮರದಿಂದ ಕಾಯಿ ಕೆಳಗೆ ಹಾಕಿದ್ದ. ಗೌಡಪ್ಪನ ತಲೆ ಮೇಲೆ ಹೆಲ್ಮೆಟ್ ಹಾಕಿದಂಗೆ ಆಗಿತ್ತು.
ಸ್ಪರ್ಧೆಗೆ ಬಂದಿರೋರು ಎಲ್ಲಾರೂ ಎದೇನೂ ಆಲ್ ಮೋಸ್ಟ್ ರಕ್ತಮಯ. ಒಂದು 4ಕೆಜಿ ಅರಿಸಿನ ಹಚ್ಚಿದ್ವಿ. ಕಿಸ್ನ ಕಾಯಿ ಹಾಕಿ ಹಾಕಿ ಗಾಡಿ ಮ್ಯಾಕೆ ಮಕ್ಕಂಡಿದ್ದ. ಸರೀ ಗೆದ್ದೋರೆ ಎರಡು ಸಿಪ್ಪೇ ಕಾಯಿ ಕೊಟ್ಟು ಕಳಿಸಿದ್ದಾತು. ಬಡ್ಡೆ ಹೈದ ಗೌಡಪ್ಪ ಮತ್ತು ಅವನ ಮಗನ ಇಬ್ಬರನ್ನೂ ನೋಡುವಾ ಅಂತಾ ಆಸ್ಪತ್ರೆಗೆ ಹೋದರೆ, ಇಲ್ಲಿ ಆಗಕ್ಕಿಲ್ಲಾ ಅಂತಾ ಸಿಟಿಗೆ ಕಳಿಸಿದಾರೆ ಅಂದ್ರು. ಒಂದು ವಾರ ಆದ್ ಮ್ಯಾಕೆ ಗೌಡಪ್ಪ ಸಿಕ್ಕ. ಲೇ ನಾನೇನೋ ದುಡ್ಡು ಉಳಿಸವಾ ಅಂತಾ ಈ ಆಟ ಇಟ್ರೆ. 50ರೂಪಾಯಿ ಉಳಿಸಕ್ಕೆ ಹೋಗಿ 50ಸಾವಿರ ಖರ್ಚು ಆತಲಾ. ಅಂಗೇ ನನ್ನ ಮಗಂಗೆ ಒಂದು ಕೈ ಪರಮನೆಂಟ್ ಡಾಮೇಜ್ ಆಗೈತೆ ಅಂದ ಗೌಡಪ್ಪ. ಸರೀ ಬುಡಿ ಸರ್ಕಾರದಿಂದ ಅಂಗವಿಕಲ ವೇತನ ಬತ್ತದೆ ಅಂದೆ. ಲೇ ನಿಮ್ಮಂತಹ ಚಂಗುಲಿ ನನ್ಮಕ್ಕಳನ್ನು ಇಟ್ಕಂಡು ಇನ್ ಮ್ಯಾಕೆ ಯಾವ ಆಟನೂ ಆಡ್ಸಕ್ಕಿಲ್ಲಾ ಅಂದಾ ಗೌಡಪ್ಪ. ಸುಬ್ಬ ಬಾಯಿಗೆ ಟವಲ್ ಮುಚ್ಕಂಡು ನಗೋನು.

Rating
No votes yet

Comments